ಕ್ಯಾನ್ಸರ್‌ನಿಂದ ಬಳಲುತ್ತಿರುವ ಶಾರುಖ್ ಅಭಿಮಾನಿ
ಅಭಿಮಾನಿಯ ಚಿಕಿತ್ಸೆಗೆ ನೆರವಿನ ಹಸ್ತ ಚಾಚಿದ ನಟ
ಸಾವು ಬದುಕಿನ ನಡುವೆ ಹೋರಾಡುತ್ತಿರುವ ತಮ್ಮ ಅಭಿಮಾನಿಯೊಬ್ಬರ ಕೊನೆಯ ಆಸೆಯನ್ನು ಈಡೇರಿಸುವ ಮೂಲಕ ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿರುವ ಕೊಲ್ಕತ್ತಾ ಮೂಲದ 60 ವರ್ಷದ ಶಿವಾನಿ ಎಂಬುವವರು ತಮ್ಮ ಕುಟುಂಬಸ್ಥರ ಬಳಿ ನೆಚ್ಚಿನ ನಟ ಶಾರುಖ್ ಖಾನ್ ಅವರನ್ನು ಭೇಟಿಯಾಗುವ ಬಯಕೆಯನ್ನು ಹಂಚಿಕೊಂಡಿದ್ದರು. ಶಿವಾನಿ ಅವರ ಪುತ್ರಿ ಪ್ರಿಯಾ ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಶಾರುಖ್ ಅಭಿಮಾನಿಗಳ ಗಮನಕ್ಕೆ ತಂದಿದ್ದಾರೆ.
ಅಭಿಮಾನಿಗಳ ಬಳಗದಲ್ಲಿ ಒಬ್ಬರಾದ ಫೈಜಿ ಎಂಬುವವರು ಶಿವಾನಿ ಅವರ ಕೊನೆಯ ಆಸೆಯ ಬಗ್ಗೆ ಶಾರುಖ್ ಖಾನ್ ಅವರಿಗೆ ತಿಳಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಾರುಖ್, ವಿಷಯ ತಿಳಿದ ಕೂಡಲೇ ಬಿಡುವು ಮಾಡಿಕೊಂಡು ತಮ್ಮ ಅಭಿಮಾನಿ ಶಿವಾನಿ ಅವರಿಗೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶಿವಾನಿ ಮತ್ತು ಅವರ ಪುತ್ರಿ ಪ್ರಿಯಾ ಜೊತೆಗೆ ಅರ್ಧ ಗಂಟೆಗಳ ಕಾಲ ಮಾತನಾಡಿರುವ ಸ್ಟಾರ್ ನಟ, ಚಿಕಿತ್ಸೆಗೆ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ. ಕೊಲ್ಕತ್ತಾಗೆ ಭೇಟಿ ನೀಡಿದಾಗ ಖಂಡಿತವಾಗಿ ಶಿವಾನಿ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಿಯಾ ಅವರ ಮದುವೆಗೆ ಹಾಜರಾಗುವುದಾಗಿಯೂ ಮಾತು ಕೊಟ್ಟಿದ್ದಾರೆ.
ತಮ್ಮ ನೆಚ್ಚಿನ ನಟನ ಜೊತೆ ಮಾತನಾಡಿದ ಅನುಭವವನ್ನು ಸೆಲ್ಫೀ ವಿಡಿಯೋ ಮೂಲಕ ಹಂಚಿಕೊಂಡಿರುವ ಶಿವಾನಿ, “ಶಾರುಖ್ ಖಾನ್ ನಮಗೆ ವಿಡಿಯೋ ಕರೆ ಮಾಡುತ್ತಾರೆಂದು ನಿಜಕ್ಕೂ ನಿರೀಕ್ಷಿಸಿರಲಿಲ್ಲ. ಅವರ ಜೊತೆ ಮಾತನಾಡಿ ಬಹಳ ಖುಷಿಯಾಗಿದೆ” ಎಂದಿದ್ದಾರೆ. ಶಿವಾನಿ ಅವರ ಮಗಳು ಕೂಡ ನಟನ ಸರಳತೆಯನ್ನು ಕೊಂಡಾಡಿದ್ದಾರೆ. ಇನ್ನು ಅಭಿಮಾನಿಗಳ ಬಗ್ಗೆ ಶಾರುಖ್ ಹೊಂದಿರುವ ಕಾಳಜಿಯನ್ನು ಕಂಡು ನೆಟ್ಟಿಗರು ಕೂಡ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.