ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುರಿಯಾಗಿಸಿ ಸಿನಿಮಾ ಮಾಡಿದ ಸನೋಜ್
ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ನಿರ್ದೇಶಕನ ವಿರುದ್ಧ ದೂರು ದಾಖಲು
ಟ್ರೈಲರ್ನಿಂದಲೇ ವಿವಾದ ಸೃಷ್ಟಿಸಿರುವ ʼದಿ ಡೈರಿ ಆಫ್ ವೆಸ್ಟ್ ಬೆಂಗಾಲ್ʼ ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ಅವರಿಗೆ ಕೋಲ್ಕತ್ತಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ಸನೋಜ್ ಮಿಶ್ರಾ, ʼದಿ ಡೈರಿ ಆಫ್ ವೆಸ್ಟ್ ಬೆಂಗಾಲ್ʼ ಚಿತ್ರದ ಕಥೆಯನ್ನು ಹೆಣೆದಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೈಲರ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಂದಾಜು ಎರಡು ನಿಮಿಷಗಳ ಟ್ರೈಲರ್ನಲ್ಲಿ, ʼಪಶ್ಚಿಮ ಬಂಗಾಳದ ಹಿಂದೂಗಳು ಆಪತ್ತಿನಲ್ಲಿದ್ದಾರೆ. ಮಮತಾ ಬ್ಯಾನರ್ಜಿ, ಅಕ್ರಮವಾಗಿ ಭಾರತದ ಗಡಿ ದಾಟಿ ಒಳನುಸುಳುತ್ತಿರುವ ರೋಹಿಂಗ್ಯಾ ಮುಸಲ್ಮಾನರು ಮತ್ತು ಬಾಂಗ್ಲಾದೇಶಿಗಳ ಪರವಾಗಿದ್ದಾರೆ. ಪಶ್ಚಿಮ ಬಂಗಾಳ ದಿನದಿಂದ ದಿನಕ್ಕೆ ಕಾಶ್ಮೀರದ ರೀತಿ ಬದಲಾಗುತ್ತಿದೆʼ ಎಂದು ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ವಿವಾದಾತ್ಮಕ ಕಥಾಹಂದರವುಳ್ಳ ಈ ಚಿತ್ರಕ್ಕೆ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಎನ್ನುವವರು ಬಂಡವಾಳ ಹೂಡಿದ್ದಾರೆ.
ಈ ವಿವಾದಾತ್ಮಕ ಚಿತ್ರದ ಟ್ರೈಲರ್ಗೆ ಆಕ್ಷೇಪ ವ್ಯಕ್ತಪಡಿಸಿ ನಿರ್ದೇಶಕ ಸನೋಜ್ ಮಿಶ್ರಾ ಮೇ 11ರಂದು ಕೊಲ್ಕತ್ತಾದ ಅಮ್ಹೆರ್ಸ್ಟ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜ್ಯದ ಘನತೆಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದಾಗಿಯೇ ಈ ರೀತಿಯ ಟ್ರೈಲರ್ ಬಿಡುಗಡೆ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿರುವುದಾಗಿ ಪೊಲೀಸರು ರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಈಗಾಗಲೇ ಪ್ರಕರಣದ ಪ್ರಾಥಮಿಕ ನಡೆಸಿದ್ದೇವೆ. ಮೇ 30ರಂದು ಮಧ್ಯಾಹ್ನ 12ಗಂಟೆಗೆ ಅಮ್ಹೆರ್ಸ್ಟ್ ರಸ್ತೆಯ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ನೋಟಿಸ್ ನೀಡಲಾಗಿದೆ” ಎಂದ ಕೊಲ್ಕತ್ತಾ ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಹೃದಯವಂತ ಶಾರುಖ್ ಖಾನ್
ತಿರುಚಿದ ಕಥಾಹಂದರದ ಕಾರಣಕ್ಕೆ ಭಾರೀ ವಿವಾದ ಸೃಷ್ಟಿಸಿರುವ ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನವನ್ನು ಮಮತಾ ಬ್ಯಾನರ್ಜಿ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿದ್ದರು. ಇದೇ ವೇಳೆ “ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶಪೂರಿತ ಚಿತ್ರಗಳನ್ನು ತಯಾರಿಸುವ ಸಲುವಾಗಿ ಬಿಜೆಪಿ, ಕೆಲವು ಸ್ಟಾರ್ ಕಲಾವಿದರಿಗೆ ಹಣ ಸಂದಾಯ ಮಾಡಿದೆ. ಹಣ ಪಡೆದಿರುವ ಕಲಾವಿದರು ಈಗಾಗಲೇ ಪಶ್ಚಿಮ ಬಂಗಾಳಕ್ಕೂ ಬಂದು ಹೋಗಿದ್ದಾರೆ. ತಿರುಚಿದ ಕಥೆಯನ್ನಿಟ್ಟುಕೊಂಡು ʼಬಂಗಾಳ ಫೈಲ್ಸ್ʼ ಸಿನಿಮಾ ಮಾಡಲು ಹೊರಟಿದ್ದಾರೆ” ಈ ಬಗ್ಗೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ” ಎಂದಿದ್ದರು.