-
6.22 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ
-
ಪೂಜಾರಿ ಮಗಳ ಮದುವೆ ನಡೆಸುವ ಭರವಸೆ
ಮಂಗಳೂರು ಕುಕ್ಕರ್ ಸ್ಫೋಟದ ಸಂತ್ರಸ್ತ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗಾಗಿ ಹೊಸದೊಂದು ಆಟೋರಿಕ್ಷಾ, 5 ಲಕ್ಷ ರೂ. ನಗದು ಮತ್ತು ಹೊಸ ಮನೆ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಹಸ್ತಾಂತರಿಸಲಾಗುತ್ತದೆ ಎಂದು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಖಜಾಂಚಿ ಪದ್ಮರಾಜ್ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 19ರಂದು ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಪೂಜಾರಿ ಅವರಿಗೆ ಸುಟ್ಟ ಗಾಯಗಳಾಗಿದ್ದವು. ಬಳಿಕ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದ ಪೂಜಾರಿಗೆ ನೆರವು ನೀಡಲು ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮತ್ತು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಖಜಾಂಚಿ ಪದ್ಮರಾಜ್ ಮುಂದಾಗಿದ್ದಾರೆ.
“ಪೂಜಾರಿ ಅವರು ವಾಸಿಸುತ್ತಿದ್ದ ಮನೆ ಹಳೆಯದಾಗಿತ್ತು. ಆ ಮನೆಯನ್ನು 6.22 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಸುಂದರವಾದ ಮನೆಯಾಗಿ ಮಾರ್ಪಟ್ಟಿದೆ” ಎಂದು ಪದ್ಮರಾಜ್ ತಿಳಿಸಿದ್ದಾರೆ.
“ಮನೆ ನಿರ್ಮಾಣಕ್ಕೆ 2-3 ಲಕ್ಷ ರೂ. ವೆಚ್ಚವಾಗಲಿದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ಸೀಲಿಂಗ್ ಅಳವಡಿಸುವುದು ಸೇರಿದಂತೆ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡ ಬಳಿಕ 6.22 ಲಕ್ಷ ರೂ. ವೆಚ್ಚವಾಗಿದೆ. ಮಾರ್ಚ್ 22ರಂದು ಮನೆಯನ್ನು ಅವರಿಗೆ ಹಸ್ತಾಂತರಿಸಲಾಗುವುದು. ಮುಂಚಿತವಾಗಿ ಭರವಸೆ ನೀಡಿದಂತೆ ಮೇ ತಿಂಗಳಲ್ಲಿ ನಿಗದಿಯಾಗಿರುವ ಅವರ ಮಗಳ ಮದುವೆಯನ್ನೂ ನಡೆಸಿಕೊಡಲಾಗುವುದು” ಎಂದು ತಿಳಿಸಿದ್ದಾರೆ.
“ನಾನು ಮೊದಲು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದಾಗ, ಅವರು ಆತ್ಮವಿಶ್ವಾಸ ಕಳೆದುಕೊಂಡಿದ್ದರು. ತಮ್ಮ ಮಗಳ ಮದುವೆ ಮಾಡಲು ಸಾಧ್ಯವಾಗುತ್ತದೆಯೇ ಎಂದು ಚಿಂತಿತರಾಗಿದ್ದರು. ಇದೀಗ ಅವರ ಮನೆ ದುರಸ್ತಿ ಮತ್ತು ಅವರ ಮಗಳ ಮದುವೆಗೆ ನಾವು ಸಹಾಯ ಮಾಡುತ್ತೇವೆ ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ. ಹಾಗಾಗಿ ಇಂತಹ ಕಾರ್ಯಗಳನ್ನು ಮಾಡಿದ್ದೇವೆ. ಈ ಯೋಜನೆಯನ್ನು ಪೂರ್ಣಗೊಳಿಸಿರುವುದು ನಮಗೆ ಅಪಾರ ಸಂತೋಷವನ್ನು ಉಂಟುಮಾಡಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.