ನಿನ್ನೆ (12.07.2023), ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದ ಮಿಲನ್ ಕುಂದೇರಾ ಜೆಕೊಸ್ಲೊವಾಕಿಯಾದ ಕಾದಂಬರಿಕಾರ. ಸರ್ವಾಧಿಕಾರವನ್ನು ಕಂಡು, ಅನುಭವಿಸಿ ಬರೆದ ಲೇಖಕ. ಅದರಿಂದ ಆತ ಜೆಕೊಸ್ಲೊವಾಕಿಯಾ ಬಿಟ್ಟು ಫ್ರಾನ್ಸ್‌ಗೆ ಹೋಗಿ ನೆಲೆಸುವಂತಾಯಿತು. ಇದು ಲಂಕೇಶರು ಮೇ 17, 1987ರಲ್ಲಿ ಮಿಲನ್ ಕುಂದೇರಾ ಬಗ್ಗೆ ಬರೆದಿರುವ ಬರೆಹ. ಮಿಲನ್ ಕುಂದೇರಾ ಬಗ್ಗೆ ಬರೆಯುತ್ತಾ, ಮನುಷ್ಯನ ಭಾಷೆ, ಸ್ಪಂದನೆ, ಸಂಬಂಧಗಳೆಲ್ಲ ಸರ್ವಾಧಿಕಾರಿ ಮತ್ತು ಆತನ ವ್ಯವಸ್ಥೆಯ ಅಡಿಯಲ್ಲಿ ಹೇಗೆ ವಿರೂಪಗೊಳ್ಳತೊಡಗುತ್ತವೆ ಎನ್ನುವುದನ್ನು ಲಂಕೇಶರು ಈ ಬರೆಹದಲ್ಲಿ ಕಾಣಿಸಿದ್ದಾರೆ.
ಕತೆಗಾರ ಮಿಲನ್ ಕುಂದೇರಾ ಜೆಕೋಸ್ಲಾವ್ ಸಾಹಿತಿ; ಬಹಳ ಅನುಭವಿಸಿರುವ ಲೇಖಕ. ತನ್ನ ರಾಷ್ಟ್ರ ಮತ್ತು ವೈಯಕ್ತಿಕ ಬದುಕಿಗಾದದ್ದನ್ನು ಕುರಿತು ಚಿಂತಿಸುವ, ಮೈಮೇಲೆ ಬಂದವನಂತೆ ಬರೆಯುವ ಕುಂದೇರಾ ಮಧ್ಯ ಯುರೋಪಿನ ಪ್ರತಿಭಾವಂತ ಸಾಹಿತಿ. ಹಿಟ್ಲರ್‌ನ ಸೇನೆಗಳು ಜೆಕೊಸ್ಲಾವಾಕಿಯ ಮೇಲೆ ದಾಳಿ ನಡೆಸಿದಾಗ ಈತ ಎಳೆಯ ಹುಡುಗ. ಎರಡನೆಯ ಜಾಗತಿಕ ಯುದ್ಧ ಮುಗಿದ ಹೊತ್ತಿಗೆ ಈತ ಬಡ ಕಾರ್ಮಿಕನಾಗಿದ್ದ. ಆಮೇಲೆ ಹೊಸ ಅಲೆಯ ಸಿನಿಮಾ ತೆಗೆದ. 1968ರಲ್ಲಿ ಸ್ಟಾಲಿನ್‌ನ ಸೇನೆಗಳು ತನ್ನ ದೇಶಕ್ಕೆ ನುಗ್ಗಿ ವಶಪಡಿಸಿಕೊಂಡು ತಮ್ಮ ಚೇಲನೊಬ್ಬನನ್ನು ಅಲ್ಲಿಯ ನಾಯಕನಾಗಿ ಸ್ಥಾಪಿಸಿದಾಗ ಈತ ಸಮರ್ಥ ಲೇಖಕನಾಗಿದ್ದ. ಪ್ರಜಾಪ್ರಭುತ್ವ ಮಾಯವಾಗಿ ಕಮ್ಯುನಿಸ್ಟ್ ದಬ್ಬಾಳಿಕೆ ಶುರುವಾದಾಗ ಕುಂದೇರಾನ ಎಲ್ಲ ಪುಸ್ತಕಗಳನ್ನು ರಾಷ್ಟ್ರದ ಲೈಬ್ರರಿಗಳಿಂದ ಕಿತ್ತೊಗೆಯಲಾಯಿತು; ಈತನ ಸಿನಿಮಾ ನೋಡುವುದು, ಈತನ ಪುಸ್ತಕ ಓದುವುದು ನಿಷಿದ್ಧವಾಯಿತು. ಕುಂದೇರಾನಿಗೆ ತಲೆ ರೋಸಿ ಹೋಯಿತು. ತನ್ನ ಸುತ್ತ ರಾಷ್ಟ್ರಸೇವೆಯ ಹೆಸರಿನಲ್ಲಿ ನಡೆಯುತ್ತಿದ್ದುದು ರಾಷ್ಟ್ರದ್ರೋಹದ ಕೆಲಸವೆಂದು, ಚೆಕೋಸ್ಲಾವಾಕಿಯಾದ ವರ್ತಮಾನ, ಭೂತಗಳನ್ನು ಬೇರುಸಮೇತ ಕಿತ್ತುಹಾಕುವ ಪ್ರಯತ್ನವೆಂದು ಖಚಿತವಾಯಿತು. ಕುಂದೇರಾ ತನ್ನ ಕಾರಿನಲ್ಲಿ ಕೆಲವೇ ವಸ್ತುಗಳು ಮತ್ತು ತನ್ನ ಹುಡುಗಿಯನ್ನು ಹಾಕಿಕೊಂಡು ಸ್ವಾತಂತ್ರ್ಯ ಹುಡುಕಿ ಹೊರಟ. ಫ್ರಾನ್ಸ್‌ನಲ್ಲಿ ನೆಲೆಸಿ ತನ್ನ ಅನುಭವಗಳನ್ನು ಬರೆಯತೊಡಗಿದ.
ಕ್ರಾಂತಿ, ಸರ್ವಾಧಿಕಾರದ ಬಗ್ಗೆ ಜನಕ್ಕೆ ಏನನ್ನಿಸುತ್ತದೆ? ಸರ್ವಾಧಿಕಾರಗಳು ಜರುಗುವ, ಕೆಲಸ ಮಾಡುವ ರೀತಿಯನ್ನು ನಾವೆಲ್ಲ ನೋಡಿದ್ದೇವೆ. ಕುಂದೇರಾ ಸರ್ವಾಧಿಕಾರದ ನಡುವೆ ಇದ್ದು, ಕಂಡು ಮಾತಾಡುತ್ತಾನೆ. ಅನ್ಯಾಯ, ಅಸಮಾನತೆ, ಬಡತನಗಳೆಲ್ಲ ಇರುವ ದೇಶದಲ್ಲಿ ದಕ್ಷ ಸರ್ವಾಧಿಕಾರಿ ದೇವದೂತನಂತೆ ಕಾಣುತ್ತಾನೆ. ಆತನ ಗುಂಪು ಜನಸೇವೆಯ ಗುಂಪಿನಂತೆ ಕಾಣುತ್ತದೆ. ದೇವದೂತ ತರಲಿರುವ ದಕ್ಷತೆ, ಸಮಾನತೆ, ನೆಮ್ಮದಿಯನ್ನು ಕಲ್ಪಿಸಿಕೊಂಡು ಅವನನ್ನು ಹಾಡಿ ಹೊಗಳುವ ಅವಕಾಶವಾದಿಗಳು, ಸುಂದರ ವನದ ಕೋಗಿಲೆಗಳು ಇದ್ದೇ ಇರುತ್ತವೆ. ವಾಸ್ತವ ಮಾತ್ರ ತನ್ನ ಕೆಲಸ ತಾನು ಮಾಡುತ್ತಾ ಹೋಗುತ್ತದೆ. ಕಲ್ಪಿಸಿಕೊಂಡ ಸ್ವರ್ಗಕ್ಕೆ ಬದಲು ದಿನನಿತ್ಯದ ಸರ್ಕಾರದಂತೆಯೇ ತಪ್ಪುಗಳು ಆಗುತ್ತವೆ. ಆ ತಪ್ಪುಗಳನ್ನು ಎತ್ತಿ ತೋರಿಸಿದೊಡನೆ ದೇವದೂತನ ಚಾಟಿ ಮತ್ತು ವಾರೆಂಟ್ ಟೀಕಾಕಾರರ ಮೇಲೆ ಬೀಳುತ್ತದೆ. ಕಲ್ಪನೆಯ ಬೃಂದಾವನದ ಪಕ್ಕದಲ್ಲೇ ನರಕಸದೃಶ ಬಂದೀಖಾನೆ ಸಿದ್ಧವಾಗುತ್ತದೆ. ಬೃಂದಾವನ ಚಿಕ್ಕದಾಗುತ್ತ, ಜೈಲುಗಳು ದೊಡ್ಡವಾಗುತ್ತ ಹೋಗುತ್ತವೆ. ಬರೀ ಸಮಕಾಲೀನರನ್ನು ಜೈಲಿಗೆ ಕಳಿಸುವ ಜೊತೆಗೆ ಅವರ ಭೂತಕಾಲವನ್ನು, ನೆನಪುಗಳನ್ನು, ಪುಸ್ತಕಗಳನ್ನು ಕೂಡ ನರಕಕ್ಕೆ ರವಾನಿಸುವ ಮೂಲಕ ಸರ್ವಾಧಿಕಾರಿ ಜನರನ್ನು ಹತೋಟಿಯಲ್ಲಿಡಲು ಯತ್ನಿಸುತ್ತಾನೆ.
ಆದರೆ ಮನುಷ್ಯ ವಿಚಿತ್ರವಲ್ಲವೆ? ಆತನ ದೇಹವನ್ನು ಜೈಲಿಗೆ ಕಳಿಸುವುದರ ಅರ್ಥವೇ ಅವನ ಜೊತೆಗಾರರನ್ನು, ಅವನ ಹಿನ್ನೆಲೆಯನ್ನು, ಅವನ ಪರಿಸರವನ್ನು ಜೈಲಿಗೆ ಕಳಿಸಿದಂತೆ ಅಲ್ಲವೆ? ಅವನ ಭಾಷೆ, ಸ್ಪಂದನೆ, ಸಂಬಂಧಗಳೆಲ್ಲ ಸರ್ವಾಧಿಕಾರಿ ಮತ್ತು ಆತನ ವ್ಯವಸ್ಥೆಯ ಅಡಿಯಲ್ಲಿ ವಿರೂಪಗೊಳ್ಳತೊಡಗುತ್ತವೆ ಅಲ್ಲವೆ?
ಕುಂದೇರಾ ರಾಜಕಾರಣಿಯಲ್ಲ, ಬಂಡಾಯಕಾರನಲ್ಲ. ಕೇವಲ ಸಿನಿಮಾ ನಿರ್ದೇಶಕ; ಪುಸ್ತಕಗಳನ್ನು ಬರೆಯುವ ಮನುಷ್ಯ. ಆದರೆ ಕುಂದೇರಾಗೆ ಅನ್ನಿಸಿದೆ. ಮನುಷ್ಯರ ಸಾರ್ವಜನಿಕ ವ್ಯಕ್ತಿತ್ವಕ್ಕೂ ಆತನ ಖಾಸಗಿ ಆತ್ಮಕ್ಕೂ ಅಷ್ಟು ವ್ಯತ್ಯಾಸವಿಲ್ಲ. ಒಂದು ಜನಾಂಗದ ಭೂತ, ವರ್ತಮಾನಗಳನ್ನು ಹತೋಟಿಯಲ್ಲಿಟ್ಟು ನಿಯಂತ್ರಿಸುವ ಸರ್ವಾಧಿಕಾರಿ ನಮ್ಮನ್ನು ನಮ್ಮ ಮನೆಗಳಲ್ಲಿ, ಕುಟುಂಬದ ಸದಸ್ಯರ ಪರಸ್ಪರ ಒಡನಾಟದಲ್ಲಿ, ನಮ್ಮ ಏಕಾಂತದ ಗ್ರಹಿಕೆಗಳಲ್ಲಿ, ನಮ್ಮ ಸಂಭಾಷಣೆಯಲ್ಲಿ ನಮ್ಮ ಖಾಸಗಿ ಅನ್ನಿಸಿಕೊಳ್ಳುವ ಪ್ರೇಮದಲ್ಲಿ, ಕಾಮದಲ್ಲಿ ಕೂಡ ಮಧ್ಯಪ್ರವೇಶ ಮಾಡುತ್ತಾನೆ. ಪ್ರೇಮವೆಂಬುದರ ಅರ್ಥವೇ ನೆನಪು, ನೆನಪಿನ ನೆನಪು, ಒಡನಾಟ ಮತ್ತು ಐಕ್ಯ; ಸೃಷ್ಟಿಕ್ರಿಯೆ ಅಂದರೂ ಅದೇ ಅರ್ಥ.
ಕುಂದೇರಾ ತನ್ನದೊಂದು ಕತೆಯೊಂದನ್ನು ಆರಂಭಿಸುವ ರೀತಿ ಅರ್ಥಪೂರ್ಣವಾಗಿದೆ. 1948ರಲ್ಲಿ ಆಗತಾನೆ ಕ್ರಾಂತಿಯ ಕಹಳೆ ಊದಿದ ನಾಯಕ ಬಾಲ್ಕನಿಯ ಮೇಲೆ ನಿಂತು ತನ್ನೆದುರು ನೆರೆದಿರುವ ಲಕ್ಷಾಂತರ ಪ್ರಜೆಗಳತ್ತ ನೋಡುತ್ತಾನೆ. ಅದು ಜೆಕೊಸ್ಲಾವಾಕಿಯಾದ ಐತಿಹಾಸಿಕ, ನಿರ್ಣಾಯಕ ದಿನ. ಕೋಟ್ಯಂತರ ವರ್ಷಕ್ಕೊಮ್ಮೆ ಬರುವ ದಿನ.
ಅವನ ಪಕ್ಕದಲ್ಲಿ ಅವನ ಕಾಮ್ರೇಡರುಗಳಿದ್ದಾರೆ. ಗೆಳೆಯ ಕ್ಲೆಮೆಂಟಸ್ ಹತ್ತಿರದಲ್ಲೇ ಇದ್ದಾನೆ. ತನ್ನ ನಾಯಕ ಚಳಿಯಲ್ಲಿ ಬತ್ತಲೆಯಲ್ಲಿರುವುದನ್ನು ಕಂಡು ಕ್ಲೆಮೆಂಟಸ್ ತನ್ನ ಟೋಪಿಯನ್ನು ಅವನ ತಲೆಗೆ ಹಾಕುತ್ತಾನೆ. ಆ ಐತಿಹಾಸಿಕ ಸಂದರ್ಭದಲ್ಲಿ ನಾಯಕ ಮಾಡಿದ ಭಾಷಣ, ಆತನ ತಲೆಮೇಲಿನ ಕ್ಲೆಮೆಂಟಸ್ ಟೋಪಿ ರಾಷ್ಟ್ರದ ಉದ್ದಗಲಕ್ಕೆ ಪತ್ರಿಕೆಗಳಲ್ಲಿ, ಭಿತ್ತಿಪತ್ರಗಳಲ್ಲಿ ಪ್ರಚಾರವಾಗುತ್ತವೆ.
ನಾಲ್ಕು ವರ್ಷದಲ್ಲಿ ಕ್ಲೆಮೆಂಟಸ್ ದೇಶದ್ರೋಹಿ ಎಂಬ ಆಪಾದನೆಗೊಳಗಾಗಿ ಗಲ್ಲಿಗೇರಿಸಲ್ಪಡುತ್ತಾನೆ. ಅಷ್ಟೇ ಅಲ್ಲ, ಇದನ್ನು ಹೇಳುವ ಕಥಾನಾಯಕ ಕೂಡ ಸಾರ್ವಜನಿಕವಲ್ಲದ ಖಾಸಗಿ ಕಾಳಜಿ, ತೆವಲುಗಳಿಗಾಗಿ, ಸಾರ್ವಜನಿಕ ಆಪಾದನೆಯ ಮೇರೆಗೆ ಜೈಲು ಸೇರುತ್ತಾನೆ.
ನಮ್ಮ ಭೂತ, ನೆನಪು, ವರ್ತಮಾನಗಳೇ, ನಮ್ಮೆಲ್ಲರ ಅನ್ನಿಸಿಕೆಯ ಒಟ್ಟು ಮೊತ್ತವೇ ಸಮಾಜ. ರಾಜಕೀಯವನ್ನು ಮರೆತ ಕವಿಯಾಗಲಿ, ರಾಜಕೀಯವನ್ನು ತಪ್ಪಾಗಿ ತಿಳಿದ ಸಿನಿಮಾ ನಿರ್ದೇಶಕನಾಗಲಿ ತನ್ನ ದೇಶಕ್ಕೆ, ಅಂದರೆ ತನಗೆ ಅನ್ಯಾಯ ಮಾಡಿಕೊಳ್ಳುತ್ತಾನೆ. ಶಾಂತಿಯನ್ನು ಆಹ್ವಾನಿಸಿದ, ಕ್ರಾಂತಿಯ ಬಗ್ಗೆ ಹಾಡಿದ ಜೆಕ್ ಕವಿಯೊಬ್ಬನಿದ್ದ. ಈತ ಕ್ರಾಂತಿಯ ಬೃಂದಾವನವನ್ನು ಬಹುವಾಗಿ ಮೆಚ್ಚಿದ. ಈತನ ಗೆಳೆಯ ಕೂಡ. ಕವಿ. ಈ ಕವಿ ತಿಕ್ಕಲನಂತೆ, ಕಲ್ಪನೆಯ ಸೌಭಾಗ್ಯವನ್ನೆಲ್ಲ ಸೇರಿಸಿ, ಸರ್ರಿಯಲಿಸ್ಟಿಕ್ ಆಗಿ ಬರೆಯುತ್ತಿದ್ದ, ಕ್ರಾಂತಿಕಾರರ ಸರ್ವಾಧಿಕಾರಿಗೆ ಈ ತಿಕ್ಕಲನ ಕಾವ್ಯ ಹಿಡಿಸಲಿಲ್ಲ. ಆದ್ದರಿಂದ ಅವನನ್ನು ಗಲ್ಲಿಗೇರಿಸಲು ತೀರ್ಮಾನಿಸಿದರು. ಬೃಂದಾವನವನ್ನು ಮೆಚ್ಚಿದ ಕವಿ ಗೆಳೆಯನ ಪರವಾಗಿ ಚಕಾರವೆತ್ತಲಿಲ್ಲ. ಬೃಂದಾವನ ಜೈಲಾಗಿ ಪರಿವರ್ತಿತವಾದಾಗ ಅವನಿಗೆ ತನ್ನ ತಪ್ಪು ತಿಳಿಯಿತು.
ಕುಂದೇರಾನ ಇನ್ನೊಂದು ಕಥೆ ಹೇಳುವೆ. ಈಕೆಯ ಹೆಸರು ತಮೀನಾ. ಈಕೆ ಚಿಕ್ಕವಯಸ್ಸಿನಲ್ಲಿ ತಾನು ಬಹುವಾಗಿ ಪ್ರೀತಿಸುತ್ತಿದ್ದ ಗಂಡನನ್ನು ಕಳೆದುಕೊಂಡಳು. ತನ್ನ ದೇಶದಲ್ಲಿ ನಡೆಯುತ್ತಿದ್ದ ಗದ್ದಲ, ಕ್ರೌರ್ಯ ತಾಳಲಾರದೇ ನೆರೆರಾಷ್ಟ್ರಕ್ಕೆ ಹೋಗಿ ನೆಲೆಸಿದಳು. ಆಕೆ ಬಡವಿ. ಯಾರೋ ಒಬ್ಬರು ಆಕೆಗೆ ತಮ್ಮ ಚಿಕ್ಕ ಹೋಟೆಲಿನಲ್ಲಿ ಕೆಲಸ ಕೊಟ್ಟರು. ಆ ಹೋಟೆಲೂ ದಿವಾಳಿಯದ್ದು ಆಕೆಗೇ ಅದನ್ನು ವಹಿಸಿದರು. ಬಡಹೋಟೆಲಿನ ಮ್ಯಾನೇಜರಾದ, ಹರೆಯವನ್ನು ದಾಟದಿರುವ ಆಕೆಗೆ ಒಂದೇ ಆಶೆ- ತಾನು ತನ್ನ ದೇಶದಲ್ಲಿ ಬಿಟ್ಟು ಬಂದಿರುವ ತನ್ನ ಕಾಗದಗಳು ಮತ್ತು ಸಂಸಾರದ ಬಗೆಗಿನ ಡೈರಿಯನ್ನು ಹಿಂದಕ್ಕೆ ಪಡೆಯಬೇಕೆನ್ನುವುದು. ಅದಕ್ಕಾಗಿ ಹಲವು ವಿಧವಾಗಿ ಪ್ರಯತ್ನಿಸುತ್ತಾಳೆ. ಆಕೆಯ ಕಾಗದ, ಡೈರಿಗಳೆಲ್ಲ ತನ್ನ ಅತ್ತೆಯ ಅವಗಾಹನೆಗೆ ಬಂದಿರುವುದಾಗಿ, ಅವು ಇರಲಾರವು ಎಂದು ಕೂಡ ಸುದ್ದಿ ಬರುತ್ತದೆ. ಆದರೆ ಆಕೆಗೆ ಇರುವ ಒಂದೇ ಆಶೆ- ತನ್ನ ಕುಟುಂಬದ, ತನ್ನ ಗಂಡನ ನೆನಪು ಪಡೆಯುವುದು. ಹರೆಯದ ಆಕೆ ಪ್ರೀತಿಗೆ ಹೊರತಲ್ಲ, ಆದರೆ ಆಕೆಗೆ ಅದರಲ್ಲಿ ಉತ್ಸಾಹವಿಲ್ಲ. ಒಬ್ಬ ಅವಳ ಸ್ನೇಹ ಗಳಿಸುತ್ತಾನೆ. ಅವಳಿಗೆ ಪ್ರೀತಿ ನೀಡುವಂತೆ ಕಾಣುತ್ತಾನೆ; ಆಕೆಯ ಪ್ರತಿಯೊಂದು ಕಣವನ್ನೂ ಮೆಚ್ಚುತ್ತಾನೆ. ಸರಿದು ಹೋಗುತ್ತಿರುವ ಬದುಕು, ಕೈಗೆ ಎಟುಕದಿರುವ ನೆನಪು ಅವಳಲ್ಲಿ ಗೊಂದಲ ಮೂಡಿಸಿವೆ. ಆಕೆ ಅವನಿಗೆ ಹತ್ತಿರವಾಗಲು ಯತ್ನಿಸುತ್ತಾಳೆ. ಅವಳು ತನ್ನ ಪ್ರೇಯಸಿ ಆಗುವ ಕನಸು ಅವನದು. ಕೊನೆಗೂ ಆ ರಾತ್ರಿ ಬರುತ್ತದೆ. ಅವನು ಅಪ್ಪುತ್ತಾನೆ. ಮುದ್ದಿಸುತ್ತಾನೆ; ಅವಳು ಕೂಡ ಆತನ ಪ್ರೀತಿಯನ್ನು ಮನ್ನಿಸಿ ಸಹಕರಿಸುತ್ತಾಳೆ. ಆದರೆ ಅವಳ ಆತ್ಮ ನೆನಪುಗಳಲ್ಲಿ, ಕಳೆದುಹೋದ ತನ್ನ ಪ್ರೀತಿಯ ಪರಿಸರದಲ್ಲಿ ಹೂತು ಹೋಗಿದೆ. ಅವಳ ಜನನಾಂಗ ದ್ರವಿಸುವುದೇ ಇಲ್ಲ. ಅವಳಿಂದ ತನ್ನನ್ನು ನಿಜಕ್ಕೂ ಕೊಟ್ಟುಕೊಳ್ಳುವುದು ಆಗುವುದೇ ಇಲ್ಲ.
ಮೇಲಿನ ಸಾಲುಗಳನ್ನು ಬರೆಯುತ್ತ ಕುಂದೇರಾನ ಗಾಢ ಅರ್ಥಗಳು ನನ್ನನ್ನು ಕೆಣಕುತ್ತಿವೆ. ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲ ಅನ್ನುವ, ಯಾರು ಬಂದರೇನು ರಾಗಿ ಬೀಸುವುದು ತಪ್ಪುವುದಿಲ್ಲ ಎಂದು ನಂಬುವ ಕವಿಗಳುಳ್ಳ, ಕಲಾವಿದರನ್ನುಳ್ಳ ದೇಶ ಇದು. ಆಸ್ಥಾನ ವಿದ್ವಾನ್‌ಗಳನ್ನೂ ಕವಿಗಳನ್ನೂ ಪಡೆದಿದ್ದವರು ನಾವು. ಇಲ್ಲಿಯ ನಮಗೆ ಯಾವುದೇ ಆಡಳಿತದ ಸರ್ವವ್ಯಾಪಿ ಗುಣ ಗೊತ್ತಾಗಬೇಕು. ಇಲ್ಲಿ ನಡೆದ ಒಂದು ಘಟನೆ ನನಗೆ ನೆನಪಾಗುತ್ತಿದೆ. ಇದು ಕೆಲವು ವರ್ಷಗಳ ಹಿಂದೆ ಆಯಿತು. ಈತ ಕವಿ, ತನ್ನ ಜೀವನದ ಬಹುಭಾಗವನ್ನು ಸರ್ಕಾರದ ಸಣ್ಣ ನೌಕರಿಯಲ್ಲಿ ಕಳೆದ ಕವಿ ಈತ. ದೇಶದ ತುರ್ತುಪರಿಸ್ಥಿತಿಯಾಗಲಿ, ಭ್ರಷ್ಟತೆಯಾಗಲಿ, ಪ್ರಜಾಪ್ರಭುತ್ವವಾಗಲಿ ಇವನಿಗೆ ಮುಖ್ಯವಾಗಿರಲಿಲ್ಲ. ಪ್ರಕೃತಿ, ಪ್ರೇಮ ಕುರಿತು ಬರೆಯುತ್ತಿದ್ದ ಈ ಕವಿಗೆ ಅವೆಲ್ಲ ಅಪ್ರಸ್ತುತವಾಗಿದ್ದವು. ಒಮ್ಮೆ ಈತನೆದುರು ಯಾರೋ ಸರ್ಕಾರವನ್ನು ಟೀಕಿಸಿದರು. ಎಂದಿನಂತೆ ಈತ ಸುಮ್ಮನಿದ್ದ. ಮರುದಿನ ಈತನ ಮೇಲೆ ಯಾವನೋ ರಾಜಕಾರಣಿಗೆ ಸಿಟ್ಟು ಬಂದಿದೆ ಎಂದು ಹೇಳಿದರು. ಅವತ್ತೇ ಕವಿಗೆ ಕಾಯಿಲೆ ಶುರುವಾಯಿತು. ತನ್ನ ಮನೆಯ ಸುತ್ತ ಪೊಲೀಸರು, ಗೂಢಚಾರರು ಇರುವುದಾಗಿ ತನ್ನನ್ನು ಕೋಳ ಹಾಕಿ ಕರೆದೊಯ್ಯಲು ಬಂದಿರುವುದಾಗಿ ಬಡಬಡಿಸತೊಡಗಿದ. ಯಾರು ಅದನ್ನೆಲ್ಲ ಅಲ್ಲಗಳೆದರೂ ಈತ ನಂಬಲಿಲ್ಲ. ಕವಿ ಇನ್ನೊಂದು ಕೊನೆಗೆ ಹೋಗಿದ್ದ.

ವ್ಯಾಮೋಹದಿಂದ, ಹಿನ್ನೆಲೆಯಿಂದ ವಂಚಿತನಾದವನ, ನೆನಪುಗಳನ್ನು ಹೊತ್ತವನ, ಕ್ರೂರ ವ್ಯವಸ್ಥೆಯ ಆಕ್ಟೋಪಸ್ ಬಾಹುಗಳಿಂದ ತಪ್ಪಿಸಿಕೊಂಡವನ ತೀವ್ರತೆ, ಪ್ರಕ್ಷುಬ್ಧತೆ, ನೋವಿನಿಂದ ಬರೆಯುವ ಕುಂದೇರಾ ಸ್ವರ್ಗ ಮತ್ತು ನರಕದ ಗಡಿಯನ್ನು ಅರಿತವನು. ನೆನಪು ಮತ್ತು ವಿಸ್ಮರಣೆಯ ಭಿನ್ನತೆ ಅರಿತವನು. ನಗೆ ಮತ್ತು ನೋವು ಎಷ್ಟು ಹತ್ತಿರ ಮತ್ತು ಎಷ್ಟು ಸಹಜ ಜೋಡಿಗಳು ಎಂಬುದನ್ನು ತಿಳಿದು ಬರೆಯುವವನು. ಕಾಮ ಕೂಡ ಬದುಕಿನ ಬಗ್ಗೆ ಕಾಮನೆಯಾಗುವುದು, ಕಳಂಕವೇ ಕಲೆಯಾಗುವುದು ಹೀಗೆ. ನಿಮ್ಮ ಸುತ್ತಣ ರಾಜಕೀಯ, ಖಾಸಗಿ ಜೀವನದ ಗುಣಮಟ್ಟ ಕಂಡು ನಿಮಗೆ ‘ಒಂತರಾ’ ಅನ್ನಿಸುತ್ತದೆಯೇ? ಹಾಗಿದ್ದರೆ ನಿಮಗೆ ಕುಂದೇರಾನ ಅನ್ನಿಸಿಕೆ ಗೊತ್ತಾಗಿದೆ.