ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್‌ಗಳ ಬದಲಿಗೆ ಅಂಕಗಳನ್ನೇ ನೀಡಬೇಕು ಎಂಬ ತನ್ನ ಹಳೆಯ ಆದೇಶವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಪ್ರಸಕ್ತ ಸಾಲಿಗೆ ಹಿಂದಿ ಭಾಷೆಗೆ ಗ್ರೇಡ್ ಬದಲಿಗೆ ಕಡ್ಡಾಯವಾಗಿ ಅಂಕಗಳನ್ನೇ ನೀಡಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರದ ಪರ ಅಡ್ವೊಕೇಟ್ ಜನರಲ್ ವಾದವೇನಿತ್ತು?
ಸರ್ಕಾರದ ಪರವಾಗಿ ವಾದ ಮಂಡಿಸಿದ AG ಶಶಿಕಿರಣ್ ಶೆಟ್ಟಿ, “ಹಿಂದಿ ಭಾಷೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ವಿದ್ಯಾರ್ಥಿಗಳ ಮೇಲಿನ ಈ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಗ್ರೇಡ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಕುರಿತು ಸೂಕ್ತ ತಿದ್ದುಪಡಿಗಳೊಂದಿಗೆ ನಿಯಮಗಳನ್ನು ರೂಪಿಸಲು ಸರ್ಕಾರ ಕರಡು ಸಿದ್ಧಪಡಿಸುತ್ತಿದೆ” ಎಂದು ವಾದಿಸಿದ್ದರು.
ಸರ್ಕಾರಕ್ಕೆ ಹೈಕೋರ್ಟ್ ತರಾಟೆ: ಸರ್ಕಾರದ ವಾದವನ್ನು ಒಪ್ಪದ ನ್ಯಾಯಪೀಠ “ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧಿಸೂಚನೆ ಹೊರಡಿಸುವಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿತ್ತು. ಮೂಲ ಅಧಿಸೂಚನೆಯಲ್ಲಿ ಇಲ್ಲದ ಗ್ರೇಡ್ ಪದ್ಧತಿಯನ್ನು ಈಗ ಜಾರಿಗೆ ತರುತ್ತಿರುವುದು ಸರಿಯಲ್ಲ. ಪಿಯುಸಿಯಲ್ಲಿ ಈಗ ಶೇ. 83ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಎಲ್ಲರನ್ನೂ ಪಾಸ್ ಮಾಡಿಸುವುದೇ ನಿಮ್ಮ ಉದ್ದೇಶವಾಗಿದ್ದರೆ ಪರೀಕ್ಷೆಯನ್ನೇ ರದ್ದುಗೊಳಿಸಿಬಿಡಿ” ಎಂದು ಅಸಮಾಧಾನ ವ್ಯಕ್ತಪಡಿಸಿತು.
ಇದನ್ನೂ ಓದಿ: ಮಣಿಪುರದಲ್ಲಿ 5.2 ತೀವ್ರತೆಯ ಭೂಕಂಪ
ನಿಯಮಗಳನ್ನು ರೂಪಿಸಿದ ನಂತರ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬಹುದು. ಆದರೆ, ನಿಯಮಗಳು ಜಾರಿಗೆ ಬರುವ ಮುನ್ನವೇ ಪರೀಕ್ಷಾ ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಹಿಂದಿ ಭಾಷೆಗೆ ಅಂಕಗಳನ್ನೇ ನೀಡಬೇಕು ಎಂದು ಆದೇಶಿಸಿದೆ.





