ಜೆನ್ ಝೀಗಳು ವಾಸ್ತವ ಸಂಗತಿಗಳ ಕುರಿತು ಯೋಚಿಸುತ್ತಾರೆ. ಅವರಿಗೆ ವಿಷಯಾಧಾರಿತ ರಾಜಕಾರಣದಲ್ಲಿ ಆಸಕ್ತಿ ಇದೆ ಎಂಬುದನ್ನು ಸಂಶೋಧನೆಗಳು ಬಹಿರಂಗಪಡಿಸಿವೆ.
ಸಾಮಾನ್ಯವಾಗಿ ಹಳೆಯ ತಲೆಗಳು ಅಥವಾ ಹಿರಿಯರು ತಮ್ಮೆದುರಿಗಿನ ಕಿರಿಯರನ್ನು ಮೂದಲಿಸುವಾಗ, “ನಮ್ಮೆದುರು ನೀವೆಲ್ಲ ಬಚ್ಚಾಗಳು, ನಾವು ಒಂದು ಕಾಲದಲ್ಲಿ ಮೆರೆಯುತ್ತಿದ್ದಾಗ, ನೀವಿನ್ನೂ ಹುಟ್ಟೇ ಇರಲಿಲ್ಲ” ಎನ್ನುವುದು ಸಾಮಾನ್ಯ. ಅಂದರೆ, “ಹಿರಿತನ, ಅನುಭವದ ಮುಂದೆ ನಿಮ್ಮ ತಿಳಿವಳಿಕೆ ಅಲ್ಪಮಟ್ಟದ್ದು“ ಎಂಬುದು ಈ ಮಾತಿನ ತಾತ್ಪರ್ಯ ಮತ್ತು ಹೊಸ ತಲೆಮಾರನ್ನು ಕ್ಷುಲ್ಲಕವಾಗಿ ನೋಡುತ್ತಿರುವ ಸೂಚನೆಯೂ ಈ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ‘ಜೆನ್ ಝೀ’ (Generation- Z) ಎಂದು ಕರೆಯಲ್ಪಡುವ ತಲೆಮಾರನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಬದಲಾವಣೆ ತರಬಲ್ಲರು ಎಂಬುದು ಮತ್ತೆ-ಮತ್ತೆ ಸಾಬೀತಾಗುತ್ತಿದೆ. ಜೊತೆಗೆ ‘ಜೆನ್ ಝೀ’ಗಳ ಮನಸ್ಥಿತಿ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕಾಗುತ್ತದೆ.
ಸ್ವಾತಂತ್ರ್ಯೋತ್ತರ ಮತ್ತು ಕೈಗಾರಿಕಾ ಕ್ರಾಂತಿಯ ಕಾಲದವರನ್ನು (1946–1964) ‘ಬೇಬಿ ಬೂಮರ್ಸ್’ ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ತಂತ್ರಜ್ಞಾನದ ಆರಂಭ ನೋಡಿದವರನ್ನು (1965–1980) ‘ಜೆನ್ ಎಕ್ಸ್’ (Generation X) ಎಂದೂ, ಇಂಟರ್ನೆಟ್ ಮತ್ತು ಮೊಬೈಲ್ ಕ್ರಾಂತಿಯ ನಡುವೆ ಬೆಳೆದವರನ್ನು (1981–1996) ಮಿಲೇನಿಯಲ್ಸ್ / ‘ಜೆನ್ ವೈ’ (Gen Y) ಎಂದೂ, ಹುಟ್ಟಿನಿಂದಲೇ ಸ್ಮಾರ್ಟ್ಫೋನ್, AI ಮತ್ತು ಸೋಶಿಯಲ್ ಮೀಡಿಯಾ ಯುಗದಲ್ಲಿದ್ದವರನ್ನು (1997–2012) ‘ಜೆನ್ ಝೀ’ (Gen Z) ಎಂದು ಕರೆಯಲಾಗಿದೆ. ಸಂಪೂರ್ಣವಾಗಿ ಡಿಜಿಟಲ್ ಮತ್ತು ಕೋವಿಡ್ ನಂತರದ ಜಗತ್ತಿನ ಮಕ್ಕಳನ್ನು (2013–2025+) ‘ಜೆನ್ ಆಲ್ಫಾ’ (Gen Alpha) ಎಂದು ಗುರುತಿಸಲಾಗುತ್ತದೆ. ಅದರಲ್ಲೂ ‘ಜೆನ್ ಝೀ’ ತಲೆಮಾರು ಇಂದು ಡಿಜಿಟಲ್ ಯುಗದ ಚರ್ಚೆಯ ಕೇಂದ್ರಬಿಂದು. ಯಾಕೆಂದರೆ, ರಾಜಕೀಯ ತಲ್ಲಣಗಳಿಗೂ, ಅಚ್ಚರಿಗಳಿಗೂ ಇವರು ಕಾರಣವಾಗುತ್ತಿದ್ದಾರೆ.
2026ರ ಇಂದಿನ ಲೆಕ್ಕಾಚಾರದ ಪ್ರಕಾರ, ಜೆನ್ ಝೀಗಳ ವಯಸ್ಸು ಸರಿಸುಮಾರು 14 ರಿಂದ 29 ವರ್ಷಗಳು. ಇವರನ್ನು `ಡಿಜಿಟಲ್ ನೇಟಿವ್ಸ್’ (Digital Natives) ಎಂದು ಗುರುತಿಸಲಾಗಿದೆ. ಏಕೆಂದರೆ ಇಂಟರ್ನೆಟ್, ಸ್ಮಾರ್ಟ್ಫೋನ್ ಮತ್ತು ಸೋಶಿಯಲ್ ಮೀಡಿಯಾಗಳು ಜಗತ್ತಿಗೆ ಬಂದ ಮೇಲೆಯೇ ಇವರು ಕಣ್ಣು ಬಿಟ್ಟಿದ್ದಾರೆ. ಇವರಿಗೆ ಇಂಟರ್ನೆಟ್ ಇಲ್ಲದ ಪ್ರಪಂಚದ ನೆನಪೇ ಇಲ್ಲ! ಈ ಪೀಳಿಗೆಯ ಮೊದಲ ಬ್ಯಾಚ್ (1997ರಲ್ಲಿ ಜನಿಸಿದವರು) ಕಾಲೇಜು ಮುಗಿಸಿ ಉದ್ಯೋಗಕ್ಕೆ ಪ್ರವೇಶಿಸಿದಾಗ ಮತ್ತು ರಾಜಕೀಯ, ಹವಾಮಾನ ಬದಲಾವಣೆಗಳ ವಿರುದ್ಧ ಧ್ವನಿ ಎತ್ತಲು ಆರಂಭಿಸಿದಾಗ ಮಾಧ್ಯಮಗಳು ಇವರನ್ನು ‘Gen Z’ ಎಂದು ಬಣ್ಣಿಸಲು ಶುರುಮಾಡಿದವು. ಈಗ ಈ ‘ಜೆನ್ ಝೀ’ಗಳು ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ರಾಜಕೀಯ ಕಾರಣಗಳಿದ್ದಾಗ ಸುಲಭವಾಗಿ ಇವರನ್ನು ನಿರ್ಲಕ್ಷಿಸಲಾಗದು.
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಬಹುದೊಡ್ಡ ಪಕ್ಷವಾಗಿ ಹೊಮ್ಮಿತು. ವಿಜಯ್ ಮುಖ್ಯಮಂತ್ರಿಯೂ ಆದರು. ಇದಕ್ಕೆ ಪ್ರಮುಖ ಕಾರಣ ‘ಎಸ್‌ಐಆರ್’ ಜೊತೆಗೆ ‘ಜೆನ್ ಝೀ’ಗಳು ಕೂಡ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ತಮಿಳುನಾಡಿನ ಒಟ್ಟು ಮತದಾರರಲ್ಲಿ 18 ರಿಂದ 29 ವರ್ಷದೊಳಗಿನ ಯುವಜನರ ಸಂಖ್ಯೆ 1.2 ಕೋಟಿಗೂ (ಸುಮಾರು ಶೇ. 21) ಹೆಚ್ಚಾಗಿತ್ತು. ಇದರಲ್ಲಿ 14 ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಬಾರಿಗೆ ಮತದಾನ ಮಾಡಿದ ‘ಜೆನ್ ಝೀ’ಗಳಾಗಿದ್ದರು. ಈ ಇಡೀ ಯುವ ಸಮೂಹವು ಒಟ್ಟಾಗಿ ವಿಜಯ್ ಅವರ ಬೆನ್ನಿಗೆ ನಿಂತಿತು. ಜೆನ್ ಝೀ ಯುವಕರಿಗೆ ಕರುಣಾನಿಧಿ ಅಥವಾ ಜಯಲಲಿತಾ ಅವರ ಕಾಲದ ಹಳೆಯ ರಾಜಕೀಯ ಹೋರಾಟಗಳ ನೆನಪುಗಳಿಲ್ಲ. ಅವರು ಕಣ್ಣಾರೆ ಕಂಡ ಸದ್ಯದ ನಿರುದ್ಯೋಗ ಮತ್ತು ಭ್ರಷ್ಟಾಚಾರಕ್ಕೆ ಬೇಸತ್ತು ‘ಬದಲಾವಣೆ’ಗಾಗಿ ಟಿವಿಕೆ ಪಕ್ಷವನ್ನು ಬೆಂಬಲಿಸಿದರು. ನಟ ವಿಜಯ್, ಸಾಮಾಜಿಕ ಮಾಧ್ಯಮಗಳ ಮೂಲಕ ಈ ತಲೆಮಾರನ್ನು ಪ್ರಭಾವಿಸಿದರು. ಯುವ ಮತದಾರರು ದ್ರಾವಿಡ ಸಿದ್ಧಾಂತ, ಸಾಮಾಜಿಕ ನ್ಯಾಯ ಅಥವಾ ತಮಿಳು ಅಸ್ಮಿತೆಯನ್ನು ಕೈಬಿಡಲಿಲ್ಲ. ಆದರೆ, ಆ ಮೌಲ್ಯಗಳನ್ನು ಕೇವಲ ಹಳೆಯ ಸಾಂಪ್ರದಾಯಿಕ ಪಕ್ಷಗಳು ಮಾತ್ರ ನೀಡಲು ಸಾಧ್ಯ ಎಂಬ ವಾದವನ್ನು ಒಪ್ಪದ ಜೆನ್ ಝೀಗಳು, ಹೊಸ ಪರ್ಯಾಯಕ್ಕೆ ಜೈ ಎಂದರು.
ತಮಿಳುನಾಡಿನ ಚುನಾವಣಾ ವಿಶ್ಲೇಷಣೆಯಲ್ಲಿ ಕಂಡುಬರುವ ಮುಖ್ಯ ಸಂಗತಿಗಳೆಂದರೆ, ಜೆನ್ ಝೀಗಳು ಸಾಂಪ್ರದಾಯಿಕ ಟಿವಿ ಚಾನೆಲ್‌ಗಳ ಪ್ರಚಾರವನ್ನು ನಂಬಲಿಲ್ಲ. ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಹಾಗೂ ತಮಾಷೆಯ ಮೀಮ್‌ಗಳ ಮೂಲಕ ಹಳೆಯ ರಾಜಕಾರಣಿಗಳ ಬೂಟಾಟಿಕೆಯನ್ನು ಬಯಲಿಗೆಳೆದರು. ಇತ್ತ ವಿಜಯ್ ಅವರ ಮ್ಯಾನರಿಸಂಗೆ ಮನಸೋತರು.
ಈಗ ‘ನಿರುದ್ಯೋಗ’ವನ್ನು ಪ್ರಶ್ನಿಸಿ, ಹುಟ್ಟಿಕೊಂಡಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಎಂಬ ಆನ್‌ಲೈನ್ ಅಭಿಯಾನ ಆಡಳಿತರೂಢ ಬಿಜೆಪಿಗೆ ನಡುಕ ಹುಟ್ಟಿಸಿದೆ. ಯಾಕೆಂದರೆ, ಸಿಜೆಪಿ ಜೊತೆ ಜೆನ್ ಝೀಗಳು ಕಾಣಿಸಿಕೊಂಡಿದ್ದಾರೆ. ಇದರಿಂದ ಬೆಚ್ಚಿರುವ ಬಿಜೆಪಿ ನಾಯಕರು, ಶತಾಯಗತಾಯ ಜೆನ್ ಝೀಗಳ ಗುರಿಯನ್ನು ತಪ್ಪಿಸಲು ಸುಳ್ಳುಗಳನ್ನು ಹಬ್ಬಿಸಲು ಶುರು ಮಾಡಿದ್ದಾರೆ.
“ದೇಶದಲ್ಲಿ ಕೆಲಸ ಸಿಗದ ಕೆಲವು ಯುವಜನರು ಜಿರಳೆಗಳಂತೆ (Cockroaches) ಎಲ್ಲೆಂದರಲ್ಲಿ ಹರಡಿಕೊಳ್ಳುತ್ತಿದ್ದಾರೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಪ್ರಕರಣವೊಂದರ ವಿಚಾರಣೆಯ ವೇಳೆ ಹೇಳಿದ್ದರು. ನೀಟ್ ಪೇಪರ್ ಲೀಕ್‌ನಿಂದ ಬೇಸತ್ತಿದ್ದಾಗಲೇ ಈ ಹೇಳಿಕೆ ಹೊರಬಿದ್ದದ್ದು ಜೆನ್ ಝೀಗಳನ್ನು ಕೆಣಕಿತ್ತು. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿಜೆಐ ಪ್ರತಿಕ್ರಿಯೆ ನೀಡುವಷ್ಟರಲ್ಲಿ ಕಿಡಿ ಹೊತ್ತಿಕೊಂಡು ಆಗಿತ್ತು.
ಅಭಿಜೀತ್ ದೀಪ್ಕೆ ಎಂಬ 30 ವರ್ಷದ ಡಿಜಿಟಲ್ ಕಮ್ಯುನಿಕೇಶನ್ ತಜ್ಞ, ಯುವಕರ ಈ ಬೇಸರವನ್ನು ಒಂದು ವಿಭಿನ್ನ ಪ್ರತಿಭಟನೆಯಾಗಿ ರೂಪಿಸಲು ನಿರ್ಧರಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಂಭಿಸಿದರು. ಸಿಜೆಐ ಹೇಳಿಕೆಯಿಂದ ಹುಟ್ಟಿದ ಈ ಸಿಜೆಪಿ, ವಾಸ್ತವದಲ್ಲಿ ಆಡಳಿತರೂಢ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುತ್ತಿದೆ. ಒಂದು ಕೋಟಿಗೂ ಹೆಚ್ಚು ಮಂದಿ ಸಿಜೆಪಿ ಇಸ್ಟಾ ಖಾತೆಯನ್ನು ಫೋಲೋ ಮಾಡಲು ಶುರು ಮಾಡಿದ್ದಾರೆ. ಹೆದರಿರುವ ಪ್ರಭುತ್ವ ಸಿಜೆಪಿಯ ‘ಎಕ್ಸ್’ ಖಾತೆಗೆ ತಡೆ ನೀಡಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಆನ್ಲೈನ್ನಲ್ಲಿ ಬಿರುಗಾಳಿ ಎದ್ದೇಳಲು ಕಾರಣವಾಗಿರುವ ಜೆನ್ ಝೀಗಳ ದಿಕ್ಕುತಪ್ಪಿಸದಿದ್ದರೆ ಬಿಜೆಪಿಗೆ ಭಾರೀ ಹೊಡೆತ ಬೀಳುವುದೆಂದು ಅರಿವಾಗಿದೆ. ಹೀಗಾಗಿಯೇ “ಈ ಸಿಜೆಪಿ ಫಾಲೋ ಮಾಡುತ್ತಿರುವವರಲ್ಲಿ ಪಾಕಿಸ್ತಾನಿಗಳೇ ಹೆಚ್ಚಿದ್ದಾರೆ” ಎನ್ನುವಂತಹ ಅಪಪ್ರಚಾರವನ್ನು ಹರಿಬಿಡಲಾಗಿದೆ. “ಇದು ನೇಪಾಳ ಮಾದರಿಯ ಜೆನ್ ಝೀ ಕ್ರಾಂತಿಗೆ ನೀಡಿರುವ ಪ್ರಚೋದನೆ” ಎಂದು ವರದಿ ಮಾಡುತ್ತಿರುವ ಗೋದಿ ಮೀಡಿಯಾಗಳು, ಭಾರತೀಯ ಯುವಜನರ ದನಿ ಹತ್ತಿಕ್ಕಲು ಯತ್ನಿಸುತ್ತಿವೆ ಎಂಬ ಟೀಕೆ ಹೊರಹೊಮ್ಮಿದೆ. ನೇಪಾಳ ಮಾದರಿಯ ಹೋರಾಟವನ್ನು ಅಭಿಜೀತ್ ತಳ್ಳಿಹಾಕಿದ್ದಾರೆ. “ನಮ್ಮ ಹೋರಾಟ ಸಂಪೂರ್ಣವಾಗಿ ಶಾಂತಿಯುತ, ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯ ಮೂಲಕ ನಡೆಯುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಬೆದರಿರುವುದು ಏತಕ್ಕೆ?
ಸಿಜೆಪಿ ಸುತ್ತ ಬಿಜೆಪಿ ವಿಪರೀತ ಕೌಂಟರ್ ನೆರಟಿವ್ ಕಟ್ಟುತ್ತಿರುವುದಕ್ಕೆ ‘ಜೆನ್ ಝೀ’ಗಳ ಮನಸ್ಥಿತಿಯೂ ಕಾರಣ ಎಂಬುದು ಅಧ್ಯಯನ ಯೋಗ್ಯ ಸಂಗತಿ. ಅದನ್ನು ಸಂಶೋಧನೆಗಳೂ ದೃಢಪಡಿಸುತ್ತವೆ.
ಭಾರತದಲ್ಲಿ ಚುನಾವಣೆ ಮತ್ತು ಯುವಜನರ ರಾಜಕೀಯ ಪ್ರವೃತ್ತಿಗಳ ಬಗ್ಗೆ ಅತ್ಯಂತ ಅಧಿಕೃತ ದತ್ತಾಂಶಗಳನ್ನು ನೀಡುವ ಸಂಸ್ಥೆಯೆಂದರೆ ಸಿಎಸ್‌ಡಿಎಸ್ (Centre for the Study of Developing Societies) ಮತ್ತು ಅದರ ಅಂಗಸಂಸ್ಥೆಯಾದ ಲೋಕನೀತಿ (Lokniti). ಜೆನ್ ಝೀ ತಲೆಮಾರಿನ ರಾಜಕೀಯ ನಿಲುವುಗಳ ಬಗ್ಗೆ ಕಾಲಕಾಲಕ್ಕೆ ಸಿಎಸ್‌ಡಿಎಸ್ ನಡೆಸಿರುವ ಸಂಶೋಧನೆಗಳು ಗಮನಾರ್ಹ ಅಂಶಗಳನ್ನು ಹೇಳುತ್ತವೆ.
CSDS-ಲೋಕನೀತಿ ಸಂಸ್ಥೆಯು ಜರ್ಮನಿಯ ಫ್ರೀಡ್ರಿಕ್ ಎಬರ್ಟ್ ಸ್ಟಿಫ್ಟುಂಗ್ (FES) ಸಂಸ್ಥೆಯೊಂದಿಗೆ ಜಂಟಿಯಾಗಿ ಭಾರತದ ಯುವಜನರ ಮೇಲೆ ಬೃಹತ್ ಸಮೀಕ್ಷೆಗಳನ್ನು ನಡೆಸಿತು. ಇದರ ಪ್ರಮುಖ ವರದಿಗಳು 2016 ಮತ್ತು 2021 ರಲ್ಲಿ ಪ್ರಕಟವಾದವು (2021ರ ಸಮೀಕ್ಷೆಯು ಜೆನ್ ಝೀ ಪೀಳಿಗೆಯ ಆರಂಭಿಕ ಮನಸ್ಥಿತಿಯನ್ನು ಹಿಡಿದಿಡಲು ಅತಿ ಮುಖ್ಯ ಆಧಾರವಾಗಿದೆ). 2019 ಮತ್ತು 2024ರ ಲೋಕಸಭಾ ಚುನಾವಣೆಗಳ ನಂತರ CSDS ನಡೆಸಿದ ದೇಶವ್ಯಾಪಿ ಸಮೀಕ್ಷೆಗಳಲ್ಲಿ, ಮೊದಲ ಬಾರಿಗೆ ಮತದಾನ ಮಾಡಿದ ಜೆನ್ ಝೀ (18-22 ವರ್ಷದ ಯುವಜನರು) ಮತದಾರರ ಪ್ರವೃತ್ತಿಯನ್ನು ಮೌಲ್ಯಮಾಪನ ಮಾಡಲಾಗಿತ್ತು.
CSDS ಅಧ್ಯಯನದ ಪ್ರಕಾರ, ಭಾರತೀಯ ಜೆನ್ ಝೀ ಯುವಜನರನ್ನು ಕಾಡುತ್ತಿರುವ ಅತಿ ದೊಡ್ಡ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆ ಎಂದರೆ ‘ನಿರುದ್ಯೋಗ’. ಸಮೀಕ್ಷೆಯಲ್ಲಿ ಭಾಗವಹಿಸಿದ 40%ಕ್ಕಿಂತ ಹೆಚ್ಚು ಯುವಜನರು ದೇಶ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ನಿರುದ್ಯೋಗ ಎಂದು ನೇರವಾಗಿ ಹೇಳಿದ್ದಾರೆ. ಇವರ ರಾಜಕೀಯ ಒಲವುಗಳು ಯಾವುದೇ ಪಕ್ಷದ ಸಿದ್ಧಾಂತಕ್ಕಿಂತ ಹೆಚ್ಚಾಗಿ, “ಯಾವ ಸರ್ಕಾರ ನಮಗೆ ಉದ್ಯೋಗ ಭದ್ರತೆ ನೀಡುತ್ತದೆ?” ಎಂಬ ಪ್ರಾಯೋಗಿಕ ಯೋಚನೆಯ ಮೇಲೆ ನಿರ್ಧಾರವಾಗುತ್ತದೆ ಎಂದು ವರದಿ ಸ್ಪಷ್ಟಪಡಿಸುತ್ತದೆ. ಜೆನ್ ಝೀಗಳು ನಿರುದ್ಯೋಗದ ಸಮಸ್ಯೆಯನ್ನು ಚುನಾವಣಾ ವಿಷಯವಾಗಿ ತೆಗೆದುಕೊಂಡು ಮುನ್ನಡೆದರೆ ಆಡಳಿತ ಪಕ್ಷಕ್ಕೆ ಪೆಟ್ಟುಬೀಳುವುದು ಖಚಿತ.

“ಜೆನ್‌ಝೀಗಳು ಇನ್ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ವೇದಿಕೆಗಳಲ್ಲಿ ರಾಜಕೀಯ ಹ್ಯಾಶ್‌ಟ್ಯಾಗ್ ಅಭಿಯಾನಗಳನ್ನು ಯಶಸ್ವಿಯಾಗಿ ನಡೆಸುತ್ತಾರೆ. ಇದನ್ನು ಡಿಜಿಟಲ್ ಆಕ್ಟಿವಿಸಂ ಎಂದು ಕರೆಯಲಾಗಿದೆ. ಆದರೆ, ಹಳೆಯ ತಲೆಮಾರಿನ ಮತದಾರರಿಗೆ ಹೋಲಿಸಿದರೆ (ಉದಾಹರಣೆಗೆ 50 ವರ್ಷ ಮೇಲ್ಪಟ್ಟವರು), 18 ರಿಂದ 25 ವರ್ಷದೊಳಗಿನ ಜೆನ್ ಝೀ ಮತದಾರರಲ್ಲಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ. ಅಂದರೆ, ಇವರ ರಾಜಕೀಯ ಪ್ರಜ್ಞೆ ಡಿಜಿಟಲ್ ಜಗತ್ತಿನಲ್ಲಿ ಹೆಚ್ಚಾಗಿದ್ದು, ಭೌತಿಕವಾಗಿ ಮತದಾನ ಮಾಡುವಲ್ಲಿ ಹಳೆಯ ತಲೆಮಾರಿಗಿಂತ ಸ್ವಲ್ಪ ಹಿಂದೆ ಬಿದ್ದಿದ್ದಾರೆ” ಎನ್ನುತ್ತದೆ ಸಿಎಸ್‌ಡಿಎಸ್ ಸಮೀಕ್ಷೆ.
2019 ಮತ್ತು 2024ರ ಚುನಾವಣಾ ದತ್ತಾಂಶಗಳ ಆಧಾರದ ಮೇಲೆ CSDS ವಿಶ್ಲೇಷಿಸುವ ಪ್ರಕಾರ, “ಭಾರತೀಯ ಜೆನ್ ಝೀ ಮತದಾರರಲ್ಲಿ ‘ದೃಢ ನಾಯಕತ್ವ’ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸುವ ನಾಯಕರ ಕಡೆಗೆ ಹೆಚ್ಚಿನ ಆಕರ್ಷಣೆ ಇದೆ. ಜಾಗತಿಕ ತಂತ್ರಜ್ಞಾನ ಯುಗದಲ್ಲಿ ಬೆಳೆದಿರುವ ಈ ಯುವಜನರು, ಭಾರತವು ಜಗತ್ತಿನ ಸೂಪರ್ ಪವರ್ ಆಗಬೇಕು ಎಂದು ಬಯಸುತ್ತಾರೆ. ಹಾಗಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಪ್ರಮುಖವಾಗಿ ಬಿಂಬಿಸುವ ರಾಜಕೀಯ ಶಕ್ತಿಗಳತ್ತ ಇವರ ಒಲವು ಹೆಚ್ಚಾಗಿರುತ್ತದೆ”.
ಸಮೀಕ್ಷೆಯು ಮತ್ತೊಂದು ಪ್ರಮುಖ ಸಂಗತಿಯ ಕುರಿತು ಒತ್ತಿ ಹೇಳುತ್ತದೆ. ಇದು ಬಿಜೆಪಿಯ ಫೇಕ್ ಪ್ರೊಪಗಾಂಡಗಳ ಹಿಂದಿರುವ ಅಸಲಿ ಉದ್ದೇಶಗಳನ್ನು ಬಯಲು ಮಾಡುತ್ತದೆ. “ಹಳೆಯ ತಲೆಮಾರುಗಳು ರಾಜಕೀಯ ಜ್ಞಾನಕ್ಕಾಗಿ ದಿನಪತ್ರಿಕೆಗಳು ಮತ್ತು ಟಿವಿ ನ್ಯೂಸ್ ಚಾನೆಲ್‌ಗಳನ್ನು ನಂಬಿದ್ದರು. ಆದರೆ, ಶೇಕಡಾ 70ಕ್ಕೂ ಹೆಚ್ಚು ಜೆನ್ ಝೀಗಳು ರಾಜಕೀಯ ವಿದ್ಯಮಾನಗಳ ಮಾಹಿತಿಯನ್ನು ಶಾರ್ಟ್ ವಿಡಿಯೋಗಳು (Shorts/Reels) ಮತ್ತು ಯೂಟ್ಯೂಬ್ ರೀತಿಯ ಸ್ವತಂತ್ರ ಚಾನೆಲ್‌ಗಳ ಮೂಲಕ ಪಡೆಯುತ್ತಾರೆ. ಈ ಕಾರಣದಿಂದಾಗಿ, ಇವರು ಸಾಂಪ್ರದಾಯಿಕ ಮಾಧ್ಯಮಗಳ ಪ್ರಚಾರಕ್ಕಿಂತ ಹೆಚ್ಚಾಗಿ, ಆನ್‌ಲೈನ್‌ನಲ್ಲಿ ಹರಿದಾಡುವ ಮೀಮ್‌ಗಳು ಮತ್ತು ಇನ್ಫ್ಲುಯೆನ್ಸರ್‌ಗಳ ಅಭಿಪ್ರಾಯಗಳಿಂದ ಬೇಗ ಪ್ರಭಾವಿತರಾಗುತ್ತಾರೆ” ಎನ್ನುತ್ತದೆ ಸಿಎಸ್‌ಡಿಎಸ್ ಅಧ್ಯಯನ.
“ಭಾರತದ ಜೆನ್ ಝೀ ಮತದಾರರು ರಾಜಕೀಯ ಪಕ್ಷಗಳ ಪಾಲಿಗೆ ‘ಪ್ರಕಟಿಸದ ಲಾಟರಿ’ ಇದ್ದಂತೆ. ಇವರನ್ನು ಯಾವುದೇ ಒಂದು ನಿರ್ದಿಷ್ಟ ಜಾತಿ, ಧರ್ಮ ಅಥವಾ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಸಮೀಕರಣದ ಅಡಿಯಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಇವರು ಅತ್ಯಂತ ಸ್ವತಂತ್ರವಾಗಿ ಯೋಚಿಸುವ, ಆನ್‌ಲೈನ್ ಮಾಹಿತಿಯ ಆಧಾರದ ಮೇಲೆ ಕ್ಷಿಪ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಮತ್ತು ಉದ್ಯೋಗದ ಭವಿಷ್ಯಕ್ಕಾಗಿ ಹಂಬಲಿಸುವ ವಿಶಿಷ್ಟ ರಾಜಕೀಯ ಶಕ್ತಿಯಾಗಿದ್ದಾರೆ” ಎಂಬುದು ಸಿಎಸ್‌ಡಿಎಸ್ ಸಂಶೋಧನೆಗಳ ಒಟ್ಟು ಸಾರಾಂಶ.
ಈ ಲೇಖನ ಓದಿದ್ದೀರಾ?: ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಜಿರಳೆ ಪಕ್ಷ ಹುಟ್ಟಿದ್ದೇಕೆ?
ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಲ್ಲಿ ಜೆನ್ ಝೀ ನಡೆ ಹೇಗಿರುತ್ತದೆ ಎಂಬುದನ್ನು ಪ್ಯೂ ರಿಸರ್ಚ್ ಸೆಂಟರ್ ನಿರಂತರವಾಗಿ ವಿಶ್ಲೇಷಿಸುತ್ತಾ ಬಂದಿದೆ. “ಇತಿಹಾಸದಲ್ಲೇ ಅತ್ಯಂತ ಹೆಚ್ಚು ವಿದ್ಯಾವಂತ ಮತ್ತು ವೈವಿಧ್ಯಮಯ ಪೀಳಿಗೆ ಇದಾಗಿದೆ. ಇವರು ಹಳೆಯ ಸಂಪ್ರದಾಯಗಳು ಅಥವಾ ಸರ್ಕಾರದ ದಬ್ಬಾಳಿಕೆಯನ್ನು ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ಹವಾಮಾನ ಬದಲಾವಣೆ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಇವರು ಜಾಗತಿಕವಾಗಿ ಧ್ವನಿ ಎತ್ತುತ್ತಿದ್ದಾರೆ. ಸರ್ಕಾರಗಳು ತಮ್ಮ ಭವಿಷ್ಯವನ್ನು ಹಾಳುಮಾಡುತ್ತಿವೆ ಎಂಬ ಆಕ್ರೋಶ ಇವರ ಮನದಲ್ಲಿದೆ” ಎನ್ನುತ್ತದೆ ಈ ಸಂಸ್ಥೆ. ಅಂದರೆ, ಜೆನ್ ಝೀಗಳು ಬದುಕಿನ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ನೈಜ ಸಮಸ್ಯೆಗಳತ್ತ ಜೆನ್ ಝೀಗಳು ಹೊರಳಬಾರದು, ಅವರಿಗೆ ಚಂದಮಾಮನ ಕಥೆಗಳನ್ನು ನಿರಂತರ ಹೇಳುತ್ತಿರಬೇಕು ಎಂದು ಪ್ರಭುತ್ವ ಬಯಸುತ್ತದೆ.
ಜೆನ್ ಝೀ ಕ್ರಾಂತಿಗಳು
ಭಾರತದಲ್ಲಿ ನಡೆಯುತ್ತಿರುವ ಸಿಜೆಪಿ ಅಭಿಯಾನ ಕೇವಲ ಆನ್‌ಲೈನ್‌ಗೆ ಸೀಮಿತವಾಗಿದೆ ಎಂಬುದು ಸತ್ಯ. ಆದರೆ ಜಗತ್ತಿನಲ್ಲಿ ದಾಖಲಾಗಿರುವ ಪ್ರಮುಖ ಜೆನ್ ಝೀ ಪ್ರತಿಭಟನೆಗಳು ಮೊದಲು ಆನ್‌ಲೈನ್‌ನಿಂದಲೇ ಭುಗಿಲೆದ್ದು ನಂತರ ಬೀದಿ ಹೋರಾಟಗಳಾಗಿ ಬದಲಾಗಿರುವುದನ್ನು ಗಮನಿಸಬೇಕಾಗುತ್ತದೆ.
ಬಾಂಗ್ಲಾ ಕ್ರಾಂತಿ
2024ರಲ್ಲಿ ಬಾಂಗ್ಲಾದೇಶದಲ್ಲಿ ಕಂಡುಬಂದ ಬೃಹತ್ ಪ್ರತಿಭಟನೆಯಲ್ಲಿ ಜೆನ್ ಝೀಗಳ ಪಾತ್ರ ದೊಡ್ಡದಿತ್ತು. ಈ ಹೋರಾಟವನ್ನು ಜಗತ್ತಿನ `ಮೊದಲ ಯಶಸ್ವಿ ಜೆನ್ ಝೀ ಕ್ರಾಂತಿ’ ಅಥವಾ ‘ಮಾನ್ಸೂನ್ ಕ್ರಾಂತಿ’ ಎಂದು ಕರೆಯಲಾಗುತ್ತದೆ.
ಬಾಂಗ್ಲಾದೇಶ ಹೈಕೋರ್ಟ್ 2024ರ ಜೂನ್ನಲ್ಲಿ ಒಂದು ಹಳೆಯ ವಿವಾದಾತ್ಮಕ ಆದೇಶವನ್ನು ಮರುಸ್ಥಾಪಿಸಿತು. ಅದರಂತೆ, 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಹೋರಾಡಿದ ಸ್ವಾತಂತ್ರ್ಯ ಯೋಧರ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 30ರಷ್ಟು ಮೀಸಲಾತಿ ನೀಡಲಾಗಿತ್ತು. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದಾಗ, ಅರ್ಹತೆಯಿದ್ದರೂ ಉದ್ಯೋಗ ಸಿಗದ ಪರಿಸ್ಥಿತಿ ಯುವಕರನ್ನು ಕೆರಳಿಸಿತು. ಕೊನೆಗೆ ಪ್ರಧಾನಿ ಶೇಖ್ ಹಸೀನಾ ದೇಶಬಿಟ್ಟು ಓಡಿಹೋಗಬೇಕಾಯಿತು.

ನೇಪಾಳದಲ್ಲಿ ಜೆನ್ ಝೀ ಹೋರಾಟ (2025)
ಯುವಜನರು ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸಲು ಬಳಸುತ್ತಿದ್ದ ಪ್ರಮುಖ ಸಾಮಾಜಿಕ ಜಾಲತಾಣಗಳ ಮೇಲೆ ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಸರ್ಕಾರ ಸಂಪೂರ್ಣ ನಿಷೇಧ ಹೇರಿತು. 2025ರ ಸೆಪ್ಟೆಂಬರ್ನಲ್ಲಿ ಕಠ್ಮಂಡುವಿನಲ್ಲಿ ಯುವಜನರು ಬೀದಿಗಿಳಿದು ನೇರವಾಗಿ ಸಂಸತ್ ಭವನ ಮತ್ತು ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿದರು. ಈ ಘರ್ಷಣೆಯಲ್ಲಿ ಸುಮಾರು 19 ಯುವಜನರು ಸಾವನ್ನಪ್ಪಿದರು ಮತ್ತು 300ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ತೀವ್ರ ಆಕ್ರೋಶಗೊಂಡ ಯುವಜನರು ಪ್ರಧಾನಿ ಒಲಿ ಸೇರಿದಂತೆ ದೇಶದ ಐದು ಜನ ಮಾಜಿ ಪ್ರಧಾನಿಗಳ ಖಾಸಗಿ ನಿವಾಸಗಳಿಗೆ ಬೆಂಕಿ ಹಚ್ಚಿದರು. ಯುವಕರ ರೌದ್ರಾವತಾರಕ್ಕೆ ಹೆದರಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಸೆಪ್ಟೆಂಬರ್ 9, 2025 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿತು.

ಮಡಗಾಸ್ಕರ್ ಘಟನೆ (2025)
ಆಫ್ರಿಕಾ ಖಂಡದ ದ್ವೀಪ ರಾಷ್ಟ್ರವಾದ ಮಡಗಾಸ್ಕರ್ನಲ್ಲಿ ಮೂಲಸೌಕರ್ಯದ ಕೊರತೆ ಮತ್ತು ಕಳಪೆ ಆಡಳಿತದ ವಿರುದ್ಧ ಆಕ್ರೋಶ ಭುಗಿಲೆದ್ದಿತು. ದೇಶದ ಜನ ಸಾಮಾನ್ಯ ಸೌಲಭ್ಯಗಳಿಲ್ಲದೆ ಒದ್ದಾಡುತ್ತಿದ್ದರು. ಮತ್ತೊಂದೆಡೆ ಅಧ್ಯಕ್ಷ ಆಂಡ್ರಿ ರಾಜೋಯೆಲಿನಾ ಕುಟುಂಬದ ಐಷಾರಾಮಿ ಜೀವನದ ವಿಡಿಯೋಗಳು ಟಿಕ್ಟಾಕ್ನಲ್ಲಿ ವೈರಲ್ ಆಗಿ ಯುವಜನರು ದಂಗೆ ಎದ್ದರು. 2025ರ ಸೆಪ್ಟೆಂಬರ್ 25 ರಂದು ಅಧ್ಯಕ್ಷರು ವಿಶ್ವಸಂಸ್ಥೆಯ ಸಭೆಗೆ ಅಮೆರಿಕಾಗೆ ತೆರಳಿದ್ದಾಗ, ದೇಶಾದ್ಯಂತ ಜೆನ್ ಝೀ ಯುವಜನರು ಬೃಹತ್ ಪ್ರತಿಭಟನೆ ಆರಂಭಿಸಿದರು. ಅಂತಿಮವಾಗಿ ಅಧ್ಯಕ್ಷ ರಾಜೋಯೆಲಿನಾ ದೇಶ ಬಿಟ್ಟು ಓಡಿಹೋದರು.

ಕೀನ್ಯಾ ಹೋರಾಟ (2024–2025)
ಆಫ್ರಿಕಾದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿ ಸರ್ಕಾರವನ್ನು ಮೊಣಕಾಲೂರುವಂತೆ ಮಾಡಿದ ಕೀರ್ತಿ ಕೀನ್ಯಾದ ಜೆನ್ ಝೀ ಯುವಕರಿಗೆ ಸಲ್ಲುತ್ತದೆ. ಜೂನ್ 2024ರಲ್ಲಿ ಅಧ್ಯಕ್ಷ ವಿಲಿಯಂ ರುಟೊ ಸರ್ಕಾರ ಜನರ ಮೇಲೆ ಭಾರೀ ತೆರಿಗೆ ಹೇರುವ ‘ಫೈನಾನ್ಸ್ ಬಿಲ್ 2024’ ಅನ್ನು ಮಂಡಿಸಿತು. ಯುವಜನರು ಎಕ್ಸ್ (ಟ್ವಿಟರ್), ಟಿಕ್ಟಾಕ್ ಬಳಸಿ ಇಡೀ ದೇಶದ ಜನರನ್ನು ಜಾಗೃತಗೊಳಿಸಿದರು. ಸಂಸದರ ಫೋನ್ ನಂಬರ್ಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಮಾಡಿ, ಅವರಿಗೆ ಲಕ್ಷಾಂತರ ಮೆಸೇಜ್ ಕಳುಹಿಸಿ ಒತ್ತಡ ಹೇರಿದರು. ಜೂನ್ 25ರಂದು ಯುವಜನರು ಕೀನ್ಯಾದ ಸಂಸತ್ ಭವನಕ್ಕೇ ನುಗ್ಗಿ ಭಾಗಶಃ ಬೆಂಕಿ ಹಚ್ಚಿದರು. ಪೊಲೀಸರ ಗುಂಡಿಗೆ 60ಕ್ಕೂ ಹೆಚ್ಚು ಯುವಜನರು ಬಲಿಯಾದರು. ತಕ್ಷಣವೇ ಅಧ್ಯಕ್ಷರು ಆ ಬಿಲ್ ಅನ್ನು ವಾಪಸ್ ಪಡೆದರು. ಆದರೆ 2025ರ ಜೂನ್‌ನಲ್ಲಿ ಓಜ್ವಾಂಗ್ ಎಂಬ ಬ್ಲಾಗರ್ ಪೊಲೀಸ್ ಕಸ್ಟಡಿಯಲ್ಲಿ ಸಾವಿಗಾಡಾದರು. ಇದು ಕೀನ್ಯಾದ ಯುವಜನರನ್ನು ಮತ್ತೊಮ್ಮೆ ಕೆರಳಿಸಿತು. 2025ರ ಜೂನ್ 9 ರಿಂದ ಜುಲೈ 7 ರವರೆಗೆ ಕೀನ್ಯಾದಾದ್ಯಂತ ‘ರುಟೊ ಅಧಿಕಾರ ಬಿಟ್ಟು ತೊಲಗಬೇಕು’ (Ruto Must Go) ಎಂಬ ಘೋಷಣೆಯೊಂದಿಗೆ ತೀವ್ರ ಪ್ರತಿಭಟನೆಗಳು ನಡೆದವು. ಇದು ಆಫ್ರಿಕಾದಲ್ಲಿ ಇಂದಿಗೂ ಆಡಳಿತದ ಮೇಲಿನ ಯುವಕರ ಕಣ್ಗಾವಲಿಗೆ ಸಾಕ್ಷಿಯಾಗಿದೆ.

ಜೆನ್ ಝೀಗಳ ಶಕ್ತಿ ಮತ್ತು ಮಿತಿ
ಈ ಎಲ್ಲ ಜೆನ್ ಝೀ ಹೋರಾಟಗಳನ್ನು ಗಮನಿಸಿದರೆ ಯಾವುದೇ ರಾಜಕೀಯ ಪಕ್ಷ ಅಥವಾ ಒಬ್ಬ ನಿರ್ದಿಷ್ಟ ನಾಯಕ ಇಲ್ಲಿ ಕಂಡು ಬರುವುದಿಲ್ಲ. ಎಲ್ಲವೂ ಇಂಟರ್ನೆಟ್ ಮೂಲಕ ಸ್ವಯಂಪ್ರೇರಿತವಾಗಿ ಸಂಘಟಿತವಾಗಿವೆ. ಇಂಟರ್ನೆಟ್ ಸ್ಥಗಿತಗೊಳಿಸಿದರೂ ಯುವಜನರು VPN ಬಳಸಿ ಜಗತ್ತಿಗೆ ತಮ್ಮ ದೇಶದ ನೈಜ ಸ್ಥಿತಿಯನ್ನು ತಲುಪಿಸಿದ್ದಾರೆ.
ಜೆನ್ ಝೀಗಳು ಸ್ವಾಭಾವಿಕವಾಗಿ ಮತ್ತು ಪ್ರಾಮಾಣಿಕವಾಗಿ ರಾಜಕೀಯ ನಿಲುವುಗಳನ್ನು ತಳೆದರೂ ಅವರ ಮಾನಸಿಕ ಸ್ಥಿತಿಯ ಬಗ್ಗೆ ತಜ್ಞರು ಎಚ್ಚರಿಸದೆ ಇಲ್ಲ. ಅಮೆರಿಕದ ಪ್ರಸಿದ್ಧ ಸಾಮಾಜಿಕ ಮನಶಾಸ್ತ್ರಜ್ಞ ಜೊನಾಥನ್ ಹೈಡ್ಟ್ ತಮ್ಮ ಸಂಶೋಧನೆಗಳಲ್ಲಿ ಜೆನ್ ಝೀ ಪೀಳಿಗೆಯ ಮಾನಸಿಕ ಆರೋಗ್ಯದ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. “2010ರ ನಂತರ ಸ್ಮಾರ್ಟ್ಫೋನ್‌ಗಳಲ್ಲಿ ‘ಲೈಕ್’ ಮತ್ತು ‘ಶೇರ್’ ಬಟನ್‌ಗಳು ಬಂದಾಗ ಈ ಪೀಳಿಗೆಯ ಬಾಲ್ಯವೇ ಬದಲಾಗಿಹೋಯಿತು. ಇವರು ಭೌತಿಕವಾಗಿ ಆಟವಾಡುವುದನ್ನು ಬಿಟ್ಟು, ಸಂಪೂರ್ಣವಾಗಿ ‘ಸ್ಕ್ರೀನ್-ಕೇಂದ್ರಿತ ಬಾಲ್ಯ’ ಅನುಭವಿಸಿದರು. ಇದರಿಂದಾಗಿ ಜೆನ್ ಝೀಗಳಲ್ಲಿ ಜಾಗತಿಕವಾಗಿ ಖಿನ್ನತೆ, ಆತಂಕ ಮತ್ತು ಒಂಟಿತನ ವಿಪರೀತವಾಗಿ ಹೆಚ್ಚಾಗಿದೆ. ಇವರು ಆನ್ಲೈನ್ನಲ್ಲಿ ಸಾವಿರಾರು ಜನರೊಂದಿಗೆ ಸಂಪರ್ಕದಲ್ಲಿದ್ದರೂ, ನಿಜ ಜೀವನದಲ್ಲಿ ಒಂಟಿತನ ಅನುಭವಿಸುತ್ತಾರೆ” ಎಂದು ಹೈಡ್ಟ್ ವಿವರಿಸುತ್ತಾರೆ.
ಜಾಗತಿಕ ಸಲಹಾ ಸಂಸ್ಥೆಯಾದ ಮೆಕಿನ್ಸೆ ಸುದೀರ್ಘ ಅಧ್ಯಯನ ನಡೆಸಿ, ಜೆನ್ ಝೀಗಳನ್ನು ‘True Gen’ (ಸತ್ಯದ ಹುಡುಕಾಟ ನಡೆಸುವವರು) ಎಂದು ಕರೆದಿದೆ. “ಈ ಪೀಳಿಗೆಯ ಮುಖ್ಯ ಮಂತ್ರವೇ ‘ನೈಜತೆ’ (Authenticity). ಇವರು ಕೃತಕ ಮುಖವಾಡಗಳನ್ನು ಅಥವಾ ಅತಿಯಾದ ಬೂಟಾಟಿಕೆಯನ್ನು ದ್ವೇಷಿಸುತ್ತಾರೆ. ಇವರು ಯಾವುದೇ ವ್ಯಕ್ತಿಯನ್ನು ಅವರ ಜಾತಿ, ಧರ್ಮ, ಲಿಂಗ ಅಥವಾ ಹಿನ್ನೆಲೆಯ ಆಧಾರದ ಮೇಲೆ ನಿರ್ಣಯಿಸುವುದಿಲ್ಲ. ಎಲ್ಲರನ್ನೂ ಒಳಗೊಳ್ಳುವ ಅದ್ಭುತ ಮನಸ್ಥಿತಿ ಇವರಲ್ಲಿದೆ. ಬ್ರ್ಯಾಂಡ್ಗಳು ಅಥವಾ ರಾಜಕಾರಣಿಗಳು ತಪ್ಪು ಮಾಡಿದರೆ ಇವರು ತಕ್ಷಣವೇ ‘ಕ್ಯಾನ್ಸಲ್ ಕಲ್ಚರ್’ (ಬಹಿಷ್ಕರಿಸುವ ಪ್ರವೃತ್ತಿ) ಮೂಲಕ ಆನ್‌ಲೈನ್‌ನಲ್ಲಿ ಶಿಕ್ಷಿಸುತ್ತಾರೆ” ಎಂದು ಅಧ್ಯಯನ ಹೇಳುತ್ತದೆ. ಅಂದರೆ ನೀವು ಹೆಚ್ಚು ತಲೆಹರಟೆ ಮಾಡಿದರೆ ನಿಮ್ಮನ್ನು ಅನ್‌ಫಾಲೋ ಮಾಡಿ ಮುಂದಕ್ಕೆ ನಡೆಯುತ್ತಾರೆ! (ಸಂಸದ ರಾಘವ್ ಚಡ್ಡಾ ಅವರು ಎಎಪಿ ತೊರೆದು ಬಿಜೆಪಿ ಸೇರಿದಾಗ ದೊಡ್ಡ ಮಟ್ಟದಲ್ಲಿ ಜೆನ್ ಝೀಗಳು, ಚಡ್ಡಾ ಅವರನ್ನು ಅನ್‌ಫಾಲೋ ಮಾಡಿದ್ದು ನೆನಪಿಸಿಕೊಳ್ಳಬಹುದು.)
ಕೊನೆಯ ಮಾತು
ಜಗತ್ತಿನ ಯಾವುದೇ ಜಟಿಲ ತಂತ್ರಜ್ಞಾನವನ್ನಾದರೂ ಕೆಲವೇ ನಿಮಿಷಗಳಲ್ಲಿ ಕರಗತ ಮಾಡಿಕೊಳ್ಳುವ, ಜಾಗತಿಕ ಸಮಸ್ಯೆಗಳ ಬಗ್ಗೆ ಕೇವಲ ಮಾತನಾಡುವುದಷ್ಟೇ ಅಲ್ಲದೆ, ಹೋರಾಡಲು ಸಿದ್ಧರಿರುವ, ಮಾನಸಿಕ ಖಿನ್ನತೆಯ ಬಗ್ಗೆ ಮುಜುಗರವಿಲ್ಲದೆ ಮುಕ್ತವಾಗಿ ಮಾತನಾಡುವ ಗುಣವುಳ್ಳವರು ಜೆನ್ ಝೀಗಳು. ಆದರೆ ರೀಲ್ಸ್ ಮತ್ತು ಶಾರ್ಟ್ಸ್ ನೋಡಿ ಬೆಳೆದಿರುವುದರಿಂದ, ಇವರ ಏಕಾಗ್ರತೆಯ ಅವಧಿ ಕೇವಲ 8 ಸೆಕೆಂಡುಗಳು ಮಾತ್ರ ಎನ್ನುತ್ತವೆ ಸಂಶೋಧನೆಗಳು. ಎಲ್ಲವೂ ಅಮೆಜಾನ್ ಅಥವಾ ಜೊಮ್ಯಾಟೋದಂತೆ ಒಂದು ಕ್ಲಿಕ್ನಲ್ಲಿ ಸಿಗಬೇಕೆಂದು ಬಯಸುತ್ತಾರೆ. ಕಾಯುವ ತಾಳ್ಮೆ ಕಡಿಮೆ. ಹೀಗಾಗಿಯೇ ಇವರನ್ನು ಬೇರೆಡೆ ಸೆಳೆದು ವಿಷಯಾಂತರ ಮಾಡಲು ಆಡಳಿತರೂಢ ಪಕ್ಷಗಳ ಐಟಿ ಪಡೆ ನಿರಂತರ ಸುಳ್ಳುಗಳನ್ನು ಹೇಳಲು ಪ್ರಯತ್ನಿಸುತ್ತದೆ.



