ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಬಜೆಟ್‌ನಲ್ಲಿ ₹5,000 ಕೋಟಿ ವಿಶೇಷ ಅನುದಾನ ಒದಗಿಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬರೆದ ಪತ್ರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ. ಪತ್ರ ಸ್ವೀಕರಿಸಿರುವೆ ಎಂದು ಮರಳಿ ಪತ್ರ ಬರೆದಿದ್ದಾರೆ.
ಹೈದರಾಬಾದ್ ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ ) ಪ್ರದೇಶದ ಅಭಿವೃದ್ದಿಗಾಗಿ ಈ ಸಲ ಕೇಂದ್ರದ ಬಜೆಟ್ ನಲ್ಲಿ ₹5,000 ಕೋಟಿ ವಿಶೇಷ ಅನುದಾನ ಬಿಡುಗಡೆಗೆ ಕ್ರಮವಹಿಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜನೆವರಿ 15 ರಂದು ಪತ್ರ ಬರೆದಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಪತ್ರದ ಸಾರಾಂಶ ಹೀಗಿದೆ
ಕಲ್ಯಾಣ ಕರ್ನಾಟಕ ಪ್ರದೇಶ ಶೈಕ್ಷಣಿಕ, ಆರೋಗ್ಯ, ಮೂಲಭೂತ ಸೌಲಭ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು ಈ ಎಲ್ಲ ಕ್ಷೇತ್ರಗಳ ಅಭಿವೃದ್ದಿ ಪಡಿಸಲು ಆರ್ಥಿಕ ಸವಾಲು ಎದುರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಯುಪಿಎ ಸರ್ಕಾರ ಸಂವಿಧಾನದಕ್ಕೆ ಅಗತ್ಯ ತಿದ್ದುಪಡಿ ತಂದು ಆರ್ಟಿಕಲ್ 371 (ಜೆ ) ಜಾರಿಗೊಳಿಸಿ ಈ ಭಾಗದ ಸಮಗ್ರ ಅಭಿವೃದ್ದಿಗೆ ಶ್ರಮವಹಿಸಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ವಾರ್ಷಿಕವಾಗಿ ₹ 5,000 ಕೋಟಿಯನ್ನು ನಿಗದಿಪಡಿಸಿದೆ, 2024-25 ರ ಆರ್ಥಿಕ ವರ್ಷಕ್ಕೆ ಕೂಡಾ ಇದು ಅನ್ವಯವಾಗುತ್ತದೆ. ಇದರ ಜೊತೆಗೆ ಅಭಿವೃದ್ದಿಗೆ ಹಲವಾರು ಯೋಜನೆ ಹಾಕಿಕೊಂಡಿದೆ. ಪರಿಣಾಮ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 17,439 ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡುವುದು, ಬೀದರ್ ಮತ್ತು ರಾಯಚೂರು ನಗರ ಪುರಸಭೆಗಳನ್ನು ನಗರ ಮುನ್ಸಿಪಲ್ ಕಾರ್ಪೊರೇಷನ್‌ಗಳಾಗಿ ಮೇಲ್ದರ್ಜೆಗೇರಿಸುವುದು, 45 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (PHC) ಸ್ಥಾಪಿಸುವುದು, 31 ಪಿಎಚ್‌ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಿಗೆ (ಸಿಎಚ್‌ಸಿ) ಗಳನ್ನಾಗಿ ಹಾಗೂ ಒಂಬತ್ತು ಸಿಎಚ್‌ಸಿಗಳನ್ನು ತಾಲೂಕು ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸುವುದು ಮತ್ತು ಎರಡು ತಾಲೂಕು ಆಸ್ಪತ್ರೆಗಳು ಕ್ರಮವಾಗಿ ಜಿಲ್ಲಾ ಆಸ್ಪತ್ರೆಗಳ ದರ್ಜೆಗೇರಿಸಬೇಕಿದೆ. ಈ ಎಲ್ಲ ಪ್ರಯತ್ನಗಳು ಶ್ಲಾಘನೀಯವಾಗಿದ್ದರೂ, ಇವುಗಳ ಜಾರಿಗಾಗಿ ಈ ಪ್ರದೇಶಕ್ಕೆ ನಿರಂತರ ಆರ್ಥಿಕ ಬೆಂಬಲದ ಅಗತ್ಯವಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ಬೆಳೆಸಿದ ಮಧ್ಯಮವರ್ಗ; ಮಧ್ಯಮವರ್ಗ ಮುಗಿಸಿದ ಮೋದಿ
ಕರ್ನಾಟಕ ಸರ್ಕಾರ ಕೂಡ ತನ್ನದೇ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ₹5,000 ಕೋಟಿ ವಿಶೇಷ ಅನುದಾನಕ್ಕೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ. ಪ್ರದೇಶದ ಅಭಿವೃದ್ಧಿಯ ಅಗತ್ಯಗಳನ್ನು ಪರಿಹರಿಸಲು, ಪ್ರಮುಖ ಯೋಜನೆಗಳ ಕಾರ್ಯಗತಗೊಳಲು ಮತ್ತು ಈ ಭಾಗದ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಈ ನಿರ್ಣಾಯಕ ನಿಧಿಯು ಅತ್ಯಗತ್ಯವಾಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಹೈದರಾಬಾದ್-ಕರ್ನಾಟಕ ( ಕಲ್ಯಾಣ ಕರ್ನಾಟಕ ) ಪ್ರದೇಶದ ಅಭಿವೃದ್ಧಿಗೆ ₹ 5,000 ಕೋಟಿ ವಿಶೇಷ ಅನುದಾನವನ್ನು ಒದಗಿಸುವಂತೆ ಒತ್ತಾಯಿಸಿ, ಈ ಅನುದಾನ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಗತಿಯನ್ನು ಗಮನಾರ್ಹವಾಗಿ ವೇಗಗೊಳಿಸುವುದರ ಜೊತೆಗೆ ಹಲವಾರು ನಿರ್ಣಾಯಕ ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದರು.