ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಪ್ರದರ್ಶನವನ್ನು ಪಂಜಾಬ್ನಲ್ಲಿ ನಿಷೇಧಿಸುವಂತೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ಜಿಪಿಸಿ) ಗುರುವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದು ಆಗ್ರಹಿಸಿದೆ.
ಈ ಬಗ್ಗೆ ಎಸ್ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಸಿಎಂ ಮಾನ್ ಅವರಿಗೆ ಪತ್ರ ಬರೆದಿದ್ದಾರೆ. ಈ ಸಿನಿಮಾವು ಇತಿಹಾಸವನ್ನು ತಿರುಚುವ ಮತ್ತು ಸಿಖ್ ಭಾವನೆಗಳಿಗೆ ಹಾನಿ ಉಂಟು ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಹಾಗೆಯೇ “ಈ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವುದರಿಂದ ಸಿಖ್ ಸಮುದಾಯದೊಳಗೆ ಆಕ್ರೋಶ ಭುಗಿಲೇಳಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಎಮರ್ಜೆನ್ಸಿ | ಇಂದಿರಾ ಗಾಂಧಿ ಶಕ್ತಿಶಾಲಿ ಎಂದು ಭಾವಿಸಿದ್ದೆ, ಆದರೆ ದುರ್ಬಲರು: ಕಂಗನಾ ರಣಾವತ್
“ಬಿಜೆಪಿ ಸಂಸದೆ ಕಂಗನಾ ರಣಾವತ್ ನಿರ್ಮಿಸಿರುವ ಎಮರ್ಜೆನ್ಸಿ ಸಿನಿಮಾ ಜನವರಿ 17ರಿಂದ ಪಂಜಾಬ್ನಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ, ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಾವು ಕಳೆದ ವರ್ಷ ನವೆಂಬರ್ 14ರಂದೇ ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ನಮ್ಮ ಆಕ್ಷೇಪಣೆಯನ್ನು ತಿಳಿಸಿದ್ದೇವೆ. ಸಿಖ್ ಸಮುದಾಯವನ್ನು ದೂಷಿಸುವ ಉದ್ದೇಶದಿಂದಲೇ ಈ ಸಿನಿಮಾವನ್ನು ನಿರ್ಮಿಸಲಾಗಿರುವುದರಿಂದ ಈ ಸಿನಿಮಾವನ್ನು ರಾಜ್ಯದಲ್ಲಿ ಅನುಮತಿಸಲಾಗದು ಎಂಬ ನಿರ್ಣಯವನ್ನು ಸಮಿತಿಯು ಅಂಗೀಕರಿಸಿದೆ ಎಂಬುದನ್ನು ನಾವು ತಿಳಿಸಿದ್ದೇವೆ” ಎಂದು ಹೇಳಿದ್ದಾರೆ.
Breaking: SGPC demands a ban on Kangana Ranaut’s film Emergency in Punjab, set to release on Jan 17, 2025. SGPC President Harjinder Singh Dhami writes to CM Bhagwant Mann, stating the film misrepresents Sikh history and could spark outrage. The letter states that if the film is… pic.twitter.com/MbhWBm8tel
— Gagandeep Singh (@Gagan4344) January 16, 2025
“ಈ ಸಿನಿಮಾವನ್ನು ನಿಷೇಧಿಸುವಂತೆ ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಈವರೆಗೂ ಈ ಸಿನಿಮಾವನ್ನು ನಿಷೇಧಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಜನವರಿ 17ರಂದು ಈ ಸಿನಿಮಾವು ಬಿಡುಗಡೆಯಾದರೆ ರಾಜ್ಯದಲ್ಲಿ ಸಿಖ್ ಸಮುದಾಯವನ್ನು ಕೆರಳಿಸುವುದು ಖಂಡಿತ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ‘ಎಮರ್ಜೆನ್ಸಿ’ ವೀಕ್ಷಿಸಲು ಕಂಗನಾ ಆಹ್ವಾನ: ಪ್ರಿಯಾಂಕಾ ಕೊಟ್ಟ ಉತ್ತರವೇನು?
“ಈ ಸಿನಿಮಾವು ಸಿಖ್ ಸಮುದಾಯವನ್ನು ಮಾತ್ರವಲ್ಲ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಅವರನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ಇದನ್ನು ಸಮುದಾಯವು ಸಹಿಸದು. ಸಿಖ್ ಸಮುದಾಯದ ವಿರುದ್ಧ ವಿಷ ಬಿತ್ತುವ, ದ್ವೇಷ ಹರಡುವ ಉದ್ದೇಶದಿಂದ ಈ ಸಿನಿಮಾವನ್ನು ನಿರ್ಮಿಸಲಾಗಿದೆ” ಎಂದು ಕೂಡಾ ಪತ್ರದಲ್ಲಿ ಬರೆಯಲಾಗಿದೆ.
“ಆದ್ದರಿಂದ ಈ ಸಿನಿಮಾವನ್ನು ರಾಜ್ಯದಲ್ಲಿ ನಿಷೇಧಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಿನಿಮಾ ನಿಷೇಧಿಸದಿದ್ದರೆ ನಾವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಲವು ವಿವಾದಗಳ ಕಾರಣ ಸೆನ್ಸರ್ ಮಂಡಳಿಯು ಪ್ರಮಾಣಪತ್ರವನ್ನು ನೀಡುವುದನ್ನು ವಿಳಂಬ ಮಾಡಿದ್ದರಿಂದ ಈ ಹಿಂದೆ ಎಮರ್ಜೆನ್ಸಿ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು. ಜನವರಿ 17ರಂದು (ನಾಳೆ) ಎಮರ್ಜೆನ್ಸಿ ಸಿನಿಮಾ ಬಿಡುಗಡೆಯಾಗಲಿದ್ದು, ಸಿನಿಮಾ ವಿವಾದ ಕೇಂದ್ರಬಿಂದುವಾಗಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಘೋಷಿಸಿದ್ದಕ್ಕೆ ಸಂಬಂಧಿಸಿದ ಸಿನಿಮಾ ಇದಾಗಿದ್ದು ಸಿನಿಮಾದಲ್ಲಿ ಸಿಖ್ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಆರೋಪಗಳಿವೆ.
