ಗೃಹಬಳಕೆ ಹಾಗೂ ವಾಹನ ಬಳಕೆಯ ಅನಿಲದ ಕೊರತೆಯಿಂದ ಯಾದಗಿರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಬಡವರ ಬದುಕು ಮತ್ತಷ್ಟು ದುಸ್ತರವಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಗ್ಯಾಸ್ ಸರಬರಾಜು ಸುಗಮಗೊಳಿಸದಿದ್ದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ
ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಕೊರತೆಯಿಂದ ಯಾದಗಿರಿ ಜಿಲ್ಲೆಯ ಶಹಾಪುರ್ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಿಲಿಂಡರ್ ಪಡೆಯಲು ಸಾರ್ವಜನಿಕರು ಮುಂಜಾನೆಯಿಂದಲೇ ಖಾಲಿ ಸಿಲಿಂಡರ್‌ಗಳನ್ನು ಹೊತ್ತು ಸಾಲಿನಲ್ಲಿ ನಿಲ್ಲುವ ದುಃಸ್ಥಿತಿ ಎದುರಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಅಡುಗೆ ಮಾಡಲು ಅನಿಲವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದು, ನಿತ್ಯದ ಬದುಕೇ ಪ್ರಶ್ನಾರ್ಥಕವಾಗಿದೆ.
ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಿ ಜನರನ್ನು ಗೃಹಬಳಕೆ ಅನಿಲದ ಮೇಲೆ ಅವಲಂಬಿತರನ್ನಾಗಿಸಿದ್ದರೂ, ಈಗ ಸಿಲಿಂಡರ್‌ಗಳ ಸರಬರಾಜಿನಲ್ಲಿ ಉಂಟಾದ ತೊಂದರೆಯಿಂದ ಜನರು ಪರದಾಡುವಂತಾಗಿದೆ. ʼಉಚಿತ ಗ್ಯಾಸ್ ಕೊಟ್ಟು ಸೌದೆ ಒಲೆ ಮರೆಯುವಂತೆ ಮಾಡಿದರು; ಈಗ ಗ್ಯಾಸ್ ಸಿಗದೇ ಮತ್ತೆ ಹಳೆಯ ವಿಧಾನಗಳತ್ತ ಮುಖ ಮಾಡುವ ಪರಿಸ್ಥಿತಿ ಬಂದಿದೆʼ ಎಂಬ ಅಸಮಾಧಾನ ಜನರಲ್ಲಿ ವ್ಯಕ್ತವಾಗುತ್ತಿದೆ.
ನಗರದ ಅನೇಕ ಗ್ಯಾಸ್ ಏಜೆನ್ಸಿಗಳ ಎದುರು ಪ್ರತಿದಿನವೂ ನೂರಾರು ಜನರು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಸಿಲಿಂಡರ್‌ಗಾಗಿ ಕಾಯುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಆದರೆ ದಿನಪೂರ್ತಿ ಕಾಯುತ್ತಿದ್ದರೂ ಎಲ್ಲರಿಗೂ ಸಿಲಿಂಡರ್ ಸಿಗದೇ, ಕೆಲವರಿಗೆ ʼಖಾಲಿಯಾಗಿದೆ, ನಾಳೆ ಬನ್ನಿʼ ಎಂಬ ಉತ್ತರ ಸಿಗುತ್ತಿದೆ. ಇದರಿಂದ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ.
ಈ ದಿನ.ಕಾಮ್ ಜತೆಗೆ ಮಾತನಾಡಿದ ಶಿವರಾಜ, “ನೂರು ಜನರಲ್ಲಿ ಐವತ್ತು ಜನರಿಗೆ ಮಾತ್ರ ಸಿಲಿಂಡರ್ ಕೊಡುತ್ತಾರೆ. ಉಳಿದವರಿಗೆ ನಾಳೆ ಬನ್ನಿ ಎನ್ನುತ್ತಾರೆ. ಇದೇ ಸಮಸ್ಯೆ ಹಲವಾರು ದಿನಗಳಿಂದ ಮುಂದುವರಿದಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ಅಬ್ದುಲ್ ಕಯಿಮ್ ಮಾತನಾಡಿ, “ಬೆಳಿಗ್ಗೆ 6ರಿಂದ ಸಿಲಿಂಡರ್ ಅಂಗಡಿ ಎದುರು ಸಾಲಿನಲ್ಲಿ ಕೆಲಸ ಬಿಟ್ಟು ಇಲ್ಲಿ ನಿಂತಿದ್ದೇವೆ. ಕೆಲಸಕ್ಕೆ ಹೋದರೆ ಸಿಲಿಂಡರ್ ಸಿಗುವುದಿಲ್ಲ; ಸಾಲಿನಲ್ಲಿ ನಿಂತರೆ ಕೂಲಿ ಸಿಗುವುದಿಲ್ಲ. ಈಗ ಸಿಲಿಂಡರ್ ಬೆಲೆಯೂ ಹೆಚ್ಚಾಗಿದೆ. ಇದರ ನಡುವೆ ಬಡವರು ನರಳುವಂತಾಗಿದೆ” ಎಂದು ಅಳಲು ತೋಡಿಕೊಂಡರು.
ಮಹೇಶ್ವರಿ ಮಾತನಾಡಿ, “ಮೂರು ದಿನಗಳಿಂದ ಬೆಳಿಗ್ಗೆ 4ಕ್ಕೆ ಬಂದು ಸಾಲಿನಲ್ಲಿ ನಿಲ್ಲುತ್ತಿದ್ದೇವೆ. ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲ. ಕೆಲಸಕ್ಕೆ ಹೋಗಲಾಗುತ್ತಿಲ್ಲ. ಹೀಗಾದರೆ ನಮ್ಮಂತ ಬಡವರು ಹೇಗೆ ಬದುಕಬೇಕು ಎಂಬುದೇ ಗೊತ್ತಾಗುತ್ತಿಲ್ಲ” ಎಂದು ಕಣ್ಣೀರಿಟ್ಟರು.
ಅಶರ್ಫ್ ಐಮತ್ ಮಾತನಾಡಿ, “ಗ್ಯಾಸ್ ಸಾಕಷ್ಟಿದೆ ಎಂದು ಹೇಳುತ್ತಾರೆ. ಆದರೆ ನಾವು ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತಿದ್ದೇವೆ. ಊಟವೂ ಇಲ್ಲ, ಬಿಸಿಲಿನಲ್ಲಿ ಕನಿಷ್ಠ 200 ಜನರು ಕಾಯುತ್ತಿದ್ದಾರೆ. ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮಗೆ ತಕ್ಷಣ ಗ್ಯಾಸ್ ಒದಗಿಸಬೇಕು” ಎಂದು ಆಗ್ರಹಿಸಿದರು.
ಅಂಬರೀಶ್ ಮಾತನಾಡಿ, “ಈ ಸಮಸ್ಯೆಗೆ ಜಿಲ್ಲಾಡಳಿತವೇ ಹೊಣೆ. ಸಾರ್ವಜನಿಕರ ಕಷ್ಟವನ್ನು ಗಮನಿಸಿ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಜುಬೆದಾ ಮಾತನಾಡಿ, “ಮೊದಲು ಸರಿಯಾಗಿ ಸಿಲಿಂಡರ್ ಸಿಗುತ್ತಿತ್ತು. ಈಗ ಏಕೆ ಈ ಸಮಸ್ಯೆ ಉಂಟಾಗಿದೆ ಗೊತ್ತಾಗುತ್ತಿಲ್ಲ. ಮನೆಯಲ್ಲಿ ಸಣ್ಣ ಮಕ್ಕಳು ಇದ್ದಾರೆ, ಅವರಿಗೆ ಅಡುಗೆ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಬಡವರ ಸಂಕಷ್ಟ ಯಾರಿಗೂ ಕಾಣುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಅನಿಲ ಕೊರತೆಯಿಂದ ಗೃಹಿಣಿಯರ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ. ಬೆಳಗ್ಗಿನ ಜಾವ ಮಕ್ಕಳಿಗೆ ಅಡುಗೆ ಮಾಡಿ ಶಾಲೆಗೆ ಕಳುಹಿಸುವುದು, ಮನೆಯವರಿಗೆ ನಿತ್ಯದ ಆಹಾರ ವ್ಯವಸ್ಥೆ ಮಾಡುವುದು ಕಷ್ಟಕರವಾಗಿದೆ. ಕೆಲಸಕ್ಕೆ ಹೋಗಬೇಕಾದ ಮಹಿಳೆಯರೂ ಕೂಡ ಗ್ಯಾಸ್ ಸಿಲಿಂಡರ್‌ಗಾಗಿ ಸಾಲಿನಲ್ಲಿ ನಿಂತು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ.
ಇದೇ ಸಮಸ್ಯೆ ಆಟೋ ಚಾಲಕರಿಗೂ ತಟ್ಟಿದೆ. ಗ್ಯಾಸ್ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್‌ಗಳಲ್ಲಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿದ್ದು, ಇದರಿಂದ ದಿನದ ಆದಾಯ ಕುಸಿಯುತ್ತಿದೆ.
ನಗರ ಪ್ರದೇಶಗಳಲ್ಲಿ ಈಗ ಸೌದೆ ಒಲೆ ಬಳಕೆ ಬಹಳ ಕಡಿಮೆಯಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರು ಕಟ್ಟಿಗೆ ಒಲೆ ಬಳಸಲು ಮನೆ ಮಾಲೀಕರ ಅನುಮತಿ ಸಿಗುವುದಿಲ್ಲ. ಹೊಗೆ, ಬೆಂಕಿ ಅಪಾಯದ ಕಾರಣದಿಂದ ಕಟ್ಟಿಗೆ ಒಲೆ ಬಳಸಬಾರದು ಎಂಬ ನಿಯಮಗಳಿಂದ ಕುಟುಂಬಗಳು ಗೃಹಬಳಕೆ ಅನಿಲದ ಮೇಲೆಯೇ ಸಂಪೂರ್ಣ ಅವಲಂಬಿತವಾಗಿವೆ. ಆದರೆ ಅನಿಲದ ಅಭಾವದಿಂದ ಬಹುತೇಕ ಕುಟುಂಬಗಳ ದೈನಂದಿನ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಸಾಕು ನಾಯಿಗಳಿಂದ ದಾಳಿ; ಬಾಲಕ ಗಂಭೀರ ಗಾಯ
ಹೋಟೆಲ್ ಉದ್ಯಮವೂ ಈ ಸಮಸ್ಯೆಯಿಂದ ಬಾಧಿತವಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳನ್ನು ಸುಮಾರು ಮೂರು ಸಾವಿರ ರೂಪಾಯಿಗೆ ಖರೀದಿಸಿ ವ್ಯಾಪಾರ ನಡೆಸಬೇಕಾದ ಪರಿಸ್ಥಿತಿ ಎದುರಾಗಿದ್ದು, ವೆಚ್ಚ ಹೆಚ್ಚಳದಿಂದ ಹೋಟೆಲ್ ಮಾಲೀಕರು ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ. ಪಲಾವ್, ಇಡ್ಲಿ, ದೋಸೆ, ಉಪಿಟ್ಟು ಮುಂತಾದ ಸೀಮಿತ ಆಹಾರ ಪದಾರ್ಥಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇದರ ಪರಿಣಾಮವಾಗಿ ಗ್ರಾಹಕರಿಗೂ ತೊಂದರೆ ಉಂಟಾಗಿದೆ.
ಒಟ್ಟಾರೆ ಗೃಹಬಳಕೆ ಹಾಗೂ ವಾಹನ ಬಳಕೆಯ ಅನಿಲದ ಕೊರತೆಯಿಂದ ಯಾದಗಿರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಬಡವರ ಬದುಕು ಮತ್ತಷ್ಟು ದುಸ್ತರವಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಗ್ಯಾಸ್ ಸರಬರಾಜು ಸುಗಮಗೊಳಿಸದಿದ್ದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕರ ಕಳವಳವಾಗಿದೆ.





