ಟೆಕ್ಸ್ಟ್ ನೆಕ್ (Text Neck)- ಮೊಬೈಲ್ ಫೋನುಗಳನ್ನು ತಾಸುಗಟ್ಟಲೆ ನೋಡುವುದು ಮತ್ತು ಅವುಗಳಲ್ಲಿ ತಾಸುಗಟ್ಟಲೆ ಮೆಸೇಜು ಟೈಪಿಸುವ ಚಟುವಟಿಕೆಯಿಂದ ಕತ್ತು ನೋವು ಗ್ಯಾರಂಟಿ. ಸ್ನಾಯುಗಳು-ಅಸ್ಥಿಪಂಜರ ತೀವ್ರ ಒತ್ತಡಕ್ಕೆ ತುತ್ತಾಗಿ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಮಾಂಸಪೇಶಿಗಳು ದುರ್ಬಲವಾಗಿ ಗೋಣು ಆಡಿಸುವುದು ಅಕ್ಕಪಕ್ಕಕ್ಕೆ ಸಲೀಸಾಗಿ ಹೊರಳಿಸುವುದು ದುಸ್ತರವೆನಿಸುತ್ತದೆ. ಈ ಸ್ಥಿತಿಯನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ದಾರಿ.
ತಲೆಯ ತೂಕ 27 ಕೇಜಿ!
ತಟಸ್ಥ ಭಂಗಿಯಲ್ಲಿ ತಲೆಯ ತೂಕ ಸುಮಾರು ಐದೂವರೆ ಕೆ.ಜಿ.ಗಳು. ಆದರೆ ಬಗ್ಗಿಸುವ ಅಥವಾ ಮಡಚುವ ನಾನಾ ಭಂಗಿಗಳಲ್ಲಿ ಈ ತೂಕ 12.25 ಕೆಜಿ, 18.14 ಕೆಜಿ, 22.23 ಕೆಜಿ ಹಾಗೂ 27.22 ಕೆಜಿಗಳಿಗೆ ಹೆಚ್ಚುತ್ತದೆ. ಸ್ಮಾರ್ಟ್ ಫೋನ್ ನೋಡುವವರ ನೋಟ ಬಹುತೇಕ ಕೆಳಕ್ಕೆ ಬಾಗಿರುತ್ತದೆ. ಕತ್ತು ಬಹುಕಾಲ ಮುಂದಕ್ಕೆ ಚಾಚಿರುತ್ತದೆ. ಕುತ್ತಿಗೆಯ ಭಾಗದ ಬೆನ್ನುಮೂಳೆಯ ಮೇಲೆ ಒತ್ತಡ ಹೆಚ್ಚುತ್ತದೆ.ಈ ಸ್ಥಿತಿಯನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ದಾರಿ.