ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಸಂಸತ್ ಚಲೋ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಅರ್ಜಿದಾರರು ತುರ್ತು ವಿಚಾರಣೆಗೆ ಮನವಿ ಮಾಡಿದರು. ಆದರೆ, “ಈ ಎಲ್ಲ ವಿಚಾರಗಳಲ್ಲಿ ನ್ಯಾಯಾಲಯವನ್ನು ಎಳೆದು ತರಬೇಡಿ” ಎಂದು ನ್ಯಾಯಪೀಠ ಹೇಳಿದ್ದು, ಪ್ರಕರಣದ ವಿಚಾರಣೆಯನ್ನು ನಾಳೆ (ಜು.22)ಗೆ ಮುಂದೂಡಲಾಗಿದೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಡೆಸುತ್ತಿರುವ ಚಳವಳಿಗೆ ಬೆಂಬಲ ಸೂಚಿಸಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಶನಿವಾರ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತ್ತು.
ಸೋಮವಾರ ಸಂಸತ್ ಚಲೋ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿ, ಹಲವರ ಮೇಲೆ ಲಾಠಿ ಪ್ರಹಾರ ನಡೆಸಿದರು.
ಈ ಘರ್ಷಣೆಯಲ್ಲಿ ಒಟ್ಟು 178 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ 118 ಮಂದಿ ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಸೇರಿದ್ದಾರೆ. ಸುಮಾರು 60 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕಾಕ್ರೋಚ್‌ಗಳಿಗೆ ಬಾಲಿವುಡ್ ಬೆಂಬಲ; ವಿದ್ಯಾರ್ಥಿಗಳ ಮಾತು ಆಲಿಸುವಂತೆ ಸರ್ಕಾರಕ್ಕೆ ನಟ-ನಟಿಯರ ಆಗ್ರಹ
ಪ್ರತಿಭಟನಾಕಾರರ ವರ್ತನೆಯನ್ನು ಹಿಂಸಾತ್ಮಕ ಎಂದಿರುವ ದೆಹಲಿ ಪೊಲೀಸರು, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ ನಾಯಕರು, ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. “ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಇದು ನಾಚಿಕೆಗೇಡಿನ ದಿನ. ನ್ಯಾಯಯುತ ಬೇಡಿಕೆಗಾಗಿ ಬಂದಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ” ಎಂದು ಪಕ್ಷದ ವಕ್ತಾರರು ಆರೋಪಿಸಿದ್ದಾರೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಸಿಜೆಪಿ ಘೋಷಿಸಿದೆ.





