- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬೆಂಬಲ ಘೋಷಿಸಿರುವ ಸುದೀಪ್
- ನಿಮಗೇಕೆ ರಾಜಕೀಯದ ಸಹವಾಸ ಎನ್ನುತ್ತಿರುವ ಅಭಿಮಾನಿಗಳು
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರ ಬೆಂಬಲ ಘೋಷಿಸಿರುವ ನಟ ಸುದೀಪ್ ಅಭಿನಯದ ಸಿನಿಮಾ ಅಥವಾ ಕಿರುತೆರೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಸುದೀಪ್ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಶಿವಮೊಗ್ಗ ಮೂಲದ ವಕೀಲ ಕೆ.ಪಿ ಶ್ರೀಪಾಲ, “ನಟ ಸುದೀಪ್ ಅವರು ಭಾರತೀಯ ಜನತಾ ಪಕ್ಷದ ಪರ ಸ್ಟಾರ್ ಪ್ರಚಾರಕರಾಗಿದ್ದಾರೆ. ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ಅವರೇ ಘೋಷಿಸಿದ್ದಾರೆ. ಹೀಗಾಗಿ ಚುನಾವಣೆ ಮುಗಿಯುವ ವರೆಗೂ ಅವರು ನಟಿಸಿರುವ ಸಿನಿಮಾ, ರಿಯಾಲಿಟಿ ಶೋ ಮತ್ತು ಜಾಹೀರಾತುಗಳು ಚಿತ್ರಮಂದಿರ ಹಾಗೂ ಕಿರುತೆರೆಯಲ್ಲಿ ಪ್ರದರ್ಶನವಾಗದಂತೆ ಕ್ರಮ ಜರುಗಿಸಿ, ಇಲ್ಲವಾದರೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ” ಎಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದ ಸುದೀಪ್, “ನಾನು ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಬೊಮ್ಮಾಯಿ ಅವರು ನನ್ನ ಕಷ್ಟಕ್ಕೆ ನೆರವಾಗಿದ್ದರು. ಹೀಗಾಗಿ ಅವರ ಪರ ಚುನಾವಣಾ ಪ್ರಚಾರ ಮಾಡಲು ನಿರ್ಧರಿಸಿದ್ದೇನೆ. ಬೊಮ್ಮಾಯಿ ಮಾಮಾ ಯಾವ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಹೇಳುತ್ತಾರೊ ಅಂಥವರ ಪರ ಮಾತ್ರ ನಾನು ಪ್ರಚಾರಕ್ಕಿಳಿಯಲಿದ್ದೇನೆ. ಆದರೆ, ಬಿಜೆಪಿ ಸೇರುವುದಿಲ್ಲ” ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ನಟ ಸುದೀಪ್‌ಗೆ ಅಪರಿಚಿತರಿಂದ ಬೆದರಿಕೆ
ಸುದೀಪ್, ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಪರ ಚುನಾವಣಾ ಪ್ರಚಾರ ಮಾಡುವುದಾಗಿ ಘೋಷಿಸುತ್ತಲೇ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು, “ನಿಮಗೆ ರಾಜಕೀಯ ಬೇಕಾಗಿರಲಿಲ್ಲ. ಬೊಮ್ಮಾಯಿ ಪರ ಎನ್ನುತ್ತಲೇ ಬಿಜೆಪಿಯನ್ನು ಬೆಂಬಲಿಸುತ್ತಿದ್ದೀರಿ. ಕಲಾವಿದ ಕಲೆಗೆ ಸೀಮಿತವಾಗಿದ್ದರೇ ಚೆಂದ” ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.