- 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮನೋಬಾಲಾ
- ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟ
ತಮಿಳಿನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಮನೋಬಾಲಾ ಅವರು ಬುಧವಾರ ಬೆಳಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
69 ವರ್ಷದ ಮನೋಬಾಲಾ ಅವರು ಕಳೆದ ಕೆಲವು ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾಗಿದ್ದರು. ಇದಾದ ಬಳಿಕ ಅವರನ್ನು ಮನೆಯಲ್ಲಿಯೇ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಮನೋಬಾಲಾ ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ತಮಿಳಿನ ಖ್ಯಾತ ನಟ ರಜನಿಕಾಂತ್, ಕಮಲ್ ಹಾಸನ್, ಕಾರ್ತಿ, ಚಿಯಾನ್ ವಿಕ್ರಮ್, ಸೂರ್ಯ, ವಿಶಾಲ್, ದಳಪತಿ ವಿಜಯ್ ಮುಂತಾದ ತಾರೆಯರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಭಾರತಿರಾಜ ನಿರ್ದೇಶನದಲ್ಲಿ 1979ರಲ್ಲಿ ತೆರೆಕಂಡ ʼಪುದಿಯ ವಾರ್ಪುಗಲ್ʼ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಲ್ಲದೇ, ಪೋಷಕ ಪಾತ್ರವೊಂದರಲ್ಲಿ ನಟಿಸುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಮನೋಬಾಲಾ 4 ದಶಕಗಳ ಕಾಲ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕರಾಗಿಯೂ ಖ್ಯಾತಿ ಗಳಿಸಿದ್ದ ಅವರು 40 ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕಥೆಗಾರನಾಗಿ, ಯಶಸ್ವಿ ನಿರ್ಮಾಪಕನಾಗಿಯೂ ಮನೋಬಾಲಾ ಗುರುತಿಸಿಕೊಂಡಿದ್ದರು.
ʼತಾಜ್ ಮಹಲ್ʼ, ʼಸೇತುʼ, ʼಅಣ್ಣೈʼ, ʼವಿಲನ್ʼ, ʼಜಯಂʼ, ʼಪಿತಾಮಗನ್ʼ, ʼಪಯಣಂʼ, ʼಅಂಜಾನ್ʼ, ʼಕಾಂಚನಾ-2ʼ, ʼಮಹಾನಟಿʼ, ʼಬಿಗಿಲ್ʼ, ʼವಾಲ್ಟರ್ ವೀರಯ್ಯʼ ಸೇರಿದಂತೆ ತಮಿಳು ಮತ್ತು ತೆಲುಗಿನ ನೂರಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮನೋಬಾಲಾ ನಟಿಸಿದ್ದಾರೆ.