ಭಾರತೀಯ ಮಾನಕ ಸಂಸ್ಥೆ (BIS) ನಿಗದಿಪಡಿಸಿರುವ ಮಾನದಂಡಗಳನ್ನು ಪಾಲಿಸದ ಆಟಿಕೆಗಳ ಮಾರಾಟಕ್ಕೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ವಿಧಿಸಿರುವ ₹5 ಲಕ್ಷ ದಂಡವನ್ನು ಪ್ರಶ್ನಿಸಿ ಇ-ಕಾಮರ್ಸ್ ಸಂಸ್ಥೆ Flipkart ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು CCPAಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ವಿಚಾರಣೆ ವೇಳೆ ₹5 ಲಕ್ಷದಷ್ಟು ಮೊತ್ತವನ್ನು ಪಾವತಿಸಲು ಫ್ಲಿಪ್‌ಕಾರ್ಟ್ ಹಿಂದೇಟು ಹಾಕುತ್ತಿರುವುದನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು. “ಇದು ಕೇವಲ ₹5 ಲಕ್ಷದ ಮೊತ್ತ. ಇದನ್ನ ಹೆಚ್ಚಿಸಬೇಕೆಂದು ನೀವು ಬಯಸುತ್ತೀರಾ?” ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಇದಕ್ಕೆ ಫ್ಲಿಪ್‌ಕಾರ್ಟ್ ಪರ ಹಿರಿಯ ವಕೀಲ ವಿಕ್ರಂ ಹುಯಿಗೋಲ್, ದಂಡ ಪಾವತಿಸಿದರೆ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಕಾರಣಕ್ಕೆ ಸಂಸ್ಥೆ ಆಕ್ಷೇಪಿಸುತ್ತಿದೆ ಎಂದು ತಿಳಿಸಿದರು. “₹5 ಲಕ್ಷ ದೊಡ್ಡ ಮೊತ್ತವಲ್ಲ. ಆದರೆ ಅದನ್ನು ಪಾವತಿಸುವುದರಿಂದ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಂತಾಗುತ್ತದೆ. ಹೈಕೋರ್ಟ್ ನೋಟಿಸ್ ಜಾರಿ ಮಾಡಿದರೆ, ಸದ್ಯಕ್ಕೆ ಪ್ರತಿಭಟನೆಯ ಹಕ್ಕನ್ನು ಕಾಯ್ದುಕೊಂಡೇ ದಂಡ ಪಾವತಿಸುತ್ತೇವೆ” ಎಂದು ಅವರು ಹೇಳಿದರು.
ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ತಪ್ಪಾಗಿದೆ ಎಂದು ಒಪ್ಪಿಕೊಂಡು ಮುಂದೆ ಸಾಗುವುದು ಸುಲಭ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. “ಎಲ್ಲರೂ ತಪ್ಪು ಮಾಡುತ್ತಾರೆ. ತಪ್ಪನ್ನು ಒಪ್ಪಿಕೊಂಡು ಮುಂದೆ ಹೋಗಿ. ಮತ್ತೆ ಅದೇ ತಪ್ಪು ಮಾಡಬೇಡಿ. ಇಲ್ಲವಾದರೆ ದಂಡದ ಮೊತ್ತ ಹೆಚ್ಚಾಗುವ ಸಾಧ್ಯತೆಯೂ ಇದೆ” ಎಂದು ಅವರು ಎಚ್ಚರಿಸಿದರು.
ಆದರೂ, ಫ್ಲಿಪ್‌ಕಾರ್ಟ್ ಪರ ವಕೀಲರು ಸಂಸ್ಥೆ ಸದ್ಯಕ್ಕೆ ದಂಡವನ್ನು ‘ಪ್ರತಿಭಟನೆಯೊಂದಿಗೆ’ ಪಾವತಿಸಲು ಸಿದ್ಧವಿದೆ. ಆದರೆ CCPAಯ ಆದೇಶವನ್ನು ಪ್ರಶ್ನಿಸುವ ಕಾನೂನು ಹೋರಾಟವನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಫ್ಲಿಪ್‌ಕಾರ್ಟ್ ಪರ ಮತ್ತೊಂದು ಪ್ರಮುಖ ವಾದವೆಂದರೆ, BIS ಮಾನದಂಡಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಈಗಾಗಲೇ BIS ಕಾಯ್ದೆ, 2016ರ ಅಡಿಯಲ್ಲಿ ಪ್ರತ್ಯೇಕ ನಿಯಂತ್ರಣ ವ್ಯವಸ್ಥೆ ಇದೆ. ಹೀಗಿರುವಾಗ CCPAಗೆ ಇದೇ ಕಾರಣಕ್ಕೆ ದಂಡ ವಿಧಿಸುವ ಅಧಿಕಾರವಿದೆಯೇ ಎಂಬ ಪ್ರಶ್ನೆಯನ್ನು ಸಂಸ್ಥೆ ಎತ್ತಿದೆ. ಇದು ಗರಿಷ್ಠವಾಗಿ BIS ಕಾಯ್ದೆಯ ಉಲ್ಲಂಘನೆಯಾಗಬಹುದು. ಅದಕ್ಕೆ ಈಗಾಗಲೇ ಪ್ರತ್ಯೇಕ ನಿಯಂತ್ರಣ ವ್ಯವಸ್ಥೆ ಇದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆದರೆ, CCPA ಪತ್ತೆಹಚ್ಚಿರುವ ಮತ್ತೊಂದು ಅಂಶವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. BIS ಮಾನದಂಡಗಳನ್ನು ಪಾಲಿಸದ ಆಟಿಕೆಗಳನ್ನು ಫ್ಲಿಪ್‌ಕಾರ್ಟ್‌ನ ‘Assured’ ಟ್ಯಾಗ್‌ನೊಂದಿಗೆ ಮಾರಾಟ ಮಾಡಲಾಗಿತ್ತು. ಇದರಿಂದ ಗ್ರಾಹಕರು ಆ ಉತ್ಪನ್ನದ ಗುಣಮಟ್ಟವನ್ನು ಫ್ಲಿಪ್‌ಕಾರ್ಟ್ ಕೂಡ ಪರಿಶೀಲಿಸಿದೆ ಎಂದು ನಂಬುವ ಸಾಧ್ಯತೆಯಿದೆ ಎಂದು CCPA ಅಭಿಪ್ರಾಯಪಟ್ಟಿತ್ತು.
ಇದನ್ನು ಉಲ್ಲೇಖಿಸಿದ ನ್ಯಾಯಾಲಯ, “ಇವು ಮಕ್ಕಳು ಬಳಸುವ ಆಟಿಕೆಗಳು. ಪುಟ್ಟ ಮಕ್ಕಳು ಆಟಿಕೆಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಪ್ಲಾಸ್ಟಿಕ್ ಗುಣಮಟ್ಟ ಉತ್ತಮವಾಗಿಲ್ಲದಿದ್ದರೆ ಅದರ ಪರಿಣಾಮ ಗಂಭೀರವಾಗಬಹುದು ಎಂದು ತಿಳಿಸಿತು. ಅಲ್ಲದೆ ಇಂತಹ ಆಟಿಕೆಗಳನ್ನು ಖರೀದಿಸಿದ ಗ್ರಾಹಕರ ವಿಳಾಸಗಳು ಫ್ಲಿಪ್‌ಕಾರ್ಟ್ ಬಳಿ ಇವೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಅಗತ್ಯವಿದ್ದರೆ ಉತ್ಪನ್ನಗಳನ್ನು ಹಿಂಪಡೆದು (recall) ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಬಗ್ಗೆ ಪರಿಶೀಲಿಸಬಹುದು ಎಂದೂ ನ್ಯಾಯಾಲಯ ಹೇಳಿತು.
“ನೀವು ಈ ಉತ್ಪನ್ನಗಳನ್ನು ಪೂರೈಸಿದ್ದೀರಿ. ಹೀಗಾಗಿ ಖರೀದಿಸಿದವರ ವಿಳಾಸಗಳು ನಿಮ್ಮ ಬಳಿ ಇರಬೇಕು. ಮಕ್ಕಳ ಆಟಿಕೆಗಳ ವಿಷಯದಲ್ಲಿ ಇಂತಹ ಕ್ರಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಇದಕ್ಕೆ ಪ್ರತಿಕ್ರಿಯಿಸಿದ ಫ್ಲಿಪ್‌ಕಾರ್ಟ್ ಪರ ವಕೀಲರು, ಆಟಿಕೆಗಳಲ್ಲಿ ಅಪಾಯಕಾರಿ ವಸ್ತುಗಳನ್ನು ಬಳಸಲಾಗಿದೆ ಎಂಬ ಯಾವುದೇ ಆರೋಪವಿಲ್ಲ . ಪ್ರಕರಣದ ಆರೋಪ ಕೇವಲ ಆಟಿಕೆಗಳು BIS ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸಿಲ್ಲ ಎಂಬುದಕ್ಕೆ ಸೀಮಿತವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ನೇಪಾಳ | ಎಲ್ಲವನ್ನೂ ಕೊಚ್ಚಿಕೊಂಡು ಹೋದ ಪ್ರವಾಹ ಇದೊಂದು ಮನೆಯನ್ನ ಬಿಟ್ಟದ್ದು ಹೇಗೆ?
ವಿಚಾರಣೆ ಬಳಿಕ ಹೈಕೋರ್ಟ್ CCPAಗೆ ನೋಟಿಸ್ ಜಾರಿ ಮಾಡಿದ್ದು, ಫ್ಲಿಪ್‌ಕಾರ್ಟ್ ಸದ್ಯಕ್ಕೆ ₹5 ಲಕ್ಷ ದಂಡವನ್ನು ಪ್ರತಿಭಟನೆಯೊಂದಿಗೆ ಪಾವತಿಸುವುದಾಗಿ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿತು.
ಅಲ್ಲದೆ, ತನ್ನ ವೇದಿಕೆಯಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳು BIS ಮಾನದಂಡಗಳನ್ನು ಪಾಲಿಸುವಂತೆ ಮಾಡಲು ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಫ್ಲಿಪ್‌ಕಾರ್ಟ್‌ಗೆ ನ್ಯಾಯಾಲಯ ಸೂಚಿಸಿದೆ.
CCPA ನೀಡಿರುವ ಮತ್ತೊಂದು ನಿರ್ದೇಶನವಾದ ಗ್ರಾಹಕರ ಕುಂದುಕೊರತೆ ಪರಿಹಾರಾಧಿಕಾರಿಯ (grievance officer) ವಿವರಗಳನ್ನು ಫ್ಲಿಪ್‌ಕಾರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು ಎಂಬ ಅಂಶವನ್ನೂ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಲಾಗಿದೆ.





