- ಹಾಲಿವುಡ್ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ಮಿಸಿರುವ ಸಿನಿಮಾ
- ಲೈಂಗಿಕ ಕ್ರಿಯೆಗೆ ಪ್ರಚೋದನೆ ದೃಶ್ಯದ ವೇಳೆ ಭಗವದ್ಗೀತೆಯ ಶ್ಲೋಕ ಓದುತ್ತಿರುವುದಕ್ಕೆ ತೀವ್ರ ವಿರೋಧ
‘ಅಣು ಬಾಂಬ್ ಶಕ್ತಿಯ ಜನಕ’ ಎಂದೇ ಹೆಸರು ಪಡೆದಿರುವ ಅಮೆರಿಕದ ಖ್ಯಾತ ವಿಜ್ಞಾನಿ ಜೆ. ರಾಬರ್ಟ್ ಓಪನ್ ಹೈಮರ್ ಜೀವನದ ಕುರಿತ ಕಥೆ ಹೊಂದಿರುವ ‘ಓಪನ್ ಹೈಮರ್’ ಹಾಲಿವುಡ್ ಸಿನಿಮಾ ಬಿಡುಗಡೆಯಾದ ಬಳಿಕ ಭರ್ಜರಿ ಹಣ ಗಳಿಸುತ್ತಿದೆ. ಈ ನಡುವೆ ಚಿತ್ರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಹಿಂದುತ್ವಪರ ಕೆಲ ಸಂಘಟನೆಗಳು ಆರೋಪಿಸಿವೆ.
ವಿಜ್ಞಾನಿ ರಾಬರ್ಟ್ ಓಪನ್ ಹೈಮರ್ ತಮ್ಮ ನಿಜ ಜೀವನದಲ್ಲಿ ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಓದಿರುವುದಾಗಿ, ಅದರಿಂದ ಸ್ಫೂರ್ತಿ ಪಡೆದಿರುವುದಾಗಿ ತಿಳಿಸಿದ್ದರು.
ಅಲ್ಲದೇ, ಸಿನಿಮಾದ ನಾಯಕ ನಟ ಕಿಲಿಯನ್ ಮರ್ಫಿ ಕೂಡ ಇತ್ತೀಚೆಗೆ ನಡೆಸಿದ ಸಂದರ್ಶನವೊಂದರಲ್ಲೂ ಕೂಡ ನಾನು ಭಗವದ್ಗೀತೆಯನ್ನು ಓದಿದ್ದೇನೆ ಎಂದು ಕೂಡ ತಿಳಿಸಿದ್ದರು.
ಚಿತ್ರದಲ್ಲಿಯೂ ಭಗವದ್ಗೀತೆಗೆ ಪ್ರಾಮುಖ್ಯತೆ ನೀಡಿದ್ದ ದೃಶ್ಯವೊಂದರಲ್ಲಿ ಹೈಮರ್ ಪಾತ್ರಧಾರಿ ಗಟ್ಟಿಯಾಗಿ ಭಗವದ್ಗೀತೆ ಓದುತ್ತಿರುತ್ತಾರೆ. ಈ ವೇಳೆ ಯುವತಿಯೋರ್ವಳು ಆತನ ಮೇಲೆ ಎರಗಿ ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಾಳೆ. ಈ ದೃಶ್ಯ ಇದೀಗ ಹಿಂದುತ್ವಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
‘ಸೇವ್ ಕಲ್ಚರ್, ಸೇವ್ ಇಂಡಿಯಾ ಫೌಂಡೇಶನ್’ನ ಉದಯ್ ಮುಹೂರ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಅಲ್ಲದೇ, ಸೆಂಟ್ರಲ್ ಬೋರ್ಡ್ ಸರ್ಟೀಫೀಕೇಶನ್ ವಿರುದ್ಧವೂ ಕಿಡಿಕಾರಿದ್ದು, ಚಿತ್ರದಲ್ಲಿ ಹಿಂದೂ ಧರ್ಮಕ್ಕೆ ಹಾನಿಯಾಗುವ ದೃಶ್ಯಗಳಿವೆ. ಇದನ್ನು ಕಟ್ ಮಾಡದೆ ಹಾಗೆಯೇ ಹಾಕಲು ಸೆಂಟ್ರಲ್ ಬೋರ್ಡ್ ಫಿಲಂ ಸರ್ಟೀಫೀಕೇಶನ್ ಹೇಗೆ ಅನುಮೋದನೆ ನೀಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಸೂಕ್ತ ಕ್ರಮ : ಸಚಿವ ಅನುರಾಗ್ ಠಾಕೂರ್
ಆಕ್ಷೇಪಾರ್ಹ ದೃಶ್ಯಕ್ಕೆ ಕತ್ತರಿ ಹಾಕುವುದಾಗಿ ಹಾಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ .
ಚಿತ್ರ ಪ್ರದರ್ಶನಕ್ಕೂ ಮುನ್ನ ನಡೆಸಲಾದ ಸಭೆಯಲ್ಲಿ ಭಾಗಿಯಾಗಿರುವ ಎಲ್ಲ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸಿಬಿಎಫ್ಸಿ) ಸದಸ್ಯರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿಯೂ ತಿಳಿಸಿದ್ದಾರೆ.
ಮೂರೇ ದಿನಕ್ಕೆ ಭಾರತದಲ್ಲಿ 50 ಕೋಟಿ ರೂಪಾಯಿ
‘ಓಪನ್ ಹೈಮರ್’ ಸಿನಿಮಾವನ್ನು ಹಾಲಿವುಡ್ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರು ನಿರ್ಮಿಸಿದ್ದು, ಕಳೆದ ಜುಲೈ 21ರಂದು ವಿಶ್ವದೆಲ್ಲೆಡೆ ಬಿಡುಗಡೆಗೊಂಡಿತ್ತು.
ಇಡೀ ವಿಶ್ವವನ್ನೇ ನಾಶ ಮಾಡುವ ಶಕ್ತಿ ಅಣುಬಾಂಬ್ಗೆ ಇದೆ. ಇದನ್ನು ಮೊದಲ ಬಾರಿಗೆ ಜಪಾನ್ ಮೇಲೆ ಪ್ರಯೋಗ ಮಾಡಲಾಯಿತು. ಇದನ್ನು ಕಂಡು ಹಿಡಿದಿದ್ದು ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಓಪನ್ ಹೈಮರ್ ಜೀವನದ ಕುರಿತ ಕಥೆ ಇದಾಗಿದೆ. ಕಿಲಿಯನ್ ಮರ್ಫಿ ಅವರು ಓಪನ್ ಹೈಮರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಿತ್ರಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ವಿಶ್ವದೆಲ್ಲೆಡೆ ಸುದ್ದಿ ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನಕ್ಕೆ ಭಾರತದಲ್ಲಿ ಸುಮಾರು 50 ಕೋಟಿ ರೂಪಾಯಿ ಗಳಿಸಿದೆ.