- ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ
- ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ; ‘ಸ್ಟಾಪ್ ಟೊಬ್ಯಾಕೊ’ ದೂರು ನೀಡಿ
ಈಗಾಗಲೇ ರಾಜ್ಯದಲ್ಲಿ ಸಿಗರೇಟ್, ಗುಟ್ಕಾ ಮತ್ತಿತ್ತರ ಚಟಗಳಿಂದ ನಾಗರಿಕರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ‘ವಿಮಲ್ ಎಲೈಚಿ’ ಜಾಹೀರಾತು ಅಳವಡಿಸಿ ಪ್ರಚೋದಿಸುವುದನ್ನು ನಿಲ್ಲಿಸಿ ಎಂದು ತಂಬಾಕು ಮುಕ್ತ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಒಕ್ಕೂಟವು ಬಸ್ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದೆ.
ಕಮಲಾ ಪಸಂದ್, ವಿಮಲ್ ಪಾನ್ ಮಸಾಲಾ, ರಜನಿಗಂಧ, ಇಂಪೀರಿಯಲ್ ಬ್ಲೂ ಮತ್ತು ಸ್ಟೆರ್ಲಿಂಗ್ ರಿಸರ್ವ್‌ನಂತಹ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ ಅಂತಹ ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಈಗಾಗಲೇ ನೋಟಿಸ್ ನೀಡಿದೆ ಎಂದು ಸಿಎಫ್‌ಟಿಎಫ್‌ಕೆ ಸಂಚಾಲಕ ಎಸ್ ಜೆ ಚಂದರ್ ಹೇಳಿದ್ದಾರೆ.
ಭಾರತದಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ನೇರ ಜಾಹೀರಾತು ನಿಷೇಧಿಸಿರುವುದರಿಂದ, ತಯಾರಕರು ಬದಲಿ ಮಾರ್ಗ ಬಳಸಿ, ಗ್ರಾಹಕರನ್ನು ತನ್ನೆಡೆಗೆ ಸೆಳೆಯಲು ಸೃಜನಶೀಲ ವಿಧಾನಗಳನ್ನು ಬಳಸಿಕೊಳ್ಳುತ್ತಿವೆ. ‘ಎಲೈಚಿ’ ನೆಪದಲ್ಲಿ ವಿಮಲ್ ಜಗಿಯುವ ತಂಬಾಕು ಉತ್ಪನ್ನಗಳ ಮಾರಾಟ ಮತ್ತಷ್ಟು ಬಲಪಡೆಯಲು ಈ ಜಾಹೀರಾತುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?: ಅನಧಿಕೃತ ಗರ್ಭಪಾತ; ಮಹಿಳಾ ಶುಶ್ರೂಷಕಿ ವಿರುದ್ಧ ದೂರು
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಲಕ್ಷಾಂತರ ಜನರು ಬಳಸುತ್ತಾರೆ. ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ಮಕ್ಕಳು ಮತ್ತು ಯುವಕರು ಹಾಗೂ ಹಿರಿಯರು ಜಾಹೀರಾತುಗಳನ್ನು ನೋಡುತ್ತಿರುತ್ತಾರೆ. ಇದು ಅವರನನ್ನು ಬಳಕೆ ಮಾಡುವಂತೆ ಪ್ರಚೋದಿಸುತ್ತದೆ. ಅದಲ್ಲದೆ, ಈ ಉತ್ಪನ್ನಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ. ಪಾನ್ ಮಸಾಲಾ ಕಂಪನಿಗಳೊಂದಿಗಿನ ಅವರ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಸಿಎಫ್‌ಟಿಎಫ್‌ಕೆ ಮನವಿ ಮಾಡಿದೆ.
“ಆರೋಗ್ಯ ಇಲಾಖೆಯು ಇತ್ತೀಚೆಗೆ ‘ಸ್ಟಾಪ್ ಟೊಬ್ಯಾಕೊ’ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಆ ಮೂಲಕ ಜನರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಬಗ್ಗೆ ದೂರು ನೀಡಬಹುದು ಮತ್ತು ನಾವು ಅನೇಕ ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸಿದ್ದೇವೆ. ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಎರಡಕ್ಕೂ ಬಾಡಿಗೆ ಜಾಹೀರಾತನ್ನು ತೆಗೆದುಹಾಕಲು ಸೂಚಿಸಲಾಗುತ್ತದೆ” ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಡಿ ಹೇಳಿದರು.