ತಿರುಪತಿ ಸರಳವಾಗಿ ಮಗನ ಮದುವೆ ಮಾಡಿದ್ದೇನೆ ಎಂದ ಲೀಲಾವತಿ
ನನ್ನ ಮದುವೆಯಿಂದ ನಿಮಗೇನು ಹಿಂಸೆಯಾಗಿದೆ ಎಂದು ವಿನೋದ್ ರಾಜ್ ಪ್ರಶ್ನೆ
ಹಿರಿಯ ನಟಿ ಲೀಲಾವತಿ ರಹಸ್ಯವಾಗಿ ಮಗನ ಮದುವೆ ಮಾಡಿದ್ದಾರೆ ಎಂದು ನಿರ್ದೇಶಕ, ರಾಜ್ ಕುಟುಂಬದ ಆಪ್ತ ಪ್ರಕಾಶ್ ರಾಜ್ ಮೇಹು ವಿವಾದ ಸೃಷ್ಟಿಸಲು ಯತ್ನಿಸಿದ್ದರು. ವಿನೋದ್ ರಾಜ್, ತಮ್ಮ ಹೆಂಡತಿ ಮತ್ತು ಮಗನ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಬಗ್ಗೆ ಲೀಲಾವತಿ ಅವರು ಪ್ರತಿಕ್ರಿಯೆ ನೀಡಿದ್ದು, ನನ್ನ ಮಗನಿಗೆ ಮದುವೆ ಮಾಡಿದ್ದೀನಿ. ಆದರೆ, ಆತನೇನು ಕದ್ದು ಮದುವೆಯಾಗಿಲ್ಲ ಎಂದಿದ್ದಾರೆ.
ಯುಟ್ಯೂಬ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಲೀಲಾವತಿ, “ನನ್ನ ಮಗನಿಗೆ ಮದುವೆ ಮಾಡಿದ್ದೇನೆ. ಆತನ ಹೆಂಡತಿ ಮತ್ತು ಮಗ ಇಬ್ಬರೂ ಚೆನ್ನೈನಲ್ಲಿ ವಾಸವಾಗಿದ್ದಾರೆ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆತನೇನು ಕದ್ದು ಮದುವೆಯಾಗಿಲ್ಲ. ಮದುವೆಗೆ 7 ಜನ ಕನ್ನಡಿಗರು ಬಂದಿದ್ದರು. ಬೇರೆಯರಂತೆ ಅರಮನೆಯಲ್ಲೊ, ದೊಡ್ಡ ಕಲ್ಯಾಣ ಮಂಟಪದಲ್ಲೊ ಮದುವೆ ಮಾಡುವಷ್ಟು ದುಡ್ಡು ನನ್ನ ಬಳಿ ಇರಲಿಲ್ಲ. ಹಾಗಾಗಿ ತಿರುಪತಿಯಲ್ಲಿ ಸರಳವಾಗಿ ಮದುವೆ ಮಾಡಿದ್ದೇನೆ. 650 ಚಿತ್ರಗಳಲ್ಲಿ ನಟಿಸಿದ ನಾನು ಮಗನ ಮದುವೆಯನ್ನು ವಿಜೃಂಭಣೆಯಿಂದ ಮಾಡುವಷ್ಟು ಶಕ್ತಳಾಗಿರಲಿಲ್ಲ ಎಂಬ ಸಂಕೋಚ ಈಗಲೂ ಇದೆ. ಜಮೀನು ನೋಡಿ ನಾನು ಶ್ರೀಮಂತಳು ಎಂಬಂತೆ ಮಾತನಾಡುತ್ತಾರೆ. ಆದರೆ, ನಾನು ಬಡವಿ. ಆವತ್ತಿನ ಕಾಲಕ್ಕೆ 30 ಸಾವಿರ ರೂಪಾಯಿಗೆ ಜಮೀನನ್ನು ಖರೀದಿಸಿದ್ದೆ. ಯಾರು ಏನೇ ಹೇಳಿದರೂ ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿಯೇ ಇದ್ದೇನೆ. ಯಾವ ತಾಯಿಯಾದರೂ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದೇ ಬಯಸುತ್ತಾಳೆ. ನಮ್ಮ ಅಂತರಂಗದ ಸುದ್ದಿಯನ್ನೆಲ್ಲ ಯಾಕೆ ಕೇಳುತ್ತಾರೆ ಎಂದು” ಬೇಸರ ವ್ಯಕ್ತ ಪಡಿಸಿದ್ದಾರೆ.
ಇದೇ ಸಂದರ್ಶನದಲ್ಲಿ ವಿನೋದ್ ರಾಜ್ ಕೂಡ ಮಾತನಾಡಿದ್ದು, “ನಾನು ಮದುವೆಯಾಗಿದ್ದರಿಂದ ಭಯೋತ್ಪಾದನೆ ಆಗಿದೆಯೇ? ನಿಧಿಯನ್ನು ಕಂಡು ಹಿಡಿದ ಹಾಗೆ ಮಾತನಾಡುತ್ತಿದ್ದಾರೆ. ನನ್ನ ಮದುವೆಯಿಂದ ನಿಮಗೇನು ಹಿಂಸೆಯಾಗಿದೆ? ಈ ವಿಚಾರವನ್ನು ಬಹಿರಂಗಪಡಿಸಿ ಏನು ಮಾಡಲು ಹೊರಟಿದ್ದಾರೆ? ಅವರಿಗೆ ಪ್ರಜ್ಞೆ ಇದೆಯಾ? ಯಾವ ಕಲಾವಿದರಿಗೂ ಈ ರೀತಿ ತೊಂದರೆ ಕೊಡಬಾರದು. ನಮ್ಮ ತಂಟೆಗೆ ಬಂದವರನ್ನು ಕನ್ನಡಿಗರು ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ ಸ್ಯಾಂಡಲ್‌ವುಡ್ ತಾರೆಯರು
ಇತ್ತೀಚೆಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿನೋದ್ ರಾಜ್ ತಮ್ಮ ಹೆಂಡತಿ, ಮಗ ಮತ್ತು ತಾಯಿಯ ಜೊತೆಗಿರುವ ಫೋಟೋವನ್ನು ಹಂಚಿಕೊಂಡು, “ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್. ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ. ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ, ವಿನೋದ್ ರಾಜ್ ಹೆಂಡತಿ ಮತ್ತು ಮಗ ಚೆನ್ನೈನಲ್ಲಿದ್ದಾರೆ. ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ” ಎಂದು ಬರೆದುಕೊಂಡಿದ್ದರು.
ಜೊತೆಗೆ ಚೆನ್ನೈನಲ್ಲಿರುವ ಲೀಲಾವತಿ ಅವರ ಆಸ್ತಿಯ ದಾಖಲೆ ಪತ್ರ ಹಾಗೂ ವಿನೋದ್ ರಾಜ್ ಅವರ ಮಗನ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ವಿನೋದ್ ರಾಜ್ ಕುಟುಂಬದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಮಾಧ್ಯಮಗಳ ಎದುರು ಮಾತನಾಡಿದ್ದ ಪ್ರಕಾಶ್ ರಾಜ್ ಮೇಹು, “ಇಷ್ಟು ದಿನಗಳ ಕಾಲ ರಾಜ್‌ಕುಮಾರ್ ಮೋಸ ಮಾಡಿದ್ದಾರೆ ಅಂತಲೇ ಲೀಲಾವತಿ ಮತ್ತು ವಿನೋದ್ ರಾಜ್ ಬಿಂಬಿಸುತ್ತಾ ಬಂದಿದ್ದರು. ಜನ ಕೂಡ ವಿನೋದ್ ರಾಜ್, ಅಣ್ಣಾವ್ರ ಮಗ ಅಂತಲೇ ಅಂದುಕೊಂಡಿದ್ದರು. ಈ ಗೊಂದಲವನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ವಿನೋದ್ ರಾಜ್ ಮನೆ ಕೆಲಸದಾಕೆಯನ್ನು ಮದುವೆಯಾದರು ಎಂಬ ಕಾರಣಕ್ಕೆ ಅವರ ವೈವಾಹಿಕ ಜೀವನದ ಕುರಿತು ನಿಗೂಢತೆ ಕಾಪಾಡಿಕೊಳ್ಳಲಾಯಿತು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ” ಎಂದಿದ್ದರು.
ತಮ್ಮ ಪಾಡಿಗೆ ಬದುಕುತ್ತಿರುವ ಲೀಲಾವತಿ ಮತ್ತು ವಿನೋದ್ ರಾಜ್ ಅವರ ವೈಯಕ್ತಿಕ ವಿಚಾರಗಳನ್ನು ಕೆದಕಿದ ಪ್ರಕಾಶ್ ರಾಜ್ ಮೇಹು ಅವರಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದು, ಇಳಿವಯಸ್ಸಿನಲ್ಲಿ ಲೀಲಾವತಿಯರನ್ನು ಅವರ ಪಾಡಿಗೆ ಬದುಕಲು ಬಿಡಿ ಎನ್ನುತ್ತಿದ್ದಾರೆ.