‘ಮದ್ರಾಸ್‌ ಐ’ ಸೋಂಕಿನ ಬಗ್ಗೆ ಕಣ್ಣಿನ ತಜ್ಞರು ಹೇಳುವುದೇನು?

Date:

Advertisements

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಕೆಂಪು ಕಣ್ಣಿನ ಸೋಂಕು ಅಥವಾ ಸಾಮಾನ್ಯವಾಗಿ ಕರೆಯಲ್ಪಡುವ ʼಮಡ್ರಾಸ್‌ ಐʼ ಪ್ರಕರಣಗಳು ಈ ಬಾರೀ ದೇಶಾದ್ಯಂತ ಹೆಚ್ಚಳಗೊಂಡಿವೆ. ಕರ್ನಾಟಕ ಸೇರಿದಂತೆ ದೆಹಲಿ, ಅರುಣಾಚಲ ಪ್ರದೇಶ, ಗುಜರಾತ್‌, ಮಹರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ಸೋಂಕು ಹೆಚ್ಚಾಗಿ ಹರಡುತ್ತಿದೆ.

ದಿನದಿಂದ ದಿನಕ್ಕೆ ಜನರಲ್ಲಿ ಭೀತಿ ಹುಟ್ಟಿಸುತ್ತಿರುವ ಈ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈದಿನ.ಕಾಮ್‌ ತಂಡ, ಬೆಂಗಳೂರಿನ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆ ʼಪ್ರಭಾ ಐ ಕ್ಲಿನಿಕ್‌ ಆ್ಯಂಡ್‌ ರಿಸರ್ಚ್‌ ಸೆಂಟರ್‌ʼನ ವೈದ್ಯೆ ಕಾವ್ಯ ಅವರನ್ನು ಸಂಪರ್ಕಿಸಿತ್ತು. ನೇತ್ರ ತಜ್ಞರಾಗಿರುವ ಕಾವ್ಯ, ಮದ್ರಾಸ್‌ ಐ ಸೋಂಕಿನ ರೋಗ ಲಕ್ಷಣ ಮತ್ತು ಸೋಂಕಿನಿಂದ ಗುಣಮುಖರಾಗಲು ಜನ ಅನುಸರಿಸಬೇಕಾದ ಉತ್ತಮ ಸಲಹೆಗಳನ್ನು ನೀಡಿದ್ದಾರೆ.

ಕೆಂಪು ಕಣ್ಣಿನ ಸೋಂಕು ಎಂದರೇನು?

Advertisements

ಕೆಂಪು ಕಣ್ಣು ಅಥವಾ ಮಡ್ರಾಸ್‌ ಐ ಎಂಬುದು ಸಾಮಾನ್ಯವಾದ ವೈರಲ್‌ ಇನ್ಫೆಕ್ಷನ್‌. ಅಡೀನೋ ಮತ್ತು ಹರ್ಪೆಟಿಕ್‌ ಎಂಬ ಎರಡು ವೈರಸ್‌ಗಳಿಂದಾಗಿ ಈ ಸೋಂಕು ಉತ್ಪತ್ತಿಯಾಗುತ್ತದೆ. ಕೆಮ್ಮು, ನೆಗಡಿ, ಜ್ವರ ಬಂದಾಗ ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆದರೆ ಹೇಗೆ ಸುಲಭವಾಗಿ ಗುಣವಾಗುತ್ತದೋ, ಕೆಂಪು ಕಣ್ಣಿನ ಸೋಂಕು ಕೂಡ ಅಗತ್ಯ ಚಿಕಿತ್ಸೆಯಿಂದ ಸಹಜವಾಗಿ ಗುಣವಾಗುತ್ತದೆ.

ದೇಶದಲ್ಲಿ ಮದ್ರಾಸ್‌ ಐ ಪ್ರಕರಣಗಳು ಹೆಚ್ಚುತ್ತಿರುವುದೇಕೆ?

ಸೋಂಕಿಗೆ ಕಾರಣವಾಗುವ ವೈರಸ್‌ಗಳು ವರ್ಷದಿಂದ ವರ್ಷಕ್ಕೆ ರೂಪಾಂತರಗೊಳ್ಳುತ್ತವೆ. ಹೀಗೆ ರೂಪಾಂತರಗೊಳ್ಳುವ ವೈರಸ್‌ಗಳು ಕೆಲವೊಮ್ಮೆ ಹಿಂದಿಗಿಂತ ಬಲಶಾಲಿಯಾಗಿ ವರ್ತಿಸುವ ಸಾಧ್ಯತೆ ಇರುತ್ತದೆ. ಈಗ ಆಗಿರುವುದು ಅದೇ. ವೈರಸ್‌ಗಳ ಶಕ್ತಿ ವೃದ್ಧಿಯಾಗಿರುವುದರಿಂದ ಸೋಂಕಿನ ಹರಡುವಿಕೆಯ ಪ್ರಮಾಣ ಕೂಡ ಹೆಚ್ಚಿದೆ. ಇನ್ನು ಕೆಲ ಸಂದರ್ಭಗಳಲ್ಲಿ ರೂಪಾಂತರಗೊಂಡ ವೈರಸ್‌ಗಳು ಹಿಂದಿಗಿಂತ ಬಲಹೀನವಾಗಿಯೂ ವರ್ತಿಸಬಹುದು.

ಇತ್ತೀಚಿನ ದಿನಗಳಲ್ಲಿ ಕೆಂಪು ಕಣ್ಣಿನ ಸೋಂಕು ತುಂಬಾ ಸಹಜವಾಗಿಬಿಟ್ಟಿದೆ. ಕಳೆದ ಮೂರ್ನಾಲ್ಕು ವಾರಗಳಿಂದ ಎಲ್ಲಾ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಪ್ರತಿನಿತ್ಯ 8 ರಿಂದ 10 ʼಮದ್ರಾಸ್‌ ಐʼ ಪ್ರಕರಣಗಳು ದಾಖಲಾಗುತ್ತಿವೆ. ಈ ಸೋಂಕಿಗೆ ಯಾವುದೇ ವಯೋಮಿತಿ ಇಲ್ಲ. 2 ವರ್ಷದ ಎಳೆಯ ಮಕ್ಕಳಿಂದ ಹಿಡಿದು 95 ವರ್ಷದ ಇಳಿ ವಯಸ್ಸಿನವರಲ್ಲೂ ಈ ಸೋಂಕು ಕಾಣಿಸಿಕೊಳ್ಳುತ್ತಿದೆ.

ಈ ಸೋಂಕು ಸಹಜವಾದರೂ ಜನರಲ್ಲಿ ಭೀತಿ ಹುಟ್ಟಿಸುತ್ತಿರುವುದೇಕೆ?

ಪ್ರತಿ ಮಳೆಗಾಲದ ಸಂದರ್ಭದಲ್ಲಿ ಈ ಸೋಂಕು ಸಹಜವಾಗಿಯೇ ಕಾಣ ಸಿಗುತ್ತದೆ. ಆದರೆ, ಈ ಬಾರಿ ಸೋಂಕಿತರ ಪ್ರಮಾಣ ಹೆಚ್ಚಿರುವುದರಿಂದ ಜನ ಆತಂಕಗೊಂಡಿದ್ದಾರೆ. ʼಮದ್ರಾಸ್‌ ಐʼ ಸೋಂಕು ಅಂಟುರೋಗವಿದ್ದಂತೆ. ಒಬ್ಬರಿಂದ ಮತ್ತೊಬ್ಬರಿಗೆ ಸಾಂಕ್ರಾಮಿಕದ ರೀತಿಯಲ್ಲಿ ಹರಡುತ್ತದೆ. ಸೋಂಕಿತರು ತಮ್ಮ ಕಣ್ಣುಗಳನ್ನು ಮುಟ್ಟಿಕೊಂಡು ಅದೇ ಕೈಯಿಂದ ಬೇರೆಯವರನ್ನು ಮುಟ್ಟಿದಾಗ ಅಥವಾ ಸೋಂಕಿತರ ಕಣ್ಣಿನಿಂದ ತೊಟ್ಟಿಕ್ಕುವ ನೀರು ಯಾವುದೋ ಒಂದು ವಸ್ತುವಿನ ಮೇಲೆ ಬಿದ್ದು, ಆ ವಸ್ತುವನ್ನು ಬೇರೋಬ್ಬರು ಬಳಸಿದರೆ ಅಂಥವರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸೋಂಕಿತರು ಕೆಮ್ಮಿದಾಗ ಗಾಳಿಯಲ್ಲೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ʼಮದ್ರಾಸ್‌ ಐʼ ರೋಗಲಕ್ಷಣಗಳೇನು? ಸೋಂಕಿತರು ಅನುಭವಿಸುವ ಸಮಸ್ಯೆ ಏನು?

ಈ ಸೋಂಕಿಗೆ ಒಳಗಾದವರ ಕಣ್ಣಿನ ಬಿಳಿ ಭಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕಣ್ಣುಗಳಲ್ಲಿ ಉರಿತ ಶುರುವಾಗುತ್ತದೆ. ಕಣ್ಣುಗಳು ಊದಿಕೊಳ್ಳುತ್ತವೆ. ಕಣ್ಣೀರು ಸುರಿಯುವಿಕೆ ಕೂಡ ಹೆಚ್ಚಾಗಿರುತ್ತದೆ. ಕಣ್ಣು ತೆರೆದು ನೋಡುವುದಕ್ಕೂ ಕಷ್ಟಕರವಾಗಿರುತ್ತದೆ. ಕಣ್ಣೀರು ಅಂಟಿನ ರೂಪದಲ್ಲಿರುತ್ತದೆ. ಕೆಲವರು ದೂರಗಾಮಿ ಪರಿಣಾಮಗಳಿಗೆ ತುತ್ತಾಗುತ್ತಾರೆ. ಹಲವು ವರ್ಷಗಳ ಕಾಲ ಕಣ್ಣಿನ ಕರಿಗುಡ್ಡೆಯ ಮೇಲೆ ಚಿಕ್ಕ ಚಿಕ್ಕ ಕಲೆಗಳು ಉಳಿದುಕೊಳ್ಳುವ ಅಥವಾ ದೃಷ್ಟಿ ಮಂಜಾಗಿ ಕಾಣುವ ಸಾಧ್ಯತೆ ಇರುತ್ತದೆ. ಸೋಂಕು ಕಾಣಿಸಿಕೊಂಡ 24 ಗಂಟೆಗಳ ಒಳಗಾಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.

ಮುಂಜಾಗ್ರತಾ ಕ್ರಮಗಳೇನು?

ಕೊರೊನಾ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಮಾರ್ಗೋಪಾಯಗಳನ್ನೇ ಪಾಲಿಸಬೇಕು. ಸೋಂಕಿತರು ಬಳಸಿದ ಯಾವುದೇ ವಸ್ತುಗಳನ್ನು ಬಳಸಬಾರದು. ಪದೆ ಪದೆ ಕಣ್ಣುಗಳನ್ನು ಮುಟ್ಟಿಕೊಳ್ಳುವುದು, ಉಜ್ಜಿಕೊಳ್ಳುವುದನ್ನು ನಿಲ್ಲಿಸಬೇಕು. ನೀವು ಸೋಂಕಿತರ ಸಂಪರ್ಕದಲ್ಲಿದ್ದರೆ ಆಗಾಗ ಸ್ವಚ್ಛವಾಗಿ ಕೈ ತೊಳೆಯುವುದು, ಸ್ಯಾನಿಟೈಸರ್‌ ಬಳಸುವುದನ್ನು ರೂಢಿ ಮಾಡಿಕೊಳ್ಳಿ.   

ಈ ಮದ್ರಾಸ್‌ ಐ ಸೋಂಕಿನ ಬಗ್ಗೆ ಜನರಲ್ಲಿರುವ ತಪ್ಪು ಗ್ರಹಿಕೆಗಳೇನು?

ಸೋಂಕಿಗೆ ಒಳಗಾದವರು ಕಪ್ಪು ಕನ್ನಡಕ ಹಾಕಿಕೊಳ್ಳಬೇಕು, ಸೋಂಕಿತರ ಕಣ್ಣನ್ನು ಬೇರೊಬ್ಬರು ದಿಟ್ಟಿಸಿ ನೋಡಿದರೆ ಅವರಿಗೂ ಸೋಂಕು ತಗಲುತ್ತದೆ, ಸೋಂಕಿತರು ಪ್ರತ್ಯೇಕ ವಾಸ್ತವ್ಯದಲ್ಲಿರಬೇಕು ಎಂಬ ರೀತಿಯ ತಪ್ಪು ಮಾಹಿತಿ ಜನರಲ್ಲಿದೆ. ಆದರೆ, ಇದೆಲ್ಲವೂ ಊಹಾಪೋಹಗಳಷ್ಟೇ.  

ಮನೆಮದ್ದಿನ ಪ್ರಯೋಗ ಮಾಡುವವರಿಗೆ ನಿಮ್ಮ ಸಲಹೆ ಏನು?

ಸೋಂಕು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಹಲವರಿಗೆ ಸಾಧ್ಯವಾಗದಿರಬಹುದು. ಹಾಗಂತ ಯಾರೂ ಮನೆಮದ್ದಿನ ಪ್ರಯೋಗಕ್ಕಿಳಿಯಬೇಡಿ. ಕೆಲವರು ಸೋಂಕಿತರ ಕಣ್ಣಿಗೆ ತಾಯಿಯ ಎದೆ ಹಾಲನ್ನು ಹಾಕುತ್ತಾರೆ. ಮೊದಲೇ ಸೋಂಕಿಗೆ ಒಳಗಾಗಿರುವ ಕಣ್ಣುಗಳಿಗೆ ಹೀಗೆ ಎದೆ ಹಾಲು ಹಾಕುವುದರಿಂದ ಫಂಗಲ್‌ ಇನ್ಫೆಕ್ಷನ್‌ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಪ್ರಯೋಗ ಮಾಡಬೇಡಿ. ಕೆಲವೊಂದು ಕಡೆಗಳಲ್ಲಿ ಕುರಿ, ಕೋಳಿಯ ರಕ್ತವನ್ನು ಸೋಂಕಿತರ ಕಣ್ಣಿನೊಳಗೆ ಹಾಕುವ ರೂಢಿ ಇದೆ. ಇನ್ನು ಕೆಲವು ಕಡೆಗಳಲ್ಲಿ ʼಮದ್ರಾಸ್‌ ಐʼ ಕಾಣಿಸಿಕೊಂಡಾಗ ಕಣ್ಣಿಗೆ ಅರಿಶಿಣದ ನೀರನ್ನು ಹಾಕುವವರು ಇದ್ದಾರೆ. ಈ ಎಲ್ಲ ಮನೆ ಮದ್ದುಗಳು ಆರೋಗ್ಯಕರವಲ್ಲ.

ಕೆಂಪು ಕಣ್ಣು ಬಂದಾಗ ಕೆಲವರು ಮೆಡಿಕಲ್‌ ಶಾಪ್‌ಗಳಲ್ಲಿ ಸಿಗುವ ಔಷಧಿಗಳನ್ನು ಕಣ್ಣಿಗೆ ಹಾಕಿಕೊಳ್ಳುತ್ತಾರೆ. ಈ ರೂಢಿಯೂ ಒಳ್ಳೆಯದಲ್ಲ. ವೈದ್ಯರ ಸಲಹೆ ಇಲ್ಲದೆ ನೀವು ಮೆಡಿಕಲ್‌ ಶಾಪ್‌ಗಳಲ್ಲಿ ಖರೀದಿಸುವ ಔಷಧಗಳಲ್ಲಿ ಸ್ಟೆರಾಯ್ಡ್‌ಗಳಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸೋಂಕಿನ ವಿಚಾರದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ, ಕಣ್ಣುಗಳಿಗೆ ಹಾನಿಯುಂಟು ಮಾಡುವ ಪ್ರಯೋಗಗಳಿಂದ ಮಾತ್ರ ದೂರವಿರಿ.  

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್‌ ಆದೇಶ

ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಘಿ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು...

ಮಹಿಳೆಯರನ್ನು ಗರ್ಭಕೋಶ ಕ್ಯಾನ್ಸರ್‌ನಿಂದ ರಕ್ಷಿಸಲು ಎಚ್‌ಪಿವಿ ಲಸಿಕೆ ಅತ್ಯಗತ್ಯ: ಡಾ. ಮಂಗಳ

ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು...

ಕೋವಿಡ್ ಲಸಿಕೆಗೂ ಹಠಾತ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ: ಆರೋಗ್ಯ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ...

Download Eedina App Android / iOS

X