ಈ ಸಿನಿಮಾ | ಬೆಟ್ಟದಷ್ಟು ನಿರೀಕ್ಷೆಗೆ ಎಳ್ಳು,ನೀರು ಬಿಟ್ಟ ʻಕಬ್ಜʼ

Date:

Advertisements

ಚಿತ್ರ: ಕಬ್ಜ | ನಿರ್ದೇಶನ: ಆರ್‌ ಚಂದ್ರು | ತಾರಾಗಣ: ಉಪೇಂದ್ರ, ಸುದೀಪ್‌, ಶಿವರಾಜ್‌ ಕುಮಾರ್‌, ಶ್ರಿಯಾ ಶರಣ್‌, ಮುರಳಿ ಶರ್ಮಾ, ಬಿ ಸುರೇಶ್‌, ಹೊನ್ನವಳ್ಳಿ ಕೃಷ್ಣ, ಸುನಿಲ್‌ ಪುರಾಣಿಕ್‌, ನವಾಬ್‌ ಶಾ,‌ ಜಾನ್‌ ಕೊಕ್ಕೇನ್‌, ನೀನಾಸಂ ಅಶ್ವಥ್‌, ಸುಧಾ, ಪ್ರಮೋದ್‌ ಶೆಟ್ಟಿ, ಅನೂಪ್‌ ರೇವಣ್ಣ | ಭಾಷೆ: ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ | ಸಂಗೀತ ನಿರ್ದೇಶನ: ರವಿ ಬಸ್ರೂರ್‌ | ನಿರ್ಮಾಪಕರು: ಆರ್‌ ಚಂದ್ರು, ಆನಂದ್‌ ಪಂಡಿತ್‌ |

ಆರ್‌ ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್‌ನ ʼಕಬ್ಜʼ ಸಿನಿಮಾ ಶುಕ್ರವಾರ ತೆರೆಗೆ ಬಂದಿದೆ. ಅದ್ದೂರಿ ಮೇಕಿಂಗ್‌ ಮತ್ತು ಭರ್ಜರಿ ಟೀಸರ್‌ ಹಾಗೂ ಟ್ರೈಲರ್‌ಗಳ ಮೂಲಕ ಸದ್ದು ಮಾಡಿದ್ದ ʼಕಬ್ಜʼ ವಿಮರ್ಶೆ ಇಲ್ಲಿದೆ.

ʼಕಬ್ಜʼ ಶೀರ್ಷಿಕೆ ಸಿನಿ ಪ್ರೇಕ್ಷಕರಲ್ಲಿ ವರ್ಷಗಳ ಕಾಲ ಕುತೂಹಲ ಮೂಡಿಸಿತ್ತು. ಏನಿದು ʼಕಬ್ಜʼ? ಆರ್‌ ಚಂದ್ರು ಏನನ್ನು ʼಕಬ್ಜʼ ಮಾಡಲು ಹೊರಟಿದ್ದಾರೆ ಎಂಬ ಕುತೂಹಲದ ಪ್ರಶ್ನೆಗಳು ಎಲ್ಲರಲ್ಲೂ ಇದ್ದವು. ಈ ಎಲ್ಲ ಪ್ರಶ್ನೆಗಳಿಗೆ ಅಮರಾಪುರದ ರಕ್ತಸಿಕ್ತ ಕಥನದಲ್ಲಿ ಉತ್ತರವಿದೆ. ಆದರೆ, ಆರ್‌ ಚಂದ್ರು ಅಬ್ಬರದ ಮೇಕಿಂಗ್‌ನಲ್ಲಿ ಕಳೆದು ಹೋಗಿ, ಕಥೆಯ ಮೇಲಿನ ಹಿಡಿತವನ್ನೂ ಕಳೆದುಕೊಂಡಿದ್ದಾರೆ.

ಸರಳವಾಗಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಅಣ್ಣನ ಸಾವಿನ ಪ್ರತಿಕಾರಕ್ಕಾಗಿ ಕತ್ತಿ ಹಿಡಿಯುವ ಅರ್ಕೇಶ್ವರ ಹೇಗೆ ಮಾಫಿಯಾ ಡಾನ್‌ ಆಗಿ ಬೆಳೆಯುತ್ತಾನೆ ಎಂಬುದರ ಸುತ್ತ ʼಕಬ್ಜʼ ಚಿತ್ರದ ಕಥೆ ಮೂಡಿಬಂದಿದೆ. 2003ರಲ್ಲಿ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಕುಟುಂಬʼ ಚಿತ್ರವನ್ನು ನೋಡಿದವರಿಗೆ ಕಬ್ಜದ ಕಥೆ ಮಾಮೂಲಿ ಎನ್ನಿಸುತ್ತದೆ. ಎರಡೂ ಚಿತ್ರಗಳಲ್ಲಿ ಅಣ್ಣನ ಸಾವಿನ ಸೇಡು ತೀರಿಸಿಕೊಳ್ಳುವ ತಮ್ಮನೇ ಕಾಣುತ್ತಾನೆ. ʼಕುಟುಂಬʼ ಚಿತ್ರದಲ್ಲಿ ಉಪೇಂದ್ರ ʼಟ್ಯಾಕ್ಸಿ ಡ್ರೈವರ್‌ʼ ಆಗಿದ್ದರೆ, ʼಕಬ್ಜʼ ಚಿತ್ರದಲ್ಲಿ ಪೈಲಟ್‌ ಆಗಿದ್ದಾರೆ. ಆ ಸಿನಿಮಾದಲ್ಲಿ ಪ್ರತಿಕಾರವಷ್ಟೇ ನಾಯಕನ ಉದ್ದೇಶವಾಗಿತ್ತು. ಈ ಚಿತ್ರದಲ್ಲಿ ಪ್ರತಿಕಾರದ ಜೊತೆಗೆ ಪಟ್ಟಭದ್ರ ಹಿತಾಸಕ್ತಿಯ ಅಂಶ ಹೆಚ್ಚುವರಿಯಾಗಿ ಸೇರಿಕೊಂಡಿದೆ ಅಷ್ಟೇ. 10 ವರ್ಷದ ನಂತರ ಉಪೇಂದ್ರ ಮತ್ತದೆ ಕಥಾಹಂದರದ ಸಿನಿಮಾದಲ್ಲಿ ನಟಿಸಲು ಯಾಕೆ ಮನಸ್ಸು ಮಾಡಿದರು ಎಂಬುದೇ ತರ್ಕಕ್ಕೆ ನಿಲುಕದ ಸಂಗತಿಯಾಗಿದೆ.

ʼಕಬ್ಜʼ ಚಿತ್ರದ ಟೀಸರ್‌ ನೋಡಿದ ಜನ ʼಕೆಜಿಎಫ್‌ʼಗೆ ಹೋಲಿಕೆ ಮಾಡಿದ್ದರು. ಉಪೇಂದ್ರ ಮತ್ತೆ ಆರ್‌ ಚಂದ್ರು ಹೇಳಿಕೊಂಡ ಹಾಗೆ ಕಥೆಯಲ್ಲಿ ಯಾವುದೇ ಸಾಮ್ಯತೆ ಇಲ್ಲ. ಆದರೆ, ʼಕಬ್ಜʼದ ತುಂಬಾ ʼಉಗ್ರಂʼ ಛಾಯೆ ತುಂಬಿ ತುಳುಕುತ್ತಿದೆ. ಪೈಲಟ್‌ ಆಗಿದ್ದ ಅರ್ಕೇಶ್ವರ ಗ್ಯಾಂಗ್‌ಸ್ಟರ್‌ ಆಗಿ ಬದಲಾಗಿ ಖಲೀದ್‌ನನ್ನು ಹೊಡೆದುರುಳಿಸಿದಾಗ ನಡೆಯುವ ನಾಟಕೀಯ ಸನ್ನಿವೇಶಗಳೆಲ್ಲವೂ ʼಉಗ್ರಂʼ ಸಿನಿಮಾದ ಬಹುಪಾಲು ಸನ್ನಿವೇಶಗಳನ್ನು ಹೋಲುವಂಥವು. ಜೈಲಿನಿಂದ ಹೊರಬಂದ ನಾಯಕ ತನಗೆ ಇನ್ನು ರೌಡಿಸಂ ಒಂದೇ ದಾರಿ ಎಂದು ನಾಯಕಿಯನ್ನು ದೂರ ಮಾಡಲು ಯತ್ನಿಸುವ ಸನ್ನಿವೇಶ ಒಮ್ಮೆ ʼಗೂಳಿʼ ಸಿನಿಮಾದ “ಡೀಲಿಗೆ ಡೀಲು ಮಾಡದಿದ್ರೆ ಲೈಫ್‌ ಇಲ್ಲ” ಎಂಬ ಹಾಡನ್ನು ಕೂಡ ನೆನಪಿಸುತ್ತೆ.

ನಿರ್ದೇಶಕರು ʼಕೆಜಿಎಫ್‌ʼ ಶೈಲಿಯ ಮೇಕಿಂಗ್‌ ಮಾಡಲು ಹೋಗಿದ್ದಾರೆ. ಆದರೆ, ಅವರು ಅಂದಕೊಂಡ ಹಾಗೆ ಈ ಸಿನಿಮಾ ಅತ್ತ ʼಕೆಜಿಎಫ್‌ʼ ರೀತಿಯೂ ಇಲ್ಲ. ಇತ್ತ ತನ್ನದೇ ಆದ ಅಸಲಿಯತ್ತನ್ನು ಕೂಡ ಉಳಿಸಿಕೊಂಡಿಲ್ಲ. ಇಡೀ ಸಿನಿಮಾ ಸುದೀಪ್‌ ಅವರ ಗಡಸು ದನಿಯ ನಿರೂಪಣೆಯಲ್ಲಿ ಸಾಗುತ್ತದೆ. ಮೊದಲಾರ್ಧ ತುಸು ನಿಧಾನ, ʼಕಬ್ಜʼದ ಕಥೆ ಶುರುವಾಗುವುದು ಮಧ್ಯಂತರ ಬಳಿಕ, ʼಕ್ಲೈಮ್ಯಾಕ್ಸ್‌ʼನ ತಿರುವು ʼಕಬ್ಜ-2ʼ ಸಿನಿಮಾದ ಸುಳಿವು ನೀಡುತ್ತದೆ ಎಂಬುದನ್ನು ಬಿಟ್ಟರೆ ಹೆಚ್ಚೇನೂ ರೋಚಕ ಎನ್ನಿಸುವುದಿಲ್ಲ.

2023ರಲ್ಲಿ ತೆರೆದುಕೊಳ್ಳುವ 70ರ ದಶಕದ ಕಥೆಯಲ್ಲಿ ಸುದೀಪ್‌ ಇನ್ನಷ್ಟು ಮಾಗಿದವರ ಹಾಗೆ ಕಾಣಿಸಬೇಕಿತ್ತು. ಇಡೀ ಸಿನಿಮಾದುದ್ದಕ್ಕೂ ಪ್ರತಿಯೊಬ್ಬ ಪಟ್ಟಭದ್ರ ಹಿತಾಸಕ್ತನೂ ಅಮರಾಪುರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಾರೆ. ಆದರೆ, ಅಮರಾಪುರದಲ್ಲಿ ʼಕಬ್ಜʼ ಮಾಡುವಂಥದ್ದೇನಿದೆ ಅನ್ನೋದೇ ಗೊತ್ತಾಗಲ್ಲ. ರಾಜನ ಅರಮನೆ ಮತ್ತೆ ಮಾಫಿಯಾ ಡಾನ್‌ ಅರ್ಕೇಶ್ವರನ ಭವ್ಯ ಬಂಗಲೆ ಇವರೆಡಕ್ಕೂ, ಅಮರಾಪುರಕ್ಕೂ ಸಂಬಂಧವೇ ಇಲ್ಲ ಎಂಬ ಹಾಗಿದೆ. ಅರಮನೆ ಮತ್ತೆ ಬಂಗಲೆಯ ಸುತ್ತ ಊರು ಮಾತ್ರವಲ್ಲ ಸಣ್ಣ ಜೋಪಡಿ ಸಹಿತ ಕಾಣಿಸುವುದಿಲ್ಲ. ಒಂದು ʼಪೀರಿಯಡ್‌ ಡ್ರಾಮಾʼ ಕಥೆ ಹೇಳುವಾಗ ಸಂಭಾಷಣೆಗಳ ಬಗ್ಗೆ ಯಾಕೆ ʼಕಾನ್ಷಿಯಸ್‌ʼ ಆಗುತ್ತಾರೆ ಅನ್ನೋದು ಅರ್ಥ ಆಗಲ್ಲ. ಕೆಲ ಪಾತ್ರಗಳು ಅರ್ಧ ಗ್ರಾಂಥಿಕ, ಉಳಿದರ್ಧ ಆಡುಭಾಷೆಯನ್ನು ಬಳಸುವ ಅಗತ್ಯವೇನಿದೆ. ಆಯಾ ಕಾಲಘಟ್ಟದ ಆಡುಭಾಷೆ, ನುಡಿಗಟ್ಟು ಮಾತ್ರ ಮುಖ್ಯ ಅಲ್ಲವೇ? ಹೀಗಿರುವಾಗ ಸಂಭಾಷಣೆಗಳನ್ನು ಗ್ರಾಂಥಿಕಗೊಳಿಸುವ ಗೊಂದಲವೇಕೆ?

ʼಕಬ್ಜʼ ಸಿನಿಮಾ ನಿಂತಿರುವುದು ತಾರಾಗಣದ ಮೇಲೆ. ಸುದೀಪ್‌ ಅವರಿಗೆ ʼಸ್ಕ್ರೀನ್‌ ಸ್ಪೇಸ್‌ʼ ಕಡಿಮೆ ಇದೆ. ಪಾತ್ರ ನಿರ್ವಹಣೆಯಂತೆ ಅವರ ನಿರೂಪಣೆ ಕೂಡ ಚೆನ್ನಾಗಿದೆ. ಉಪೇಂದ್ರ ನಟನೆ ಹಿಡಿಸುತ್ತೆ. ಸುನಿಲ್‌ ಪುರಾಣಿಕ್‌, ಬಿ ಸುರೇಶ್‌, ಹೊನ್ನವಳ್ಳಿ ಕೃಷ್ಣ, ನೀನಾಸಂ ಅಶ್ವಥ್‌ ಮಿಂಚಿ ಮರೆಯಾದರೂ ನೆನಪಿನಲ್ಲಿ ಉಳಿಯುತ್ತಾರೆ. ಶ್ರಿಯಾ ಶರಣ್‌ ನಟನೆ, ಭರತ ನಾಟ್ಯ ಎರಡೂ ಗಮನ ಸೆಳೆಯುತ್ತದೆ. ಮುರಳಿ ಶರ್ಮಾ ನಟನೆ ಮತ್ತೆ ಕನ್ನಡ ಅವತರಣಿಕೆಯಲ್ಲಿ ಅವರ ಪಾತ್ರಕ್ಕೆ ಬಳಕೆಯಾಗಿರುವ ಧ್ವನಿ ಎರಡೂ ಸಮಾಧಾನ ತರಲಿಲ್ಲ. ತೆಲುಗಿನ ಹಿರಿಯ ನಟ ಕೋಟಾ ಶ್ರೀನಿವಾಸ್‌ ಅವರ ಫಸ್ಟ್‌ಲುಕ್‌ ಗಮನ ಸೆಳೆದಿತ್ತು. ನಿರೀಕ್ಷೆಯನ್ನೂ ಹುಟ್ಟಿಸಿತ್ತು. ಆದರೆ, ಕ್ಷಣಮಾತ್ರದ ಸನ್ನಿವೇಶದಲ್ಲಿ, ಪ್ರಾಮುಖ್ಯತೆಯೇ ಇಲ್ಲದ ಪಾತ್ರದಲ್ಲಿ ಅವರನ್ನು ನೋಡಿ ನಿಜಕ್ಕೂ ಬೇಸರವಾಯಿತು. ಕೊನೆಯಲ್ಲಿ ಶಿವಣ್ಣ ಕಾಣಿಸಿಕೊಂಡು ಸ್ವಲ್ಪ ಮಟ್ಟಿಗೆ ಕುತೂಹಲ ಮೂಡಿಸುತ್ತಾರೆ.

ಪಾತ್ರವರ್ಗ ಬಿಟ್ಟರೆ ʼಕಬ್ಜʼದಲ್ಲಿ ಹಿಡಿಸುವುದು ಹಿನ್ನೆಲೆ ಸಂಗೀತ ಮತ್ತು ಹಾಡುಗಳು. ರವಿ ಬಸ್ರೂರ್‌ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಹಾಡುಗಳು ಕೇಳುವಂತಿವೆ ಎಂಬುದು ಸಮಾಧಾನದ ಸಂಗತಿ. ಹಿನ್ನೆಲೆ ಸಂಗೀತದಲ್ಲಿ ಆಗಾಗ ʼಉಗ್ರಂʼ ಛಾಯೆ ಕಾಣಿಸುತ್ತೆ.

ʼಕಬ್ಜʼ ಚಿತ್ರತಂಡ ನಿರೀಕ್ಷೆಯನ್ನು ಹುಸಿಗೊಳಿಸಿದೆ. ʼಕಬ್ಜ-2ʼ ಮಾಡುವಾಗಲಾದರೂ ಮೇಕಿಂಗ್‌ ಮತ್ತೆ ಪ್ರಚಾರಕ್ಕೆ ಒತ್ತು ನೀಡುವಷ್ಟೇ ಕಥೆಯ ಮೇಲೂ ನಿಗಾವಹಿಸಿ ಎಂದಷ್ಟೇ ಹೇಳಬಲ್ಲೆ. ಯಾವ ರೀತಿಯಲ್ಲೂ ಸಮಾಧಾನಪಡಿಸಿದ ʼಕಬ್ಜʼ ಚಿತ್ರವನ್ನು ನೋಡುವುದು, ಬಿಡುವುದು ನಿಮ್ಮ ಆಯ್ಕೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು | ನಟ ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತ: 10 ಮಂದಿ ಸಾವು

ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕೀಯ ಪಕ್ಷದ ನಾಯಕ ವಿಜಯ್ ಅವರ ತಮಿಳಗ ವೆಟ್ಟ್ರಿ...

‘ಬಾ**ರ್ಡ್ಸ್‌ ಆಫ್‌ ಬಾಲಿವುಡ್’ ವಿವಾದ: ಮಾನನಷ್ಟ ಮೊಕದ್ದಮೆಯಲ್ಲಿ ಆರ್ಯನ್ ಖಾನ್ ಮತ್ತು ಸಮೀರ್ ವಾಂಖೆಡೆ ಫೈಟ್

‌ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್ಯನ್‌ ಖಾನ್‌ ನಿರ್ದೇಶನದ 'ದಿ ಬಾ**ರ್ಡ್ಸ್‌ ಆಫ್‌ ಬಾಲಿವುಡ್‌'...

ದುರಂತದಲ್ಲಿ ಮರೆಯಾಗಿ ಜನಸಾಗರವ ಸೆಳೆದ ಈ ಹಾಡುಗಾರ ಯಾರು?

ಝುಬಿನ್ ಗರ್ಗ್ ಅಸ್ಸಾಮಿ ಜನರಿಗೆ ಮಗನಾಗಿ, ಅಣ್ಣನಾಗಿ ಜನಪದದಲ್ಲಿ ಬೆರೆತು ಹೋಗಿದ್ದರು....

ಮಲಯಾಳಂ ನಟ ದುಲ್ಕರ್ ಸಲ್ಮಾನ್‌ಗೆ ಕಸ್ಟಮ್ಸ್‌ನಿಂದ ಸಮನ್ಸ್: ಐಷಾರಾಮಿ ಕಾರುಗಳು ವಶಕ್ಕೆ

ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಕೊಚ್ಚಿಯ ಎಲಂಕುಲಂ ನಿವಾಸದ...

Download Eedina App Android / iOS

X