ದೇಶಾದ್ಯಂತ ವಿವಾದ ಸೃಷ್ಟಿಸಿರುವ ʼದಿ ಕೇರಳ ಸ್ಟೋರಿʼ
ತಿರುಚಿದ ಕಥಾಹಂದರದ ಕಾರಣಕ್ಕೆ ಸುದ್ದಿಯಲ್ಲಿರುವ ಚಿತ್ರ
ತಿರುಚಿದ ಕಥಾಹಂದರದ ಕಾರಣಕ್ಕೆ ದೇಶಾದ್ಯಂತ ವಿವಾದ ಸೃಷ್ಟಿಸಿರುವ ʼದಿ ಕೇರಳ ಸ್ಟೋರಿʼ ಚಿತ್ರದ ಬಗ್ಗೆ ಸಾಮಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ಹೊತ್ತಿನಲ್ಲಿ ತಮಿಳಿನ ದಿಗ್ಗಜ ನಟ ಕಮಲ್ ಹಾಸನ್, ʼದಿ ಕೇರಳ ಸ್ಟೋರಿʼ ಬಗ್ಗೆ ಮಾತನಾಡಿದ್ದು, ಅದೊಂದು ಷಡ್ಯಂತ್ರದ ಸಿನಿಮಾ ಎಂದಿದ್ದಾರೆ.
ಇತ್ತೀಚೆಗೆ ಅಬುದಾಬಿಯಲ್ಲಿ ನಡೆದ 2023ನೇ ಸಾಲಿನ ʼಐಫಾʼ (ಇಂಟರ್ನ್ಯಾಶನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್) ಸಮಾರಂಭದಲ್ಲಿ ಕಮಲ್ ಹಾಸನ್ ಭಾಗಿಯಾಗಿದ್ದರು. ʼಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗೈದ ನಟʼ ಎಂಬ ವಿಶೇಷ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ʼದಿ ಕೇರಳ ಸ್ಟೋರಿʼ ಚಿತ್ರದ ಬಗ್ಗೆ ಮಾಧ್ಯಮದವರಿಂದ ಎದುರಾದ ಪ್ರಶ್ನೆಗೆ ಉತ್ತರಿಸಿರುವ ಕಮಲ್ ಹಾಸನ್, “ನಾನು ನಿಮಗೆ ಮೊದಲೇ ಹೇಳಿದಂತೆ ಅದೊಂದು ಷಡ್ಯಂತ್ರದ ಸಿನಿಮಾ. ಇಂತಹ ಸಿನಿಮಾಗಳನ್ನು ನಾನು ವಿರೋಧಿಸುತ್ತೇನೆ. ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಕೇವಲ ಟೈಟಲ್ ಕೆಳಗಡೆ ಬರೆದುಕೊಂಡರೆ ಸಾಲದು. ಸಿನಿಮಾದ ಕಥೆಯಲ್ಲೂ ಸತ್ಯಾಂಶ ಇರಬೇಕು” ಎಂದಿದ್ದಾರೆ.
ಕೇವಲ ಕಮಲ್ ಹಾಸನ್ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಹಲವು ತಾರೆಯರು ʼದಿ ಕೇರಳ ಸ್ಟೋರಿʼ ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿವಾದಿತ ಚಿತ್ರದ ಪ್ರದರ್ಶನವನ್ನು ನಿಷೇಧಿಸಿದ್ದ ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಖಂಡಿಸಿದ್ದರು. ಸಿನಿಮಾ ಷಡ್ಯಂತ್ರದ ಭಾಗವಾಗಿದ್ದರೂ ನಿಷೇಧ ಹೇರುವುದು ತಪ್ಪು ಎಂದಿದ್ದರು.
ʼದಿ ಕೇರಳ ಸ್ಟೋರಿʼ ಚಿತ್ರದ ವಿವಾದದ ಕುರಿತು ಮಾಡನಾಡಿದ್ದ ನವಾಜುದ್ದೀನ್ ಸಿದ್ದಿಕಿ, “ಯಾವುದೇ ಚಿತ್ರ ಅಥವಾ ಕೃತಿ ಯಾರಿಗಾದರೂ ನೋವುಂಟು ಮಾಡುತ್ತಿದ್ದರೆ, ಅದು ತಪ್ಪು. ನಾವು ಪ್ರೇಕ್ಷಕರನ್ನು ನೋಯಿಸುವ ಸಲುವಾಗಿ ಅಥವಾ ಅವರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಸಲುವಾಗಿ ಸಿನಿಮಾಗಳನ್ನು ಮಾಡುವುದಿಲ್ಲ” ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಹಿಜಾಬು ಮತ್ತು ಕುಸ್ತಿ ಅಖಾಡದಲ್ಲಿ ಮನುವಾದಿ ಮಸಲತ್ತು
ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆ ಮಾಡಲಾಗಿದೆ ಎಂಬ ಎಳೆಯ ಸುತ್ತ ಮೂಡಿಬಂದಿರುವ ʼದಿ ಕೇರಳ ಸ್ಟೋರಿʼ ಚಿತ್ರವನ್ನು ಮೇ 8ರಂದು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿತ್ತು. ಚಿತ್ರದ ನಿಷೇಧವನ್ನು ಪ್ರಶ್ನಿಸಿ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರದ ನಿಷೇಧದ ಆದೇಶಕ್ಕೆ ತಡೆ ನೀಡಿದೆ.
ಒಂದು ಸಮುದಾಯದ ಜನರ ಭಾವನೆಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವಂತ ಚಿತ್ರ ನಿರ್ಮಾಣ ಮಾಡಬಾರದು
ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ