ಕೃಷಿ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅನುವಾಗುವಂತೆ ಕ್ಷೇತ್ರ ಮಟ್ಟದಲ್ಲಿ ಖಾಲಿ ಇರುವ 750 (100 ಕೃಷಿ ಅಧಿಕಾರಿಗಳು ಮತ್ತು 650 ಸಹಾಯಕ ಕೃಷಿ ಅಧಿಕಾರಿಗಳು) ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ವಿಧಾನಸೌಧದಲ್ಲಿ ಕೃಷಿ ಇಲಾಖೆಯ 2023-24 ನೇ ಸಾಲಿನ ಇದುವರೆಗಿನ ಸಾಧನೆಗಳ ಕುರಿತು ಸುದ್ದಿಗೋಷ್ಠಿ ನಡೆಸಿದರು.
“4 ಉಪ ಕೃಷಿ ನಿರ್ದೇಶಕರು, 292 ಸಹಾಯಕ ಕೃಷಿ ನಿರ್ದೇಶಕರು, 253 ಕೃಷಿ ಅಧಿಕಾರಿಗಳು 33 ಸಿಬ್ಬಂದಿಗಳು ಸೇರಿದಂತೆ ಒಟ್ಟು 582 ಹುದ್ದೆಗಳಿಗೆ ಮುಂಬಡ್ತಿ ನೀಡಲಾಗಿದೆ. ಕೃಷಿ ಭಾಗ್ಯ ಯೋಜನೆಯನ್ನು ಮಳೆಯಾಶ್ರಿತ 24 ಬರಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ರೂ. 100.00 ಕೋಟಿಗಳ ಅನುದಾನದೊಂದಿಗೆ ಸುಮಾರು 10,000 ಕೃಷಿ ಹೊಂಡಗಳನ್ನು ನಿರ್ಮಿಸುವುದರ ಮೂಲಕ ಅನುಷ್ಟಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿಯಲ್ಲಿ ಯಾಂತ್ರಿಕತೆಯನ್ನು ಪ್ರೋತ್ಸಾಹಿಸಲು 63783 ಫಲಾನುಭವಿಗಳಿಗೆ (ಟ್ರ್ಯಾಕ್ಟರ್-370, ಪವರ್ ಟಿಲ್ಲರ್-5946, ಸ್ವಯಂಚಾಲಿತ ಕೃಷಿ ಯಂತ್ರೋಪಕರಣಗಳು-12060 ಹಾಗೂ ಟ್ರ್ಯಾಕ್ಟರ್/ಇಂಜಿನ್/ ಮೋಟರ್ ಚಾಲಿತ ಯಂತ್ರೋಪಕರಣಗಳು-36907) ಮತ್ತು 8500 ಕೃಷಿ ಸಂಸ್ಕರಣಾ ಘಟಕಗಳಿಗೆ ರೂ.284.92 ಕೋಟಿ ಸಹಾಯಧನ ನೀಡಲಾಗಿರುತ್ತದೆ. 100 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ರೂ.50.00 ಕೋಟಿಗಳ ಅನುದಾನ ಒದಗಿಸಲಾಗಿದೆ ಎಂದರು.
ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ರೂ.484.00 ಕೋಟಿ ಸಹಾಯಧನ
2.34 ಲಕ್ಷ ಫಲಾನುಭವಿಗಳಿಗೆ ಸುಮಾರು 2.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ರೂ.484.00 ಕೋಟಿ ಸಹಾಯಧನ ನೀಡಲಾಗಿರುತ್ತದೆ. ವಿಶೇಷ ಘಟಕ ಉಪಯೋಜನೆಯಡಿ ಎಲ್ಲ ಪರಿಶಿಷ್ಟ ಜಾತಿ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಸಹಾಯಧನವನ್ನು ನೀಡಲಾಗುತ್ತದೆ ಹಾಗು ಅರ್ಜಿ ಹಾಕಿದ ಎಲ್ಲ ರೈತರಿಗೆ 48 ಗಂಟೆಯೊಳಗೆ ಕಾರ್ಯಾದೇಶ ನೀಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ʼಹಸಿವು ಮುಕ್ತ ಕರ್ನಾಟಕʼಕ್ಕೆ ಬೇಕಿದೆ ಅಧಿಕಾರಿಗಳ ಬದ್ಧತೆ
ರೈತ ಸಿರಿ ಯೋಜನೆಯಡಿ ಸಿರಿಧಾನ್ಯಗಳ ಉತ್ಪಾದನೆ, ಉತ್ಪಾದಕತೆ ಮತ್ತು ಬಳಕೆಯನ್ನು ಹೆಚ್ಚಿಸಲು ಸಿರಿಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ ರೂ. 10,000 ದಂತೆ ಗರಿಷ್ಠ 2.00 ಹೆಕ್ಟೇರ್‌ಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೆ 8521 ರೈತರಿಗೆ ರೂ.8.56 ಕೋಟಿಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲು ರೂ. 10.00 ಕೋಟಿಗಳ ಅನುದಾನ ಒದಗಿಸಲಾಗಿದ್ದು, 48 ನವೋದ್ಯಮಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ 41 ಒಪ್ಪಂದಗಳು
05.01.2024 ರಿಂದ 07.01.2024 ರವರೆಗೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳದಲ್ಲಿ 16 ವಿವಿಧ ರಾಜ್ಯಗಳು ಹಾಗೂ ಎರಡು ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದು, ಮೇಳದಲ್ಲಿ ಸುಮಾರು ರೂ.150.00 ಕೋಟಿ ಮೌಲ್ಯದ 41 ಒಪ್ಪಂದಗಳಾಗಿವೆ.
ರೈತ ಸಮುದಾಯದ ಕಲ್ಯಾಣಕ್ಕಾಗಿ ಕೃಷಿ ಇಲಾಖೆ ವತಿಯಿಂದ ವಿವಿಧ ಯೋಜನೆ/ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು, ಈ ಯೋಜನೆಗಳ ಕುರಿತು ರೈತರು ಮಾಹಿತಿ ಪಡೆಯಲು ಅನುಕೂಲವಾಗುವಂತೆ ನೂತನವಾಗಿ “ರೈತ ಕರೆ ಕೇಂದ್ರ”ವನ್ನು 1800-425-3553 ಏಕರೂಪ ಸಂಖ್ಯೆಯೊಂದಿಗೆ ಸ್ಥಾಪಿಸಲಾಗಿದೆ ಎಂದು ಕೃಷಿ ಸಚಿವರು ಹೇಳಿದರು.
2022-23ನೇ ಸಾಲಿನಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಗೊಳಗಾದ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ರೈತರಿಗೆ ಇಲ್ಲಿಯವರೆಗೆ 2,98,338 ರೈತರ ಬ್ಯಾಂಕ್ ಖಾತೆಗೆ ರೂ. 223.00 ಕೋಟಿ ಪರಿಹಾರವನ್ನು ನೇರ ನಗದು ಮೂಲಕ ವರ್ಗಾಯಿಸಲಾಗಿದೆ. ಪರಿಕರಗಳ ವಿತರಣೆಯನ್ನು ಸುಗಮವಾಗಿ ಹಾಗೂ ಪಾರದರ್ಶಕತೆಯನ್ನು ನಿರ್ವಹಿಸಲು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿರುವ ಎಲ್ಲಾ ಪರಿಕರಗಳಿಗೆ ಕೆ–ಕಿಸಾನ್ ತಂತ್ರಾಂಶದಲ್ಲಿ QR code ಅಳವಡಿಸಲಾಗಿದೆ ಎಂದು ಎನ್.ಚಲುವರಾಯಸ್ವಾಮಿ ತಿಳಿಸಿದರು.
13.09ಲಕ್ಷ ರೈತರಿಗೆ 6.12 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ
2023-24ನೇ ಸಾಲಿನಲ್ಲಿ 6.12 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳನ್ನು 13.09 ಲಕ್ಷ ರೈತರಿಗೆ ರೂ.155.36ಕೋಟಿ ಸಹಾಯಧನದಲ್ಲಿ ವಿತರಣೆ ಮಾಡಲಾಗಿದೆ. 2023-24ನೇ ಸಾಲಿನಲ್ಲಿ 42.27 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಿ ಸಕಾಲದಲ್ಲಿ ಪೂರೈಕೆಗಾಗಿ ಜಿಲ್ಲಾವಾರು, ಮಾಹೆವಾರು ಮತ್ತು ಸಂಸ್ಥೆವಾರು ಸರಬರಾಜು ಮಾಡುವ ಸಿದ್ದತೆ ಮಾಡಲಾಗಿದೆ.
ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ 24.51 ಲಕ್ಷ ರೈತ ಪ್ರಸ್ತಾವನೆಗಳು ಬಂದಿದ್ದು,20.10 ಲಕ್ಷ ಹೇಕ್ಟೆರ್ ಪ್ರದೇಶಕ್ಕೆ ನೋಂದಣಿಯಾಗಿದ್ದು, ಬೆಳೆ ವಿಮೆ ಪರಿಹಾರ ಲೆಕ್ಕಾಚಾರ ಪ್ರಗತಿಯಲ್ಲಿರುತ್ತದೆ. ಬಿತ್ತನೆ ವೈಫಲ್ಯ, ಮಧ್ಯಂತರ ಬೆಳೆ ವಿಮೆ ಪರಿಹಾರ, ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ ಹಾಗೂ ಕೊಯ್ಲಿನ ನಂತರ ಬೆಳೆ ನಷ್ಟದಡಿ 8.09 ಲಕ್ಷ ರೈತ ಫಲಾನುಭವಿಗಳಿಗೆ ರೂ.574.52 ಕೋಟಿಗಳ ಬೆಳೆ ವಿಮೆ ಪರಿಹಾರ ವಿಮಾ ಸಂಸ್ಥೆಗಳಿಂದ ಇತ್ಯರ್ಥಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ಮೂಲಕ ರೂ.167.19 ಕೋಟಿ ಮೌಲ್ಯದ 2.40 ಲಕ್ಷ ಕ್ವಿಂಟಾಲ್ ವಿವಿಧ ಬೆಳೆ/ತಳಿಗಳ ಪ್ರಮಾಣಿತ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಇದಲ್ಲದೆ, ನಿಗಮದ ಮೂಲಕ ರಸಗೊಬ್ಬರ ವಿವಿಧ ಗ್ರೇಡ್ ಗಳ ಒಟ್ಟು 1.18 ಲಕ್ಷ ಮೆಟ್ರಿಕ್ ಟನ್ ಗಳ ಕಾಪು ದಾಸ್ತಾನು ಮಾಡಿ ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಜಲಾನಯನ ಅಭಿವೃದ್ಧಿ ಯೋಜನೆಗಳಡಿ 4222 ನೀರು ಸಂಗ್ರಹಣಾ ವಿನ್ಯಾಸಗಳ ನಿರ್ಮಾಣ ಮಾಡಲಾಗಿದೆ. 62,475 ಹೆಕ್ಟೇರ್ ಪ್ರದೇಶವನ್ನು ಉಪಚರಿಸಿ, ರೂ. 282.97 ಕೋಟಿ ವೆಚ್ಚ ಭರಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ, 44,584 ಹೆಕ್ಟೇರ್ ಬದು ನಿರ್ಮಾಣ ಮತ್ತು ಕೃಷಿ ಹೊಂಡ ಸೇರಿದಂತೆ 5176 ವಿವಿಧ ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆಗಳನ್ನು ಅನುಷ್ಠಾನ ಮಾಡಿ, 81.69 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಸಿಎಂ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ
ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಅನುವಾಗುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಂಪರ್ಕ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರದ ರಚನೆ ಮಾಡಲಾಗುವುದು. ರಾಜ್ಯದ ಬರಪೀಡಿತ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಮಾಡಲು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಪ್ರತಿ ವರ್ಷ 1,000 ದಂತೆ ಒಟ್ಟು 5,000 ಸಣ್ಣ ಸರೋವರಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಲಾಗುವುದು.
ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಪ್ರಾಥಮಿಕ ಬಂಡವಾಳದ ಸಹಾಯವನ್ನು ಸೇರಿದಂತೆ 1416 ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲಾಗಿದ್ದು ರೂ 421.27 ಕೋಟಿಯಷ್ಟು ಬಂಡವಾಳವು ಈ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತಿದೆ ಎಂದು ಕೃಷಿ ಸಚಿವರು ಹೇಳಿದರು.
ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆ
ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ನಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪಿಸುವ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಗ್ರಾಮಾಂತರದ ಪೂಜೇನಹಳ್ಳಿಯಲ್ಲಿ ಸ್ಥಾಪಿಸಲಾಗುವುದು ಎಂದು ಚಲುವರಾಯಸ್ವಾಮಿ ತಿಳಿಸಿದರು.
