ಸಂಸತ್ತಿನಲ್ಲಿ ವಿಪಕ್ಷಗಳ ಸದ್ದಡಗಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ!

Date:

Advertisements
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಗುರುತಿಸಿಕೊಂಡಿರುವ ಭಾರತದ ಸಂಸತ್ತಿನ ಕಲಾಪದಲ್ಲಿ ಅಡಚಣೆಯುಂಟಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾದುದು. ಆದರೆ ಆಳುವ ಸರ್ಕಾರ ಮಾತ್ರ ಯಾವುದಕ್ಕೂ ಜಗ್ಗುತ್ತಿಲ್ಲ. ಎಲ್ಲವೂ ಏಕವ್ಯಕ್ತಿ, ಏಕಪಕ್ಷದ ಧೋರಣೆಯಂತೆ ನಡೆಯುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ವಿಪಕ್ಷಗಳ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ಎಲ್ಲವನ್ನು ಅಧಿಕಾರ ನಡೆಸುವ ನಾಯಕರೆ ಸರ್ವಾಧಿಕಾರಿಗಳಂತೆ ನಿಭಾಯಿಸುತ್ತಿದ್ದಾರೆ. ಆಡಳಿತ ನಡೆಸುತ್ತಿರುವವರು ಜನರ ಕಷ್ಟಸುಖಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸುವ ಕಾಲ ಈಗಂತೂ ದೂರದ ವಿಷಯ. ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ತಮ್ಮಂತೆ ಜನರಿಂದ ಆಯ್ಕೆಯಾದ ಪ್ರತಿಪಕ್ಷದ ನಾಯಕರ ಬೇಡಿಕೆ, ಆರೋಪ ಮುಂತಾದ ಅಹವಾಲುಗಳನ್ನು ಕೇಳಿಸಿಕೊಂಡು ಉತ್ತರಿಸುವುದು ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಸರ್ಕಾರ ನಡೆಸುತ್ತಿರುವವರು ವಿರೋಧ ಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.

ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಮಹುವಾ ಮೊಯಿತ್ರಾ ಸೇರಿದಂತೆ ಹಲವು ನಾಯಕರು ದೇಶದಲ್ಲಿ ನಡೆಯುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಸದನದಲ್ಲಿ ಧನಿ ಎತ್ತಿದಾಗ ಪ್ರಧಾನಿ, ಸಂಬಂಧಿಸಿದ ಮಂತ್ರಿಗಳು ಉತ್ತರಿಸುವ ಮಾತಿರಲಿ ದೂರು ಹೇಳಿದ ನಾಯಕರ ವಿರುದ್ಧವೆ ಆರೋಪ ಮಾಡುತ್ತಾರೆ. ವಿಷಯಗಳು ಇನ್ನು ಮುಂದಕ್ಕೆ ಹೋದಾಗ ಕ್ರಮ ಕೈಗೊಳ್ಳುವ ಬೆದರಿಕೆಯೊಡ್ಡಲಾಗುತ್ತಿದೆ. ರಾಷ್ಟ್ರದಲ್ಲಿ ನಡೆಯುತ್ತಿರುವ ಹಲವು ಆಘಾತಕಾರಿ ವಿದ್ಯಮಾನಗಳ ಬಗ್ಗೆ ಮುಂಚೂಣಿ ನಾಯಕರು ಸೇರಿದಂತೆ ಯಾರೊಬ್ಬರು ಸೊಲ್ಲೆತ್ತುತ್ತಿಲ್ಲ. ತಮ್ಮ ಉದ್ದೇಶ ಅಜೆಂಡಾಗಳನ್ನು ಸಾರುವ ಮಸೂದೆ, ಕಾನೂನುಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕಾರಗೊಳಿಸಲಾಗುತ್ತಿದೆ.

ಮಣಿಪುರದಲ್ಲಿ ಆಗಾಗ ಹಿಂಸಾಚಾರ ಭುಗಿಲೇಳುತ್ತಿದ್ದರೂ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ. ಕಳೆದ ವರ್ಷದ ಮೇ ತಿಂಗಳಲ್ಲಿ ಹಿಂಸಾಚಾರ ಆರಂಭಗೊಂಡಿದ್ದರೂ, ಮೊದಮೊದಲು ಈ ಬಗ್ಗೆ ಕೇಂದ್ರ ಸರ್ಕಾರ ಗಮನವೆ ಹರಿಸಲಿಲ್ಲ. ನಿರಂತರ ಘರ್ಷಣೆ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯದ ಗಲಭೆ ಬಗ್ಗೆ ಮಾತನಾಡಿರಲಿಲ್ಲ. ಕಳೆದ ವರ್ಷ ನಡೆದ ಅಧಿವೇಶನದಲ್ಲಿ ಪ್ರಧಾನಿ ಕಾಟಾಚಾರವೆಂಬಂತೆ ಒಂದೆರಡು ನಿಮಿಷ ಮಾತನಾಡಿದ್ದರು. ಈ ವರ್ಷ ನಡೆಯುತ್ತಿರುವ ಅಧಿವೇಶನದಲ್ಲಿ ಮಣಿಪುರದ ಜನರ ನೋವುಗಳ ಮಾತುಗಳೆ ಕೇಳಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿದ್ದರೂ, ಹಿಂಸಾಚಾರ ಮಾತ್ರ ತಹಬದಿಗೆ ಬಂದಿಲ್ಲ. ವಿರೋಧ ಪಕ್ಷಗಳು ಈ ಬಗ್ಗೆ ಪ್ರಸ್ತಾಪಿಸಿದರೆ ಕೇಳಿಸಿಕೊಳ್ಳುವ ವ್ಯವಧಾನ ಕ್ರಮಕೈಗೊಳ್ಳುವ ನಾಯಕರಿಗೆ ಇಲ್ಲವೇಇಲ್ಲ.

Advertisements

ಉತ್ತರ ಪ್ರದೇಶದ ಸಂಭಲ್‌ನಲ್ಲಿ ಪುರಾತನ ಮಸೀದಿಯೊಂದಕ್ಕೆ ಸ್ಥಳೀಯ ನ್ಯಾಯಾಲಯ ನೀಡಿದ ಸಮೀಕ್ಷೆಯ ಆದೇಶದಿಂದ ಏಳು ಮಂದಿ ಅಮಾಯಕರು ಗುಂಡಿಗೆ ಬಲಿಯಾಗಬೇಕಾಯಿತು. ನ್ಯಾಯ ವ್ಯವಸ್ಥೆ, ರಾಜಕಾರಣಿಗಳು ಮತ್ತು ಸ್ಥಳೀಯ ಪೊಲೀಸರಿಂದಾಗಿ ಸಂಭಲ್ ವಿವಾದಾತ್ಮಕ ಪ್ರದೇಶವಾಗಿ ಮಾರ್ಪಟ್ಟಿದೆ. 1991ರ ಧಾರ್ಮಿಕ ಆರಾಧನಾ ಕಾಯ್ದೆಯ ಪ್ರಕಾರ 1947ರಿಂದ ಅಸ್ತಿತ್ವದಲ್ಲಿರುವ ಆರಾಧನಾ ಸ್ಥಳಗಳಲ್ಲಿ ಹಸ್ತಕ್ಷೇಪ ನಡೆಸುವಂತಿಲ್ಲ. ಹೀಗಿದ್ದರೂ, ಅಲ್ಲಿ ಆತುರಾತುರವಾಗಿ ಸಮೀಕ್ಷೆ ನಡೆಸಲು ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿದಾರರು ಸಲ್ಲಿಸಿದ ದಾಖಲೆಗಳಾದರೂ ಏನು ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ದೊರಕುವುದಿಲ್ಲ. ಇದೇ ರೀತಿ ದೇಶದಲ್ಲಿ ಹಲವು ಮಸೀದಿಗಳ ಬಗ್ಗೆ ವಿವಾದಿತ ಆದೇಶಗಳು ಜಾರಿಯಾಗುತ್ತಿವೆ. ನ್ಯಾಯಾಲಯಗಳಲ್ಲಿ ಈ ಬಗ್ಗೆ ಪ್ರಕರಣಗಳಿದ್ದರೂ ಸಂಸತ್ತಿನಲ್ಲಿ ಇಂತಹ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಚರ್ಚೆಗಳಾಗಬೇಕಿತ್ತು. ಆದರೆ ಸಂಸತ್ತಿನಲ್ಲಿ ಧರ್ಮವನ್ನೇ ಬಂಡವಾಳ ಮಾಡಿಕೊಂಡವರಿಗೆ ವಿವಾದಗಳನ್ನು ಪರಿಹರಿಸುವಂತಹ ಮುನ್ನೋಟವೇ ಕಾಣಿಸುತ್ತಿಲ್ಲ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು ನಿವಾರಣೆಗೆ ಆಗಬೇಕಾದ್ದು ಬಹಳಷ್ಟಿದೆ

ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಭಾಪತಿ ಜಗದೀಪ್ ಧನಕರ್ ಅವರು ತಾವು ಗೌರವಾನ್ವಿತ ಸ್ಥಾನದಲ್ಲಿದ್ದೇನೆ ಎಂಬುದನ್ನು ಮರೆತು ವೈಯಕ್ತಿಕ ಟೀಕೆಗಿಳಿದಿದ್ದಾರೆ. ಪಕ್ಷಗಳ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧನಕರ್ ಸತತವಾಗಿ ದಮನ ಮಾಡುತ್ತಾ ಬಂದಿದ್ದಾರೆ. ಬೇಕೆಂದೇ ಸತಾಯಿಸುವುದು, ನಿರ್ದಿಷ್ಟ ವಿಷಯಗಳಲ್ಲಿ ಅನಗತ್ಯವಾಗಿ ಒತ್ತಡ ಹಾಕುವುದು, ನ್ಯಾಯಯುತವಲ್ಲದ ಟೀಕೆಗಳನ್ನು ಮಾಡುವುದು, ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಮುಖ್ಯವಾದ ವಿಷಯಗಳ ಕುರಿತು ಚರ್ಚೆಗೆ ನಿರಾಕರಿಸುವುದನ್ನು ಮಾಡಿಕೊಂಡು ಬಂದಿದ್ದಾರೆ. ಇದೆಲ್ಲದರ ಜೊತೆ ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಸರ್ಕಾರವನ್ನು ಹೊಗಳುತ್ತಾರೆ. ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯಸಭೆಯ ನಿಯಮಗಳಿಗಿಂತ ರಾಜಕೀಯಕ್ಕೆ ಆದ್ಯತೆ ನೀಡಿದ್ದಾರೆ. ಇವೆಲ್ಲ ಕಾರ್ಯವೈಖರಿಯಿಂದಾಗಿ ರೋಸಿ ಹೋಗಿ ಪ್ರತಿಪಕ್ಷಗಳು ಭಾರತದ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಬರಬರುತ್ತಾ ಸಂಸತ್ತಿನಲ್ಲಿ ಪ್ರಜಾಪ್ರಭುತ್ವ ದಮನ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಲಾಪವನ್ನು ಪಕ್ಷಾತೀತವಾಗಿ ನಡೆಸುವುದು ಸ್ಪೀಕರ್ ಅವರ ಹೊಣೆಗಾರಿಕೆ. ಆದರೆ ಈಗೀಗ ಸ್ಪೀಕರ್‌ ಹಾಗೂ ಸಭಾಧ್ಯಕ್ಷರು ಆಡಳಿತ ಪಕ್ಷದ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 17ನೇ ಲೋಕಸಭೆಯ, 2023ರ ಚಳಿಗಾಲದ ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣ ನೀಡಿ ವಿರೋಧ ಪಕ್ಷಗಳ ಉಭಯ ಸದನಗಳಿಂದ 140ಕ್ಕೂ ಹೆಚ್ಚು ಸಂಸದರನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ ಲೋಕಸಭೆಯಲ್ಲಿ ನಿಯಮಾನುಸಾರ ಇರಬೇಕಾದ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಪ್ರತಿಪಕ್ಷಕ್ಕೆ ನೀಡಲಾಗಿಲ್ಲ. ಆದರೆ 2019ರರಿಂದ 2024ರವರೆಗೂ ಲೋಕಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ತೆರವಾಗಿಯೇ ಇರಿಸಲಾಗಿತ್ತು.

ಐದೂ ವರ್ಷಗಳಲ್ಲಿ ಸ್ಪೀಕರ್ ಅವರೇ ಕಲಾಪವನ್ನು ನಡೆಸಿದ್ದರು. ಅವರ ಅನುಪಸ್ಥಿತಿಯಲ್ಲಿ ಹಲವು ಸಂಸದರು ನಿಯೋಜಿತ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ತೆರವಾಗಿಯೇ ಇರಿಸುವುದೂ ಸಮಂಜಸವಲ್ಲ ಎಂಬ ಅಭಿಪ್ರಾಯವಿದೆ. 17ನೇ ಲೋಕಸಭೆಯಲ್ಲಿ ಸ್ಪೀಕರ್ ಅವರ ಹುದ್ದೆಯನ್ನು ತೆರವಾಗಿ ಇರಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿತ್ತು. ಅರ್ಜಿಯ ಸಂಬಂಧ ವಿಚಾರಣೆಯೂ ನಡೆದಿತ್ತು. ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಆಯ್ಕೆ ಕಡ್ಡಾಯವಾದುದು ಎಂಬುದು ಅರ್ಜಿದಾರರು ವಾದಿಸಿದ್ದರು. ಇದನ್ನು ಒಪ್ಪಿದ್ದ ಸುಪ್ರೀಂಕೋರ್ಟ್‌ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು, ಸರ್ಕಾರದಿಂದ ವಿವರಣೆಯನ್ನೂ ಕೇಳಿತ್ತು.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಗುರುತಿಸಿಕೊಂಡಿರುವ ಭಾರತದ ಸಂಸತ್ತಿನ ಕಲಾಪದಲ್ಲಿ ಅಡಚಣೆಯುಂಟಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾದುದು. ಆದರೆ ಆಳುವ ಸರ್ಕಾರ ಮಾತ್ರ ಯಾವುದಕ್ಕೂ ಜಗ್ಗುತ್ತಿಲ್ಲ. ಎಲ್ಲವೂ ಏಕವ್ಯಕ್ತಿ, ಏಕಪಕ್ಷದ ಧೋರಣೆಯಂತೆ ನಡೆಯುತ್ತಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

Download Eedina App Android / iOS

X