ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆವರಣದಲ್ಲಿರುವ ‘ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ’ (KSCST) ವಿರುದ್ಧ ಸಾರ್ವಜನಿಕ ಹಣದ ದುರ್ಬಳಕೆ, ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ, ಕನ್ನಡ ಭಾಷಾ ಕಾಯ್ದೆಯ ನಿರ್ಲಕ್ಷ್ಯ ಹಾಗೂ ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಮುಚ್ಚಿಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಂಡಳಿಯ ಮಾಜಿ ಪ್ರಾಜೆಕ್ಟ್ ಎಂಜಿನಿಯರ್ ಡಾ. ಸೈಯದ್ ಸಮೀರ್ ಅವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಕೆಎಸ್ಸಿಎಸ್ಟಿ ಕಾರ್ಯದರ್ಶಿ ಪ್ರೊ. ಅಶೋಕ್ ಎಂ. ರಾಯಚೂರ್, ಮಾಜಿ ಪ್ರಭಾರ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಹೇಮಂತ್ ಕುಮಾರ್ ಎಚ್. ಹಾಗೂ ಡಾ. ಯು.ಟಿ. ವಿಜಯ್ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಸೈಯದ್ ಆರೋಪ ಮಾಡಿದ್ದಾರೆ. “2022ರ ಆದೇಶವೊಂದರ ಮೂಲಕ ಈಗಾಗಲೇ ನಿಯಮಿತ ಸಂಬಳ ಪಡೆಯುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಟ್ಟು 10.43 ಲಕ್ಷ ರೂ.ಗಳನ್ನು ‘ಸಲಹಾ/ಕನ್ಸಲ್ಟೆನ್ಸಿ ಶುಲ್ಕ’ ಹೆಸರಿನಲ್ಲಿ ಪಾವತಿಸಲಾಗಿದೆ. ಜೊತೆಗೆ, 2021 ಮತ್ತು 2022ರ ಎರಡು ಪ್ರತ್ಯೇಕ ಆದೇಶಗಳ ಮೂಲಕ ಸಿಬ್ಬಂದಿಯ ಸಾಮಾನ್ಯ ಕರ್ತವ್ಯಗಳಿಗೇ ಹೆಚ್ಚುವರಿ ಗೌರವಧನ ನೀಡಲಾಗಿದೆ. ಸೇವಾ ನಿಯಮಗಳಿಗೆ ವಿರುದ್ಧವಾಗಿ ಈ ರೀತಿಯ ಪಾವತಿಗಳು ನಡೆದಿವೆ. ಈ ಮೂಲಕ ಸಾರ್ವಜನಿಕ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು, “2020-21, 2025 ಮತ್ತು 2026ರ ನೇಮಕಾತಿಗಳಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿದ್ದ ಅರ್ಹತಾ ಷರತ್ತುಗಳನ್ನು ಪಾಲಿಸದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಎಸ್ಎಸ್ಎಲ್ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕೆಂಬ ಷರತ್ತು ಇದ್ದರೂ, ಕನ್ನಡವನ್ನು ತೃತೀಯ ಭಾಷೆಯಾಗಿ ಮಾತ್ರ ಅಧ್ಯಯನ ಮಾಡಿದ ಅಭ್ಯರ್ಥಿಗಳನ್ನು ಪರಿಗಣಿಸಲಾಗಿದೆ. ಅಲ್ಲದೆ, ನಿಗದಿತ ಕನಿಷ್ಠ ಅಂಕಗಳಿಗಿಂತ ಕಡಿಮೆ ಅಂಕ ಪಡೆದ ಅಭ್ಯರ್ಥಿಗೂ ಅವಕಾಶ ನೀಡಲಾಗಿದೆ” ಎಂದು ಸೈಯದ್ ದೂರಿದ್ದಾರೆ.
“ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಜಾರಿಯಾದ ಬಳಿಕವೂ 2025 ಮತ್ತು 2026ರ ನೇಮಕಾತಿ ಅಧಿಸೂಚನೆಗಳಲ್ಲಿ ಕನ್ನಡ ಭಾಷೆಯ ಷರತ್ತನ್ನು ದುರ್ಬಲಗೊಳಿಸಲಾಗಿದೆ. ಇದು ರಾಜ್ಯದ ಭಾಷಾ ನೀತಿ ಅನುಷ್ಠಾನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ಸೈಯದ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಜೆಪಿಗೆ ಬಿಸಿತುಪ್ಪವಾದ ಪರೀಕ್ಷಾ ಹಗರಣ, ವಾಂಗ್ಚುಕ್, ರಾಮಮಂದಿರ, ಎಥೆನಾಲ್!
“ಮಾಹಿತಿ ಹಕ್ಕು ಕಾಯ್ದೆಯಡಿ ಈವರೆಗೆ 17 ಅರ್ಜಿಗಳನ್ನು ಸಲ್ಲಿಸಿದ್ದೇನೆ. ಆದರೂ, ಕೆಎಸ್ಸಿಎಸ್ಟಿಯಿಂದ ದಾಖಲೆಗಳನ್ನು ಸಮರ್ಪಕವಾಗಿ ನೀಡಿಲ್ಲ. ಪಾವತಿ ವೋಚರ್ಗಳು, ಆಯ್ಕೆ ಸಮಿತಿ ದಾಖಲೆಗಳು, ಅರ್ಹತಾ ಪರಿಶೀಲನೆ ವಿವರಗಳು, 2019-20ರಿಂದ 2025-26ರವರೆಗಿನ ಸಿಎಜಿ ಲೆಕ್ಕಪರಿಶೋಧನಾ ವರದಿಗಳು ಹಾಗೂ ಸುಮಾರು 7.5 ಕೋಟಿ ರೂ. ವೆಚ್ಚದ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಮಂಡಳಿ ನಿರಾಕರಿಸಿದೆ. ಕೆಲವು ಉತ್ತರಗಳಲ್ಲಿ ದಾಖಲೆಗಳನ್ನು ಲಗತ್ತಿಸಲಾಗಿದೆ ಎಂದು ಹೇಳಿದ್ದರೂ, ವಾಸ್ತವದಲ್ಲಿ ಅವುಗಳನ್ನು ಒದಗಿಸಿಲ್ಲ” ಎಂದು ಅವರು ಆರೋಪಿಸಿದ್ದಾರೆ.
“ಕೆಎಸ್ಸಿಎಸ್ಟಿಯಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು, ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂರಕ್ಷಿಸಿ ವಶಪಡಿಸಿಕೊಳ್ಳಬೇಕು, ಪಾವತಿಗಳಿಗೆ ಅನುಮೋದನೆ ನೀಡಿದ ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಹಾಗೂ ಅಕ್ರಮವಾಗಿ ವಿತರಿಸಲಾಗಿದೆ ಎಂದು ಆರೋಪಿಸಲಾಗಿರುವ ಸಾರ್ವಜನಿಕ ಹಣವನ್ನು ವಸೂಲಿ ಮಾಡಬೇಕು” ಎಂದು ಲೋಕಾಯುಕ್ತಕ್ಕೆ ಸೈಯದ್ ಮನವಿ ಮಾಡಿದ್ದಾರೆ.
ಕೆಎಸ್ಸಿಎಸ್ಟಿ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಮಂಡಳಿಯ ಪ್ರತಿಕ್ರಿಯೆ ಪಡೆಯಲು ‘ಈದಿನ.ಕಾಮ್’ ಪ್ರತಿನಿಧಿಯು ಮಂಡಳಿಯ ಕಾರ್ಯದರ್ಶಿ ಅಶೋಕ್ ಎಂ ರಾಯಚೂರ್ ಅವರ ಕಚೇರಿಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಮಂಡಳಿಯ ಆಡಳಿತ ಅಧಿಕಾರಿ ಶ್ರೀನಿವಾಸ ಅವರು, “ನಮಗೆ ಈ ಬಗ್ಗೆ ತಿಳಿದಿಲ್ಲ. ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದರೆ, ತನಿಖೆ ನಡೆಯಲಿ” ಎಂದಷ್ಟೇ ಹೇಳಿದ್ದಾರೆ.




