“70 ವರ್ಷದ ಮುದುಕು ಪ್ರಧಾನಿ ನರೇಂದ್ರ ಮೋದಿಯವರು, ತಮಗಿಂತ ತೀರಾ ಸಣ್ಣ ವಯಸ್ಸಿನ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗೆ ನಡೆದುಕೊಳ್ಳುತ್ತಿರುವ ರೀತಿ, ರೋಮ್ ನಗರದಲ್ಲಿ ಅವರಿಬ್ಬರು ತೆಗೆಸಿಕೊಂಡಿರುವ ರೊಮ್ಯಾಂಟಿಕ್ ಫೋಟೋಗಳನ್ನು ನೋಡಿದರೆ ದೇಶದ ಜನರಿಗೆ ನಗು ಬರುತ್ತದೆ. ದೇಶದಲ್ಲಿ ಇಷ್ಟೆಲ್ಲ ಸಮಸ್ಯೆ ಇರುವಾಗ, ಇವರು ಮಾತ್ರ ತಮಗಿಂತ ಸಣ್ಣ ವಯಸ್ಸಿನವರ ಜೊತೆಗೆ ‘ಮೆಲೋಡಿ’ ಹಂಚಿಕೊಂಡು ಕಾಲ ಕಳೆಯುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದೇಶದಲ್ಲಿ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಹಾಗೂ ಜ್ವಲಂತ ಜನವಿರೋಧಿ ಸಮಸ್ಯೆಗಳು ದಿನಕ್ಕೊಂದು ಹೆಚ್ಚಾಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪರಿಸ್ಥಿತಿಯನ್ನು ಕಡೆಗಣಿಸಿ ವಿದೇಶಿ ಪ್ರವಾಸಗಳಲ್ಲಿ ನಿರತರಾಗಿದ್ದಾರೆ” ಎಂದು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿಯವರ ಆಡಳಿತ ವೈಖರಿಯನ್ನು ರೋಮ್ ಸಾಮ್ರಾಜ್ಯದ ಕ್ರೂರ ದೊರೆ ‘ನೀರೋ ಚಕ್ರವರ್ತಿ’ ಮತ್ತು ‘ಆಸ್ಟ್ರಿಚ್’ (ಉಷ್ಟ್ರಪಕ್ಷಿ) ಹಕ್ಕಿಗೆ ಹೋಲಿಸಿ ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸಗಳ ಹಪಹಪಿತನವನ್ನು ಟೀಕಿಸಿದ ಬಿ.ಕೆ. ಹರಿಪ್ರಸಾದ್, “ಮೋದಿಯವರು ಒಂಥರಾ ‘ಆಸ್ಟ್ರಿಚ್’ ಪಕ್ಷಿ ಇದ್ದ ಹಾಗೆ. ಮರುಭೂಮಿಯಲ್ಲಿ ಭೀಕರ ಬಿರುಗಾಳಿ ಅಥವಾ ಸಂಕಷ್ಟ ಎದುರಾದಾಗ ಆಸ್ಟ್ರಿಚ್ ಪಕ್ಷಿಯು ಮರಳಿನೊಳಗೆ ತನ್ನ ಕತ್ತನ್ನು ಹೂತುಕೊಂಡು, ಜಗತ್ತಿನಲ್ಲಿ ಏನೂ ಆಗುತ್ತಿಲ್ಲ ಎಂಬಂತೆ ಸುಮ್ಮನೆ ಕೂರುತ್ತದೆ. ಇಂದಿನ ಪ್ರಧಾನಿಯವರೂ ಅಷ್ಟೇ; ದೇಶದಲ್ಲಿ ತೀವ್ರ ಬಿರುಗಾಳಿಯಂತಹ ಸಮಸ್ಯೆಗಳು ಎದ್ದಾಗ, ಅವುಗಳನ್ನು ಎದುರಿಸುವ ಬದಲು ವಿದೇಶಿ ಪ್ರವಾಸಗಳ ಹೆಸರಿನಲ್ಲಿ ಹೋಗಿ ಅಡಗಿಕೊಳ್ಳುತ್ತಾರೆ” ಎಂದು ಲೇವಡಿ ಮಾಡಿದ್ದಾರೆ.
ಇತಿಹಾಸದ ಉದಾಹರಣೆ ನೀಡಿದ ಹರಿಪ್ರಸಾದ್, “ರೋಮ್ ನಗರವು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದಾಗ ಅಲ್ಲಿನ ಕ್ರೂರ ದೊರೆ ನೀರೋ ಮಹಾರಾಜ ಆರಾಮವಾಗಿ ಕುಳಿತು ಪಿಟೀಲು ನುಡಿಸುತ್ತಿದ್ದನಂತೆ. ಭಾರತದ ಇಂದಿನ ಪರಿಸ್ಥಿತಿಯೂ ಹಾಗೇ ಆಗಿದೆ. ದೇಶದಲ್ಲಿ ಪ್ರತಿದಿನವೂ ಹತ್ತಾರು ಗಂಭೀರ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದರೂ, ನಮ್ಮ ಪ್ರಧಾನಿ ಮೋದಿಯವರು ದೇಶದ ಪರಿಸ್ಥಿತಿಯನ್ನು ಬದಿಗೊತ್ತಿ ವಿದೇಶಗಳಲ್ಲಿ ಕಾಲ ಕಳೆಯುತ್ತಿದ್ದಾರೆ” ಎಂದು ಆಪಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಜೆನ್ ಝೀ’ಗಳ CJPಗೆ ಬಿಜೆಪಿ ಬೆದರಿದ್ದೇಕೆ? ಸಂಶೋಧನೆಗಳು ಹೇಳುವುದೇನು?
“ಪ್ರಧಾನಿ ಮೋದಿಯವರು ಇಟಲಿಗೆ ಹೋಗಿ ‘ಪಾರ್ಲೆ ಮೆಲೋಡಿ’ ಚಾಕೊಲೇಟ್ ಅನ್ನು ಜಾರ್ಜಿಯಾ ಮೆಲೋನಿಗೆ ಕೊಟ್ಟು, ಭಾರತದಲ್ಲಿ ಪಾರ್ಲೆ ಕಂಪನಿಯ ಶೇರು ದರ ಹೆಚ್ಚಾಗುವಂತೆ ಮಾಡಿದ್ದಾರೆ. ಪ್ರಧಾನಿಯಾದವರು ದೇಶದ ರಾಜತಾಂತ್ರಿಕತೆ ಬಿಟ್ಟು, ಅಲ್ಲಿಯೂ ಪಾರ್ಲೆ ಕಂಪನಿಯ ಜೊತೆ ಸೇರಿಕೊಂಡು ವ್ಯಾಪಾರ ಕುದುರಿಸಿದ್ದಾರೆ” ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
“ರಾಜನೇ ವ್ಯಾಪಾರಿಯಾದಾಗ ದೇಶದ ಪ್ರಜೆಗಳು ಬಿಕಾರಿಯಾಗುತ್ತಾರೆ. ಭಾರತದ ಇತಿಹಾಸದಲ್ಲೇ ದೇಶದ ಜನರನ್ನು ಅತ್ಯಂತ ಕಡು ಬಿಕಾರಿ ಮಾಡಿದ ಪ್ರಧಾನಿ ಯಾರಾದರೂ ಇದ್ದರೆ, ಅದು ನರೇಂದ್ರ ಮೋದಿ ಮಾತ್ರ. ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಾ, ಜನರ ಬದುಕನ್ನು ಬೀದಿಗೆ ತಂದಿದ್ದಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.




