ದಾವಣಗೆರೆಯಲ್ಲಿ ಜು.21-22ರಂದು ನಡೆದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ನಿರ್ಣಯಗಳನ್ನು ಖಂಡಿಸಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
“ವೀರಶೈವ ಲಿಂಗಾಯತ ಎರಡೂ ಒಂದೆ, ಸನಾತನ ಹಿಂದು ವೀರಶೈವ ಲಿಂಗಾಯತ ಧರ್ಮ ಹಾಗೂ ಕೂಡಲಸಂಗಮದಲ್ಲಿ ಪಂಚಾಚಾರ್ಯರ ಅಡ್ಡಪಲ್ಲಕಿ ನಿರ್ಣಯಗಳನ್ನು ಮಾಧ್ಯಮ ವರದಿಯಲ್ಲಿ ಗಮನಿಸಿದ್ದೇನೆ. ಇದೆಲ್ಲ ಕರ್ನಾಟಕ ಸರಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ನಂತರ ಬಸವತತ್ವ ವಿರೋಧಿ ಶಕ್ತಿಗಳು ಒಗ್ಗಟ್ಟಾಗಿ ಆಂತರಿಕ ಮತ್ತು ಬಹಿರಂಗವಾಗಿ ಅನೇಕ ಕುತಂತ್ರಗಳು ಹೆಣೆಯುವ ಪ್ರಯತ್ನವಾಗಿದೆ” ಎಂದು ಹರಿಹಾಯ್ದಿದ್ದಾರೆ.
ಬಸವಣ್ಣನವರ ಹೆಸರು ಹೇಳುತ್ತಲೇ ತಮ್ಮ ಗುಪ್ತ ಅಜೆಂಡಾಗಳು ಜಾರಿಗೆಗೊಳಿಸುವ ಪ್ರಯತ್ನಗಳು ತೀವ್ರವಾಗಿ ನಡೆಯುತ್ತಿವೆ. ಅದರ ಒಂದು ಭಾಗವೇ ದಾವಣಗೆರೆಯಲ್ಲಿ ನಡೆದ ವೀರಶೈವ ಪಂಚಾಚಾರ್ಯರ ಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನವಾಗಿದೆ. ಎರಡೂ ಒಂದೇಯಾದರೆ ಪ್ರತ್ಯೇಕ ಧರ್ಮಕ್ಕೆ ಪಂಚಪೀಠಗಳ ವಿರೋಧ ಏಕೆ” ಎಂದು ಪ್ರಶ್ನಿಸಿದ್ದಾರೆ.
“ಶೃಂಗ ಸಮ್ಮೇಳನದ ಸಾನಿಧ್ಯ ವಹಿಸಿದ ರಂಭಾಪುರಿಯ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ‘ಬಸವಣ್ಣನವರ ಹೆಸರಿನಲ್ಲಿ ಕೆಲವರಿಂದ ಕಂದಕ ಸೃಷ್ಟಿಸಲಾಗುತ್ತಿದೆ’ ಎಂಬ ಮಾತು ಹೇಳಿದರು. ಜೊತೆಗೆ ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂಬ ಹಳೆ ಚಾಳಿಯನ್ನು ಮತ್ತೆ ಮತ್ತೆ ಪುನರ್ ಉಚ್ಛರಿಸಿದ್ದಾರೆ. ಜೊತೆಗೆ ‘ಪೂರ್ವ ಆಚಾರ್ಯರು ಅಸ್ಪೃಶ್ಯರ ಉದ್ದಾರ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಪೂರ್ವ ಆಚಾರ್ಯರ ಇಂತಹ ಕಾರ್ಯಗಳನ್ನು ಮರೆಯಲು ಸಾಧ್ಯವಿಲ್ಲ. ಈ ತತ್ವಗಳಿಗೆ ಮಾರುಹೋಗಿ 12ನೇ ಶತಮಾನದಲ್ಲಿ ಬಸವಾದಿ ಶರಣ-ಶರಣೆಯರು ಈ ಧರ್ಮ ಸ್ವೀಕರಿಸಿದರು” ಎಂದು ಮಾತನಾಡಿದ್ದಾರೆ. ಪೂಜ್ಯರ ಈ ಮಾತುಗಳಿಗೆ ಯಾವುದೇ ಆಧಾರಗಳು ಇಲ್ಲ” ಎಂದಿದಾರೆ.
“ಬಸವಾದಿ ಶರಣರು ಬಸವಪೂರ್ವದ ಯಾವುದೆ ಧರ್ಮ ಸ್ವೀಕರಿಸದೇ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂಬುದು ಐತಿಹಾಸಿಕ ಸತ್ಯವಾಗಿದೆ. ಇದಕ್ಕೆ ಬಸವಾದಿ ಶರಣರಿಂದ ಇತ್ತೀಚಿನ ಅನೇಕ ಸಂಶೋಧನೆಗಳು ಸಾಕ್ಷಿ ಆಧಾರಗಳು ನೀಡುತ್ತವೆ. ಆದರೂ ಅವರು ಸುಳ್ಳನ್ನೆ ಮತ್ತೆ ಮತ್ತೆ ಹೇಳುವ ಮೂಲಕ ಅದಕ್ಕೆ ಸತ್ಯದ ಲೇಪನ ಕೊಡುವ ಸಾವಿರ ಪ್ರಯತ್ನಗಳು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಪಂಚಮಸಾಲಿ ಪೀಠ ಫಜೀತಿ | ‘ಸಮಾಜಮುಖಿ’ಯಾಗಿದ್ದ ಸ್ವಾಮೀಜಿಗೆ ‘ಪ್ರಚಾರಪ್ರಿಯತೆ’ ಮುಳುವಾಯಿತೇ?
12ನೇ ಶತಮಾನಕ್ಕಿಂತ ಪೂರ್ವದಲ್ಲಿ ಯಾವ ಆಚಾರ್ಯರು ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಸ್ಪೃಶ್ಯರ ಉದ್ಧಾರ ಮಾಡಿದ್ದಾರೆಂದು ಶ್ರೀಗಳು ಸಿದ್ಧಪಡಿಸಬೇಕು. ಪಂಚಪೀಠಗಳು ತಮ್ಮ ಪ್ರಾಚೀನತೆ, ಶ್ರೇಷ್ಠತೆ ಎಷ್ಟು ಹೇಳಿಕೊಂಡರು ಅವರಿಗೆ ಸ್ವತಂತ್ರವಾದ ಇತಿಹಾಸ, ಸಿದ್ಧಾಂತ ಮತ್ತು ಸಾಮಾಜಿಕ ಬದ್ಧತೆ ಇಲ್ಲವೆಂಬುದು ಬೇರೆ ಹೇಳಬೇಕಾಗಿಲ್ಲ. ಅವರು ಇಲ್ಲಿಯವರೆಗೆ ಬಸವಾದಿ ಶರಣರ ತತ್ವಗಳನ್ನೆ ಹೈಜಾಕ್ ಮಾಡಿಕೊಂಡು ಕಪೋಲಕಲ್ಪಿತ ಆಚಾರ್ಯರ ಹೆಸರಿನಲ್ಲಿ ಹೇಳುವುದು ರೂಢಿ ಮಾಡಿಕೊಂಡಿದ್ದಾರೆ. ಬಸವಣ್ಣನವರ ಕುರಿತು ಮಾತನಾಡುವ ಪಂಚಪೀಠಗಳು ಬಸವಣ್ಣನವರಿಗೆ ಗುರು ಎಂದು ಎಂದಿಗೂ ಒಪ್ಪಿಕೊಂಡಿಲ್ಲ. ಅವರಿಗೆ ಬಸವತತ್ವಗಳಲ್ಲಿ ನಂಬಿಕೆ ಇಲ್ಲ. ಅವರ ನಡೆ-ನುಡಿ ಬಸವತತ್ವಕ್ಕೆ ವಿರುದ್ಧವಾಗಿಯೇ ಇರುತ್ತದೆ. ಆದರೆ ಬಸವಣ್ಣನ ಹೆಸರು ಚಾಲ್ತಿ ನಾಣ್ಯ ಇರುವ ಕಾರಣ ಅದನ್ನೆ ಬಳಸಿಕೊಂಡು ಬಸವತತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ” ಎಂದು ಕುಟುಕಿದ್ದಾರೆ.
“ವೀರಶೈವ ಲಿಂಗಾಯತ ಎರಡು ಒಂದೇ ಎಂದು ಜಪ ಮಾಡುತ್ತಿರುವ ಪಂಚಪೀಠಗಳು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಏಕೆ ವಿರೋಧ ಮಾಡಿದವು? ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ಏಕೆ ತಪ್ಪಿಸಿದರು? ಕೇದಾರದ ಶ್ರೀಗಳು ಪ್ರಧಾನಮಂತ್ರಿಗಳಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಕೊಡಬಾರದೆಂದು ಏಕೆ ಫೋನ್ ಮಾಡಿ ತಿಳಿಸಿದರು? ಶೃಂಗ ಸಮ್ಮೇಳನದ ಆಮಂತ್ರಣ ಪತ್ರಿಕೆ, ವೇದಿಕೆಯಲ್ಲಿ ವಿಶ್ವಗುರು ಬಸವಣ್ಣನವರ ಫೋಟೊ ಏಕೆ ಇಲ್ಲ? ಜೊತೆಗೆ ಲಿಂಗಾಯತ ಶಬ್ದ ಏಕೆ ಕೈಬಿಡಲಾಗಿದೆ? ಮುಂತಾದ ಪ್ರಶ್ನೆಗಳಿಗೆ ಪಂಚಪೀಠಗಳು ಉತ್ತರಿಸಿ” ಎಂದು ಆಗ್ರಹಿಸಿದ್ದಾರೆ.
ವೀರಶೈವ ಮಹಾಸಭೆಯ ದ್ವಂದ್ವ ನಿಲವು
ಡಿಸೆಂಬರ್ ತಿಂಗಳಲ್ಲಿ ದಾವಣಗೆರೆಯಲ್ಲಿಯೇ ನಡೆದ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭೆ ನಾವು ಹಿಂದುಗಳಲ್ಲ’ ಎಂದು ತಮ್ಮ ನಿಲವು ಸ್ಪಷ್ಟಪಡಿಸಿತು. ಈ ನಿರ್ಣಯ ತೆಗೆದುಕೊಂಡಾಗ ಆ ವೇದಿಕೆಯ ಮೇಲೆ ಪಂಚಪೀಠದ ಅನೇಕ ಆಚಾರ್ಯರು ಹಾಗೂ ಶೃಂಗ ಸಮ್ಮೇಳನದಲ್ಲಿ ಭಾಗಿಯಾದ ರಾಜಕೀಯ ಗಣ್ಯರು ಉಪಸ್ಥಿತರಿದ್ದರು. ಇದೀಗ ಅದೇ ಪಂಚಪೀಠದ ಆಚಾರ್ಯರು ಅದೇ ವೀರಶೈವ ಮಹಾಸಭೆಯ ಅಧ್ಯಕ್ಷರನ್ನು ಪಕ್ಕದಲ್ಲಿಯೇ ಕೂಡಿಸಿಕೊಂಡು ನಾವು
ಸನಾತನ ಹಿಂದು ವೀರಶೈವ ಲಿಂಗಾಯತ’ ಧರ್ಮದವರು ಎಂದು ಹೇಳುತ್ತಿದ್ದಾರೆ. ಅದಕ್ಕೆ ಪಂಚಪೀಠಗಳು ಹಾಗೂ ಮಹಾಸಭೆ ಮೊದಲು ತಮ್ಮ ಒಂದು ನಿಲುವನ್ನು ಸ್ಪಷ್ಟಪಡಿಸಬೇಕು. ವೀರಶೈವ ಲಿಂಗಾಯತ ಎರಡು ಒಂದೇ ಎಂದು ಕೇವಲ ಬಾಯಿ ಮಾತಾಗಿಸಿಕೊಂಡ ಪಂಚಪೀಠಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ವೀರಶೈವ ಮಹಾಸಭೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಮಹಾಸಭೆಯ ಪ್ರಜ್ಞಾವಂತರು ಆಲೋಚಿಸಬೇಕಾಗಿದೆ” ಎಂದು ಹೇಳಿದ್ದಾರೆ.
ಬಸವಸಂಸ್ಕೃತಿ ಜಾಗೃತಿಯ ಭಯದಿಂದ ಪಂಚಪೀಠಗಳ ಒಗ್ಗಟ್ಟು
“ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಮಾನತೆಯ ಮೌಲ್ಯಗಳನ್ನು ಯುವಕರ ಮನಭಾವದಲ್ಲಿ ಬಿತ್ತುವ ಸದುದ್ದೇಶದಿಂದ ಬಸವಪ್ರಣಿತ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸಪ್ಟೆಂಬರ್ 1 ರಿಂದ ಅಕ್ಟೋಬರ್ 5ರವರೆಗೆ ರಾಜ್ಯಾದ್ಯಂತ `ಬಸವಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ. ಪೂರ್ವಭಾವಿ ಸಿದ್ಧತೆಗಾಗಿ ಧಾರವಾಡದಲ್ಲಿ ಜೂನ್ 30 ರಂದು ಬಸವಪ್ರಣೀತ ಲಿಂಗಾಯತ ಮಠಾಧಿಪತಿಗಳ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ 300ಕ್ಕಿಂತ ಹೆಚ್ಚಿನ ಮಠಾಧೀಶರು ಭಾಗಿಯಾಗಿ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸುವ ಪ್ರತಿಜ್ಞೆ ಮಾಡಿದರು. ಬಸವಪರಂಪರೆಯ ಮಠಾಧಿಶರ ಒಗ್ಗಟ್ಟಿನಿಂದ ಭಯಭಿತಗೊಂಡ ಪಂಚಪೀಠಗಳು ಶೃಂಗ ಸಮ್ಮೇಳನ ಮಾಡಿದೆ ವಿನಃ ಇದರ ಹಿಂದೆ ಸಮಾಜಹಿತ ಅಥವಾ ಸಮಾಜ ಒಗ್ಗಟ್ಟಿನ ಯಾವ ಉದ್ದೇಶವು ಸ್ಪಷ್ಟ ಕಾಣಬಂದಿಲ್ಲ. ಜನಮನದಲ್ಲಿ ಬಸವಪ್ರಜ್ಞೆ ಬೆಳೆದರೆ ನಮ್ಮ ಪೀಠ ಮತ್ತು ಮಠಗಳು ಮೂಲೆ ಗುಂಪು ಆಗುತ್ತವೆ ಎಂಬ ಭಯ ಪಂಚಪೀಠಗಳಿಗೆ ಕಾಡುತ್ತಿವೆ” ಎಂದು ಹೇಳಿದ್ದಾರೆ.