ಇಂದು, 2023ರ ಜುಲೈ 16ರ ಭಾನುವಾರ, ಶೂದ್ರ ಶ್ರೀನಿವಾಸರ 'ಕಾಲದ ನೆರಳು' ಪುಸ್ತಕ ಬಿಡುಗಡೆಯಾಗುತ್ತಿದೆ. ಈ ಕೃತಿಯಲ್ಲಿ ಲೇಖಕರು ಲಂಕೇಶ್, ಕೃಷ್ಣ ಆಲನಹಳ್ಳಿ, ಕೆ ಮರುಳಸಿದ್ದಪ್ಪರಂಥ ಕನ್ನಡ ಬರಹಗಾರರಿಂದ ಹಿಡಿದು ನೋಮ್ ಚಾಮ್ಸ್ಕಿ, ಕುಲ್‌ದೀಪ್ ನಯ್ಯರ್, ಮೇಧಾ ಪಾಟ್ಕರ್ ಹೀಗೆ ದೇಶ ವಿದೇಶಗಳ ಬರಹಗಾರರು, ಹೋರಾಟಗಾರರು, ಸಂಗೀತಗಾರರ ಬಗ್ಗೆ ವೈವಿಧ್ಯಮಯವಾದ ಚಿತ್ರಣ ನೀಡಿದ್ದಾರೆ. ತಮ್ಮ ಕೈಗಳನ್ನು ದಶದಿಕ್ಕುಗಳಿಗೆ ಕೈಚಾಚಿ ಸಿಕ್ಕಷ್ಟನ್ನೂ ತಮ್ಮ ತೆಕ್ಕೆಗೆ ಸೆಳೆದುಕೊಂಡು ಅದನ್ನು ತಮ್ಮದೇ ಸ್ವೋಪಜ್ಞ ಶೈಲಿಯಲ್ಲಿ ಮಂಡಿಸಿದ್ದಾರೆ. ಈ ಕೃತಿಯಿಂದ ಕಿ.ರಂ.ಅವರ ಕುರಿತ ಲೇಖನ ಇಲ್ಲಿದೆ. ಈ ಲೇಖನವು ಕಿ.ರಂ. ಅವರ ಬಗ್ಗೆ ಹೇಳುತ್ತಲೇ ಒಂದು ಕಾಲಘಟ್ಟದ ಸಾಂಸ್ಕೃತಿಕ ಪರಿಸರವನ್ನು ನಮ್ಮ ಮುಂದಿಡುವ ಪರಿ ಅನನ್ಯವಾಗಿದೆ.
ಕಿ.ರಂ. ನಾಗರಾಜ ಎಂದಾಕ್ಷಣ ಹತ್ತಾರು ಸಾಹಿತ್ಯಕ, ಸಾಂಸ್ಕೃತಿಕ, ಕಲಾತ್ಮಕ ರಾಗಗಳು ಧುತ್ತನೆ ಏಕಕಾಲದಲ್ಲಿ ಗುನುಗುನಿಸತೊಡಗುವವು. ಪ್ರತಿ ದಿವಸ ಒಂದಲ್ಲ ಒಂದು ಕಾರಣಕ್ಕಾಗಿ ಮುಖಾಮುಖಿಯಾಗುವ ಈ ಅಮರ ವ್ಯಕ್ತಿತ್ವದ ಹಿಂದಿರುವ ಗಾಢ ಚೈತನ್ಯ ಎಂಥದ್ದು ಎಂಬುದನ್ನು ಕೇಳಿಕೊಳ್ಳುತ್ತಲೇ ಇರುವೆ. ಸುಮಾರು ನಾಲ್ಕು ದಶಕಗಳಿಗೂ ಮೇಲ್ಪಟ್ಟು ಅವರ ಮನೆ ಸಂಗೀತ ಲೋಕವನ್ನು ವಿಸ್ತರಿಸಿದ ಬೈಠಕ್ ಕೇಂದ್ರವಾಗಿತ್ತು. ಇಂದೂ ವಾರಕ್ಕೆರಡು ಬಾರಿಯಾದರೂ ಪಂಡಿತ್ ಕುಮಾರ ಗಂಧರ್ವ ಅವರ `ಬಸಂತ್’ ರಾಗದ ‘ಸಪನೆ ಮೇ ಮಿಲತಿ ತೋಹೆ’ಯನ್ನು ಕೇಳುವಾಗ, ಕಿ.ರಂ. ಅವರು ಒಂದೇ ಸಮನೇ ಸಿಗರೇಟು ಅಥವಾ ಬೀಡಿ ಸೇದಿ ಬಿಡುವ ಹೊಗೆಯ ನಡುವೆ ಪಂಡಿತ್ ಗಂಧರ್ವ ಅವರ ವಿಶಿಷ್ಟ ರೀತಿಯ ಆಲಾಪನೆ ಎಂತೆಂಥದೋ ಮಾನಸಿಕ ಸ್ಥಿತ್ಯಂತರಗಳನ್ನು ದಾಟಿ ಹೊಸ ಆಯಾಮವನ್ನು ಪಡೆಯುತ್ತಿರುತ್ತದೆ. ಅವರು ಸಾಹಿತ್ಯಲೋಕದ ಮೇರು ಪರ್ವತದಂತೆ. ಅದರ ಮಗ್ಗಲಲ್ಲಿಯೇ ಸ್ಪಂದಿಸುವಂತೆ ಸಂಗೀತ ಸಾಮ್ರಾಜ್ಯದ ಮಹಾನುಭಾವರೆಲ್ಲ ಗರಿಗೆದರಿ ನಿಲ್ಲುವರು. ಈ ದೃಷ್ಟಿಯಿಂದ ನನ್ನ ಅಚ್ಚುಮೆಚ್ಚಿನ ಪಂಡಿತ್ ಭೀಮಸೇನ್ ಜೋಶಿ, ಪಂಡಿತ್ ರವಿಶಂಕರ್, ಉಸ್ತಾದ್ ಬಡೇ ಗುಲಾಂ ಅಲಿಖಾನ್, ಉಸ್ತಾದ್ ರಷೀದ್ ಖಾನ್, ಉಸ್ತಾದ್ ವಿಲಾಯತ್ ಖಾನ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಉಸ್ತಾದ್ ಅಲಿ ಅಕ್ಬರ್ ಖಾನ್, ಪಂಡಿತ ಮಲ್ಲಿಕಾರ್ಜುನ ಮನ್ಸೂರ್, ವಿದುಷಿ ಗಂಗೂಬಾಯಿ ಹಾನಗಲ್, ರೋಷನಾ ಆರ್ ಬೇಗಂ ಮುಂತಾದವರು ಹಾಡುತ್ತಲೇ ಇದ್ದಾರೆ ಆಲಿಸಿ ಎಂದು. ಹಾಗೆ ನೋಡಿದರೆ ನನ್ನ ಸಂಗೀತಲೋಕ ತೆರೆದುಕೊಂಡಿದ್ದು ಕರ್ನಾಟಕ ಸಂಗೀತದ ಮೂಲಕ. ದೊಡ್ಡಪ್ಪ ಎರಡು ಬಾರಿ ನನ್ನ ಕೈಹಿಡಿದು ತ್ಯಾಗರಾಜರ ಆರಾಧನೆಗೆ ತಿರುವೈಯಾರ್‌ಗೆ ಕರೆದುಕೊಂಡು ಹೋಗದಿದ್ದರೆ, ಪ್ರತಿ ಶನಿವಾರ ರಾತ್ರಿ ಒಂಬತ್ತೂವರೆಯಿಂದ ಹನ್ನೊಂದು ಗಂಟೆಯವರೆವಿಗೆ ಪ್ರಸಾರವಾಗುವ ರೇಡಿಯೋ ರಾಷ್ಟ್ರೀಯ ಸಂಗೀತ ಕಾರ್ಯಕ್ರಮವನ್ನು ಒತ್ತಾಯಪೂರ್ವಕವಾಗಿ ಕೇಳಿಸಿಕೊಳ್ಳುವ ಸೌಭಾಗ್ಯ ನನ್ನ ಪಾಲಿಗೆ ಬರುತ್ತಿರಲಿಲ್ಲ. ದೊಡ್ಡಪ್ಪ ಗುರು ಮುನಿಸ್ವಾಮಿರೆಡ್ಡಿ ಸಂಗೀತವನ್ನು ಕೇಳುತ್ತಲೇ ನಿದ್ರೆಗೆ ಹೋಗಿಬಿಡುತ್ತಿದ್ದರು. ಆಗ ನಾನು ತೂಕಡಿಸುತ್ತಲೇ ಸಂಗೀತ ಕೇಳಿ, ರಾಷ್ಟ್ರಗೀತೆ ಬಂದಾಗ ಭಯಭಕ್ತಿಯಿಂದ ಎದ್ದುನಿಂತು ಸೆಲ್ಯೂಟ್ ಅರ್ಪಿಸುವುದರ ಮೂಲಕ ರೇಡಿಯೋ ಆಫ್ ಮಾಡುತ್ತಿದೆ. ‘ನ್ಯಾಷನಲ್ ಎರೋ’ ಎಂಬ ರೇಡಿಯೋ ಪೆಟ್ಟಿಗೆಯಿಂದ ಎಂ.ಎಸ್. ಸುಬ್ಬುಲಕ್ಷ್ಮಿ, ಚೆಂಬೈ ವೈದ್ಯನಾಥ ಭಾಗವತ, ಎಂ.ಡಿ. ರಾಮನಾಥ್, ಜಿ.ಎನ್. ಬಾಲಸುಬ್ರಹ್ಮಣ್ಯ, ಡಿ.ಕೆ. ಪಟ್ಟಮ್ಮಾಳ್, ಎಂ.ಎಲ್.ವಸಂತ ಕುಮಾರಿ ಮುಂತಾದ ಆ ಕಾಲಘಟ್ಟದ ದಿಗ್ಗಜರ ನಾನಾ ಸಂಗತಿಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲು ಸಾಧ್ಯವಾಯಿತು. ಈಗಲೂ ಆ ರೇಡಿಯೋ ಪೆಟ್ಟಿಗೆ ಒಂದು ರೂಪಕವಾಗಿ ಆಕಾರ ಪಡೆಯುತ್ತಲೇ ಇದೆ; ಷೇಕ್ ಚಿನ್ನ ಮೌಲಾ ಸಾಹೇಬ್, ರಾಜರತ್ನಂ ಪಿಳ್ಳೆ ಅಂಥವರ ನಾದಸ್ವರ, ಟಿ.ಆರ್. ಮಹಾಲಿಂಗು ಮತ್ತು ಪನ್ನಾಲಾಲ್ ಘೋಷ್ ಅವರ ಕೊಳಲಿನ ಮಹೋನ್ನತ ದನಿಯನ್ನು ಈಗಲೂ ಆಲಿಸುತ್ತಲೇ ಸಂಭ್ರಮದ ದಿನಗಳು ಮುಂದುವರೆಯುತ್ತಲೇ ಬಂದಿವೆ.
ಹಾಗೆ ನೋಡಿದರೆ ಕಿ.ರಂ. ಅವರ ಜೊತೆಯಲ್ಲಿ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮವನ್ನು ಎರಡು ಕಾರಣಗಳಿಗಾಗಿ ಮರೆಯಲು ಸಾಧ್ಯವಿಲ್ಲ, ಒಂದು ಷೇಕ್ ಚಿನ್ನ ಮೌಲಾ ಸಾಹೇಬ್ ಅವರ ನಾದಸ್ವರವನ್ನು ಕಿ.ರಂ. ಅವರ ಜೊತೆಯಲ್ಲಿ ಕೇಳಿಸಿಕೊಂಡಿದ್ದು; ಎರಡನೆಯದು, ನಾನು ಎರಡನೆಯ ಆನರ್ಸ್ ವಿದ್ಯಾರ್ಥಿಯಾಗಿದ್ದೆ. ಆ ನಾದಸ್ವರವನ್ನು ಕೇಳಿದ ಸಂಭ್ರಮದಲ್ಲಿ ಮಾರನೆಯ ದಿವಸವಿದ್ದ ಎರಡನೆಯ ಆನರ್ಸ್ ಪರೀಕ್ಷೆಗೆ ಹೋಗಲಿಲ್ಲ. ಸಂಸ್ಕೃತ ಮೈನರ್ ವಿಷಯವಾಗಿತ್ತು. ನಾನು ಪರೀಕ್ಷೆಗೆ ಚಕ್ಕರ್ ಹಾಕಿರುವುದು ಬಹಳ ದಿವಸಗಳ ನಂತರ ಕಿ.ರಂ. ಅವರಿಗೆ ಗೊತ್ತಾಯಿತು. ಅದಕ್ಕೆ “ಪರವಾಗಿಲ್ಲಯ್ಯ ಬಹಳ ದೊಡ್ಡ ಮನುಷ್ಯ ಇದ್ದೀಯ” ಎಂದಿದ್ದರು. ಈ ನೆಲೆಯಲ್ಲಿ ಬೆಂಗಳೂರಿನಲ್ಲಿ ಎಲ್ಲೆಲ್ಲೋ ನಡೆಯುವ ರಾಮೋತ್ಸವದ ಕಾರ್ಯಕ್ರಮಗಳಿಗೆ ಕರೆದೊಯ್ದಿದ್ದಾರೆ. ಅವರಿಗೆ ಕರ್ನಾಟಕ ಸಂಗೀತಕ್ಕಿಂತ ಹಿಂದೂಸ್ತಾನಿ ಸಂಗೀತವೆಂದರೆ ಎಂಥದೋ ಅಪೂರ್ವ ಒಲವು. ಅದಕ್ಕೆ ಒಮ್ಮೆ ಅವರನ್ನು ಕೇಳಿದ್ದಕ್ಕೆ ತಮ್ಮ ಮಾಮೂಲಿ ಸಿಗರೇಟಿನ ಹೊಗೆಯ ಮಧ್ಯೆ ‘ಒಮ್ಮೆ ಬಿಡುವು ಮಾಡಿಕೊಂಡು ಕೂತುಕೋ ಹೇಳ್ತೀನಿ. ಶೂದ್ರಕ್ಕೆ ಲೇಖನವಾಗುತ್ತೆ’ ಎಂದಿದ್ದರು. ಆ ನೆನಪಿನ ಬಿಡುವು ಬರಲೇ ಇಲ್ಲ. ಬಂದಿದ್ದರೂ ಮುಂದೂಡುತ್ತಿದ್ದರು. ಅವರು ಮನೆ ಬದಲಾಯಿಸಿದಂತೆಲ್ಲ, ಅಲ್ಲಿಯ ಸಂಗೀತದ ಬೈಠಕ್‌ಗಳು ಬದಲಾಗಲೇ ಇಲ್ಲ. ಹೊಸ ಹೊಸ ಕ್ಯಾಸೆಟ್‌ಗಳು, ಸಿಡಿಗಳು ಬಂದಾಗಲೆಲ್ಲ ಅದರ ನಾದ ಸವಿಯನ್ನು ನಮಗುಣ್ಣಿಸುತ್ತಿದ್ದರು. ಯಾವ ಕಲಾವಿದರ ಬಗ್ಗೆಯೂ ಏನೂ ಹೇಳುತ್ತಿರಲಿಲ್ಲ. “ಕೇಳಿಸಿಕೊಳ್ಳಿರಯ್ಯ” ಎಂಬುದು ಮಾತ್ರ ಮಹತ್ವಪೂರ್ಣ ಧ್ವನಿಯಾಗಿರುತ್ತಿತ್ತು. ಯಾವುದನ್ನೇ ಆಗಲಿ ಕಿವಿಯ ಮೇಲೆ ಬೀಳಿಸಿಕೊಳ್ಳಬೇಕು ಎಂಬ ಅವರ ಬೀಜಮಂತ್ರವನ್ನು ಹೇಗೆ ಮರೆಯಲು ಸಾಧ್ಯ.
ನ್ಯಾಷನಲ್ ಕಾಲೇಜಿನಲ್ಲಿ ಅವರ ಸಹೋದ್ಯೋಗಿಯಾಗಿದ್ದ ವೆಂಕಟನಾರಾಯಣ್ ಎಂಬ ಗಣಿತದ ಮೇಷ್ಟ್ರು ಎಂಥ ಜೀನಿಯಸ್; ಅವರು ಪಂಕಜ್ ಮಲ್ಲಿಕ್, ಮನ್ನಾ ಡೆ, ಸೈಗಲ್ ಅವರ ಹಾಡುಗಳನ್ನು ಗುನುಗುನಿಸುತ್ತಿದ್ದುದೇ ಮನಮೋಹಕವಾಗಿರುತ್ತಿತ್ತು. ಅವರು ನಮ್ಮನ್ನು ವಿಸ್ಮಯ ಲೋಕಕ್ಕೆ ಕರೆದೊಯ್ಯುತ್ತಿದ್ದರು. ಒಂದು ದಶಕದ ಹಿಂದೆ ಅವರು ಕಾಲವಾದಾಗ ಕಿ.ರಂ. ಅವರು ಭಾವುಕರಾಗಿ ನುಡಿದಿದ್ದರು. ಈಗಲೂ ನೆನಪಿದೆ, ಒಂದು ಸಂಜೆ ನಾವು ಮೂರು ಮಂದಿಯೂ ಶಿವಾಜಿನಗರ ಕಡೆಯ ಕೆಲವು ಅಂಗಡಿಗಳಿಗೆ ಹೋಗಿ ಹಳೆಯ ಗ್ರಾಮಾಫೋನ್‌ಗಳ ವಿಧವಿಧವಾದ ಮಾದರಿಗಳನ್ನು ನೋಡಿ ಸಂಭ್ರಮಪಟ್ಟಿದ್ದೆವು. ಈ ದೃಷ್ಟಿಯಿಂದ ನನ್ನ ಬಾಲ್ಯ ಕಾಲದಲ್ಲಿ ರೇಡಿಯೋ ಬರುವುದಕ್ಕೆ ಮುಂಚೆ ನಮ್ಮ ಮನೆಗೆ ಪ್ರವೇಶ ಮಾಡಿದ್ದು ಗ್ರಾಮಾಫೋನ್. ಅದರಲ್ಲಿ ಕೊಟ್ಟೂರಪ್ಪನವರ ‘ದಾನಶೂರ ಕರ್ಣ’ ನಾಟಕದ ರೆಕಾರ್ಡಿಂಗ್ ಕೇಳಲು ಎಷ್ಟು ಖುಷಿಪಡುತ್ತಿದ್ದೆವು. ಊರಿನ ಬೇರೆ ಬೇರೆ ವಯೋವೃದ್ಧ ಸ್ತ್ರೀ-ಪುರುಷರು ಕೇಳಿ ಆನಂದಿಸಲು ಬರುತ್ತಿದ್ದರು. ಕಿ.ರಂ. ಅವರ ಬಳಿ ಇದ್ದ ಅತ್ಯಂತ ಹಳೆಯ ಗ್ರಾಮಾಫೋನ್ ಸಲಕರಣೆಯನ್ನು ನೋಡಿದಾಗಲೆಲ್ಲ ಬಾಲ್ಯದ ನೆನಪುಗಳಲ್ಲಿ ತೇಲಾಡುತ್ತಿದ್ದೆ.
ಈ ಸುದ್ದಿ ಓದಿದ್ದೀರಾ: ನೆನಪು | ಮೌನಕ್ರಾಂತಿಯ ಹರಿಕಾರ ರಾಗಿತಜ್ಞ ಲಕ್ಷ್ಮಣಯ್ಯ: ಕೆ. ಪುಟ್ಟಸ್ವಾಮಿ ಬರೆಹ
ಇದೆಲ್ಲ ಹಿನ್ನೆಲೆಯನ್ನು ಅರಿತ ಕಿ.ರಂ. ಅವರು ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದ ಬಳಿಯಲ್ಲಿ ನನಗೊಂದು ಅತ್ಯುತ್ತಮ ರೇಡಿಯೋ ಕೊಡಿಸಿದ್ದರು ಹತ್ತು ಕಂತುಗಳಲ್ಲಿ. ಮತ್ತೆ ಇನ್ನೆರಡು ವರ್ಷ ಹೋದ ಮೇಲೆ ಅಲ್ಲಿಯೇ ಟಿವಿಯನ್ನು ಕೊಡಿಸಿದ್ದರು. ಅವರಿಗೆ ಕಾವ್ಯದ ಲೋಕ ಮತ್ತು ಸಂಗೀತದ ಲೋಕ ಬೇರೆ ಬೇರೆಯಾಗಿರಲಿಲ್ಲ. ಒಮ್ಮೆ ಹೀಗೆಯೇ ಮಾತಿನ ಮಧ್ಯೆ “ಕಿ.ರಂ. ಸರ್, ಅಮ್ಮದ್ ಅಲಿ ಖಾನ್ ಅವರ ತಂದೆಗೆ ಪದ್ಮವಿಭೂಷಣ ಕೊಡುವಾಗ, ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು “ನಿಮಗೆ ಏನಾದರೂ ತೊಂದರೆ ಇದ್ದರೆ ತಿಳಿಸಿ” ಎಂದಾಗ ಉಸ್ತಾದ್ ಹಾಫಿಜ್ ಅಲಿಖಾನ್ ಅವರು ನಮ್ರತೆಯಿಂದ “ನನಗೇನು ಬೇಡ, ಆದರೆ ಒಂದು ವಿನಂತಿ; ‘ದರ್ಬಾರಿ ಕಾನಡ’ ರಾಗವು ಹದಗೆಡುತ್ತಿದೆ. ಅದನ್ನು ಕಾಪಾಡಿ” ಎಂದಿದ್ದರು ಎಂದೆ. ಅದಕ್ಕೆ ಅವರು ಗಂಭೀರವಾಗಿಯೇ “ಶೂದ್ರ, ಈ ಕಾರಣಕ್ಕಾಗಿಯೇ ನಾವು ಅವರನ್ನು ಸೇರಿಸಿಕೊಳ್ಳುವುದು ಮತ್ತು ಅವರ ಸಂಗೀತವನ್ನು ಕೇಳುವುದು” ಎಂದಿದ್ದರು. ಅದರ ಮಾರನೆಯ ದಿವಸ ನಾವು ಅಮ್ಮದ್ ಅಲಿ ಖಾನ್ ಅವರ ಸರೋದ್ ವಾದನಕ್ಕೆ ಹೋಗಿದ್ದೆವು; ಹಾಗೆಯೇ ಪಂಡಿತ್ ಭೀಮಸೇನ್ ಜೋಷಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಕಾರ್ಯಕ್ರಮಕ್ಕೆ; ಕಿ.ರಂ. ಒಮ್ಮೊಮ್ಮೆ ಈ ಪ್ರಮಾಣದ ತಾದಾತ್ಮತೆಯನ್ನು ಎಲ್ಲದರ ಬಗ್ಗೆ ಹೇಗೆ ರೂಢಿಸಿಕೊಂಡರು ಎಂದು ಚಕಿತಗೊಂಡಿದ್ದೇನೆ. ಏನೇನೂ ಮಾತುಕತೆಯಿಲ್ಲದೆ ನೂರಾರು ಗಂಟೆ ಸಂಗೀತವನ್ನು ಕೇಳಿರಬಹುದು. ಒಬ್ಬೊಬ್ಬ ಕಲಾವಿದನ ಬೇರೆ ಬೇರೆ ಸಿಡಿಗಳು ಬಂದಾಗಲೆಲ್ಲ ಅವು ಕಿ.ರಂ. ಅವರ ಮನೆ ಸೇರುತ್ತಿದ್ದವು. ಅದೇ ರೀತಿಯಲ್ಲಿ ಅಮೂಲ್ಯ ಪುಸ್ತಕಗಳು. ಹೀಗೆ ಬರೆಯುವ ಕಾಲಕ್ಕೆ, ಆ ಅಪೂರ್ವ ಪುಸ್ತಕಗಳು ಮತ್ತು ಕ್ಯಾಸೆಟ್‌ಗಳು ಹಾಗೂ ಸಿಡಿಗಳು ಏನಾಗಿರಬಹುದು ಎಂಬ ವಿಷಾದದ ಧ್ವನಿಯು ಅಂತರಂಗದಲ್ಲಿ ಪಿಸುಗುಡುತ್ತಿದೆ. ಇಂಥದೇ ಆತಂಕದ ನುಡಿಯನ್ನು ಒಮ್ಮೆ ಖ್ಯಾತ ಭಾಷಶಾಸ್ತ್ರಜ್ಞರು ಮತ್ತು ಕವಿಯಾದ ಎಚ್.ಎಸ್. ಬಿಳಿಗಿರಿಯವರು ವ್ಯಕ್ತಪಡಿಸಿದ್ದರು. ಅಂದು ಸಂಗೀತ ಮತ್ತು ಸಾಹಿತ್ಯ ಕುರಿತು ಮಾತುಕತೆಯಲ್ಲಿ ತೊಡಗಿದ್ದಾಗ ಬಿಳಿಗಿರಿಯವರು “ನನ್ನ ಶ್ರೀಮತಿಯವರು ನಿಧನರಾದ ಮೇಲೆ ನಾನು ಒಂಟಿಯಾಗಿಬಿಟ್ಟಿದ್ದೇನೆ. ಆದರೆ ಅವಳು ನುಡಿಸುತ್ತಿದ್ದ ವೀಣೆಯ ಧ್ವನಿಯು ಮನೆಯ ತುಂಬ ತುಂಬಿಕೊಂಡಿದೆ. ನನ್ನ ಒಂಟಿತನ ಮತ್ತಷ್ಟು ತೀವ್ರವಾಗುತ್ತಿದೆ. ಇದನ್ನು ಯಾವ ವಿಧವಾದ ಗ್ರಹಿಕೆಯಿಂದ ಸ್ವೀಕರಿಸಲಿ ಅನ್ನಿಸುತ್ತಿದೆ” ಎಂದು ಹೇಳುತ್ತಲೇ ಕಣ್ಣಲ್ಲಿ ನೀರು ತುಂಬಿಕೊಂಡು, ಅವರ ಶ್ರೀಮತಿಯವರು ನುಡಿಸಿರುವ ಕ್ಯಾಸೆಟ್ಟನ್ನು ನನಗೆ ಕೊಟ್ಟಿದ್ದರು. ಆಗ ಅವರ ಮುಖದಲ್ಲಿ ಗಾಢವಾಗಿದ್ದ ವ್ಯಥೆಯನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂಬ ಭಾವನೆ ದಟ್ಟವಾಗತೊಡಗಿತ್ತು. ಹಾಗೆ ನೋಡಿದರೆ ಇದಕ್ಕಿಂತ ಮೊದಲು ಒಂದು ಸಂಜೆ ಶಂಕರ ಮೊಕಾಶಿ ಪುಣೇಕರ, ಬಿಳಿಗಿರಿ, ಕಿ.ರಂ. ಅವರ ಜೊತೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ನಡೆದ ಒಂದು ದೀರ್ಘ ಸಂವಾದವನ್ನು ಮರೆಯಲು ಸಾಧ್ಯವೇ ಇಲ್ಲ. ಮೊಕಾಶಿಯವರು ಎಷ್ಟು ದೊಡ್ಡ ಲೇಖಕರಾಗಿದ್ದರೋ, ಅಷ್ಟೇ ಸಂಗೀತದ ಬಗ್ಗೆ ಅರಿವನ್ನು ಬೆಳೆಸಿಕೊಂಡಿದ್ದರು.
‘ಶೂದ್ರ ಸಾಹಿತ್ಯ ಪತ್ರಿಕೆಯ ಹದಿನೈದನೆಯ ವರ್ಷದ ಕಾರ್ಯಕ್ರಮದ ಮೂರನೆಯ ದಿವಸದ ಸಮಾರೋಪಕ್ಕೆ ಧಾರವಾಡದಿಂದ ಉಸ್ತಾದ್ ಬಾಲೇಖಾನ್ ಅವರು ಬಂದಿದ್ದರು. ಒಂದು ದೃಷ್ಟಿಯಿಂದ ಇದನ್ನು ವ್ಯವಸ್ಥೆ ಮಾಡಿಕೊಟ್ಟವರು ಮೊಕಾಶಿಯವರು ಮತ್ತು ಕಿ.ರಂ. ಅಂದು ನಮ್ಮ ಬಹುಪಾಲು ಹಿರಿಯ ಲೇಖಕರ ಮುಂದೆ ಮೊಕಾಶಿಯವರು ಉಸ್ತಾದ್ ಬಾಲೇಖಾನ್ ಅವರನ್ನು ಪರಿಚಯಿಸುತ್ತಲೇ ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು ಉತ್ತರ ಕರ್ನಾಟಕದ ಸಂಗೀತ ಲೋಕವನ್ನು ಮಾರ್ಮಿಕವಾದ ಅವಲೋಕನಕ್ಕೊಳಪಡಿಸಿದ್ದರು. ಇದಕ್ಕೆ ಲಂಕೇಶ್ ಅವರು ಸಂಭ್ರಮಪಟ್ಟು ಪ್ರತ್ಯೇಕವಾಗಿ ಒಂದು ಊಟದ ಪಾರ್ಟಿಯನ್ನೇ ಎಲ್ಲರಿಗೂ ವ್ಯವಸ್ಥೆ ಮಾಡಿದ್ದರು. ಇದಾದ ನಂತರ ಕಿ.ರಂ. ಅವರ ಜೊತೆಯಲ್ಲಿ ಬಾಲೇಖಾನ್ ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿರುವೆ. ಉಸ್ತಾದ್ ಖಾನ್ ಅವರು ಬೆಂಗಳೂರಿನ ನರಸಿಂಹರಾಜ ಕಾಲೋನಿಯ ಒಂದು ಮನೆಯಲ್ಲಿ ಪ್ರತಿ ಭಾನುವಾರ ಕೆಲವರಿಗೆ ಸಿತಾರ್ ಕಲಿಸಲು ಧಾರವಾಡದಿಂದ ಬರುತ್ತಿದ್ದರು. ಆಗ ಒಂದಷ್ಟು ಸಮಯ ಚರ್ಚೆಯಾಗುತ್ತಿದ್ದುದು, ಸಂಗೀತ ಲೋಕದ ಹೊಸ ಹೊಸ ಆಯಾಮಗಳನ್ನು ಕುರಿತು. ಇದೇ ರೀತಿಯ ಗಂಭೀರ ಚರ್ಚೆ ಮತ್ತು ಸಂವಾದ ಪಂಡಿತ್ ರಾಜೀವ್ ತಾರಾನಾಥರ ಜೊತೆ ಕೂತಾಗಲೆಲ್ಲ ಆಗಿದೆ. ಅವರಂತೂ ಒಬ್ಬ ಪ್ರವಾದಿಯ ರೀತಿಯಲ್ಲಿ ಸಂಗೀತ ಜಗತ್ತಿನ ಒಳನೋಟಗಳನ್ನು ಮುಂದಿಡುತ್ತಿದ್ದರು. ಅವುಗಳನ್ನು ಗ್ರಹಿಸಿಕೊಳ್ಳಲು ಎಷ್ಟೋ ದಿವಸ ಬೇಕಾಗುತ್ತಿತ್ತು. ನನ್ನ ಅರಿವಿನ ಮಟ್ಟಿಗೆ ಪಂಡಿತ್ ರಾಜೀವ್ ತಾರಾನಾಥರು ಬಹುದೊಡ್ಡ ಸರೋದ್ ವಾದನದ ಕಲಾವಿದರಾಗಿ, ಸಂಗೀತದ ಅರಿವಿನ ಉತ್ತುಂಗತೆಯಲ್ಲಿ ಇರುವಂಥವರು. ಈ ನೆಲೆಯಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಮತ್ತು ಯು.ಆರ್. ಅನಂತಮೂರ್ತಿಯವರ ನಡುವಿನ ‘ಸಂಗೀತ ಹಾಗೂ ಸಾಹಿತ್ಯ’ ಕುರಿತ ಸಂವಾದ ಚಾರಿತ್ರಿಕವಾದದ್ದು, ಕಿ.ರಂ. ಅವರು ಎಲ್ಲಾ ಕಡೆ ಸಮಯ ಸಿಕ್ಕಿದಾಗಲೆಲ್ಲ ಇದನ್ನು ಉಲ್ಲೇಖಿಸುತ್ತಲೇ ಇದ್ದರು. ಯಾಕೆಂದರೆ, ಒಂದೊಂದು ಸೃಜನಶೀಲತೆಯ ಹಿಂದಿರುವ ಆಂತರಿಕ ಸಂಬಂಧ ಮಹತ್ವಪೂರ್ಣವಾದದ್ದು. ಈ ಸಂವಾದದ ಮಧ್ಯೆಯೇ ವಿವಿಧ ಘರಾನೆಗಳ ವೈವಿಧ್ಯತೆ ಹೇಗಿರುತ್ತದೆಂಬುದನ್ನು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಹಾಡಿ ತೋರಿಸಿದ್ದನ್ನು ಉಲ್ಲೇಖಿಸಿದ್ದರು. ಜೊತೆಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಹಾಡಿರುವ ಕ್ಯಾಸೆಟ್ಟನ್ನು ನನಗೆ ಹುಡುಕಿ ತಂದು ಕೊಟ್ಟಿದ್ದರು. ಇಂಥದರ ಹಿಂದಿರುವ ಕಳಕಳಿ ಎಂಥದ್ದು ಎಂದು ಮತ್ತೆ ಮತ್ತೆ ಕೇಳಿಕೊಂಡಿರುವೆ. ಅವರ ಬದುಕಿನ ಕೊನೆಯ ನಾಲೈದು ವರ್ಷಗಳಲ್ಲಿ, ಸಂಗೀತಕ್ಕಾಗಿಯೇ ಮೀಸಲಾಗಿದ್ದ ‘ಯುನಿವರ್ಸಲ್ ಚಾನೆಲ್’ ಅನ್ನು ಅಳವಡಿಸಿಕೊಂಡಿದ್ದರು. ಅದರಲ್ಲಿ ಘಟಾನುಘಟಿಗಳ ವೈವಿಧ್ಯಮಯ ಸಂಗೀತ ಲೋಕದಲ್ಲಿ ನಾವೂ ತೇಲಾಡುವಂತೆ ಮಾಡುತ್ತಿದ್ದರು. ಎಷ್ಟೋ ಬಾರಿ ಏನೇನೂ ಮಾತಾಡದೆ ಕೇವಲ ಸಂಗೀತವನ್ನು ಕೇಳಿಸಿಕೊಂಡು ಹೊರಗೆ ಬಂದಿದ್ದೇವೆ.
ಈ ಸುದ್ದಿ ಓದಿದ್ದೀರಾ: ಏಕರೂಪ ನಾಗರಿಕ ಸಂಹಿತೆ; ಭಾರತದ ಬಹುತ್ವಕ್ಕೆ ಮಾರಕ
ಒಮ್ಮೆ ಡಿ.ಆರ್. ನಾಗರಾಜನನ್ನು ಮತ್ತು ನನ್ನನ್ನು ಕರೆದರು. ಒಂದೆರಡು ಗಂಟೆ ನಾವು ಎಂತೆಂಥದೋ ಅಪೂರ್ವ ಕ್ಷಣಗಳಲ್ಲಿರುವಾಗ ಇಬ್ಬರಿಗೂ ಒಂದೊಂದು ಕ್ಯಾಸೆಟ್ ಕೊಟ್ಟರು. ಅದು ಮಲ್ಲಿಕಾರ್ಜುನ ಮನ್ಸೂರ್ ಅವರ ಪ್ರಾರಂಭಿಕ ವಚನ ಗಾಯನದ ಕ್ಯಾಸೆಟ್. ಈ ನೆಲೆಯಲ್ಲಿ ಕೇಳಿಸಿಕೊಳ್ಳುವ ಮನಸ್ಥಿತಿಯನ್ನು ಶ್ರೀಮಂತಗೊಳಿಸುತ್ತಲೇ ಹೋದರು. ಅವರಿಗೆ ಎಲ್ಲದರ ಬಗ್ಗೆ ಕುತೂಹಲ, ತಾದಾತ್ಮತೆ. ಅದು ಹೀಗೆಯೇ ಎಂದು ವ್ಯಾಖ್ಯಾನಕ್ಕೆ ನಿಲುಕದಂಥದ್ದು. ಕಾವ್ಯ ಮತ್ತು ಸಂಗೀತದ ಬಳುವಳಿಯಾಗಿಯೇ ಬಂದ ‘ಕಾವ್ಯ ಶಿವರಾತ್ರಿ’ಯಲ್ಲಿ ‘ಮಲೆ ಮಾದೇಶ್ವರ ಮತ್ತು ಮಂಟೇಸ್ವಾಮಿ’ ಕಥಾ ಪ್ರಸಂಗಗಳಿಗೆ ಹೊಸ ಹೊಸ ದೇಸಿ ಆಯಾಮವನ್ನೇ ತಂದುಕೊಟ್ಟರು. ಆಗ ಎಂತೆಂಥ ಗ್ರಾಮೀಣ ಪ್ರದೇಶದ ಅದ್ಭುತ ಪ್ರತಿಭೆಗಳನ್ನು ಪರಿಚಯ ಮಾಡಿಕೊಡುತ್ತ ಹೋದರು. ಅವರು ಕಾವ್ಯಲೋಕ ಮತ್ತು ಸಂಗೀತ ಲೋಕದ ಬುಗ್ಗೆಯಂತಿದ್ದರು. ನೋಟ ಮತ್ತು ತಂಪನ್ನು ಏಕಕಾಲದಲ್ಲಿ ಅನುಭವಿಸುವಂತೆ ಮಾಡಿಟ್ಟು ಹೋದರು. ಇದರ ಜೊತೆಗೆ ಅವರಿಗೆ ಗಮಕದ ಬಗ್ಗೆ ಅಗಾಧವಾದ ಒಲವಿತ್ತು. ಎಲ್ಲೆಲ್ಲೋ ಮೂಲೆಯಲ್ಲಿ ಅನಾಥರಾಗಿದ್ದ ಗಮಕ ಕಲಾವಿದರನ್ನು ಹುಡುಕಿಕೊಂಡು ಹೋಗಿ, ಅವರ ಮುಂದೆ ನಶ್ಯ ಮೂಗಿಗೇರಿಸಿಕೊಂಡು, ಸಾಧ್ಯವಾದರೆ ವಿಧವಿಧವಾದ ಅಡಿಕೆ ಪುಡಿಯನ್ನು ಹೆಗಲಲ್ಲಿ ನೇತಾಡುವ ಚೀಲದಿಂದ ತೆಗೆದು ಕಲಾವಿದರಿಗೆ ಕೊಟ್ಟು ವೇದಿಕೆಯನ್ನು ಭದ್ರ ಮಾಡಿಕೊಂಡು ಹಾಡಿಸುತ್ತಿದ್ದರು.
ಇಷ್ಟೆಲ್ಲ ನೆನಪುಗಳಿಗೆ ಜೀವ ತುಂಬುವ ರೀತಿಯಲ್ಲಿ ಕಿ.ರಂ. ಅವರ ಶಿಷ್ಯರ ಬಳಗ ಇಡೀ ರಾತ್ರಿಗೆ ‘ಕಾವ್ಯ ಶಿವರಾತ್ರಿ’ಯನ್ನು ವ್ಯವಸ್ಥೆ ಮಾಡಿತ್ತು. ಅಲ್ಲಿ ಕಾವ್ಯವಿತ್ತು, ಗಾಯನವಿತ್ತು. ಈ ಎರಡನ್ನು ಕುರಿತ ಮಾತುಕತೆಯೂ ಇದ್ದಿತು. ಈ ಗುಂಗಿನಲ್ಲಿಯೇ ಅವರು ಲೆಕ್ಕವಿಲ್ಲದಷ್ಟು ಬಾರಿ ಕೇಳಿಸಿದ ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ಅವರ ದರ್ಬಾರಿ, ರಾಗದ ‘ಭಜ್ ರೆ ಹರ ನಾಮ್’ ಮತ್ತು ಉಸ್ತಾದ್ ಅಮೀರ್ ಖಾನ್ ಅವರು ರಾಗ ಮೇಘದಲ್ಲಿ ಹಾಡಿರುವ ‘ಬರಸತ ಋತೂ ಆಯಿ’ ‘ಅಂಥ ರಚನೆಗಳು ಮನಸ್ಸಿನಲ್ಲಿ ಗುನುಗುನಿಸುತ್ತಿವೆ. ಜೊತೆಗೆ ಸಂಗೀತ ಲೋಕದ ಹಾಗೂ ಕಾವ್ಯಲೋಕದ ಈ ಮಾಯಾ ಕನ್ನಡಿಯ ಮನೆಯಲ್ಲಿ ಕ್ಯಾಸೆಟ್ಟುಗಳು, ಸಿಡಿಗಳು, ನೂರಾರು ಶ್ರೇಷ್ಠ ಕೃತಿಗಳು, ವಿಧವಿಧವಾದ ನಶ್ಯದ ಡಬ್ಬಿಗಳು, ಅಡಿಕೆ ಚೂರುಗಳು ಅನಾಥವಾಗಿರಬಹುದು. ಇತಿಹಾಸ ಚಕ್ರವು ಯಾವಾಗಲೂ ಹೀಗೆಯೇ ಇರಬಹುದು.