ರೇಷ್ಮೆ ಗೂಡು ಬೆಲೆ ತೀವ್ರ ಕುಸಿತ; ಹರಿದು ಚಿಂದಿ ಬಟ್ಟೆಯಂತಾದ ರೇಷ್ಮೆ ಬೆಳೆಗಾರರ ಬದುಕು

Date:

ಮಳೆ ಕೊರತೆ, ರೋಗಬಾಧೆ, ಹವಾಮಾನ ವೈಪರೀತ್ಯದಂಥ ಸವಾಲುಗಳನ್ನು ವಿಪರೀತ ಶ್ರಮದಿಂದ ಎದುರಿಸಿ ರೈತರು ದಾಖಲೆ ಪ್ರಮಾಣದಲ್ಲಿ ರೇಷ್ಮೆ ಬೆಳೆಯುತ್ತಿದ್ದರೂ ಅದಕ್ಕೆ ಸರಿಯಾದ ಮಾರುಕಟ್ಟೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವತ್ತೂ ಪ್ರಯತ್ನಿಸಿಯೇ ಇಲ್ಲ. ಇದರಿಂದಾಗಿ ರಾಜ್ಯದ ರೇಷ್ಮೆ ಬೆಳೆಗಾರರು ಈಗ ತೀವ್ರ ಬೆಲೆ ಕುಸಿತದಿಂದ ಕಂಗೆಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕಿದೆ.

2015, ರಾಜ್ಯದ ರೇಷ್ಮೆ ಬೆಳೆಗಾರರ ದೃಷ್ಟಿಯಿಂದ ಅತ್ಯಂತ ಕರಾಳ ವರ್ಷ. ಆ ವರ್ಷ ರಾಜ್ಯದ ವಿವಿಧ ಭಾಗಗಳಲ್ಲಿ 10ಕ್ಕೂ ಹೆಚ್ಚು ಮಂದಿ ರೇಷ್ಮೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ನಂತರವೂ ರೇಷ್ಮೆ ಬೆಳೆಯುವವರ ಪರಿಸ್ಥಿತಿಯೇನೂ ಬದಲಾಗಲಿಲ್ಲ. ಬೆಲೆ ಒಮ್ಮೆ ಏರುವುದು, ಒಮ್ಮೆ ಇಳಿಯುವುದು ನಡೆಯುತ್ತಲೇ ಇದೆ. ರೇಷ್ಮೆ ಬೆಳೆ ತೀವ್ರವಾಗಿ ಕುಸಿದಾಗಲೆಲ್ಲ ರೈತರು ನೇಣಿಗೆ ಕೊರಳೊಡ್ಡುವುದು ನಡೆಯುತ್ತಲೇ ಬಂದಿದೆ. ಜುಲೈ 2018ರಲ್ಲಿ ರಾಮನಗರ ತಾಲ್ಲೂಕಿನ ಕಟಮಾನದೊಡ್ಡಿ ಗ್ರಾಮದ ರೇಷ್ಮೆ ಬೆಳೆಗಾರ ಕೆಂಪಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಮಾರನೇ ದಿನ ಕೋಲಾರ ಜಿಲ್ಲೆಯ ಹೊಸಮಟ್ನಹಳ್ಳಿ ಗ್ರಾಮದ ರೇಷ್ಮೆ ಬೆಳೆಗಾರ ವೆಂಕಟಪ್ಪ ನೇಣಿಗೆ ಕೊರಳೊಡ್ಡಿದ್ದರು.                            

ಕೊರೊನಾ ಕಾಲದಲ್ಲಿ ತೀವ್ರ ಕುಸಿತ ಕಂಡಿದ್ದ ರೇಷ್ಮೆ ದರ ನಂತರ ಕೊಂಚ ಚೇತರಿಸಿಕೊಂಡಿತ್ತು. 2021ರಲ್ಲಿ ರೇಷ್ಮೆ ಗೂಡಿನ ಬೆಲೆ ಹೆಚ್ಚಾಗಿತ್ತು; ಒಂದು ಕೇಜಿಗೆ 785 ರೂಪಾಯಿಗೆ ಹರಾಜಾಗುವ ಮೂಲಕ ದಾಖಲೆ ಮುಟ್ಟಿತ್ತು. ಆದರೆ, ಈಗ, ನಾಲ್ಕೈದು ತಿಂಗಳಿನಿಂದ, ರೇಷ್ಮೆ ಗೂಡಿನ ಬೆಲೆ ತೀವ್ರ ಕುಸಿತ ಕಂಡಿದೆ. ರೇಷ್ಮೆ ಬೆಳೆಗಾರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಗತ್ತಿನ ಅತಿ ಹೆಚ್ಚು ರೇಷ್ಮೆ ಬೆಳೆಯುವ ಎರಡನೇ ದೇಶ ಭಾರತ. ಭಾರತದಲ್ಲಿ ಉತ್ಪಾದನೆಯಾಗುವ ರೇಷ್ಮೆಯ ಪೈಕಿ ಅರ್ಧದಷ್ಟು ಕರ್ನಾಟಕದಲ್ಲೇ ಉತ್ಪಾದನೆಯಾಗುತ್ತದೆ. ರಾಮನಗರ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಹಾವೇರಿ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಮನಗರ, ದೇವನಹಳ್ಳಿ ತಾಲ್ಲೂಕಿನ ವಿಜಯಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮುಂತಾದ ಪಟ್ಟಣಗಳಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಗಳಿವೆ. ರಾಮನಗರದಲ್ಲಿರುವುದು ಏಷ್ಯಾದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆ. ರಾಮನಗರ ಮಾರುಕಟ್ಟೆಯಲ್ಲಿ ಪ್ರತಿದಿನ 50 ಟನ್ ಗೂಡು ಮಾರಾಟವಾಗುತ್ತದೆ.

ಮಾರ್ಚ್‌ಗಿಂತ ಮೊದಲು ಮಿಶ್ರತಳಿ ರೇಷ್ಮೆ ಗೂಡಿನ ಬೆಲೆ ಕೇಜಿಗೆ 450ರಿಂದ 600 ರೂಪಾಯಿ ಇತ್ತು. ಬೈವೋಲ್ಟಿನ್ ಗೂಡಿನ ಬೆಲೆ 600ರಿಂದ 700 ರೂಪಾಯಿವರೆಗೆ ಇತ್ತು. ಸದ್ಯ ಮಿಶ್ರ ತಳಿ 250ರಿಂದ 300ರೂ.ಗೆ ಕುಸಿದಿದ್ದರೆ, ಬೈವೋಲ್ಟಿನ್ ಗೂಡಿನ ಬೆಲೆ 400ರಿಂದ 500ರೂ.ಗೆ ಕುಸಿದಿದೆ. ಅಂದರೆ ಕೇಜಿ ಗೂಡಿಗೆ 100 ರಿಂದ 200 ರೂಪಾಯಿಯಷ್ಟು ಕುಸಿತ.

ರೇಷ್ಮೆ ಬೆಳೆಗಾರ

ವರ್ಷದಿಂದ ವರ್ಷಕ್ಕೆ ರೇಷ್ಮೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಲೇ ಸಾಗುತ್ತಿದೆ. ಮೊದಲೆಲ್ಲ ರೈತರು ರೇಷ್ಮೆ ಮೊಟ್ಟೆ ತಂದು ತಾವೇ ಮನೆಗಳಲ್ಲಿ ಚಾಕಿ ಕಟ್ಟುತ್ತಿದ್ದರು. ಮೊಟ್ಟೆ ಹುಳವಾಗಿ, ಹುಳ ಬೆಳೆಯುತ್ತ, ಗೂಡು ಕಟ್ಟುವವರೆಗೆ ಸಾಕುತ್ತಿದ್ದರು. ಆದರೆ ಈಗ ಎಲ್ಲ ಕಡೆ ಒಂದನೇ ಅಥವಾ ಎರಡನೇ ಜ್ವರ ಎದ್ದ ನಂತರ ಹುಳಗಳನ್ನೇ ಖರೀದಿಸಿ ತರುವ ರೂಢಿ ಚಾಲ್ತಿಗೆ ಬಂದಿದೆ. ಹಿಪ್ಪುನೇರಳೆ ಬೆಳೆಸಲು ರಸಗೊಬ್ಬರಕ್ಕೆ ಹಣ, ಹುಳ ತರುವುದಕ್ಕೆ ಹಣ, ಹುಳ ಸಾಕಾಣಿಕೆಗೆ ಕೂಲಿ ವೆಚ್ಚ, ಚಂದ್ರಿಕೆ ಬಾಡಿಗೆ, ಗೂಡು ಸಾಗಾಣಿಕೆ ವೆಚ್ಚ ಹೀಗೆ ಪ್ರತಿಯೊಂದು ಹಂತದಲ್ಲೂ ಖರ್ಚು ವೆಚ್ಚದಲ್ಲಿ ಮೂರ್ನಾಲ್ಕು ಪಟ್ಟು ಏರಿಕೆ ಆಗಿದೆ. ಆದರೆ, ಅದಕ್ಕೆ ವಿರುದ್ಧವಾಗಿ ಗೂಡಿನ ರೇಟು ಅರ್ಧಕ್ಕೆ ಕುಸಿದಿದೆ. ಹಾಗೆ ಪದೇ ಪದೆ ಬೆಲೆ ಕುಸಿತಕ್ಕೆ ಕಾರಣವಾಗುವ ಅಂಶಗಳು ಯಾವುವು ಎನ್ನುವುದರ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ.

‘ಕಳೆದ ಮಾರ್ಚ್‌ನಿಂದ ರೇಷ್ಮೆಗೂಡಿನ ಧಾರಣೆ ಕುಸಿದಿದೆ. ಉತ್ಪಾದನೆ ಹೆಚ್ಚಾಗಿರುವುದು, ರೇಷ್ಮೆ ಮೂಮೆಂಟ್ ಕಡಿಮೆಯಾಗಿರುವುದು, ಹೊರರಾಜ್ಯಗಳಿಂದ ಹೆಚ್ಚು ಗೂಡು ಬರುತ್ತಿರುವುದು ಬೆಲೆ ಕುಸಿತಕ್ಕೆ ಕಾರಣ’ ಎಂದು ರಾಮನಗರದ ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ರವಿ ಹೇಳುತ್ತಾರೆ.

ಆದರೆ, ‘ಮಾರುಕಟ್ಟೆಗಳು ಆರಂಭವಾದಾಗಿನಿಂದಲೂ ಆಂಧ್ರ ಸೇರಿದಂತೆ ನೆರೆಹೊರೆಯ ರಾಜ್ಯಗಳಿಂದ ರೈತರು ರಾಜ್ಯದ ಮಾರುಕಟ್ಟೆಗಳಿಗೆ ಗೂಡು ತರುತ್ತಿದ್ದಾರೆ. ಅವರಿಂದಾಗಿ ರೇಷ್ಮೆ ಗೂಡಿನ ಬೆಲೆ ಕಡಿಮೆಯಾಯಿತು ಎನ್ನುವುದು ತಪ್ಪು ಮಾಹಿತಿ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ಜಿಲ್ಲೆ ತೊಂಡೇಬಾವಿಯ ರೈತ ಹರಿಬಾಬು.           

‘ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು ಚೀನಾ ಮತ್ತಿತರ ಹೊರದೇಶಗಳಿಂದ ರೇಷ್ಮೆ ಆಮದು ಮಾಡಿಕೊಳ್ಳುತ್ತಿರುವುದು ಬೆಲೆ ಕುಸಿತಕ್ಕೆ ನಿಜವಾದ ಕಾರಣ’ ಎನ್ನುವುದು ರೈತ ಮುಖಂಡರು ಅಭಿಪ್ರಾಯ. ಪ್ರಸಕ್ತ ವರ್ಷದಲ್ಲಿ ಭಾರತ 3600 ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಂಡಿದೆ. ಅದರ ಜೊತೆಗೆ ಶೇ.25ರಷ್ಟು ರೇಷ್ಮೆ ಉತ್ಪಾದನೆ ಹೆಚ್ಚಾಗಿರುವುದು ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಕಚ್ಚಾ ರೇಷ್ಮೆಯ ಬೆಲೆ ಕೇಜಿಗೆ 5000 ಇದ್ದದ್ದು 3,500 ರೂಪಾಯಿಗೆ ಇಳಿದಿದೆ. ಮುಂಬೈ, ವಾರಾಣಸಿ ಮುಂತಾದೆಡೆಗಳ ರೇಷ್ಮೆ ಉದ್ದಿಮೆದಾರರು, ಅದರಲ್ಲೂ ಗುಜರಾತಿ ಮೂಲದ ಉದ್ದಿಮೆದಾರರು, ತಮಗೆ ಬೇಕೆಂದಾಗ ಬೇಕಾದ ಹಾಗೆ ರೇಷ್ಮೆ ಬೆಲೆಯನ್ನು ಏರಿಸಬಲ್ಲರು, ಇಳಿಸಬಲ್ಲರು. ಅವರ ಲಾಬಿಯಿಂದಲೇ ರೇಷ್ಮೆ ಗೂಡಿನ ಬೆಲೆ ಏರಿಳಿತವಾಗುತ್ತಿರುತ್ತದೆ. ಕೇಂದ್ರ ಸರ್ಕಾರದ ಮೇಲೆ ಅವರು ಹಿಡಿತ ಸಾಧಿಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸುತ್ತಿದ್ದಾರೆ.

ಇದರ ಜೊತೆಗೆ ಒರಿಜಿನಲ್ ರೇಷ್ಮೆಯಂತೆಯೇ ಕಾಣುವ ಕೃತಕ ರೇಷ್ಮೆ ಸೂರತ್‌ನಿಂದ ಬೆಂಗಳೂರಿಗೆ ಬರುತ್ತಿದೆ ಎನ್ನುವ ಮಾತುಗಳೂ ಇವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ರೇಷ್ಮೆಯನ್ನು ಕೇಳುವವರೇ ಇಲ್ಲ.

ರೇಷ್ಮೆಮೋದಿ ಸರ್ಕಾರ ರೇಷ್ಮೆ ನೂಲಿನ ಮೇಲೆ  ಶೇ.5ರಷ್ಟು ಜಿಎಸ್‌ಟಿ ಹಾಕಿದ್ದು ಕೂಡ ಬೆಲೆ ಕುಸಿತಕ್ಕೆ ಒಂದು ಕಾರಣ ಎನ್ನುವ ವಿಶ್ಲೇಷಣೆಯಿದೆ.

ಸರ್ಕಾರ ಮಧ್ಯಪ್ರವೇಶ ಮಾಡಿ ಕಚ್ಚಾ ರೇಷ್ಮೆಯನ್ನು ಕೊಳ್ಳಲು ಮುಂದಾಗಬೇಕು ಎನ್ನುವುದು ರೈತರ ಬೇಡಿಕೆ. ಬಿಜೆಪಿ ಸರ್ಕಾರವಿದ್ದಾಗ ಆಗ ರೇಷ್ಮೆ ಸಚಿವರಾಗಿದ್ದ ನಾರಾಯಣಗೌಡರ ನೇತೃತ್ವದಲ್ಲಿ ಈ ಕುರಿತ ಸಭೆ ನಡೆದಿತ್ತು. ನಂತರ ಯಾವೊಂದು ಕ್ರಮವನ್ನೂ ಕೈಗೊಂಡಿರಲಿಲ್ಲ. ಈಗಲಾದರೂ ಸರ್ಕಾರ ರೇಷ್ಮೆ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡಬೇಕು. ಅದರಿಂದ ಗೂಡಿನ ಬೆಲೆ ಸ್ಥಿರಗೊಳ್ಳಲು ಸಾಧ್ಯವಾಗುತ್ತದೆ ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ: ಬೆಲೆ ಏರಿಕೆ ಯಾಕಾಗುತ್ತಿದೆ? ಅದರ ಲಾಭ ಯಾರಿಗೆ? ಪ್ರೊ. ಚಂದ್ರ ಪೂಜಾರಿ ಬರೆಹ

ಮಳೆ ಕೊರತೆ, ರೋಗಬಾಧೆ, ಹವಾಮಾನ ವೈಪರೀತ್ಯದಂಥ ಹಲವು ಸವಾಲುಗಳನ್ನು ವಿಪರೀತ ಶ್ರಮದಿಂದ ಎದುರಿಸಿ ರೈತರು ದಾಖಲೆ ಪ್ರಮಾಣದಲ್ಲಿ ರೇಷ್ಮೆ ಬೆಳೆಯುತ್ತಿದ್ದರೂ ಅದಕ್ಕೆ ಸರಿಯಾದ ಮಾರುಕಟ್ಟೆ ಒದಗಿಸಲು ನಮ್ಮ ಸರ್ಕಾರಗಳು ಯಾವತ್ತೂ ಪ್ರಯತ್ನಿಸಿಯೇ ಇಲ್ಲ. ರೇಷ್ಮೆ ಬೆಳೆಗಾರರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಇರುವ ಮಾರುಕಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯಗಳಂಥ ಮೂಲಸೌಕರ್ಯ ಕೊರತೆ ಇದೆ. ಹೆಚ್ಚಿನ ಬೆಲೆ ಸಿಗಬಹುದು ಎಂದು ಆಶಿಸಿ ಕೋಲಾರ, ಚಿಕ್ಕಬಳ್ಳಾಪುರಗಳ ರೈತರು ರಾಮನಗರಕ್ಕೆ ಹೋಗುತ್ತಾರೆ. ಅದೇ ರೀತಿ ಕನಕಪುರ, ರಾಮನಗರಗಳ ರೈತರು ಕೊಳ್ಳೇಗಾಲಕ್ಕೆ ಹೋಗುತ್ತಾರೆ.

ಹೀಗೆ ದೂರದ ಊರುಗಳಿಂದ ಬರುವ ರೈತರನ್ನು ಶೋಷಣೆ ಮಾಡುವ ದಲ್ಲಾಳಿಗಳ ಕಾಟವೂ ಹೆಚ್ಚಾಗಿದೆ. ದಲ್ಲಾಳಿಗಳು ರೈತರ ಮೇಲೆ ಹಲ್ಲೆ ಮಾಡಿದ ಘಟನೆಗಳೂ ಕೂಡ ನಡೆದಿವೆ. ಅವರಿಗೆ ಅಧಿಕಾರಿಗಳ ಬೆಂಬಲವಿರುತ್ತದೆ. ಇವನ್ನೆಲ್ಲ ಸಹಿಸಿಕೊಂಡು ಹೇಗೋ ರೇಷ್ಮೆ ಬೆಳೆದು ಬದುಕು ನಡೆಸುತ್ತಿದ್ದ ರೈತರಿಗೆ ಈಗ ತೀವ್ರ ಬೆಲೆ ಕುಸಿತ ಆಘಾತವುಂಟು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ ತುರ್ತಾಗಿ ಇತ್ತ ಗಮನ ಹರಿಸಬೇಕಿದೆ. ರೇಷ್ಮೆ ಬೆಳೆಗಾರರ ಸಂಕಷ್ಟಗಳನ್ನು ಕೊಂಚವಾದರೂ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಸಿಪಿಎಂ ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ಎಂ.ಪಿ.ಮುನಿವೆಂಕಟಪ್ಪ

ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ...

ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ

ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ...

ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ...

ಚಿಂತಾಮಣಿ | ಬೊಲೆರೋ ಟೆಂಪೋ ಬಸ್ ನಡುವೆ ಅಪಘಾತ; ಚಾಲಕ ಸಾವು

ಬೊಲೆರೋ ಟೆಂಪೊಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ...