ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

Date:

Advertisements
‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು ವನತಾರದಲ್ಲಿ ಆನೆಗಳನ್ನು ಸಾಕುವ ಕುರಿತು ಭಾರತದ ಪ್ರಮುಖ ಆನೆ ತಜ್ಞರಲ್ಲಿ ಒಬ್ಬರಾಗಿರುವ ಪ್ರೊ. ರಾಮನ್‌ ಸುಕುಮಾರ್‌, ಇಲ್ಲಿ ವಿಸ್ತಾರವಾಗಿ ಮಾತನಾಡಿದ್ದಾರೆ…

ಅನಂತ ಅಂಬಾನಿ ಗುಜರಾತಿನ ಜಾಮ್‌ನಗರದಲ್ಲಿ ನಿರ್ಮಿಸಿರುವ ಪುನರ್‌ವಸತಿ ಕೇಂದ್ರ ವನತಾರ ಮತ್ತೆ ಸುದ್ದಿಯಲ್ಲಿದೆ. ಅಲ್ಲೀಗಾಗಲೇ ಇರುವ 200 ಆನೆಗಳ ಜೊತೆಗೆ ಇನ್ನೂ 1,000 ಆನೆಗಳನ್ನು ಸಾಕಲಾಗುತ್ತದೆ ಎನ್ನಲಾಗಿದೆ. 3,000 ಎಕರೆ ವಿಶಾಲ ಪ್ರದೇಶದಲ್ಲಿ ತಲೆಎತ್ತಿರುವ ವನತಾರ ಆನೆಗಳಲ್ಲದೆ ಇನ್ನೂ ಅನೇಕ ವನ್ಯಮೃಗಗಳನ್ನು ಹೊಂದಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಾಕತಾಳೀಯವೋ ಎಂಬಂತೆ, 2024ರ ಮಾರ್ಚ್‌ 14ರಂದು ಕ್ಯಾಪ್ಟಿವ್‌ ಎಲಿಫೆಂಟ್ (ಟಾನ್ಸ್‌ಫರ್‌ ಆರ್‌ ಟ್ರಾನ್ಸ್‌ಪೋರ್ಟ್‌) ರೂಲ್ಸ್‌ 2024 ಹೊಸದಾಗಿ ರೂಪಿತವಾಗಿದ್ದು, ಇನ್ನು ಮುಂದೆ ನಡೆಯುವ ಎಲ್ಲಾ ಆನೆ ಸಂಬಂಧಿ ಸಾಗಾಣಿಕೆ ಮತ್ತು ಸಾಕಾಣಿಕೆ ಪ್ರಕ್ರಿಯೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಜೊತೆಗೆ ರಾಜ್ಯದಿಂದ ರಾಜ್ಯಕ್ಕೆ ಆನೆಗಳ ಸಾಗಾಣಿಕೆ ಪ್ರಕ್ರಿಯೆಗಳು ಇದರೊಳಗೆ ಸೇರುತ್ತವೆ.

ಹೊಸ ನಿಯಮದ ಪ್ರಕಾರ ಸೆರೆಯಲ್ಲಿರುವ ಆನೆಗಳನ್ನು ರಾಜ್ಯದೊಳಗೆ ಮತ್ತು ರಾಜ್ಯಗಳ ನಡುವೆ ಸಾಗಿಸಲು ರಾಜ್ಯದ ಮುಖ್ಯ ವನ್ಯಜೀವಿ ಸಂರಕ್ಷಾಣಾಧಿಕಾರಿಗಳು ಅನುಮತಿಸಬೇಕು. ಆದರೆ ರೂಪಿತ ನಿಯಮಗಳು ಲಭ್ಯವಿರುವ ಸೌಲಭ್ಯಗಳು ಹೇಗಿರಬೇಕು, ಅವರ ಸಾಗಾಣಿಕೆ ಹೇಗಿರಬೇಕು, ಮತ್ತು ಎಷ್ಟು ದೂರದವರೆಗೆ ಸಾಗಿಸಬಹುದೆಂಬುದರ ಕುರಿತು ಅಸ್ಪಷ್ಟತೆಯನ್ನು ಹೊಂದಿವೆ. ಒಂದು ವೇಳೆ ಖಾಸಗಿ ಮಾಲೀಕ ಆನೆಯೊಂದರ ಪೋಷಣೆಯನ್ನು ಸಮರ್ಪಕವಾಗಿ ಮಾಡಲಾಗದಿದ್ದರೆ, ಅದಕ್ಕೊಂದು ನೆಲೆ ಅರಣ್ಯ ಇಲಾಖೆಯ ವ್ಯವಸ್ಥೆಯಲ್ಲಿ (ಕಾಡಿನೊಳಗೆ ಇವು ಇರುವ ಕಾರಣ, ಹೆಚ್ಚು ಗುಣಾತ್ಮಕ ವ್ಯವಸ್ಥೆಗಳಾಗಿರುತ್ತವೆ) ದೊರೆಯುತ್ತದೆಯೇ? ಶೆಡ್ಯೂಲ್‌ 1ರಲ್ಲಿ ಸಂರಕ್ಷಿತವಾಗಿರುವ ಆನೆ ಕಾನೂನು ವಿರೋಧಿ ವ್ಯಾಪಾರವಹಿವಾಟಿಗೆ ಅವಕಾಶ ನೀಡುತ್ತದೆಯೇ(ಅನೇಕ ವನ್ಯಜೀವಿ ತಜ್ಞರ ಆತಂಕವಿದು) ಎನ್ನುವ ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯುವುದಿಲ್ಲ.

ಅನಂತ ಅಂಬಾನಿ ಮತ್ತು ವನತಾರ
ಅನಂತ ಅಂಬಾನಿ ಮತ್ತು ವನತಾರ

ಕ್ಯಾಪ್ಟಿವ್ಎಲಿಫೆಂಟ್‌ (ಟ್ರಾನ್ಸಫರ್ಆರ್ಟ್ರಾನ್ಸ್ಪೋರ್ಟ್‌) ರೂಲ್ಸ್‌ 2024 ಕುರಿತು ನಿಮಗಿರುವ ಮುಖ್ಯ ಕಾಳಜಿಗಳು ಯಾವುವು? ಉದಾಹರಣೆಗೆ, ಖಾಸಗಿ ಮೃಗಾಲಯಗಳಿಗೆ ಆನೆಗಳನ್ನು ವರ್ಗಾಯಿಸುವ ಪ್ರಕ್ರಿಯೆ ಮೇಲೆ ನಿಯಮಗಳು ಹೇಗೆ ಪರಿಣಾಮ ಬೀರುತ್ತವೆ?

Advertisements

ಆನೆಗಳ ಅಕ್ರಮ ಮಾರಾಟಕ್ಕೆ ಮತ್ತು ಕಾಡಾನೆಗಳ ಬಂಧನಕ್ಕೆ ಅವಕಾಶವಾಗಬಹುದೆಂಬ ಆತಂಕದ ಕಾರಣಕ್ಕೆ ಹೊಸ ನಿಯಮದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಆನೆಗಳ ಸಾಗಾಣಿಕೆ ವಿಷಯದಲ್ಲಿ ಕಾನೂನು ಸ್ಪಷ್ಟವಾಗಿದೆ: ಆನೆಗಳು ಹೊರಡುವ ಮತ್ತು ವರ್ಗಾವಣೆಯಾಗುವ ರಾಜ್ಯಗಳ ಮುಖ್ಯ ವನ್ಯಜೀವಿ ಸಂರಕ್ಷಾಣಾಧಿಕಾರಿಗಳು ಅನುಮತಿಪತ್ರ ನೀಡಬೇಕು ಮತ್ತು ವರ್ಗಾವಣೆಯಾದ ಆನೆಯ ನೋಂದಾವಣೆ ಕಡ್ಡಾಯವಾಗಿರುತ್ತದೆ. ದೇಶದ ಎಲ್ಲಾ ಆನೆಗಳ ಜನೆಟಿಕ್‌ ದತ್ತಾಂಶವನ್ನು ವೈಲ್ಡ್‌ಲೈಫ್‌ ಇನ್ಸಿಟ್ಯೂಟ್‌ ಆಫ್‌ ಇಂಡಿಯಾ ಸೃಜಿಸುತ್ತಿದೆ. ಜನೆಟಿಕ್‌ ದತ್ತಾಂಶದ ಸಂಗ್ರಹ ಸಾಕಷ್ಟು ಕಾಲಾವಕಾಶ ಮತ್ತು ಬಂಡವಾಳವನ್ನು ಬೇಡುವ ಪ್ರಕ್ರಿಯೆಯಾಗಿರುತ್ತದೆ.

ಹೊಸ ಕಾನೂನು ಓದುವಾಗ ಸೂಕ್ತವಾಗಿದೆ ಎನಿಸುವುದಾದರೂ, ಜಾರಿಗೊಂಡಾಗ ಹಾಗೇ ಇರುತ್ತದೆ ಎನ್ನಲು ಬರುವುದಿಲ್ಲ. ಆನೆಗಳ ಅಕ್ರಮ ಮಾರಾಟವನ್ನು ತಡೆಯುತ್ತದೆ ಎನ್ನಲಾಗದು. ಆನೆಗಳನ್ನು ಬೃಹತ್‌ ಪ್ರಮಾಣದಲ್ಲಿ ಸಾಗಾಟ ಮಾಡುವ ಕುರಿತು ನನ್ನ ಆತಂಕವಿದೆ. ಆನೆಗಳನ್ನು ಅವುಗಳ ಸಹಜ ಪರಿಸರದಿಂದ ದೂರ ಸಾಗಿಸಿ ಸಾಕುವ ಯತ್ನ ಪ್ರಶ್ನಾರ್ಹವಾಗುತ್ತದೆ. ಆನೆಗಳನ್ನು ಧಾರ್ಮಿಕ ಕಾರಣ ಬಳಸುವ ವಿಚಾರವಾಗಲೀ ಇಲ್ಲವೇ ಜನರಿಗಾಗಿ ಪ್ರದರ್ಶಿಸುವ ವಿಚಾರವಾಗಲೀ- ಎರಡೂ ಪ್ರಶ್ನಾರ್ಹ ಯತ್ನಗಳೇ ಆಗಿವೆ.

ಇದನ್ನು ಓದಿದ್ದೀರಾ?: ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?

ಗುಜರಾತ್ ಜಾಮ್ನಗರದಲ್ಲಿ ಅನಂತ ಅಂಬಾನಿಯವರು ಸ್ಥಾಪಿಸಿರುವ ಪುನರ್ವಸತಿ ಕೇಂದ್ರದ ಕುರಿತು ಅನೇಕ ಟೀಕೆಗಳು ಬರುತ್ತಿವೆಜಾಮ್ನಗರ ಪ್ರದೇಶ ಆನೆಗಳಿಗೆ ಯೋಗ್ಯವಾದ ಪ್ರದೇಶವಲ್ಲ ಅನ್ನುವುದರಿಂದ ಹಿಡಿದು, ಆನೆಗಳು ಅಷ್ಟು ದೂರ ಹೋಗಬೇಕಿದೆ ಎನ್ನುವುದರವರೆಗೆ ಟೀಕೆಗಳು ಇವೆ. ಇದರ ಕುರಿತು ನಿಮ್ಮ ಅಭಿಪ್ರಾಯವೇನು?

ವನತಾರದ ಕುರಿತು ನನಗಿರುವ ಜ್ಞಾನ ದಿನಪತ್ರಿಕೆಗಳಲ್ಲಿ ಓದಿರುವ ಸುದ್ದಿಯನ್ನು ಆಧರಿಸಿದ್ದು ಮಾತ್ರ. ವಿವಿಧ ಪ್ರಾಣಿಗಳನ್ನು ಇರಿಸಲು ಅನುಕೂಲವಾಗುವಂತೆ ವನತಾರದಲ್ಲಿ ಸೌಲಭ್ಯಗಳನ್ನು ಸೃಜಿಸಲಾಗಿದೆ ಮತ್ತಿದು ಪುನರ್‌ವಸತಿ ಕೇಂದ್ರ ಯಾ ಪ್ರಾಣಿಸಂಗ್ರಹಾಲಯ ಇತ್ಯಾದಿ ಆಗಿರಬಹುದು.

ಬಹುಶಃ ಈಗಾಗಲೇ ಅವರ ಬಳಿ ಇವೆ ಎನ್ನಲಾಗಿರುವ 200 ಆನೆಗಳ ಸಂಖ್ಯೆಗೆ ನನ್ನನ್ನು ನಾನು ಸೀಮಿತಗೊಳಿಸಿಕೊಳ್ಳುತ್ತೇನೆ. ನಾನು ಕೇಳಿರುವ ಸುದ್ದಿ ಪ್ರಕಾರ ಈ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸುವ ಆಲೋಚನೆಯಿದೆಯಂತೆ. ಭಾರತದಲ್ಲೀಗ ಸೆರೆಯಲ್ಲಿರುವ ಆನೆಗಳ ಸಂಖ್ಯೆ 2,600. ಒಂದು ವೇಳೆ ವನತಾರದ ಗುರಿ ದಿಟವೇ ಆಗಿದ್ದರೆ, ದೇಶದಲ್ಲೀಗ ಸೆರೆಯಲ್ಲಿರುವ ಆನೆಗಳ ಪೈಕಿ ಶೇ. 40 ಆನೆಗಳು ಅಲ್ಲಿರುತ್ತವೆ.

ಸುದ್ದಿಗಳ ಪ್ರಕಾರ ವನತಾರದಲ್ಲಿ ಪ್ರಾಣಿಗಳಿಗಾಗಿ ಅತ್ಯುತ್ತಮವಾದ ಸೌಲಭ್ಯಗಳನ್ನು ಒದಗಿಸಲಾಗಿದೆ (ಹವಾನಿಯಂತ್ರಿತ ಜಾಗಗಳು, ಆಸ್ಪತ್ರೆಗಳು, ವೈದ್ಯಕೀಯ ಸೇವೆ). ಕೆಲವು ವರದಿಗಳ ಪ್ರಕಾರ ಅಲ್ಲಿ ಲಭ್ಯವಿರುವ ಆನೆ ಆರೈಕೆ ವ್ಯವಸ್ಥೆ ಜಗತ್ತಿನಲ್ಲೇ ಅತ್ಯುತ್ತಮವಾದುದು.

ಇದನ್ನು ಕೇಳಿದ ಇಲ್ಲವೇ ಓದಿದವರ ಮೊದಲ ಪ್ರತಿಕ್ರಿಯೆ ಹೀಗಿರುತ್ತದೆ: ಗಾಯಗೊಂಡಿರುವ, ದೌರ್ಜನ್ಯಕ್ಕೆ ಒಳಗಾಗಿರುವ ಮತ್ತು ಅನಾರೋಗ್ಯಕ್ಕೆ ತುತ್ತಾಗಿರುವ ಆನೆಗಳಿಗೆ ಅತ್ಯುತ್ತಮ ಸೇವೆ ನೀಡುವ ವ್ಯವಸ್ಥೆ ಸೃಜಿಸಿದರೆ ತಪ್ಪೇನು?

ಮೊದಲಿಗೆ ಜಾಮ್‌ನಗರ ದೇಶದ ಪಶ್ಚಿಮದ ತುತ್ತ ತುದಿಯಲ್ಲಿರುವ ಪ್ರದೇಶವಾಗಿದೆ. ಮತ್ತಿದು ಆನೆಗಳ ಸಹಜ ಭೌಗೋಳಿಕ ಪರಿಸರದಿಂದ ಬಹಳವೇ ದೂರವಿದೆ. ಇಲ್ಲಿಯ ಬೇಸಿಗೆಯ ಹವಾಮಾನ ಏಷಿಯಾದ ಆನೆಗಳ ಆವಾಸಕ್ಕೆ ಯೋಗ್ಯವಾಗಿಲ್ಲ. ಒಂದು ವೇಳೆ ನೂರಾರು ಆನೆಗಳಿಗೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಸೃಷ್ಟಿಸುವುದಾದರೆ, ಸಾಕಷ್ಟು ಪ್ರಮಾಣದಲ್ಲಿ ಇಂಧನ ವ್ಯಯವಾಗುತ್ತದೆ.

ಎರಡನೆಯದಾಗಿ, ಆನೆಗಳನ್ನು ದೂರ ದೂರದವರೆಗೆ ಸಾಗಿಸುವುದು ಅನೇಕ ಅಪಾಯಗಳಿಗೆ ಕಾರಣವಾಗುತ್ತದೆ. ಕೆಲವು ವರ್ಷಗಳ ಹಿಂದೆ ಆನೆಗಳನ್ನು ಈಶಾನ್ಯ ಪ್ರದೇಶದಿಂದ ಗುಜರಾತಿಗೆ ಸಾಗಿಸಲು ಹೊರಟಾಗ ಸಾಕಷ್ಟು ಗಲಾಟೆಯಾದ ಪ್ರಕರಣ ನನಗೆ ನೆನಪಿದೆ. ಏಕೆಂದರೆ, ಬಿರು ಬೇಸಿಗೆಯಲ್ಲಿ ತಾಪಮಾನ 40 ಡಿಗ್ರಿಗೂ ಹೆಚ್ಚಿರುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಸೆರೆಯಲ್ಲಿರುವ ಆನೆಗಳು ಕೇವಲ ಪ್ರದರ್ಶನಕ್ಕಾಗಿ ಇಲ್ಲವೇ ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗುವುದಿಲ್ಲ. ಭಾರತದ ಅರಣ್ಯ ಮತ್ತು ಸಂರಕ್ಷಿತ ಪ್ರದೇಶಗಳ ನಿರ್ವಹಣೆಯಲ್ಲಿ ಆನೆಗಳು ಬಹು ಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತವೆ. ಆನೆ-ಮನುಷ್ಯರ ನಡುವೆ ಸಂಘರ್ಷ ನಡೆದಾಗ, ತರಬೇತಿ ಪಡೆದ ಕುಮ್ಕಿ ಆನೆಗಳು ಬಹುಮುಖ್ಯವಾಗುತ್ತವೆ. ಈ ಸಂಘರ್ಷ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವುದು ಖಚಿತವಾಗಿದೆ. ಆನೆಗಳನ್ನು ಪೋಷಿಸಲು ಅರಣ್ಯಗಳಿಗೆ ಹೊಂದಿಕೊಂಡಿರುವ ಆನೆ ಕ್ಯಾಂಪುಗಳೇ ಪ್ರಶಸ್ತವಾದ ಜಾಗಗಳಾಗಿವೆ. ಏಕೆಂದರೆ ಆನೆಗಳಿಗೆ ಅವುಗಳ ಸಹಜ ಪರಿಸರ ಸದಾಕಾಲ ಲಭ್ಯವಿರುತ್ತದೆ. ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಈಗ ಹಾಲಿ ಇರುವ ಆನೆ ಕ್ಯಾಂಪುಗಳು ಸೂಕ್ತ ವ್ಯವಸ್ಥೆಗಳಾಗಿವೆ. ಆದರೆ ಈ ಕ್ಯಾಂಪುಗಳು ಕೂಡ ಇತ್ತೀಚಿನ ದಿನಗಳಲ್ಲಿ ಕೆಲವು ಸಮಸ್ಯೆಗಳಿಗೆ ಸಿಲುಕಿವೆ ಎನ್ನುವುದು ಸಹಾ ಸತ್ಯವೇ(ಸಾಕಾನೆಗಳಿಂದ ಕಾಡಿನ ಮೇಲೆ ಒತ್ತಡ, ಆನೆಗಳ ಸಾಕಾಣಿಕೆಯ ಕೌಶಲ್ಯದ ಇಲ್ಲವಾಗುವಿಕೆ ಇತ್ಯಾದಿ).

ಆನೆ ಕ್ಯಾಂಪುಗಳಲ್ಲಿ ನಡೆಸುವ ವೈಜ್ಞಾನಿಕ ಪರೀಕ್ಷೆಗಳು ಹೆಚ್ಚು ವೈಜ್ಞಾನಿಕವಾಗಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಅರಣ್ಯ ಕ್ಯಾಂಪುಗಳು ಆನೆಗಳು ಕುರಿತಾಗಿರುವ ಸ್ಥಳೀಯ ಜ್ಞಾನದ ಭಂಡಾರಗಳಾಗಿವೆ. ಇತ್ತೀಚಿಗೆ ಆಸ್ಕರ್‌ ಪ್ರಶಸ್ತಿ ಪಡೆದ ‘ಎಲಿಫೆಂಟ್‌ ವಿಸ್ಪರ್ರ್ಸ್‌’ ಆನೆಗಳು ಮತ್ತು ಆದಿವಾಸಿಗಳ ನಡುವೆ ಇರುವ ಸಂಬಂಧವನ್ನು ವಿವರಿಸಿದೆ. ಇಂತಹ ಸಂಬಂಧಗಳನ್ನು ಅನೇಕ ವೇಳೆ ನಿರ್ಲಕ್ಷಿಸಲಾಗುತ್ತದೆ ಇಲ್ಲವೇ ಹೀಗಳೆಯಲಾಗುತ್ತದೆ.

ಒಂದು ವೇಳೆ ವನತಾರ ಸಮಗ್ರ ದೃಷ್ಟಿಯಿಂದ ಇಡೀ ಯೋಜನೆಯನ್ನು ಯೋಜಿಸಿದ್ದ ಪಕ್ಷದಲ್ಲಿ, ಭಾರತದಲ್ಲಿರುವ ಆನೆಗಳಿಗೆ ಅದರಲ್ಲೂ ಕಾಡಾನೆಗಳಿಗೆ ಉತ್ತಮವಾದ ಪರಿಸರವನ್ನು ಸೃಜಿಸಲು ಸಾಧ್ಯವಾಗುತ್ತಿತ್ತು. ವನತಾರಕ್ಕಿರುವ ಅಪಾರ ಸಂಪನ್ಮೂಲವನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಸಹಾ, ಒಂದು ಪ್ರದೇಶದಲ್ಲಿ 200 ಇಲ್ಲವೇ 1,000 ಆನೆಗಳನ್ನು ಇರಿಸಿಕೊಳ್ಳುವುದು ಸವಾಲಿನ ವಿಚಾರವಾಗುತ್ತದೆ. ನೀವು ಅವುಗಳಿಗೆ ಇರಲು ಸೂಕ್ತ ಜಾಗದ ವ್ಯವಸ್ಥೆ ಮಾಡುಬಹುದೇ ಹೊರತು, ಆನೆಗಳ ಸಾಮಾಜಿಕ ಜೀವನದ ಅಗತ್ಯಗಳನ್ನು ಒದಗಿಸಲು ಆಗುವುದಿಲ್ಲ. ವನತಾರದಲ್ಲಿ ಹೆಚ್ಚೆಂದರೆ ಹತ್ತರ ಆಸುಪಾಸಿನಲ್ಲಿ ಆನೆಗಳನ್ನು ಇರಿಸುವುದು ಸೂಕ್ತವಾಗುತ್ತದೆ. ಪಶ್ಚಿಮದ ಅನೇಕ ಮೃಗಾಲಯಗಳಲ್ಲಿ ಮತ್ತು ಭಾರತದ ಅನೇಕ ದೇವಾಲಯಗಳಲ್ಲಿ ಮದಕ್ಕೆ ಬಂದ ಗಂಡಾನೆಯನ್ನು ನಿಭಾಯಿಸಲು ಹೆಣಗಾಡಿರುವುದನ್ನು ನಾನು ಕಂಡಿದ್ದೇನೆ. ಒಂದೇ ಜಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆನೆಗಳು ಇರಿಸುವುದು ಅವುಗಳ ರಕ್ಷಣೆ ಮಾಡಿದಂತೆ ಹೇಗೆ ಆಗುತ್ತದೆ? ವನತಾರ ದೇಶದ ಉದ್ದಗಲಕ್ಕೂ ಹರಡಿರುವ ವ್ಯವಸ್ಥೆಯಾಗಿ ಸೃಜಿಸಿದ್ದರೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಇಂತಹ ವ್ಯವಸ್ಥೆಯನ್ನು ವನತಾರವೇ ನಿರ್ಮಿಸಬಹುದಿತ್ತು ಇಲ್ಲವೇ ಸ್ಥಳೀಯ ಅರಣ್ಯ ಇಲಾಖೆಯ ಆನೆ ಕ್ಯಾಂಪುಗಳು, ದೇವಾಲಯಗಳು ಮತ್ತಿತರ ಸಂಸ್ಥೆಗಳೊಂದಿಗಿನ ಸಹಭಾಗಿತ್ವದಲ್ಲಿ ಇವುಗಳನ್ನು ನಿರ್ವಹಿಸಬಹುದಿತ್ತು. ಸಾಕಾನೆಗಳ ನಿರ್ವಹಣೆಯ ಜೊತೆಗೆ ಕಾಡಾನೆಗಳ ನಿರ್ವಹಣೆಯನ್ನು ಏಕೀಕೃತಗೊಳಿಸಿದ್ದ ಪಕ್ಷದಲ್ಲಿ, ಭಾರತದ ಸಾಂಸ್ಕೃತಿಕ ಪ್ರತಿನಿಧಿಯಾದ ಆನೆಯ ಸಂರಕ್ಷಣೆ ಇನ್ನಷ್ಟು ಬಲವನ್ನು ಪಡೆದುಕೊಳ್ಳುತ್ತಿತ್ತು.

ವನತಾರದಲ್ಲಿ ಆನೆ
ವನತಾರದಲ್ಲಿ ಆನೆ

ಸಾಕಿದ ಆನೆಗಳು ದುಡಿಯುವಂತಹ ವ್ಯವಸ್ಥೆಯಿರಬೇಕೆಂದು ನೀವು ಹೇಳಿದಿರಿ. ಇದನ್ನು ಇನ್ನಷ್ಟು ವಿವರಿಸಿ.

ಭಾರತದಲ್ಲಿನ ಆನೆ-ಮಾನವರ ನಾಲ್ಕು ಸಾವಿರ ವರ್ಷಗಳ ಇತಿಹಾಸ ಅನೇಕ ವಿಪರ್ಯಾಸಗಳನ್ನು ಹೊಂದಿದೆ: ಆನೆಯನ್ನು ಸೆರೆ ಹಿಡಿದು ಸೈನ್ಯದ ಭಾಗವಾಗಿಸುವುದು, ಆನೆಗಳನ್ನು ದೈವೀಕರಿಸುವ ಬೌದ್ಧ ಮತ್ತು ಹಿಂದು ಧರ್ಮದ ಕೆಲಸ, ದಂತಕ್ಕಾಗಿ ಗಂಡಾನೆಗಳ ಮಾರಣಹೋಮ, ಕೃಷಿಕರೊಂದಿಗೆ ಸಂಘರ್ಷ ಇತ್ಯಾದಿ. ಮುಘಲರ ಆಡಳಿತದ ವೇಳೆಗೆ ಸೈನ್ಯದಲ್ಲಿ ಆನೆಗಳ ಬಳಕೆ ನಿಂತಿತ್ತು. ಇದಾದ ನಂತರ ಆನೆಗಳು ಮತ್ತೊಂದು ಪಾತ್ರವನ್ನು ಪಡೆದುಕೊಂಡವು. ಬರ್ಮಾ ಮತ್ತು ಭಾರತದಲ್ಲಿ ಅವು ತೇಗದ ಮರಗಳನ್ನು ಮತ್ತಿತರ ಮರಗಳನ್ನು ಕಾಡಿನಿಂದ ಹೊರಕ್ಕೆ ಸಾಗಿಸುವ ಕಾರ್ಯಕ್ಕೆ ಬಳಕೆಯಾಗತೊಡಗಿದವು. 1972ರಲ್ಲಿ ವೈಲ್ಡ್‌ಲೈಫ್‌ (ಪ್ರೊಟೆಕ್ಷನ್‌) ಆಕ್ಟ್‌ ಜಾರಿಗೆ ಬಂದ ಮೇಲೆ, ಆನೆಗಳನ್ನು ಸೆರೆ ಹಿಡಿಯುವ ಪ್ರಕ್ರಿಯೆ ಇಳಿಮುಖವಾಯಿತು.

ಆನೆಗಳು ಕಾಡಿನಲ್ಲಿ ಮರ ಸಾಗಿಸುವ ಕಾರ್ಯ ಅಸಿಂಧುವೆಂದು ಸುಪ್ರೀಂ ಕೋರ್ಟ್‌ 1996ರಲ್ಲಿ ಘೋಷಿಸಿದ ಮೇಲೆ, ಸಾಗಾಟ ಮಾಡುತ್ತಿದ್ದ ಆನೆಗಳು ನಿರುದ್ಯೋಗಿಗಳಾದವು. ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಬಹುತೇಕ ಸಾಕಾನೆಗಳು ಅರಣ್ಯ ಇಲಾಖೆಯ ಕ್ಯಾಂಪುಗಳಲ್ಲಿ ಇದ್ದ ಕಾರಣ, ಅವುಗಳಿಗೆ ಹೊಸದೊಂದು ಕೆಲಸ ನೀಡುವುದು ಸುಲಭವಾಯಿತು- ಅವುಗಳಿಗೆ ಪ್ರವಾಸಿಗಳನ್ನು ಅರಣ್ಯದಲ್ಲಿ ಸುತ್ತಾಡಿಸುವ ಕೆಲಸಕ್ಕೆ ನೇಮಿಸಲಾಯಿತು. 1989ರಲ್ಲಿ ಥೈಲ್ಯಾಂಡ್‌ ದೇಶದಲ್ಲಿ ಭೀಕರ ಪ್ರವಾಹ ಉಂಟಾದ ಮೇಲೆ, ಇಂತಹುದೇ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು. ಆನೆಗಳನ್ನು ಮರ ಸಾಗಿಸದಂತೆ ನಿಷೇಧಿಸಲಾಯಿತು. ಇದರಿಂದ ನಿರುದ್ಯೋಗಿಗಳಾದ ಆನೆಗಳು ಅಲ್ಲಿನ ಪ್ರಮುಖ ನಗರಗಳಲ್ಲಿ ಭಿಕ್ಷೆ ಬೇಡಿ ಇಲ್ಲವೇ ಅಲ್ಲಿನ ಹೋಟೆಲ್‌ಗಳಿಗೆ ಬರುವ ಅತಿಥಿಗಳನ್ನು ಸ್ವಾಗತಿಸುವ ಕೆಲಸ ಮಾಡಿ ತಮ್ಮ ಹೊಟ್ಟೆಹೊರೆದುಕೊಂಡವು.

ಭಾರತದಲ್ಲೀಗ ಅನೇಕ ಕಾರಣಗಳಿಂದಾಗಿ, ಪ್ರವಾಸಿಗಳನ್ನು ಆನೆಗಳ ಮೇಲೆ ಸಾಗಿಸುವ ಕೆಲಸವನ್ನು ಬಹುತೇಕ ನಿಲ್ಲಿಸಲಾಗಿದೆ. ದೇವಾಲಯಗಳು ಆನೆಗಳ ಬಳಕೆಗೆ ಉತ್ಸುಕತೆಯನ್ನು ತೋರಿದರು, ಆನೆಗಳ ಸುರಕ್ಷತೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಸಂಪನ್ಮೂಲಗಳನ್ನು ಅವು ಹೊಂದಿಲ್ಲ ಅಥವಾ ಒದಗಿಸಲು ಮನಸ್ಸು ಮಾಡುವುದಿಲ್ಲ. ಸಾಮಾಜಿಕ ಜೀವಿಗಳಾಗಿರುವ ಕಾರಣಕ್ಕೆ ದೀರ್ಘ ಕಾಲ ಹೆಣ್ಣಾನೆಗಳನ್ನು ಒಂಟಿ ಇರಿಸುವುದು ಸೂಕ್ತವಾದ ಕ್ರಮವಲ್ಲ. ಅದೇ ರೀತಿಯಲ್ಲಿ ಗಂಡಾನೆಗಳನ್ನು ಹಬ್ಬಗಳ ದಿನಗಳಲ್ಲಿ ದೇವಾಲಯಗಳಲ್ಲಿ ಪ್ರದರ್ಶಿಸುವುದು ಸುರಕ್ಷಿತವೂ ಅಲ್ಲ. ಹೀಗಾಗಿ ಭಾರತದ ಸಾಕಾನೆಗಳು ತಮ್ಮ ಅಸ್ಮಿತೆಗೆ ಗಂಭೀರವಾದ ಸವಾಲನ್ನು ಎದುರಿಸುತ್ತಿವೆ. ಸಾಕಾನೆಗಳ ಕಲ್ಯಾಣವನ್ನು ನಿರ್ಲಕ್ಷಿಸಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ದೇಶದಲ್ಲಿರುವ 2,600ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಸಾಕಾನೆಗಳ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ. ಅವುಗಳನ್ನು ಸಂರಕ್ಷಣೆಯ ಸಾಧನಗಳಾಗಿ ಬಳಸುವುದು ಸೂಕ್ತವಾಗುತ್ತದೆ. ನನ್ನ ಪ್ರಕಾರ ಆನೆಗಳ ನಿರ್ವಹಣೆಯ ನಾಲ್ಕು ಆಧಾರ ಸ್ತಂಭಗಳಿವೆ: ಸೆರೆ ಹಿಡಿಯುವುದು (ವೈಜ್ಞಾನಿಕ ವಿಧಾನ), ತರಬೇತಿ (ಮಾನವೀಯ ವಿಧಾನದ ಬಳಕೆ), ಸಾಕಾಣಿಕೆ (ಆವಾಸ, ಪೌಷ್ಟಿಕಯುಕ್ತ ಆಹಾರ, ವೈದ್ಯಕೀಯ ಸೌಲಭ್ಯ), ಬಳಕೆ (ಇಂದಿನ ಜಗತ್ತಿನಲ್ಲಿ ಆಗಬಹುದಾದ ಮತ್ತು ಒಪ್ಪಬಹುದಾದ ಕೆಲಸ).

ಭಿಕ್ಷೆ ಬೇಡುತ್ತಿರುವ ಆನೆ
ಭಿಕ್ಷೆ ಬೇಡುತ್ತಿರುವ ಆನೆ

ಸಾಕುವ ಉದ್ದೇಶದಿಂದ ಕಾಡಾನೆಗಳನ್ನು ಸೆರೆ ಹಿಡಿಯುವುದು ವೈರುಧ್ಯದ ನಡೆ ಎಂದು ನಿಮಗನಿಸುವುದಿಲ್ಲವೇ?

ಖಂಡಿತ. ಕೇವಲ ಸಾಕುವ ಉದ್ದೇಶದಿಂದ ಕಾಡಾನೆಗಳನ್ನು ಸೆರೆ ಹಿಡಿಯುವುದು ವೈರುಧ್ಯದ ನಡೆಯಾಗಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಆನೆಗಳನ್ನು ನಾವೆಂದಿಗೂ ಸಾಕು ಪ್ರಾಣಿಗಳಾಗಿಸಲು ಸಾಧ್ಯವೇ ಆಗಿಲ್ಲ. ಹೆಚ್ಚೆಂದರೆ ಅವುಗಳನ್ನು ಸೆರೆ ಹಿಡಿದು, ಪಳಗಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳ ಬಳಕೆ ಮಾಡಿದ್ದೇವೆ ಅಷ್ಟೆ.

ಇದರ ಜೊತೆಗೆ ಇನ್ನೊಂದು ವಾಸ್ತವವನ್ನು ಅರಿಯಬೇಕಿದೆ. ಭಾರತದ ಅನೇಕ ಪ್ರದೇಶಗಳಲ್ಲಿ ಆನೆಯ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ- ಕೆಲವು ಪ್ರದೇಶಗಳಲ್ಲಂತೂ ಶೇ. 40-50 ಹೆಚ್ಚಳವನ್ನು ಕಂಡಿದೆ. ಕಾಡಾನೆಗಳನ್ನು ಸೆರೆ ಹಿಡಿಯುವ ಕ್ರಮವಿಲ್ಲದೇ ಹೋಗಿದ್ದಲ್ಲಿ, ಇಲ್ಲಿನ ಅರಣ್ಯಗಳಲ್ಲಿ ಇನ್ನಷ್ಟು ಗೊಂದಲಗಳು ನಿರ್ಮಾಣವಾಗುವ ಸಂದರ್ಭ ಇರುತ್ತಿತ್ತು. ಇನ್ನೂ ಅನೇಕ ಪ್ರದೇಶಗಳಲ್ಲಿ ಇದ್ದ ಕಾಡುಗಳು ಮತ್ತಷ್ಟು ನಷ್ಟವಾಗಿವೆ. ಅಸ್ಸಾಂನ ಸೋನಿಪುರದ ಕಾಡು 1990ರ ದಶಕದಲ್ಲಿ ವಿನಾಶಕ್ಕೆ ಒಳಗಾಗಿದ್ದರೆ, ಇನ್ನು ಕೆಲವು ಕಾಡುಗಳು ಗಣಿಗಾರಿಕೆಯ ಪ್ರಕ್ರಿಯೆಗೆ ಒಳಗಾಗಿ ಛಿದ್ರವಾಗಿವೆ.

ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಕಳೆದ ದಶಕಗಳಿಂದ ಮಾನವ-ಆನೆ ಸಂಘರ್ಷ ತಾರಕಕ್ಕೇರಿದೆ. ಕೆಲವು ಪ್ರದೇಶಗಳಲ್ಲಂತೂ ಸಹಿಲಾಗದ ಪರಿಸ್ಥಿತಿಯನ್ನು ಇದು ತಲುಪಿದೆ. ಅನೇಕ ಅರಣ್ಯಗಳು ಕೃಷಿ ಹೊಲಗಳಿಗೆ ಜಾಗ ಮಾಡಿಕೊಟ್ಟಿವೆ. ಇದರಿಂದಾಗಿ ಆನೆ-ಮನುಷ್ಯರಿಬ್ಬರೂ ಅಸಾಧ್ಯವಾದ ನೋವುಗಳಿಗೆ ಒಳಗಾಗುತ್ತಿದ್ದಾರೆ. ಆನೆಗಳು ಅಸಹಜ ಸಾವಿಗೆ ಈಡಾಗುತ್ತಿದ್ದರೆ, ಆನೆಯ ದಾಳಿಗೆ ಒಳಗಾಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವ ಅನೇಕ ಪ್ರಯತ್ನಗಳು ಸೋಲುಂಡಿವೆ.

ಹಾಗಾಗಿ, ಕೆಲವು ಕಾಡಾನೆಗಳನ್ನು ಸೆರೆ ಹಿಡಿಯುವುದು ಅನಿವಾರ್ಯವಾಗುತ್ತದೆ. ಮೇಲೆ ಚರ್ಚಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವವರೆಗೆ ಸೆರೆ ಹಿಡಿಯುವ ಪ್ರಕ್ರಿಯೆ ಚಾಲನೆಯಲ್ಲಿರುವುದು ಅನಿವಾರ್ಯವಾಗಿದೆ. ಕೆಲವೇ ಕೆಲವು ಆನೆಗಳನ್ನು, ಅದರಲ್ಲೂ ಗಂಡಾನೆಗಳನ್ನು ಸೆರೆ ಹಿಡಿಯುವ ಪ್ರಕ್ರಿಯೆ ಅನೇಕ ರಾಜ್ಯಗಳಲ್ಲಿ ಸದ್ಯ ಚಾಲ್ತಿಯಲ್ಲಿದೆ. ಅದೇ ರೀತಿಯಲ್ಲಿ ಸಂಪನ್ಮೂಲದ ಕೊರತೆಯಿಂದ ಸೆರೆಯಾದ ಆನೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗದ ರಾಜ್ಯಗಳು ಸಹಾ ನಮ್ಮ ದೇಶದಲ್ಲಿವೆ. ದುರಂತವೆಂದರೆ, ಸ್ವತಂತ್ರ ಭಾರತದಲ್ಲಿ ಹುಲಿಗೆ ನೀಡಿದಷ್ಟು ಆದ್ಯತೆಯನ್ನು ಆನೆಗಳ ಸಂರಕ್ಷಣೆಗೆ ನೀಡಲಾಗಿಲ್ಲವೆನ್ನುವುದು ಅತ್ಯಂತ ನೋವಿನ ವಿಚಾರವಾಗಿದೆ.

ಸಂದರ್ಶನ: ದಿವ್ಯ ಗಾಂಧಿ, ಕನ್ನಡಾನುವಾದ: ಸದಾನಂದ ಆರ್‌. ಪ್ರಕಟ: ‘ಫ್ರಂಟ್‌ಲೈನ್‌’, ಏಪ್ರಿಲ್‌ 6-19

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

Download Eedina App Android / iOS

X