- ಬೆಳಗಾವಿಯ ಯುವ ಕ್ರಾಂತಿ ಸಮಾವೇಶದಲ್ಲಿ ಮೋದಿ ವಿರುದ್ಧ ಗುಡುಗಿದ ಖರ್ಗೆ
- ನೀವು ನಮ್ಮನ್ನು ಮಣ್ಣಿನಲ್ಲಿ ಹೂತು ಹಾಕಿದರೂ ನಾವು ಮತ್ತೆ ಹುಟ್ಟಿಬರುತ್ತೇವೆ
ಪ್ರಧಾನಿ ಮೋದಿ ಅವರು ಬೆಳಗಾವಿಗೆ ಬಂದಾಗ ನನ್ನ ರಿಮೋಟ್ ಕಟ್ರೋಲ್ ಬೇರೆಯವರ ಬಳಿ ಇದೆ ಎಂದಿದ್ದಾರೆ. ಹಾಗಾದರೆ ನಿಮ್ಮ ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಮೋದಿ ಅವರೇ? ಅದಾನಿ ಬಗ್ಗೆ ರಾಹುಲ್ ಗಾಂಧಿ ಅವರು ಪ್ರಶ್ನೆ ಕೇಳಿದರೆ ಅದನ್ನು ಕಡತದಿಂದ ತೆಗೆದು ಹಾಕುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
“ದೇಶದಲ್ಲಿ ಜಾತಿವಾದ ಇದೆ, ಜಾತಿ ತಾರತಮ್ಯವಿದೆ ಎಂದು ಹೇಳಿದರೆ ಅದೇ ತಪ್ಪಾ? ಬಿಜೆಪಿಯವರು ಬರೀ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇಷ್ಟು ಭ್ರಷ್ಟಾಚಾರ ಎಂದೂ ಇರಲಿಲ್ಲ. ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ. ಇವರು ಮೋದಿ ಅವರಿಗೆ ದೂರು ನೀಡಿದ್ದಾರೆ. ಗುತ್ತಿಗೆದಾರರು ದೂರು ನೀಡಿದಾಗ ಇದರ ತನಿಖೆಗೆ ಅಮಿತ್ ಶಾ ಅವರು ಯಾಕೆ ಆದೇಶ ಮಾಡಲಿಲ್ಲ” ಎಂದು ಪ್ರಶ್ನಿಸಿದರು.
“ಕಾಶ್ಮೀರದಲ್ಲಿ 46 ದಿನದ ಹಿಂದೆ ಹೇಳಿದ ಮಾತಿನ ಬಗ್ಗೆ ನಿನ್ನೆ ದೆಹಲಿ ಪೊಲೀಸರು ಸಾಕ್ಷಿ ಕೇಳಿಕೊಂಡು ರಾಹುಲ್ ಗಾಂಧಿ ಅವರ ಮನೆ ಮುಂದೆ ಹೋಗಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ನೀಡುತ್ತಿದ್ದರೂ ಇಲ್ಲಿ ತನಿಖೆ ಮಾಡುತ್ತಿಲ್ಲ. ರಾಜ್ಯದಲ್ಲಿ 100 ರೂ. ಕಾಮಗಾರಿ ಇದ್ದರೆ 200 ರೂ. ಅಂದಾಜು ನಿಗದಿ ಮಾಡಿ ರಾಜ್ಯದವರು 40%, ಕೇಂದ್ರದವರು 40% ಕಮಿಷನ್ ಪಡೆಯುತ್ತಿದ್ದಾರೆ” ಎಂದು ದೂರಿದರು.
“ಸಿಬಿಐ ನಮ್ಮನ್ನು ಮಣಿಸುವುದಿಲ್ಲ. ಇವರ ಬೆದರಿಕೆಗೆ ರಾಹುಲ್ ಗಾಂಧಿ ಅವರು ಎಂದಿಗೂ ಹೆದರುವುದಿಲ್ಲ. ಇವರು ಎಷ್ಟು ದಿನ ತೊಂದರೆ ನೀಡುತ್ತಾರೋ ನೀಡಲಿ. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಮೋದಿ ಅವರೇ ನೀವು ನಮ್ಮನ್ನು ಮಣ್ಣಿನಲ್ಲಿ ಹೂತು ಹಾಕಲು ಪ್ರಯತ್ನಿಸಿ. ನಾವು ಬೀಜವಾಗಿದ್ದು, ಪದೇ ಪದೆ ಹುಟ್ಟಿಬರುತ್ತೇವೆ” ಎಂದು ಗುಡುಗಿದರು.
ಇಡೀ ದೇಶಕ್ಕೆ ಈ ಚುನಾವಣೆ ಸಂದೇಶ ನೀಡಲಿದೆ
“ಈ ಚುನಾವಣೆ ಕರ್ನಾಟಕ ರಾಜ್ಯಕ್ಕೆ ಬಹಳ ಮಹತ್ವವಾದ ಚುನಾವಣೆ. ಇಡೀ ದೇಶಕ್ಕೆ ಈ ಚುನಾವಣೆ ಸಂದೇಶ ನೀಡಲಿದೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಿದೆ. ನಿಮ್ಮೆಲ್ಲರ ಆಶೀರ್ವಾದ, ಸಹಕಾರ ನಮ್ಮ ಮೇಲೆ ಸದಾ ಇರಬೇಕು. ನಾನು ಎಐಸಿಸಿ ಅದ್ಯಕ್ಷನಾದ ನಂತರ ಬೆಳಗಾವಿ ಭೂಮಿಗೆ ಬಂದಿದ್ದೇನೆ. ಈ ಬೆಳಗಾವಿ ಕಾಂಗ್ರೆಸ್ ಪಕ್ಷಕ್ಕೆ ಪವಿತ್ರವಾದ ಭೂಮಿ. ಮಹಾತ್ಮ ಗಾಂಧಿ ಅವರು 100 ವರ್ಷಗಳ ಹಿಂದೆ 39ನೇ ಕಾಂಗ್ರೆಸ್ ಅಧಿವೇಶನ ನಡೆಸಿ ಇದೇ ಭೂಮಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಈಗ ನಾನು ಅದೇ ಸ್ಥಾನಕ್ಕೆ ಆಯ್ಕೆಯಾಗಿದ್ದೇನೆ. ಇದಕ್ಕಾಗಿ ನಿಮ್ಮೆಲ್ಲರಿಗೂ ವಂದನೆ ತಿಳಿಸುವೆ” ಎಂದರು.
“ಕಾಂಗ್ರೆಸ್ ಪಕ್ಷ ಬೆಳಗಾವಿಯ 18 ಕ್ಷೇತ್ರಗಳಲ್ಲಿ 15-16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿದ್ದರು. ಈ ಬಾರಿ ನಮ್ಮ ನಾಯಕರ ಒಗ್ಗಟ್ಟು ನೋಡಿದರೆ 18ಕ್ಕೆ 18 ಕ್ಷೇತ್ರದಲ್ಲೂ ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಕಾಂಗ್ರೆಸ್ ಪಕ್ಷ ಗೃಹಲಕ್ಷಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಘೋಷಣೆ ನೀಡಲಾಗಿದೆ. ದೇಶದಲ್ಲಿ 50 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಅದನ್ನು ತುಂಬುತ್ತಿಲ್ಲ. ಇವರು ಹೇಳಿದ 2 ಕೋಟಿ ಉದ್ಯೋಗ ಎಲ್ಲಿ ಹೋದವು ಗೊತ್ತಿಲ್ಲ. ರಾಜ್ಯದಲ್ಲಿ 2.50 ಲಕ್ಷ ಉದ್ಯೋಗ ಖಾಲಿ ಇದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಒಂದೂವರೆ ವರ್ಷಗಳಲ್ಲಿ ಎಲ್ಲ ಹುದ್ದೆ ತುಂಬುತ್ತೇವೆ” ಎಂದು ಭರವಸೆ ನೀಡಿದರು.