ʼಮಕ್ಕಳನ್ನು ಧರ್ಮದ ಆಧಾರದ ಮೇಲೆ ಬೆಳೆಸಬೇಕೆ ಅಥವಾ ವಿಜ್ಞಾನದ ಆಧಾರದ ಮೇಲೆ ಬೆಳೆಸಬೇಕೆ?ʼ ಎಂಬ ಪ್ರಶ್ನೆಯಿದೆ. ಅದಕ್ಕೆ 'ವಿಜ್ಞಾನ' ಎಂಬ ಉತ್ತರ ಕೊಡಲಾಗುತ್ತದೆ. ಇದು ಧರ್ಮಕ್ಕೆ ವಿರುದ್ಧ ಅಂತೆ!
ತಮಿಳಿನ ಖ್ಯಾತ ನಿರ್ದೇಶಕ ವಿ ಚಿತ್ರವೇಲ್ ವೆಟ್ರಿಮಾರನ್ ಅವರ ನಿರ್ಮಾಣದ ಮತ್ತು ಗೋಪಿ ನೈನಾರ್ ಅವರು ನಿರ್ದೇಶಿಸಿರುವ ಚಿತ್ರಕ್ಕೆ ಸೆನ್ಸಾರ್ ಮಂಡಳಿ (CBFC) ಪ್ರಮಾಣಪತ್ರ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಮಾರನ್ ಮದ್ರಾಸ್ ಹೈಕೋರ್ಟ್ ಮೊರೆಹೋಗಿದ್ದಾರೆ.
‘ಈ ಚಿತ್ರವು ಪ್ರಭುತ್ವ (ಸರ್ಕಾರ)ವನ್ನು ಕೆಟ್ಟದಾಗಿ ತೋರಿಸುತ್ತದೆ ಎಂಬ ಆರೋಪದ ಮೇರೆಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ’ ಎಂದು ಮಾರನ್ ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಿರುವ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
2024ರ ಸೆಪ್ಟೆಂಬರ್‌ನಲ್ಲಿ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಲು CBFC ನಿರಾಕರಿಸಿತ್ತು. “ಚಿತ್ರವು ವ್ಯವಸ್ಥೆಯನ್ನು ನಕಾರಾತ್ಮಕವಾಗಿ ತೋರಿಸಿದೆ ಮತ್ತು ಎಡಪಂಥೀಯ ಕಮ್ಯುನಿಸಂನ ಆಶಯಗಳನ್ನು ಪ್ರಚಲಿತ ಕಮ್ಯುನಿಸಂ ಜೊತೆ ಸೇರಿಸಿ ಗೊಂದಲಗೊಳಿಸಿದೆ” ಎಂದು ಮಂಡಳಿ ತಕರಾರು ತೆಗೆದಿತ್ತು. ಆದರೆ, “ಮಹಿಳೆಯೊಬ್ಬರನ್ನು ಪೊಲೀಸ್ ಕಸ್ಟಡಿಯಲ್ಲಿ ಹೇಗೆ ವಿಚಾರಣೆಗೊಳಪಡಿಸಲಾಗುತ್ತದೆ ಎಂಬುದರ ಸುತ್ತ ಕಥೆ ಹೆಣೆದು ‘ಮಾನುಷಿ’ ಚಿತ್ರವನ್ನು ನಿರ್ಮಿಸಲಾಗಿದೆ” ಎಂದು ಚಿತ್ರತಂಡ ಹೇಳುತ್ತಿದೆ.
ಕಳೆದ ಒಂದು ವರ್ಷದಿಂದಲೂ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಮತ್ತು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವೂ ಲಭಿಸಿಲ್ಲ ಎಂದು ವಿವರಿಸಿರುವ ಚಿತ್ರತಂಡ, 2025ರ ಮಾರ್ಚ್ 29ರಂದು ಮಾನವ ಹಕ್ಕುಗಳ ತಜ್ಞರನ್ನೊಳಗೊಂಡ ಸಮಿತಿಯಿಂದ ಮರುಪರಿಶೀಲನೆ ಮಾಡಬೇಕೆಂದು CBFCಗೆ ಮತ್ತೆ ಅರ್ಜಿ ಸಲ್ಲಿಸಿತು.
ನಿರ್ದೇಶಕ ಗೋಪಿ ನೈನಾರ್ ಅವರೇ ವಿಸ್ತೃತವಾಗಿ ವಿವಾದವನ್ನು ವಿವರಿಸಿದ್ದಾರೆ. “ಮಾತನಾಡುವುದು ನನ್ನ ಹಕ್ಕು, ಇದು ಸಂವಿಧಾನ ವಿರೋಧ ಹೇಗಾಗುತ್ತದೆ? ಪ್ರಮಾಣಪತ್ರಕ್ಕಾಗಿ ಸುಮಾರು ಒಂದು ವರ್ಷದ ಹಿಂದೆಯೇ ಸಿಬಿಎಫ್ಸಿಗೆ ಚಲನಚಿತ್ರವನ್ನು ಸಲ್ಲಿಸಿದ್ದೆವು. ಉತ್ತರ ಬಂದಿದ್ದು ಮಾತ್ರ ಈಗ. ಅದೂ ‘ಈ ಸಿನಿಮಾ ಬಿಡುಗಡೆಯಾಗಬಾರದು’ ಎಂಬ ಪ್ರತಿಕ್ರಿಯೆಯೊಂದಿಗೆ. ಬಳಿಕ ನಾವು ಮರುಪರಿಶೀಲನಾ ಸಮಿತಿಗೆ ಹೋದ್ವಿ, ಅವರದೂ ಕೂಡ ಅದೇ ರಾಗ, ಚಿತ್ರ ಬಿಡುಗಡೆಯಾಗಬಾರದೆಂದು. ನಾನು ಈ ಚಿತ್ರದಲ್ಲಿ ಕೆಲವು (ಅವರಿಗಿಷ್ಟವಿಲ್ಲದ) ಭಾಗಗಳನ್ನು ಕತ್ತರಿಸಲು ಸಿದ್ಧನಿದ್ದರೂ, ಸಿಬಿಎಫ್ಸಿಗೆ ಇಂಥದ್ದೊಂದು ವಸ್ತು ವಿಷಯವಿರುವ ಚಿತ್ರವೊಂದು ತೆರೆಗೆ ಬರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದಿದ್ದಾರೆ ಗೋಪಿ.

“ಚಿತ್ರದಲ್ಲಿ ಆಂಡ್ರಿಯಾ ಮತ್ತು ನಾಸರ್ ಎಂಬ ಪಾತ್ರಧಾರಿಗಳ ನಡುವಿನ ಸಂಭಾಷಣೆ ಇರುವ ದೃಶ್ಯವೊಂದಿದೆ. ಅದರಲ್ಲಿ… ನಾಸರ್ ಕೇಳುತ್ತಾನೆ, ‘ಮಕ್ಕಳನ್ನು ಧರ್ಮದ ಆಧಾರದ ಮೇಲೆ ಬೆಳೆಸಬೇಕೆ ಅಥವಾ ವಿಜ್ಞಾನದ ಆಧಾರದ ಮೇಲೆ ಬೆಳೆಸಬೇಕೆ?’ ಎಂದು. ಆಗ ಆಂಡ್ರಿಯಾ ಉತ್ತರ ‘ವಿಜ್ಞಾನ’ ಆಗಿರುತ್ತದೆ. ಇದು ಚಿತ್ರದ ಎರಡು ಪಾತ್ರಗಳ ನಡುವೆ ನಡೆದ ಸಂವಾದ. ಸಿಬಿಎಫ್ಸಿ ಇದೇ ದೃಶ್ಯವನ್ನು ಆಧಾರವಾಗಿಟ್ಟುಕೊಂಡು ಹೇಳಿದ್ದು, ‘ನೀವು ವಿಜ್ಞಾನ ಬೆಳೆದರೆ ಧರ್ಮ ಕುಸಿಯುತ್ತದೆ ಎಂದು ಹೇಳುತ್ತಿದ್ದೀರಿ, ಇದು ಧರ್ಮದ ವಿರುದ್ಧವಾಗಿದೆ’ ಎಂದು…”
“ಮತ್ತೆ ನಾನು ಅವರನ್ನು ಕೇಳಿದೆ, ‘ಇಲ್ಲಿ ಸಾವಿರಕ್ಕೂ ಹೆಚ್ಚು ಧರ್ಮಗಳಿವೆ. ನನ್ನ ಚಿತ್ರ ಯಾವ ಧರ್ಮದ ವಿರುದ್ಧ?’ ಎಂದು. ಅವರು ಉತ್ತರ ಹೀಗಿತ್ತು… ಒಂದು ಪಾತ್ರವು ‘ನಾನು ಶಾಕಾಹಾರಿ’ ಎಂದು ಹೇಳಿದೆ. ಅಂದರೆ, ಇದು ಹಿಂದೂ ಧರ್ಮದ ವಿರುದ್ಧವಂತೆ! ಶಾಕಾಹಾರಕ್ಕೂ ಧರ್ಮಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಅವೆರಡನ್ನೂ ಹೇಗೆ ಹೊಂದಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎನ್ನುತ್ತಾರೆ ನಿರ್ದೇಶಕ ಗೋಪಿ. ಹಾಗಾದರೆ ಮಾಂಸಾಹಾರ ಸೇವಿಸುವವರಾರೂ ಹಿಂದೂ ಧರ್ಮದವರಲ್ಲ ಎಂಬುದು ಸಿಬಿಎಫ್ಸಿಯವರ ವಾದವಿರಬೇಕು. ನಮ್ಮಲ್ಲೂ ಅಂತಹದ್ದೇ ನಿಲುವು ಹೊಂದಿರುವ ಘಟಾನುಘಟಿ ರಾಜಕೀಯ ನಾಯಕರಿದ್ದಾರೆ.
“ನಾನು ಮತ್ತೆ ಕೇಳಿದೆ, ‘ಚಿತ್ರದಲ್ಲಿ ಯಾವುದಾದರೂ ದೃಶ್ಯ, ಪಾತ್ರ ಅಥವಾ ಸಂಭಾಷಣೆ ಭಾರತಕ್ಕೆ, ವಿರುದ್ಧವಾಗಿದೆಯೆ?’ ಎಂದು. ಈ ಪ್ರಶ್ನೆಗಳಿಗೆ ಪ್ರಮಾಣಪತ್ರ ನೀಡುವವರ ಬಳಿ ಉತ್ತರವೇ ಇರಲಿಲ್ಲ. ನಮ್ಮ ಬೇಡಿಕೆ ಇಷ್ಟೆ… ಚಿತ್ರದ ಪ್ರಮಾಣಪತ್ರ ನೀಡಿ, ಅಷ್ಟೆ,” ಎಂದು ಗೋಪಿ ನೈನಾರ್ ವಿವರಿಸಿದ್ದಾಗಿ ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಈಗ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವೆಟ್ರಿ ಮಾರನ್ ಅವರು ನಿರ್ದೇಶನದ ಬಹುತೇಕ ಸಿನಿಮಾಗಳು ಸಾಮಾಜಿಕ ವ್ಯವಸ್ಥೆಯನ್ನು ಕಟುವಾಗಿ ಪ್ರಶ್ನಿಸುವಂತಹವೇ ಆಗಿವೆ.
ನಟ ಧನುಷ್ ಅಭಿನಯದ ಪೊಲ್ಲಾದವನ್ ಚಿತ್ರದ ಮೂಲಕ ನಿರ್ದೇಶಕನಾಗಿ ಚಲನಚಿತ್ರ ಲೋಕಕ್ಕೆ ವೆಟ್ರಿ ಮಾರನ್ ಪ್ರವೇಶವಾಗುತ್ತದೆ. ಈ ಚಿತ್ರದಲ್ಲಿ ಯುವಕನೊಬ್ಬ ತಾನು ತುಂಬಾ ಪ್ರೀತಿಸುವ ಬೈಕ್ ಕಳ್ಳತನವಾದ ನಂತರ, ಅನಿರೀಕ್ಷಿತವಾಗಿ ಸ್ಥಳೀಯ ದುಷ್ಕರ್ಮಿಗಳ, ದರೋಡೆಕೋರರ ಜಗತ್ತಿಗೆ ಸೆಳೆಯಲ್ಪಡುತ್ತಾನೆ. ಈ ಘಟನೆಗಳು ಅವನ ಕುಟುಂಬದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತವೆ ಎಂಬುದು ಕಥೆಯ ತಿರುಳು.
2016ರಲ್ಲಿ ತೆರೆಕಂಡು 2017ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ವಿದೇಶಿ ಭಾಷಾ ವಿಭಾಗದ ಅತ್ಯುತ್ತಮ ಚಲನಚಿತ್ರದ ಅಡಿಯಲ್ಲಿ ಆಯ್ಕೆಯಾದ ವಿಸಾರಣೈ ಚಿತ್ರ ವೆಟ್ರಿಯವರ ಸಿನಿ ಪಯಣದಲ್ಲೊಂದು ಮೈಲುಗಲ್ಲು. ಎಂ ಚಂದ್ರಕುಮಾರ್ ಅವರ ‘ಲಾಕ್ ಅಪ್’ ಕಾದಂಬರಿ ಆಧಾರಿತ ಈ ಚಿತ್ರವು ಆಂಧ್ರದ ಗುಂಟೂರಿನಲ್ಲಿ ಕೆಲಸ ಮಾಡುವ ನಾಲ್ವರು ತಮಿಳು ಕಾರ್ಮಿಕರ ಬಗ್ಗೆ ವಿವರಿಸುತ್ತದೆ. ಪೊಲೀಸ್ ಪಡೆಯ ಭ್ರಷ್ಟಾಚಾರ ಮತ್ತು ಕ್ರೌರ್ಯವು ಸಾಮಾನ್ಯ ಮನುಷ್ಯನ ಬದುಕನ್ನು ಹೇಗೆ ಹಾಳುಮಾಡುತ್ತದೆ ಎಂಬುದರ ಸುತ್ತ ಈ ಚಿತ್ರ ಸುತ್ತುತ್ತದೆ. 72 ವರ್ಷಗಳಲ್ಲಿ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಿದ ಮೊದಲ ತಮಿಳು ಚಿತ್ರ ಇದಾಗಿತ್ತು. ಇದಕ್ಕೆ ‘ಸಿನಿಮಾ ಫಾರ್ ಹ್ಯೂಮನ್ ರೈಟ್ಸ್’ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ಎರಡು ವರ್ಷಗಳ ನಂತರ, ಧನುಷ್ ಅವರೊಂದಿಗೆ ವೆಟ್ರಿ ಮೂರನೇ ಬಾರಿಗೆ ವಾಡಾ ಚೆನ್ನೈ ತೆರೆಗೆ ತಂದರು. ಇದು ವೆಟ್ರಿಯವರ ಬತ್ತಳಿಕೆಯ ಮತ್ತೊಂದು ಅದ್ಭುತ ಕೃತಿ. ಈ ಚಿತ್ರವು ಉತ್ತರ ಚೆನ್ನೈನಲ್ಲಿನ ದರೋಡೆಕೋರ ಯುದ್ಧಗಳ ಬಗ್ಗೆ ಚಿತ್ರಿಸುತ್ತದೆ. ಬಲಹೀನರ ಮೇಲೆ ಪ್ರಬಲರು ಹೇಗೆ ಸವಾರಿ ಮಾಡುತ್ತಾರೆ ಎಂಬುದನ್ನು ತೋರಿಸುತ್ತದೆ.

2019ರಲ್ಲಿ ತೆರೆಕಂಡ ‘ಅಸುರನ್’ ಸಂಚಲನ ಮೂಡಿಸಿದ ಸಿನಿಮಾ. ತುಳಿತಕ್ಕೊಳಗಾದವರು ಎದುರಿಸುವ ಹೋರಾಟದ ಸವಾಲುಗಳನ್ನು ಚಿತ್ರಿಸಿದೆ. 80ರ ದಶಕದಲ್ಲಿ ಪ್ರಚಲಿತದಲ್ಲಿದ್ದ ಅಸ್ಪೃಶ್ಯತೆ, ಜಾತಿವಾದ ಮತ್ತು ತಾರತಮ್ಯವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ ಸಿನಿಮಾ ಅಸುರನ್. ದಲಿತರ ಮೇಲಾಗುವ ಕ್ರೌರ್ಯ ಮತ್ತು ಅದಕ್ಕೆ ದಲಿತರು ಒಡ್ಡುವ ಪ್ರತಿರೋಧವನ್ನು ಈ ಸಿನಿಮಾ ಕಟ್ಟಿಕೊಟ್ಟ ರೀತಿ ಚರ್ಚೆಗೆ ಕಾರಣವಾಗಿತ್ತು.
2023ರಲ್ಲಿ ಬಂದ ವಿಡುತಲೈ-1ರಲ್ಲಿ ಪೊಲೀಸ್ ದೌರ್ಜನ್ಯ ಕುರಿತದ್ದು. ವ್ಯವಸ್ಥೆಯು ಹೇಗೆ ದನಿಗಳನ್ನು ದಮನ ಮಾಡಲು ಯತ್ನಿಸುತ್ತದೆ ಎಂಬುದನ್ನು ಚಿತ್ರವು ತೆರೆದಿಟ್ಟಿತ್ತು. ವಿಡುದಲೈ-2 ಕೂಡ ಅದರ ಮುಂದುವರಿಕೆಯಾಗಿತ್ತು.
ಹೀಗಾಗಿ ವೆಟ್ರಿಮಾರನ್ ಎಂದ ತಕ್ಷಣ ಒಂದು ಚಿತ್ರಣ ಕಣ್ಣಮುಂದೆ ಬರುತ್ತದೆ. ಅವರು ನಿರ್ದೇಶಿಸಿದ ಸಿನಿಮಾಗಳಂತೆಯೇ ನಿರ್ಮಾಣ ಮಾಡಿದ ಸಿನಿಮಾ ಕೂಡ ಅಂತಹದ್ದೇ ಆಶಯಗಳನ್ನು ಹೊತ್ತು ಬಂದಿದ್ದರೆ ಆಶ್ಚರ್ಯಪಡಬೇಕಿಲ್ಲ. ‘ಮಾನುಷಿ’ ಕೂಡ ಅಂತಹದ್ದೇ ಸಮಾಜಮುಖಿ ದೃಷ್ಟಿಕೋನವುಳ್ಳ ಕತೆಯಿದ್ದಂತಿದೆ. ಆದರೆ ಇಂತಹ ಚಿತ್ರ ತೆರೆಗೆ ಬರಕೂಡದೆಂದು ಹೇಳುತ್ತಿರುವ ಸ್ವತಃ ಸೆನ್ಸಾರ್ ಮಂಡಳಿಗೇ ಅದಕ್ಕೆ ಕಾರಣ ತಿಳಿದಿಲ್ಲ. ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯ, ಸಂಭಾಷಣೆ, ಪಾತ್ರ ಯಾವುದೂ ಮಂಡಳಿ ಗಮನಕ್ಕೆ ಬಂದಿಲ್ಲ. ಆದರೂ ಪ್ರಮಾಣಪತ್ರ ನೀಡದೆ ವರ್ಷದಿಂದ ಸತಾಯಿಸುತ್ತಿದೆ. ಸಿನಿಮಾ ಜಗತ್ತಿನಲ್ಲಿ ಹತ್ತಾರು ವರ್ಷ ಕೆಲಸ ಮಾಡಿ, ಛಾಪು ಮೂಡಿಸಿರುವ ವೆಟ್ರಿಮಾರನ್ ಅವರಿಗೇ ಈ ಸವಾಲು ಎದುರಾದರೆ, ಹೊಸ ಪ್ರಯೋಗಗಳನ್ನು ಮಾಡಲು ಉತ್ಸುಕರಾಗಿರುವ ಹೊಸಬರ ಕಥೆ ಏನಾಗಬಹುದು ಎಂಬುದೇ ಸದ್ಯದ ಆತಂಕ.