ಕೊರೊನಾ ಸಾಂಕ್ರಾಮಿಕದ ಬಳಿಕ ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಎಂಬ ಚರ್ಚೆ ಜೋರಾಗಿದೆ. ಎರಡನೇ ಲಾಕ್‌ಡೌನ್ ಬಳಿಕವಂತೂ ಹೃದಯಾಘಾತ ಪ್ರಕರಣಗಳು ದುಪ್ಪಟ್ಟುಗೊಂಡಿವೆ. ಸ್ಯಾಂಡಲ್‌ವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ತಾರೆಯರು ದಿಢೀರ್ ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನ ಹಿರಿಯ ನಟ ಸತೀಶ್ ಕೌಶಿಕ್ ಹೃದಯಾಘಾತದಿಂದ ನಿಧನರಾಗಿರುವುದು ಜನರಲ್ಲಿ ಹೃದಯಾಘಾತದ ಕುರಿತ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತೀಚಿನ ದಿನಗಳಲ್ಲಿ ಹೃದಯಘಾತದಿಂದಲೇ ಕೊನೆಯುಸಿರೆಳೆದ ಸಿನಿ ತಾರೆಯರ ಕುರಿತ ಮಾಹಿತಿ ಇಲ್ಲಿದೆ.
ಸತೀಶ್ ಕೌಶಿಕ್

ಬಾಲಿವುಡ್‌ನ ಹಿರಿಯ ನಟ, ʼತೇರೆ ನಾಮ್ʼ ಖ್ಯಾತಿಯ ನಿರ್ದೇಶಕ ಸತೀಶ್ ಕೌಶಿಕ್ ಗುರುವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುರುವಾರ ದೆಹಲಿಯ ಸ್ನೇಹಿತರೊಬ್ಬರ ಮನೆಗೆ ಭೇಟಿ ನೀಡಿದ್ದ ಸತೀಶ್, ರಾತ್ರಿ ಅಲ್ಲೇ ತಂಗಿದ್ದಾರೆ. ನಡುರಾತ್ರಿ 1 ಗಂಟೆ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಯತ್ತ ಕರೆದೊಯ್ಯಲಾಗಿದೆ. ಆದರೆ, ತೀವ್ರ ಹೃದಯಾಘಾತವಾದ ಹಿನ್ನೆಲೆ 66 ವರ್ಷದ ಸತೀಶ್ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ದೆಹಲಿಗೆ ತೆರಳುವ ಮುನ್ನ, ಅಂದರೆ ಮಾರ್ಚ್ 7ರಂದು ಹಿರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಮುಂಬೈನಲ್ಲಿ ಆಯೋಜಿಸಿದ್ದ ಹೋಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು. ಆರೋಗ್ಯವಾಗಿದ್ದ ಸತೀಶ್ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಿಧನರಾಗಿದ್ದು ನಿಜಕ್ಕೂ ಆಘಾತಕಾರಿ ಎಂದು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ನಂದಮೂರಿ ತಾರಕರತ್ನ

ತೆಲುಗಿನ ಖ್ಯಾತ ನಟ, ರಾಜಕಾರಣಿ ನಂದಮೂರಿ ತಾರಕರತ್ನ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಜನವರಿ 29ರಂದು ತೆಲುಗು ದೇಶಂ ಪಕ್ಷದ ನಾಯಕ ನಾರಾ ಲೋಕೇಶ್ ನೇತೃತ್ವದ ʼಯುವ ಗಾಲಂʼ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ತಾರಕರತ್ನ ಮಾರ್ಗಮಧ್ಯದಲ್ಲೇ ಹೃದಯಾಘಾದಿಂದ ಕುಸಿದು ಬಿದ್ದಿದ್ದರು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಿ 23 ದಿನಗಳ ಕಾಲ ತುರ್ತುನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. 39 ವರ್ಷದ ತಾರಕರತ್ನ ಚಿಕಿತ್ಸೆ ಫಲಿಸದೆ ಫೆಬ್ರವರಿ 18ರಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ಮಯಿಲ್ ಸಾಮಿ

ತಮಿಳಿನ ಖ್ಯಾತ ಹಾಸ್ಯನಟ ಮಯಿಲ್ ಸಾಮಿ ಕಳೆದ ಫೆಬ್ರವರಿ 19ರಂದು ಸಿನಿಮಾವೊಂದರಲ್ಲಿ ತಾವು ನಟಿಸಿರುವ ಪಾತ್ರದ ಡಬ್ಬಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಚೆನ್ನೈನ ಪೊರೂರು ಶ್ರೀರಾಮಚಂದ್ರ ಆಸ್ಪತ್ರೆಗೆ ಸೇರಿಸಿದರೂ, ತಪಾಸಣೆ ನಡೆಸಿದ ವೈದ್ಯರು ಮಯಿಲ್ ಸಾಮಿ ಆಸ್ಪತ್ರೆಗೆ ಕರೆ ತರುವ ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ಖಚಿತ ಪಡಿಸಿದ್ದರು. 57 ವರ್ಷದ ಮಯಿಲ್ ಸಾಮಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಲಕ್ಷ್ಮಣ್

ಕನ್ನಡದ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಲಕ್ಷ್ಮಣ್ ಜನವರಿ 23ರ ಬೆಳಗಿನ ಜಾವ ಹೃದಯಾಘಾತದಿಂದಲೇ ನಿಧನರಾಗಿದ್ದರು. 74 ವರ್ಷದ ಅವರಿಗೆ ಹಿಂದಿನ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದರು. ʼಇಸಿಜಿʼ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ವಿಶ್ರಾಂತಿ ಪಡೆಯುವಂತೆ ಸೂಚಿಸಿ ವಾಪಸ್ ಮನೆಗೆ ಕಳುಹಿಸಿದ್ದರು. ಬೆಳಗಿನ ಜಾವ ತೀವ್ರ ಹೃದಯಾಘಾತವಾದ ಹಿನ್ನೆಲೆ ಹಿರಿಯ ನಟ ಮನೆಯಲ್ಲೇ ಕೊನೆಯುಸಿರೆಳೆದಿದ್ದರು.
ಮನ್‌ದೀಪ್ ರಾಯ್

ಸ್ಯಾಂಡಲ್‌ವುಡ್ ಹಿರಿಯ ಪೋಷಕ ನಟ ಮನ್‌ದೀಪ್ ರಾಯ್ ಕಳೆದ ಡಿಸೆಂಬರ್‌ನಲ್ಲಿ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದರು. 73 ವರ್ಷದ ಹಿರಿಯ ನಟನನ್ನು ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಜನವರಿ 28ರ ತಡರಾತ್ರಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಮಿಂಚಿನ ಓಟ, ಆಕಸ್ಮಿಕ, ಅಪೂರ್ವ ಸಂಗಮ, ಪ್ರೀತ್ಸೋದ್ ತಪ್ಪಾ, ಅಯ್ಯ ಸೇರದಿಂತೆ ಕನ್ನಡದ 500ಕ್ಕೂ ಚಿತ್ರಗಳಲ್ಲಿ ಮನ್‌ದೀಪ್ ರಾಯ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.
ರಾಜು ಶ್ರೀವಾಸ್ತವ

ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಕೂಡ ಹೃದಯಾಘಾತದಿಂದಲೇ ಮೃತಪಟ್ಟಿದ್ದರು. ದೆಹಲಿಯ ತಮ್ಮ ನಿವಾಸದಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದ ಅವರನ್ನು ಕುಟುಂಬಸ್ಥರು ʼಏಮ್ಸ್ʼ ಆಸ್ಪತ್ರೆಗೆ ದಾಖಲಿಸಿದ್ದರು. ಸತತ 43 ದಿನಗಳ ಕಾಲ ಅವರನ್ನು ತುರ್ತುನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕಳೆದ ಸೆಪ್ಟೆಂಬರ್ 21ರಂದು ಅವರು ಆಸ್ಪತ್ರೆಯಲ್ಲೇ ನಿಧನರಾದರು.
ಕೃಷ್ಣಕುಮಾರ್ ಕುನ್ನತ್

ಖ್ಯಾತ ಗಾಯಕ (53) ಕೃಷ್ಣಕುಮಾರ್ ಕುನ್ನತ್ ಕಳೆದ ಮೇ 31ರಂದು ಕೊಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ವೇದಿಕೆಯ ಮೇಲೆ ಹಾಡುತ್ತಿದ್ದ ಸಂದರ್ಭದಲ್ಲೇ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ವೇದಿಕೆ ಇಳಿದು ವಿಶ್ರಾಂತಿಗಾಗಿ ತಾವು ತಂಗಿದ್ದ ಹೋಟೆಲ್‌ಗೆ ಧಾವಿಸಿದ್ದ ಅವರು ಕುಸಿದು ಬಿದ್ದಿದ್ದರು. ಸಹಾಯಕ ಸಿಬ್ಬಂದಿ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತಪಾಸಣೆ ನಡೆಸಿದ್ದ ವೈದ್ಯರು ಆಸ್ಪತ್ರೆಗೆ ಕರೆ ತರುವ ಮಾರ್ಗ ಮಧ್ಯದಲ್ಲೇ ಗಾಯಕ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದರು.
ಛಲಪತಿ ರಾವ್

ತೆಲುಗಿನ ಖ್ಯಾತ ನಟ ಛಲಪತಿ ರಾವ್ ಕೂಡ ಕಳೆದ ಡಿಸೆಂಬರ್ 25ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಡಿ. 25ರ ಬೆಳಗ್ಗೆ 78 ವರ್ಷದ ಹಿರಿಯ ನಟನಿಗೆ ಎದೆನೋವು ಕಾಣಿಸಿಕೊಂಡಿತ್ತು. ತೀವ್ರ ಹೃದಯಾಘಾತವಾದ ಹಿನ್ನೆಲೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. 5 ದಶಕಗಳಿಗೂ ಹೆಚ್ಚು ಕಾಲ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ವಿವೇಕ್

ತಮಿಳಿನ ಖ್ಯಾತ ವಿವೇಕ್ ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದರು. 2021 ಏಪ್ರಿಲ್ 16ರಂದು ಎದೆನೋವಿನಿಂದ ಆಸ್ಪತ್ರೆಗೆ ಸೇರಿದ್ದ ಅವರು ಮಾರನೇ ದಿನ ಬೆಳಗ್ಗೆ ಹೊತ್ತಿಗೆ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದರು. ಎದೆನೋವು ಕಾಣಿಸಿಕೊಳ್ಳುವ ಹಿಂದಿನ ದಿನವಷ್ಟೇ ವಿವೇಕ್ ಕೊರೊನಾ ಲಸಿಕೆ ಪಡೆದಿದ್ದರು. ಲಸಿಕೆಯ ಅಡ್ಡಪರಿಣಾಮದಿಂದಲೇ 59 ವರ್ಷದ ಹಿರಿಯ ನಟನಿಗೆ ಹೃದಯಾಘಾತ ಸಂಭವಿಸಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕಾಲಿವುಡ್ ಹಾಸ್ಯನಟನಾಗಿ ಮಿಂಚಿದ್ದ ವಿವೇಕ್ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಪುನೀತ್ ರಾಜ್‌ಕುಮಾರ್

ಕನ್ನಡದ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ 2021ರ ಅಕ್ಟೋಬರ್ 29ರ ಬೆಳಗ್ಗೆ ಬೆಂಗಳೂರಿನ ಸದಾಶಿವ ನಗರದ ತಮ್ಮ ಮನೆಯಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಪತ್ನಿ ಅಶ್ವಿನಿ ಮತ್ತು ಸಹಾಯಕರು ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆ ಫಲಿಸದೆ 46 ವರ್ಷದ ಪುನೀತ್ ಮೃತಪಟ್ಟಿದ್ದರು.
ಚಿರಂಜೀವಿ ಸರ್ಜಾ

ಸ್ಯಾಂಡಲ್‌ವುಡ್‌ನ ಖ್ಯಾತ ನಟ ಚಿರಂಜೀವಿ ಸರ್ಜಾ ಕೊರೊನಾ ಸಾಂಕ್ರಾಮಿಕ ಶುರುವಾದ ಕೆಲವೇ ತಿಂಗಳಿಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. 2020 ಜೂನ್ 7ರಂದು ವಿಶ್ರಾಂತಿ ಪಡೆಯುತ್ತಿದ್ದ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಜಯನಗರದ ಸಾಗರ್ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. 39 ವರ್ಷದ ಚಿರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು.