ಅಂಬೇಡ್ಕರರ ಉನ್ನತ ವ್ಯಾಸಂಗದ ವಿದ್ಯಾರ್ಥಿ ಜೀವನವು ವಿಶ್ವದ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕರಣೀಯವಾಗಿದೆ. ಅವರೊಬ್ಬ ಮಾದರಿ ವಿದ್ಯಾರ್ಥಿ. ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆಂದು ಡಾ. ಬಾಬಾಸಾಹೇಬ್ ಅಂಬೇಡ್ಕರರು ನಿರೂಪಿಸಿದ್ದಾರೆ. ಶೋಷಿತರಿಗೆ ಕೊಟ್ಟ “ಶಿಕ್ಷಣ, ಹೋರಾಟ, ಸಂಘಟನೆ” ಎಂಬ ವಿಮೋಚನೆಯ ಮಂತ್ರದಲ್ಲಿ ಶಿಕ್ಷಣಕ್ಕೆ ಮೊದಲ ಆಧ್ಯತೆಯನ್ನು ಕೊಟ್ಟಿದ್ದಾರೆ.
ಭೀಮ್ರಾವ್ ರಾಮ್ಜಿ ಅಂಬೇಡ್ಕರರು 1907ರಲ್ಲಿ ಬಾಂಬೆಯ ಎಲ್ಫಿನ್ಸ್ಟೋನ್ ಹೈಸ್ಕೂಲಿನಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಒಟ್ಟು 750 ಅಂಕಗಳಿಗೆ 382 ಅಂಕಗಳನ್ನು ಪಡೆದರು. ಇದು ಉತ್ತಮ ಸಾಧನೆಯಾಗಿತ್ತು. ಇಡೀ ಶಾಲೆಯಲ್ಲಿ ಅವರೊಬ್ಬರು ಮಾತ್ರ ಅಸ್ಪೃಶ್ಯ ಜಾತಿಗೆ ಸೇರಿದ ವಿದ್ಯಾರ್ಥಿಯಾಗಿದ್ದರು. ಆಗಿನ ಕಾಲಕ್ಕೆ ಅಸ್ಪೃಶ್ಯ ಸಮುದಾಯದಿಂದ ಶಿಕ್ಷಣ ಪಡೆಯುವವರ ಸಂಖ್ಯೆಯು ಅತ್ಯಂತ ವಿರಳವಾಗಿತ್ತು. ಶಿಕ್ಷಕರು ಒಮ್ಮೆ ಲೆಕ್ಕ ಬಿಡಿಸಲು ಅಂಬೇಡ್ಕರರನ್ನು ಕಪ್ಪು ಹಲಗೆಯ ಕಡೆಗೆ ಕರೆದಾಗ ತರಗತಿಯ ಎಲ್ಲ ಸವರ್ಣೀಯ ವಿದ್ಯಾರ್ಥಿಗಳು ಅತ್ತ ಓಡಿ, ಕಪ್ಪು ಹಲಗೆಯ ಹಿಂದಿದ್ದ ತಮ್ಮ ಊಟದ ಡಬ್ಬಿಗಳನ್ನು ತೆಗೆದುಕೊಂಡರು. ಊಟದ ಡಬ್ಬಿಗಳು ಮೈಲಿಗೆಯಾದವೆಂದು ಆ ವಿದ್ಯಾರ್ಥಿಗಳು ಪೇಚಾಡಿದರು. ಹಳ್ಳಿಯಲ್ಲಾಗುತ್ತಿದ್ದ ಅಸ್ಪೃಶ್ಯತೆಯ ಅನುಭವಗಳೇ ಮುಂಬಯಿ ಮಹಾನಗರದಲ್ಲಿಯೂ ಅಂಬೇಡ್ಕರರಿಗಾದವು.
ಮೆಟ್ರಿಕ್ಯುಲೇಶನ್ ಪರೀಕ್ಷೆ ಪಾಸು ಮಾಡಿದ ಡಾ.ಅಂಬೇಡ್ಕರರ ಸಾಧನೆಯು ಅಸ್ಪೃಶ್ಯ ಸಮುದಾಯದಲ್ಲಿ ಸಂಚಲನವನ್ನು ಉಂಟುಮಾಡಿತು. ಸಮಾಜ ಬಾಂಧವರಿಂದ ಹರಿದುಬಂದ ಅಭಿಮಾನದ ಮಹಾಪೂರ. ಅಭಿನಂದನಾ ಸಮಾರಂಭದಲ್ಲಿ ಅವರ ಕುಟುಂಬ ಸ್ನೇಹಿತರಾದ ದಾದಾ ಕೆಲೂಸ್ಕರ್ ಅವರು ತಾವು ರಚಿಸಿದ್ದ ಬುದ್ದನ ಜೀವನ ಚರಿತ್ರೆಯ ಪುಸ್ತಕವೊಂದನ್ನು ನೆನಪಿನ ಕಾಣಿಕೆಯಾಗಿ ಅಂಬೇಡ್ಕರರಿಗೆ ನೀಡಿದರು. ಅದು ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು.
ಬಾಂಬೆಯ ಎಲ್ಫಿನ್ಸ್ಟೋನ್ ಕಾಲೇಜಿನಿಂದ 1909ರಲ್ಲಿ ಇಂಟರ್ಮೀಡಿಯಟ್ನಲ್ಲಿ ಉತ್ತೀರ್ಣತೆ. ಬಾಂಬೆ ವಿಶ್ವವಿದ್ಯಾಲಯದ ಅದೇ ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯ ಅಧ್ಯಯನ. ಬಿ.ಎ. ಪದವಿ ತರಗತಿಯಲ್ಲಿದ್ದ ಅಸ್ಪೃಶ್ಯ ಸಮುದಾಯದ ಏಕೈಕ ವಿದ್ಯಾರ್ಥಿ ಅವರು. ಬರೋಡಾ ಮಹಾರಾಜರಿಂದ ಮಾಸಿಕ 25 ರೂಪಾಯಿಗಳ ವಿದ್ಯಾರ್ಥಿ ವೇತನ ಸಿಕ್ಕಿತು. 1912ರಲ್ಲಿ ಬಿ.ಎ. ಪದವಿ ಪಡೆದರು. ಒಟ್ಟು 1000 ಅಂಕಗಳಿಗೆ 449 ಅಂಕ ಪಡೆದು ಉತ್ತಮ ಸಾಧನೆಗೈದರು.
ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಅವರ ಅಧ್ಯಯನದ ವಿಷಯಗಳಾಗಿದ್ದವು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ, ಇಂಗ್ಲೆಂಡಿನ ಗ್ರೇಸ್ ಇನ್ ಎಂಬ ಕಾನೂನು ಕಾಲೇಜು ಮತ್ತು ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರರ ಉನ್ನತ ವ್ಯಾಸಂಗ. ಇವರ ಉನ್ನತ ವ್ಯಾಸಂಗದ ವಿಷಯಗಳೆಂದರೆ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಕಾನೂನು ಅಧ್ಯಯನ ಮತ್ತು ಆಂತ್ರಾಪಾಲಜಿ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ
ಬರೋಡಾದ ಮಹಾರಾಜರಾದ ಸಯ್ಯಾಜಿರಾವ್ ಗಾಯಕವಾಡರು 1913ರಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ನಾಲ್ವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದರು. ಅವರಲ್ಲಿ ಡಾ. ಅಂಬೇಡ್ಕರ್ ಅವರು ಒಬ್ಬರಾಗಿದ್ದರು. ಮಹಾರಾಜರೊಂದಿಗೆ ಮಾಡಿಕೊಂಡ ಒಪ್ಪ್ಪಂದದಂತೆ ಅಂಬೇಡ್ಕರರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮುಗಿಸಿದ ನಂತರ ಭಾರತಕ್ಕೆ ವಾಪಸ್ಸಾಗಿ ಹತ್ತು ವರ್ಷಗಳ ಕಾಲ ಬರೋಡಾ ಮಹಾರಾಜರ ಸಂಸ್ಥಾನದಲ್ಲಿ ಸೇವೆ ಸಲ್ಲಿಸಬೇಕು ಎಂಬುದಾಗಿತ್ತು.
ಬರೋಡಾ ಸಂಸ್ಥಾನದಿಂದ ತಿಂಗಳಿಗೆ 11.5 ಬ್ರಿಟಿಷ್ ಪೌಂಡ್ಗಳ ವಿದ್ಯಾರ್ಥಿವೇತನ ಸಿಕ್ಕಿತು. ಜುಲೈ 1913ರಲ್ಲಿ ಅಂಬೇಡ್ಕರರು ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿಕೊಂಡರು. ಹಾರ್ಟ್ಲಿ ಹಾಲ್ನಲ್ಲಿ ಒಂದು ವಾರವಿದ್ದರು. ಅಲ್ಲಿನ ಆಹಾರ ಅವರಿಗೆ ಹಿಡಿಸಲಿಲ್ಲ. ಅಲ್ಲಿಂದ ಹೊರಟಿದ್ದು ಕಾಸ್ಮೋಪಾಲಿಟನ್ ಕ್ಲಬ್ಗೆ. ಇದು ಭಾರತೀಯ ವಿದ್ಯಾರ್ಥಿಗಳು ತಮಗಾಗಿ ರೂಪಿಸಿಕೊಂಡಿದ್ದ ವಸತಿತಾಣವಾಗಿತ್ತು. ಅಂತಿಮವಾಗಿ ಅವರು ಲಿವಿಂಗ್ಸ್ಟನ್ ಹಾಲ್ನ ದೊಡ್ಡ ಕೊಠಡಿಯಲ್ಲಿ ನವಲ್ ಭತೀನಾ ಎಂಬ ಪಾರ್ಸಿ ವಿದ್ಯಾರ್ಥಿಯೊಂದಿಗೆ ಉಳಿದುಕೊಂಡರು. ಭತೀನಾರವರು ಡಾ. ಅಂಬೇಡ್ಕರ್ ಅವರಿಗೆ ಜೀವಮಾನದ ಗೆಳೆಯರಾಗಿ ಉಳಿದರು. ವಿಶ್ಚವಿದ್ಯಾಲಯದ ಶೈಕ್ಷಣಿಕ ಮತ್ತು ಸಾಮಾಜಿಕ ವಾತಾವರಣ ಅವರಿಗೆ ಅಪಾರವಾಗಿ ಹಿಡಿಸಿತು. ವಿದ್ಯಾರ್ಥಿವೇತನದಲ್ಲಿ ಹಣ ಉಳಿಸಿ ಪುಸ್ತಕಗಳನ್ನು ಕೊಂಡರು. ಗ್ರಂಥಾಲಯದಲ್ಲಿ ಬಹುಕಾಲ ಕಳೆದು ಅಭ್ಯಾಸ ಮಾಡಿದರು. ಇವರ ದಿನದ ಒಟ್ಟು ಅಭ್ಯಾಸದ ಅವಧಿ 18 ಗಂಟೆಗಳಾಗಿತ್ತು. ದೈಹಿಕ ವ್ಯಾಯಾಮಕ್ಕಾಗಿ ವಾರದಲ್ಲಿ ಒಮ್ಮೆ ಮಾತ್ರ ವಾಯುವಿಹಾರಕ್ಕೆ ಉದ್ಯಾನವನಕ್ಕೆ ಹೋಗುತ್ತಿದ್ದರು.

ಅಮೆರಿಕದಲ್ಲಿ ಅಂಬೇಡ್ಕರರಿಗೆ ಅಸ್ಪೃಶ್ಯತೆಯ ಅನುಭವವಾಗಲಿಲ್ಲ. ಆದರೆ, ಬಾಬಾಸಾಹೇಬರಿಗೆ ಸ್ವದೇಶದಲ್ಲಿ ವಿದ್ಯಾಭ್ಯಾಸ ಮಾಡುವಾಗ ಸಾಲು ಸಾಲು ಅಸ್ಪೃಶ್ಯತೆ ಆಚರಣೆಯ ಅನುಭವಗಳಾಗಿದ್ದವು. ಇದರಿಂದ ಅವರು ರೋಸಿ ಹೋಗಿದ್ದರು. ಇವರ ಆಲೋಚನೆಗಳಿಗೆ ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದ ಸಾಮಾಜಿಕ ವ್ಯವಸ್ಥೆ, ಸಮಾನತೆ, ಸಾಮಾಜಿಕ ನ್ಯಾಯ ಇನ್ನಷ್ಟು ಕಾವು ಕೊಟ್ಟಿರಲೇಬೇಕು. ಭಾರತದ ಸಂದರ್ಭ ಮತ್ತು ತದನಂತರ ಅಮೆರಿಕದ ಸಂದರ್ಭ, ಹೀಗೆ ಎರಡು ವಿಭಿನ್ನ ನೆಲೆಗಳಲ್ಲಿ ಅಂಬೇಡ್ಕರರಿಗಾದ ಅನುಭವಗಳು ಅವರನ್ನು ಸಮಾಜ ಸುಧಾರಕನಾಗುವ ಬಹುದೊಡ್ಡ ದಾರಿಯತ್ತ ಕೊಂಡೊಯ್ದವು. ತಮ್ಮ ಮಾತೃಭೂಮಿಯ ಜನತೆಗೆ ವಿವಿಧ ಸ್ಥರಗಳಲ್ಲಾಗುತ್ತಿರುವ ಶೋಷಣೆ, ಅನ್ಯಾಯ, ಅಪಮಾನಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಚಿಂತಿಸತೊಡಗಿದರು. ಅಮೆರಿಕ ಸಂವಿಧಾನಕ್ಕೆ 14ನೇ ತಿದ್ದುಪಡಿಯನ್ನು ತಂದು ನೀಗ್ರೋ ಜನಾಂಗಕ್ಕೆ ಸ್ವಾತಂತ್ರ್ಯ ನೀಡಿದ್ದು, ಅಂಬೇಡ್ಕರರ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಿತು. ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಹಾಗೂ ನೀಗ್ರೋಗಳ ವಿಮೋಚನೆಗಾಗಿ ಪ್ರಯತ್ನಪಟ್ಟ ಬೂಕರ್ ಟಿ. ವಾಷಿಂಗ್ಟನ್ ಅವರ ವ್ಯಕ್ತಿತ್ವವು ಅಂಬೇಡ್ಕರರಿಗೆ ಹಿಡಿಸಿತು. ಬ್ರಿಟಿಷ್ ಇಂಡಿಯಾದಲ್ಲಿ, ಭಾರತೀಯರು ಸಾಮಾನ್ಯವಾಗಿ ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡ್, ಜರ್ಮನಿ ಮತ್ತು ಫ್ರ್ರಾನ್ಸ್ ದೇಶಗಳಿಗೆ ಹೋಗುತ್ತಿದ್ದರು. ಆದರೆ, ಅಂಬೇಡ್ಕರರಿಗೆ ಅಮೇರಿಕಾದಲ್ಲಿ ವ್ಯಾಸಂಗ ಮಾಡುವ ಸುವರ್ಣಾವಕಾಶ ಒದಗಿಬಂತು. ಇಡೀ ವಿಶ್ವವೇ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಮೆರಿಕದಿಂದ ಕಲಿತಿದೆಯೆನ್ನಬಹುದು.
ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಾದ ಎಡ್ವಿನ್ ಸೆಲಿಗ್ಮನ್, ಜಾನ್ ಡಿವೆ, ಜೇಮ್ಸ್ ಶಾಟ್ವೆಲ್, ಕ್ಲಾರ್ಕ್, ಸೀಗಲ್, ಮೂರ್, ಮಿಶೆಲ್, ಚಾಡ್ವಿಕ್, ಗಿಡ್ಡಿಂಗ್ಸ್, ಅಲೆಕ್ಸಾಂಡರ್ ಗೋಲ್ಡನ್ವೀಸರ್ ಮತ್ತು ಜೇಮ್ಸ್ ಹಾರ್ವೆ ರಾಬಿನ್ಸನ್ ಅವರನ್ನು ಅಂಬೇಡ್ಕರರು ಅಪಾರವಾಗಿ ಮೆಚ್ಚಿಕೊಂಡರು.
ಅಲ್ಲಿನ ವಿದ್ಯಾರ್ಥಿಗಳಷ್ಟೇ ಅಲ್ಲದೆ ಪ್ರಾಧ್ಯಾಪಕರೂ ಕೂಡ ಅಂಬೇಡ್ಕರರ ಜ್ಞಾನ ಮತ್ತು ವಿಶ್ಲೇಷಣಾ ಶಕ್ತಿಯನ್ನು ಇಷ್ಟಪಟ್ಟರು. ಆಗ ಅವರ ವಯಸ್ಸು ಕೇವಲ 22. ಅವರು ಬುದ್ದಿಜೀವಿಗಳೊಂದಿಗೆ ಗಾಡವಾದ ಸ್ನೇಹವನ್ನು ಬೆಳೆಸಿಕೊಳ್ಳಲು ಹಾತೊರೆದರು. ಅವರ ಪ್ರಾಧ್ಯಾಪಕರಲ್ಲಿ ಅನೇಕರು ‘ಇಪ್ಪತ್ತನೇ ಶತಮಾನದ ಆದಿ ಭಾಗದ ಅಮೇರಿಕನ್ ಚಿಂತಕರು-ಬುದ್ದಿಜೀವಿಗಳು ಎನಿಸಿಕೊಂಡವರು.
ಪ್ರೊ ಎಡ್ವಿನ್ ಸೆಲಿಗ್ಮನ್ ಅವರು ಲಾಲಾ ಲಜಪತ್ ರಾಯರ ಗೆಳೆಯರಾಗಿದ್ದರು. ಅವರೊಬ್ಬ ಪ್ರಖ್ಯಾತ ಅರ್ಥಶಾಸ್ತ್ರಜ್ಞರು. ಅಂಬೇಡ್ಕರರ ವ್ಯಕ್ತಿತ್ವವನ್ನು ರೂಪಿಸಿದವರು. ಅಂಬೇಡ್ಕರರು ಇವರೊಂದಿಗೆ ಅನೇಕ ವರ್ಷಗಳ ಕಾಲ ಸಂಪರ್ಕವಿಟ್ಟುಕೊಂಡಿದ್ದರು. ಡಾ. ಅಂಬೇಡ್ಕರರು 1936ರಲ್ಲಿ ಪ್ರಕಟಿಸಿದ ಅನ್ನಿಹಿಲೇಷನ್ ಆಫ್ ಕ್ಯಾಸ್ಟ್ (ಜಾತಿ ವಿನಾಶ) ಕೃತಿಯಲ್ಲಿ ಜಾನ್ ಡಿವೆ ಅವರನ್ನು ನೆನೆಯುತ್ತಾರೆ. ಜಾನ್ ಡಿವೆ ಅವರು ನನ್ನ ಗುರುಗಳು, ನಾನು ಅವರಿಗೆ ಸದಾ ಋಣಿ ಎನ್ನುತ್ತಾರೆ.
ಮಾಸ್ಟರ್ಸ್ ಪದವಿಯಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರ ವಿಷಯಗಳಿದ್ದವು. ಜತೆಗೆ, ಮಾಸ್ಟರ್ ಪದವಿಗಾಗಿ ʼಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮತ್ತು ಹಣಕಾಸು (Administration and Finance of East India Company)’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದರು. ಅವರು ಕೊಲಂಬಿಯ ವಿಶ್ವವಿದ್ಯಾಲಯದಿಂದ 1915ರಲ್ಲಿ ಉತ್ತಮ ಶ್ರೇಣಿಯಲ್ಲಿ ಎಂ.ಎ. ಪದವಿ ಪಡೆದರು. ಅವರನ್ನು ಅಭಿನಂದಿಸಲು ಅಲ್ಲಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳು ಸಂತೋಷಕೂಟ ಏರ್ಪಡಿಸಿದರು. ಅಂಬೇಡ್ಕರರ ಪ್ರತಿಭೆ ಮತ್ತು ಪಾಂಡಿತ್ಯ ಕುರಿತಂತೆ ಆಗಾಗ ಏರ್ಪಡಿಸಲಾದ ಸಂತೋಷಕೂಟಗಳಲ್ಲಿ ಚರ್ಚಿಸಲಾಗುತ್ತಿತ್ತು.
ಅಮೆರಿಕದಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಅಲ್ಲಿಂದ ತಮ್ಮ ತಂದೆಯ ಗೆಳೆಯರೊಬ್ಬರಿಗೆ ಪತ್ರ ಬರೆದರು. ಅವರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅವರು ಪ್ರೇರೇಪಿಸಿದ್ದರು. ಗಂಡು ಮಕ್ಕಳಿಗೆ ಶಿಕ್ಷಣ ಕೊಡಿಸಿದಂತೆ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸಬೇಕೆಂದು ಆಗ್ರಹಿಸಿದರು. ಆ ಶಿಕ್ಷಣದ ಫಲವನ್ನು ತಮ್ಮ ಮಗಳಲ್ಲಿ ತಾವು ಕಾಣಬಹುದು ಎಂದು ಮರಾಠಿ ಭಾಷೆಯ ಪತ್ರದಲ್ಲಿ ಬರೆದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿಯೇ ಡಾಕ್ಟರೇಟ್ ಪದವಿಯ ಅಧ್ಯಯನವನ್ನು ಮುಂದುವರೆಸಿದರು.
ಮಾನವಶಾಸ್ತ್ರದ ತಜ್ಞರಾದ ಅಲೆಕ್ಸಾಂಡರ್ ಗೋಲ್ಡನ್ವೀಸರ್ ಮೇ 9, 1916ರಂದು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ “ಭಾರತದಲ್ಲಿ ಜಾತಿಗಳು : ಅವುಗಳ ರಚನೆ, ಹುಟ್ಟು ಮತ್ತು ಬೆಳವಣಿಗೆ ”(Castes in India : Their Mechanism, Genesis and Development) ಎಂಬ ಲೇಖನವನ್ನು ಮಂಡಿಸಿದರು.
“ಜಾತಿಗೊಂದು ಸೀಮಿತ ಎಲ್ಲೆಯಿದೆ. ಅದು ಎಲ್ಲೆಯೊಳಗಿನ ಒಂದು ವರ್ಗ”ವೆಂದರು. ‘ದಿ ಇಂಡಿಯನ್ ಆಂಟಿಕ್ವರಿ’ (The Indian Antiquary) ಎಂಬ ಪತ್ರಿಕೆಯಲ್ಲದು ಮೇ 1917 ರ ಸಂಚಿಕೆಯಲ್ಲಿ ಪ್ರಕಟವಾಯಿತು. ಅದು ಅವರ ಮೊದಲ ಮುದ್ರಿತ ಲೇಖನ. ಅವರು ಅರ್ಥಶಾಸ್ತ್ರದಲ್ಲಿ 29, ಚರಿತ್ರೆಯಲ್ಲಿ 11, ಸಮಾಜಶಾಸ್ತ್ರದಲ್ಲಿ 6, ತತ್ವಶಾಸ್ತ್ರದಲ್ಲಿ 5, ಮಾನವಶಾಸ್ತ್ರದಲ್ಲಿ 4 ಮತ್ತು ರಾಜ್ಯಶಾಸ್ತ್ರದಲ್ಲಿ 3 ಕೋರ್ಸುಗಳನ್ನು ಅಭ್ಯಸಿಸಿದರು. ಜತೆಗೆ, ಫ್ರೆಂಚ್ ಮತ್ತು ಜರ್ಮನ್ ಭಾಷಾ ಕೋರ್ಸುಗಳನ್ನು ಕಲಿತರು. ಡಾಕ್ಟರೇಟ್ ಪದವಿಗಾಗಿ “ಭಾರತದ ರಾಷ್ಟ್ರೀಯ ಆದಾಯ – ಒಂದು ಚಾರಿತ್ರಿಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನ (National Dividend of India – a Historical and Analytical Study)” ಎಂಬ ಮಹಾಪ್ರಬಂಧವನ್ನು 1916 ರ ಜೂನ್ ತಿಂಗಳಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. 1917 ರ ಜೂನ್ ತಿಂಗಳಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರಾಪ್ತಿಯಾಯಿತು.
ಕಾಲಾನಂತರ, 1930 ರಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದ ಅಂಬೇಡ್ಕರರು “ನಾನು ಸಾಮಾಜಿಕ ನ್ಯಾಯವೆಂದರೆ ಏನೆಂದು ಅರ್ಥಮಾಡಿಕೊಂಡಿದ್ದು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ. ನನ್ನ ಜೀವಮಾನದ ಅತ್ಯುತ್ತಮ ಗೆಳೆಯರು ನನಗೆ ದಕ್ಕಿದ್ದು ಅಲ್ಲಿಯೇ. ಅವರೆಲ್ಲಾ ನನ್ನ ಸಹಪಾಠಿಗಳಾಗಿದ್ದರು. ಪ್ರೊ ಜಾನ್ ಡಿವೆ ಅವರ ಸಮಾನತೆಯ ಚಿಂತನೆ ಮತ್ತು ಸಾಮಾಜಿಕ ನ್ಯಾಯ ಸಿದ್ದಾಂತಗಳು ನನ್ನನ್ನು ಬಹಳವಾಗಿ ಆಕರ್ಷಿಸಿದವು” ಎಂದರು. ಅಲ್ಲಿ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಕಪ್ಪು ಜನಾಂಗದ ಸ್ನೇಹಿತರಿದ್ದರು. ಮಹಾತ್ಮ ಗಾಂಧಿಯವರಿಗೆ ದಕ್ಷಿಣ ಆಫ್ರಿಕಾದಲ್ಲಾದ ಅನುಭವಗಳು ಹಾಗೂ ಕಪ್ಪು ಜನರ ಬವಣೆಗಳು ಸ್ವಾತಂತ್ರ್ಯಕ್ಕಾಗಿ ತುಡಿಯುವ ಮನಸ್ಸು ಕೊಟ್ಟರೆ, ಅಂಬೇಡ್ಕರರಿಗೆ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯವು ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸ್ಪಷ್ಟೋಕ್ತಿಗಳನ್ನು ಸಾಕಾರಗೊಳಿಸಿತು.
ಲಂಡನ್ನಿನ ಗ್ರೇಸ್ ಇಸ್ ಮತ್ತು ಎಲ್.ಎಸ್.ಇ. ನಲ್ಲಿ ವ್ಯಾಸಂಗ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಪಡೆದ ನಂತರ ಅಂಬೇಡ್ಕರರು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ಗೆ ಹೊರಟರು. ಅಕ್ಟೋಬರ್, 1916ರಲ್ಲಿ ಲಂಡನ್ನಿನ ಗ್ರೇಸ್ ಇನ್ ಎಂಬ ಕಾನೂನು ಕಾಲೇಜಿನಲ್ಲಿ ಬ್ಯಾರಿಸ್ಟರ್-ಅಟ್-ಲಾ ಪದವಿಯ ಅಧ್ಯಯನಕ್ಕೆ ನೊಂದಾಯಿಸಿಕೊಂಡರು. ಇದೇ ಸಮಯದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್.ಎಸ್.ಇ.) ಸಂಸ್ಥೆಯಲ್ಲಿ ಅರ್ಥಶಾಸ್ತ್ರದ ಡಾಕ್ಟರ್ ಆಫ್ ಸೈನ್ಸ್ (ಡಿ.ಎಸ್ಸಿ.) ಪದವಿಗಾಗಿ ಸೇರಿಕೊಂಡರು. ಅದರ ಅಧ್ಯಯನಕ್ಕಾಗಿ “ರೂಪಾಯಿಯ ಸಮಸ್ಯೆ – ಅದರ ಉಗಮ ಮತ್ತು ಪರಿಹಾರ (The Problem of Rupee – Its Origin and its Solution)” ಎಂಬ ಮಹತ್ವದ ವಿಷಯವನ್ನು ಆಯ್ಕೆ ಮಾಡಿಕೊಂಡರು. ಆದರೆ, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ತಮಗೆ ವಿದ್ಯಾರ್ಥಿವೇತನ ನೀಡಿದ ಬರೋಡಾದ ಮಹಾರಾಜರ ಕರೆಯ ಮೇರೆಗೆ ಜೂನ್ 1917ರಲ್ಲಿ ಅವರು ಭಾರತಕ್ಕೆ ವಾಪಸ್ಸಾಗಬೇಕಾಯಿತು. ಲಂಡನ್ನಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಂತರದ ದಿನಗಳಲ್ಲಿ ಮುಂದುವರೆಸುವುದಾಗಿ ಅಂಬೇಡ್ಕರರು ಅನುಮತಿ ಪಡೆದರು. ಪ್ರಯಾಣಿಕರ ಹಡಗಿನಲ್ಲಿ ಅವರು ಭಾರತಕ್ಕೆ ಪ್ರಯಾಣ ಬೆಳೆಸಿದರು. ವಿದ್ಯಾರ್ಥಿ ವೇತನದಲ್ಲಿ ಉಳಿಸಿದ ಹಣದಿಂದ ಕೊಂಡ ಪುಸ್ತಕಗಳನ್ನು ಜರ್ಮನ್ ದೇಶಕ್ಕೆ ಸೇರಿದ ಸಬ್ಮೆರಿನ್ ಹಡಗಿನಲ್ಲಿ ಸಾಗಿಸಲು ಏರ್ಪಾಡು ಮಾಡಿದರು. ಆದರೆ ಸಬ್ಮೆರಿನ್ ಹಡಗು ಮುಳುಗಿಹೋಯಿತು. ಅದಕ್ಕಾಗಿ ಥಾಮಸ್ ಕುಕ್ ಅಂಡ್ ಸನ್ ಕಂಪನಿಯು ಪರಿಹಾರದ ಹಣವನ್ನು ಕೊಟ್ಟಿತು.
ನೆಲೆ ನಿಲ್ಲಲಾಗದ ಉದ್ಯೋಗಗಳು
ಭಾರತಕ್ಕೆ ಆಗಮಿಸಿದ ಅಂಬೇಡ್ಕರರು ಬರೋಡಾದ ಮಹಾರಾಜರಾದ ಸಯ್ಯಾಜಿರಾವ್ ಗಾಯಕವಾಡರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಬರೋಡಾ ಸಂಸ್ಥಾನದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಮಿಲಿಟರಿ ಕಾರ್ಯದರ್ಶಿಯಾದರು. ಮುಂದೆ ಅವರನ್ನು ಅರ್ಥ ಮಂತ್ರಿಯನ್ನಾಗಿ ನೇಮಿಸಿಕೊಳ್ಳುವ ಆಲೋಚನೆ ಮಹಾರಾಜರಿಗಿತ್ತು. ಆದರೆ, ಅಸ್ಪೃಶ್ಯತೆಯ ಘೋರ ಆಚರಣೆಯ ಅನುಭವಗಳು ಅವರಿಗೆ ಪುನರಾವರ್ತನೆಯಾದವು. ಕಚೇರಿಯಲ್ಲಿ ಸವರ್ಣೀಯ ಹಿಂದೂಗಳು ಅಂಬೇಡ್ಕರರನ್ನು ತುಚ್ಛವಾಗಿ ನೋಡತೊಡಗಿದರು. ಫೈಲುಗಳನ್ನು ದೂರದಿಂದ ಇವರ ಟೇಬಲ್ಲಿನತ್ತ ಎಸೆಯತೊಡಗಿದರು. ಬರೋಡಾದಲ್ಲಿ ಅಂಬೇಡ್ಕರರ ವಾಸಕ್ಕೆ ಬಾಡಿಗೆ ಮನೆಯೂ ಸಿಗದಾಯಿತು. ಅವರು ಉಳಿದುಕೊಂಡಿದ್ದ ಪಾರ್ಸಿ ಹೋಟೆಲ್ಲಿನಿಂದ ತಕ್ಷಣ ಹೊರ ಹೋಗಲು ಒತ್ತಾಯಿಸಲಾಯಿತು. ಅಲ್ಲಿ ಛೀಮಾರಿಗೆ ಒಳಗಾಗಬೇಕಾಯಿತು. ಮಹಾರಾಜರಿಗೆ ಮನವಿ ಮಾಡಿಕೊಂಡರೂ ಅವರ ವಾಸಕ್ಕೆ ಮನೆ ಸಿಗಲಿಲ್ಲ. ಅನಿವಾರ್ಯವಾಗಿ ಅಂಬೇಡ್ಕರರು ಅಲ್ಲಿನ ನೌಕರಿಯನ್ನು ಬಿಡಬೇಕಾಯಿತು. ಈ ಸಂದರ್ಭದ ತಳಮಳಗಳನ್ನು ಬಾಬಾಸಾಹೇಬರು‚Waiting for a Visa” ಎಂಬ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಬರೋಡಾದಿಂದ ಮುಂಬೈಗೆ ಹಿಂತಿರುಗಿದರು. ಮುಂಬೈನ ಸೀಡನ್ ಹ್ಯಾಮ್ ಕಾಲೇಜಿನ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದರು. ಲಂಡನ್ ವಿಶ್ವವಿದ್ಯಾಲಯದ ರಾಜಕೀಯ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಎಡ್ವರ್ಡ್ ಕ್ಯಾನನ್ ಅವರು ಅಂಬೇಡ್ಕರರಿಗೆ ಶಿಫಾರಸ್ಸು ಪತ್ರ ಕೊಟ್ಟರು.
“ಅಂಬೇಡ್ಕರರು ನನ್ನ ಮನಸ್ಸನ್ನು ಗೆದ್ದಿದ್ದಾರೆ. ಅವರಿಗೆ ಅತ್ಯುನ್ನತ ಪ್ರಾಯೋಗಿಕ ಜ್ಞಾನವಿದೆ. ಅವರನ್ನು ಭಾರತೀಯ ಎನ್ನಲು ನನಗೆ ಆಶ್ಚರ್ಯವಾಗುತ್ತಿದೆ. ಅವರೊಬ್ಬ ಸ್ಕಾಚ್-ಅಮೆರಿಕನ್ ವ್ಯಕ್ತಿಯಂತೆ ನನಗೆ ಕಾಣುತ್ತಾರೆ” ಎಂದು ಬರೆದರು ಕ್ಯಾನನ್. 1918ರಲ್ಲಿ ಸೀಡನ್ ಹ್ಯಾಮ್ ಕಾಲೇಜಿನಲ್ಲಿ ರಾಜಕೀಯ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದರು. ಅಲ್ಲಿಯೂ ಅಸ್ಪೃಶ್ಯತೆ ಅವರನ್ನು ಮತ್ತಷ್ಟು ಕಾಡಿತು. ನೀರು ಕುಡಿಯಲು ಬಳಸುತ್ತಿದ್ದ ಲೋಟವನ್ನು ಅಂಬೇಡ್ಕರರು ಬಳಸುವುದನ್ನು ಉಳಿದ ಪ್ರಾಧ್ಯಾಪಕರು ಆಕ್ಷೇಪಿಸಿದರು. ಸೀಡನ್ ಹ್ಯಾಮ್ ಕಾಲೇಜಿನ ಕೆಲ ಪದವೀಧರರನ್ನು ತಮ್ಮ ಶಿಫಾರಸ್ಸಿನ ಮೂಲಕ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಡ್ಮನ್ ಸೆಲಿಗ್ಮನ್ ಅವರ ಮಾರ್ಗದರ್ಶನದಲ್ಲಿ ಉನ್ನತ ವ್ಯಾಸಂಗ ಮಾಡಲು ಕಳುಹಿಸಿಕೊಟ್ಟರು.
“ಯೂರೋಪ್ ಮತ್ತು ಅಮೆರಿಕದ ನನ್ನ ಐದು ವರ್ಷಗಳ ವಾಸವು ನನ್ನ ಮನಸ್ಸಿನಲ್ಲಿ ನಾನೊಬ್ಬ ಅಸ್ಪೃಶ್ಯನಲ್ಲ ಎಂಬುದನ್ನು ಖಾತ್ರಿಗೊಳಿಸಿತು. ಆದರೆ, ನಾನು ಭಾರತದಲ್ಲಿ ಓಡಾಡುವಾಗ ಅಸ್ಪೃಶ್ಯತೆಯ ಅನುಭವವು ನನಗೂ, ಇತರರಿಗೂ ಆಗುತ್ತಲೇ ಇದೆ. ಹೀಗಾದಾಗ ನನ್ನ ಮನಸ್ಸು ಇನ್ನಷ್ಟು ತಳಮಳಕ್ಕೀಡಾಗುತ್ತದೆ, ನನ್ನಲ್ಲಿ ಪ್ರಶ್ನೆಗಳ ಅಲೆಗಳನ್ನೆಬ್ಬಿಸುತ್ತದೆ. ನಾನು ಎಲ್ಲಿಗೆ ಹೋಗಬೇಕು? ನನ್ನನ್ನು ಯಾರು ಬರಮಾಡಿಕೊಳ್ಳುತ್ತಾರೆ” ಎಂದು ತೀವ್ರವಾಗಿ ನೊಂದುಕೊಳ್ಳುತ್ತಾರೆ. ಅವರೊಬ್ಬರೇ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಾರೆ. ಈ ಮಧ್ಯೆ, 1918 ರಲ್ಲಿ ‘ಭಾರತದಲ್ಲಿ ಸಣ್ಣ ಹಿಡುವಳಿಗಳು ಹಾಗೂ ಅದರ ಪರಿಹಾರಗಳು’ (Small holdings in India and its Remedies) ಎಂಬ ಲೇಖನವು ‘ಜರ್ನಲ್ ಆಫ್ ದಿ ಇಂಡಿಯನ್ ಎಕನಾಮಿಕ್ ಸೊಸೈಟಿ’ಯಲ್ಲಿ ಪ್ರಕಟವಾಯಿತು. ಒಟ್ಟು ಜನಸಂಖ್ಯೆಯಲ್ಲಿ ಇಂಗ್ಲೆಂಡಿನಲ್ಲಿ ಶೇ. 15.3, ಅಮೇರಿಕಾದಲ್ಲಿ ಶೇ. 33.3 ಹಾಗೂ ಭಾರತದಲ್ಲಿ ಶೇ. 71.5 ಕೃಷಿ ಹಿಡುವಳಿದಾರರಿದ್ದಾರೆ ಎಂದು ವಿಶ್ಲೇಷಿಸಿದರು.
ಅಸ್ಪೃಶ್ಯರ ಧೀಮಂತ ನಾಯಕನಾಗುವತ್ತ
ಆಂಗ್ಲರ ಸೌತ್ಬರೋ ಸಮಿತಿಯ ಮುಂದೆ ಜನವರಿ 27, 1919ರಲ್ಲಿ ಅಂಬೇಡ್ಕರರು ತಮ್ಮ ವಾದ ಮಂಡಿಸಿದರು. ಅದುಭಾರತ ಸರ್ಕಾರದ ಕಾಯಿದೆ 1919 ರಚಿಸಲು ಪೂರಕವಾಯಿತು. ತಮ್ಮ ವಾದದಲ್ಲಿ ಅಂಬೇಡ್ಕರರು ಅಸ್ಪೃಶ್ಯರು ಮತ್ತುಇತರೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತಕ್ಷೇತ್ರಗಳು ಹಾಗೂ ಉದ್ಯೋಗ ಮೀಸಲಾತಿಯ ಬೇಡಿಕೆ ಇಟ್ಟರು. ಬಳಿಕ 1919ರ ಕಾಯ್ದೆಯ ಪ್ರಕಾರ ಗವರ್ನರ್ ಜನರಲ್ ಅವರು ಶಾಸನ ಸಭೆಗಳಿಗೆಸದಸ್ಯರನ್ನು ನೇಮಿಸುವಾಗ ನಿಮ್ನ ವರ್ಗಗಳಿಗೆ ಪ್ರಾತಿನಿಧ್ಯ ನೀಡಿದರು. ಕೇಂದ್ರ ಪ್ರಾಂತ್ಯ, ಸಂಯುಕ್ತ ಪ್ರಾಂತ್ಯ, ಬಿಹಾರ, ಬಂಗಾಲ, ಮುಂಬಯಿ ಮತ್ತು ಮದರಾಸು ಪ್ರಾಂತ್ಯಗಳ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ದೊರಕಿತು. ಇದೊಂದು ಚಾರಿತ್ರಿಕ ಸಾಧನೆಯಾಯಿತು. ಕೊಲ್ಲಾಪುರದ ಶಾಹು ಮಹಾರಾಜರನ್ನು 1919ರಲ್ಲಿ ಮೊಟ್ಟಮೊದಲ ಬಾರಿಗೆ ಭೇಟಿಯಾದರು. ‘ಮೂಕನಾಯಕ’ ಎಂಬ ಮರಾಠಿ ಪತ್ರಿಕೆಯನ್ನು ಜನವರಿ, 1920ರಲ್ಲಿಆರಂಭಿಸಿದರು. ಮೊದಲಿಗೆ ನಂದಾರಾಮ ಭಟ್ಕರ್ ಅದರ ಸಂಪಾದಕರು. ನಂತರದ ಸಂಪಾದಕರು ಧ್ಯಾನೇಂದ್ರ ಪೋಲಸ್. ಪತ್ರಿಕೆಯ ಆರಂಭಕ್ಕೆ ಕೊಲ್ಲಾಪುರದ ಮಹಾರಾಜರಾದ ಶಾಹು ಮಹಾರಾಜರ ಆರ್ಥಿಕ ಬೆಂಬಲ ದೊರಕಿತು. ಮಾರ್ಚ್ 1920 ರಲ್ಲಿ ಕೊಲ್ಲಾಪುರದ ಮಹಾಗಾವ್ನಲ್ಲಿ ನಡೆದ ಅಸ್ಪೃಶ್ಯರ ಸಮಾವೇಶದ ಅಧ್ಯಕ್ಷತೆಯನ್ನು ಅಂಬೇಡ್ಕರರು ವಹಿಸಿದ್ದರು. ಮೇ, 1920 ರಲ್ಲಿ ನಾಗಪುರದಲ್ಲಿ ನಡೆದ ಅಸ್ಪೃಶ್ಯರ ಅಖಿಲ ಭಾರತ ಮಟ್ಟದ ಸಮಾವೇಶದಲ್ಲಿ ಅಂಬೇಡ್ಕರರು ತಮ್ಮ ಧೀಮಂತ ನಾಯಕತ್ವವನ್ನು ಪ್ರದರ್ಶಿಸಿದರು. ಕರ್ಮವೀರ ಶಿಂಧೆ ಹಾಗೂ ಶೋಷಿತ ಜಾತಿಗಳ ಆಯೋಗದ ಕಾರ್ಯವೈಖರಿಯನ್ನು ಖಂಡಿಸಿದರು. ಅಸ್ಪೃಶ್ಯರ ಬವಣೆಗಳು ಹಿಂದೂ ಸವರ್ಣೀಯ ನಾಯಕರಿಗೆ ಅರ್ಥವಾಗುವುದಿಲ್ಲವೆಂದರು. ಅವರ ವಿಚಾರ ಶಕ್ತಿಗೆ ಎಲ್ಲರೂ ಮಾರುಹೋದರು.
ಲಂಡನ್ನಿನಲ್ಲಿ ಮುಂದುವರೆದ ವ್ಯಾಸಂಗ
ಅಪೂರ್ಣವಾಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಕೊಲ್ಲಾಪುರದ ಶಾಹು ಮಹಾರಾಜರಿಂದ ಸಹಾಯ ಪಡೆದರು. ಮಿತ್ರರಾಗಿದ್ದ ನವಲ್ ಭತೀನಾ ಅವರಿಂದ 5000 ರೂಪಾಯಿಗಳ ಸಾಲ ಪಡೆದರು.
ಲಂಡನ್ನಿನ ಗ್ರೇಸ್ ಇನ್ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ವ್ಯಾಸಂಗ ಮುಂದುವರೆಸಲು ಸೆಪ್ಟೆಂಬರ್ 30, 1920 ರಂದು ಮರು ಪ್ರವೇಶ ಪಡೆದರು. ಇದೇ ವರ್ಷದಲ್ಲಿ ಬರ್ಟ್ರಾಂಡ್ ರಸೆಲ್ರವರು ‘ಸಮಾಜದ ಪುನರ್ನಿರ್ಮಾಣದ ತತ್ವಗಳುʼ ಕುರಿತಂತೆ ಚರ್ಚಿಸಲು ಅಂಬೇಡ್ಕರರನ್ನು ಅಮೆರಿಕಕ್ಕೆ ಆಹ್ವಾನಿಸಿದರು. ಈ ಮಧ್ಯೆ, ಏಪ್ರಿಲ್ 1921ರಲ್ಲಿ ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯಲು ಜರ್ಮನ್ ಭಾಷೆಯಲ್ಲಿಯೇ ಪತ್ರವೊಂದನ್ನು ಬರೆದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅವರು ಜರ್ಮನ್ ಭಾಷೆಯನ್ನು ಕಲಿತಿದ್ದರು.
ಜರ್ಮನಿಯ ಬಾನ್ ವಿಶ್ವವಿದ್ಯಾಲಯಕ್ಕೆ ಅವರು ಸಲ್ಲಿಸಿದ ವ್ಯಕ್ತಿ ಚಿತ್ರಣ ಮತ್ತು ಅರ್ಜಿಯಲ್ಲಿ ತಾವು ಡಾಕ್ಟರೇಟ್ ಪದವಿಗಾಗಿ ಮಹಾಪ್ರಬಂಧವನ್ನು ಪ್ರೊ ಹೆರ್ಮನ್ ಜಾಕೋಬಿ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಜಾಕೋಬಿಯವರು ಭಾರತೀಯ ಅಧ್ಯಯನಗಳ ತಜ್ಞರಾಗಿದ್ದರು. ಅವರು 1913-14ರ ಸುಮಾರಿಗೆ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದರು. ಬಾನ್ ವಿಶ್ವವಿದ್ಯಾಲಯದ ದಾಖಲೆಗಳ ಪ್ರಕಾರ ಏಪ್ರಿಲ್ 29, 1921 ರಂದು ಅಂಬೇಡ್ಕರರು ವಿದ್ಯಾರ್ಥಿಯಾಗಿ ನೋಂದಾಯಿಸಿಕೊಂಡಿದ್ದಾರೆ. ಕಾರಣಾಂತರಗಳಿಂದಾಗಿ ಅಲ್ಲಿ ವಿದ್ಯಾರ್ಥಿಯಾಗಿ ಮುಂದುವರೆಯಲು ಸಾಧ್ಯವಾಗಿಲ್ಲ. ಆದ್ದರಿಂದ, ಬಾನ್ ವಿಶ್ವವಿದ್ಯಾಲಯದ ದಾಖಲೆ ಪುಸ್ತಕದಿಂದ ಜನವರಿ 12, 1922 ರಂದು ಅವರ ಹೆಸರನ್ನು ಕೈಬಿಡಲಾಗಿದೆ ಎಂದು 2003 ರ ಸುಮಾರಿಗೆ ಭಾರತಕ್ಕೆ ಆಗಮಿಸಿದ್ದ ಜರ್ಮನಿಯ ಮರೇನ್ ಬೆಲ್ವೊಂಕೆಲ್ ಸ್ಕೆಂಪ್ ಎಂಬುವವರು ತಮ್ಮ ಸಂಶೋಧನೆಗಳ ನಂತರ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿ ಅಂಬೇಡ್ಕರರಿಗೆ ಪುಸ್ತಕಗಳನ್ನು ಕೊಳ್ಳುವ ಅಗಾಧ ಹಂಬಲವಿತ್ತು. ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಜಾಲಾಡಿ ಓದಿಬಿಡುತ್ತಿದ್ದರು. ಪಠ್ಯಪುಸ್ತಕಗಳಲ್ಲದೆ ಇತರೆ ಪುಸ್ತಕಗಳೂ ಅವರಿಗೆ ಇಷ್ಟವಾಗುತ್ತಿದ್ದವು. ‘ಸಂಪೂರ್ಣ ಜ್ಞಾನದಿಂದ ಸಂಪೂರ್ಣ ಶಕ್ತಿ’ ಎಂದವರು ನಂಬಿದ್ದರು. ಕಠಿಣ ಪರಿಶ್ರಮ ನಿತ್ಯದ ದಿನಚರಿಯಾಯಿತು. ಲಂಡನ್ನಿನಲ್ಲಿ ಗ್ರಂಥಾಲಯ, ಮ್ಯೂಸಿಯಂ ಮತ್ತು ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ದಿನವಿಡೀ ಕುಳಿತು ಓದುತ್ತಿದ್ದರು. ತಮ್ಮ ಮುತ್ತಿನಂತಹ ಕೈಬರಹದಲ್ಲಿ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದರು. ಪ್ರತಿದಿನ ಮೊದಲಿಗರಾಗಿ ಗ್ರಂಥಾಲಯಕ್ಕೆ ಕಾಲಿಟ್ಟರೆ, ಕೊನೆಯವರಾಗಿ ಅಲ್ಲಿಂದ ನಿರ್ಗಮಿಸುತ್ತಿದ್ದರು. ಸಿಬ್ಬಂದಿ ಅವರ ಗಮನ ಸೆಳೆದು ಗ್ರಂಥಾಲಯ ಮುಚ್ಚುವ ಸಮಯವಾಯಿತೆಂದು ಎಚ್ಚರಿಸಬೇಕಿತ್ತು. ಹಣದ ಕೊರತೆಯಿಂದ ಬೆಳಗಿನ ಉಪಾಹಾರವನ್ನು ಸೇವಿಸುತ್ತಿರಲಿಲ್ಲ. ಮಿತವಾದ ಆಹಾರ ಸೇವನೆ ಮತ್ತು ಓದಿನ ಬಳಲಿಕೆಗಳಿಂದ ಒಮ್ಮೊಮ್ಮೆ ನಿಸ್ತೇಜರಾಗುತ್ತಿದ್ದರು. ಹಸಿವಿನಿಂದಾಗಿ ನಿದ್ದೆ ಹತ್ತದ ರಾತ್ರಿಗಳನ್ನು ಕಳೆದರು. ಅರೆಹೊಟ್ಟೆ ಊಟ ಸೇವಿಸುತ್ತಿದ್ದುದರಿಂದ ಮಧ್ಯರಾತ್ರಿ ಎಚ್ಚರಗೊಳ್ಳುತ್ತಿದ್ದರು. ಆ ನಂತರ ನಿದ್ರೆಗೆ ಜಾರದೆ ಓದಿಕೊಳ್ಳುತ್ತಿದ್ದರು. ಸರಿಯಾಗಿ ನಿದ್ದೆ ಮಾಡುವಂತೆ ಕೊಠಡಿಯ ಸಹಪಾಠಿಯಾದ ಮಿತ್ರ ಆಸ್ನೋಟಿಕರ್ ಅವರು ಹೇಳುತ್ತಿದ್ದರು. ಆದರೆ, ಅಂಬೇಡ್ಕರರಿಗೆ ಅಭ್ಯಾಸವೇ ಮುಖ್ಯವಾಗಿತ್ತು. ತಮ್ಮ ಜ್ಞಾನಾರ್ಜನೆಯು ಅಸ್ಪೃಶ್ಯರ ವಿಮೋಚನೆಗಾಗಿ ಅತ್ಯಗತ್ಯವಾಗಿದೆ ಎಂದು ಭಾವಿಸಿದ್ದರು. ಮತ್ತೊಮ್ಮೆ, ಮಿತ್ರರಾದ ನವಲ್ ಭತೀನಾ ಅವರಿಂದ 2000 ರೂಪಾಯಿಗಳ ಸಾಲವನ್ನು ಸಂಕೋಚದಿಂದಲೇ ಕೇಳಿ ಪಡೆದರು.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಎಂ.ಎಸ್ಸಿ. ಪದವಿಯನ್ನು 1921ರಲ್ಲಿ ಪಡೆದರು. “ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ” (Provincial Decentralization of Imperial Finance in British India) ಎಂಬ ಪ್ರಬಂಧವನ್ನು ಎಂ.ಎಸ್ಸಿ. (ಅರ್ಥಶಾಸ್ತ್ರ) ದ ಪದವಿಗಾಗಿ ಸಲ್ಲಿಸಿದರು. ಗ್ರೇಸ್ ಇನ್ ಸಂಸ್ಥೆಯಿಂದ ಏಪ್ರಿಲ್ 3, 1923 ರಲ್ಲಿ ಬಾರ್- ಅಟ್-ಲಾ ಪದವಿಯನ್ನು ಪಡೆದು ಬ್ಯಾರಿಸ್ಟರಾಗಿ ಭಾರತಕ್ಕೆ ಮರಳಿದರು. ‘ರೂಪಾಯಿಯ ಸಮಸ್ಯೆ – ಅದರ ಉಗಮ ಮತ್ತು ಪರಿಹಾರ’ ಎಂಬ ಮಹಾಪ್ರಬಂದವನ್ನು ಡಾಕ್ಟರೇಟ್ ಪದವಿಗಾಗಿ ಸಲ್ಲಿಸಿದರು. ಡಾಕ್ಟರ್ ಆಫ್ ಸೈನ್ಸ್ (ಡಿ. ಎಸ್ಸಿ.) ಪದವಿಯನ್ನು ನವೆಂಬರ್, 1923ರಲ್ಲಿ ಪಡೆದರು. ಮಹಾಪ್ರಬಂಧವನ್ನು ಲಂಡನ್ನಿನ ಮೆಸರ್ಸ್ ಪಿ.ಎಸ್. ಕಿಂಗ್ ಅಂಡ್ ಸನ್ಲಿ. ಎಂಬ ಸಂಸ್ಥೆಯು ಮೂರು ತಿಂಗಳಲ್ಲೇ ಪ್ರಕಟಿಸಿತು.
ʼಸಂಶೋಧಿಸಿ, ಬರೆಯಿರಿ, ಪ್ರಕಟಿಸಿರಿ’ (Work, Write, Publish) ಎಂಬ ನಾಣ್ಣುಡಿಯನ್ನು ವಿದ್ಯಾರ್ಥಿ ಅಂಬೇಡ್ಕರರು ಕಟ್ಟುನಿಟ್ಟಾಗಿ ಪಾಲಿಸಿದರು. ಅವರ ಬಹುತೇಕ ಬರಹಗಳು ಪ್ರಕಟಗೊಂಡು ಅಂಬೇಡ್ಕರ್ವಾದದ ಮೊಳಗುವಿಕೆಗೆ ಕಾರಣವಾಗಿವೆ. ಕೊಲಂಬಿಯಾ ವಿಶ್ವವಿದ್ಯಾಲಯವು ಜೂನ್ 5, 1952ರಲ್ಲಿ ಬಾಬಾಸಾಹೇಬರಿಗೆ ಎಲ್.ಎಲ್.ಡಿ. –ಡಾಕ್ಟರ್ ಆಫ್ ಲಾ (ಹಾನೋರಿಸ್ ಕಾಸಾ) ಎಂಬ ಗೌರವ ಪದವಿಯನ್ನು ಕೊಟ್ಟಿತು. ಅವರ ಜೀವಮಾನದ ಸಾಧನೆ, ಬ್ಯಾರಿಸ್ಟರ್, ಪ್ರಾಧ್ಯಾಪಕ, ವಿಧಾನ ಪರಿಷತ್ತು ಸದಸ್ಯ, ಭಾರತ ಸರ್ಕಾರದ ಕಾನೂನು ಮಂತ್ರಿ, ಶ್ರೇಷ್ಠ ಸಮಾಜ ಸುಧಾರಕ, ಮಾನವ ಹಕ್ಕುಗಳ ಮಹಾನ್ ಪ್ರತಿಪಾದಕ ಮತ್ತು ಭಾರತದ ಸಂವಿಧಾನವನ್ನು ರಚಿಸಿದ್ದಕ್ಕಾಗಿ ಈ ಪದವಿಯನ್ನು ಅವರಿಗೆ ನೀಡಲಾಯಿತು ಎಂದು ಕೊಲಂಬಿಯಾ ವಿಶ್ವವಿದ್ಯಾಲಯವು ಘೋಷಿಸಿತು. ಹಾಗೆಯೇ, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯವು ಜನವರಿ 12, 1953ರಂದು ಅಂಬೇಡ್ಕರರಿಗೆ ಡಿ.ಲಿಟ್. ಎಂಬ ಗೌರವ ಪದವಿ ಕೊಟ್ಟಿತು. ಅದೂ ಕೂಡ ಅವರು ವಹಿಸಿದ ನಾಯಕತ್ವ ಹಾಗೂ ಭಾರತದ ಸಂವಿಧಾನ ರಚಿಸಿದ್ದಕ್ಕಾಗಿ ಕೊಟ್ಟ ಗೌರವ ಪದವಿಯಾಯಿತು. ಡಾ. ಅಂಬೇಡ್ಕರರ ಹೆಸರಿನ ಮುಂದೆ ಎಂ.ಎ., ಪಿಎಚ್.ಡಿ., ಡಿ.ಎಸ್ಸಿ., ಎಲ್.ಎಲ್.ಡಿ., ಡಿ.ಲಿಟ್., ಬಾರ್-ಅಟ್-ಲಾ ಎಂಬ ಪದವಿಗಳು ರಾರಾಜಿಸುತ್ತಿವೆ.
ಅಂಬೇಡ್ಕರರ ಉನ್ನತ ವ್ಯಾಸಂಗದ ವಿದ್ಯಾರ್ಥಿ ಜೀವನವು ವಿಶ್ವದ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕರಣೀಯವಾಗಿದೆ. ಅವರೊಬ್ಬ ಮಾದರಿ ವಿದ್ಯಾರ್ಥಿ. ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆಂದು ಡಾ. ಬಾಬಾಸಾಹೇಬ್ ಅಂಬೇಡ್ಕರರು ನಿರೂಪಿಸಿದ್ದಾರೆ. ಭಾರತದ ಸಂವಿಧಾನ ರಚನೆಗಾಗಿ ತಮ್ಮ ಜ್ಞಾನವನ್ನೆಲ್ಲಾ ಧಾರೆಯೆರೆದಿದ್ದಾರೆ. ಶೋಷಿತರಿಗೆ ಕೊಟ್ಟ “ಶಿಕ್ಷಣ, ಹೋರಾಟ, ಸಂಘಟನೆ” ಎಂಬ ವಿಮೋಚನೆಯ ಮಂತ್ರದಲ್ಲಿ ಶಿಕ್ಷಣಕ್ಕೆ ಮೊದಲ ಆಧ್ಯತೆಯನ್ನು ಕೊಟ್ಟಿದ್ದಾರೆ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ




