ತೆರಿಗೆ ನೀತಿಯ ಅನ್ಯಾಯದ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ಫೆ.07ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದ ಸಂಸದರು, ಶಾಸಕರು ಹಮ್ಮಿಕೊಳ್ಳುವ ‘ಚಲೋ ದಿಲ್ಲಿ’ ಪ್ರತಿಭಟನೆಗೆ ಕೇರಳ, ತಮಿಳುನಾಡು, ತೆಲಂಗಾಣದ ಜನಪ್ರತಿನಿಧಿಗಳು ಕೈಜೋಡಿಸಲಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,” ಫೆ.7ರಂದು ರಾಜ್ಯದ ಎಲ್ಲ ಮಂತ್ರಿಗಳು, ಎರಡೂ ಸದನಗಳ ಶಾಸಕರು ಹಾಗೂ ಸಂಸದರು 14ನೇ ಹಣಕಾಸಿನ ಆಯೋಗದಿಂದ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ಕೇಂದ್ರದಿಂದ ಬರಬೇಕಿರುವ ಅನುದಾನ ಹಾಗೂ ಇತರ ಸಮಸ್ಯೆಗಳ ವಿರುದ್ಧವು ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕದ ಜೊತೆ ಕೇರಳ, ತೆಲಂಗಾಣ ಹಾಗೂ ತಮಿಳುನಾಡಿನ ಜನಪ್ರತಿನಿಧಿಗಳು ಕೂಡ ಕೈಜೋಡಿಸಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧನಿಯತ್ತಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ
16ನೇ ಹಣಕಾಸು ಆಯೋಗ – ತೆರಿಗೆ ಹಂಚಿಕೆ ಮತ್ತು ಅನುದಾನ ಸೂತ್ರಗಳಿಗೆ ಬದಲಾವಣೆಗಳನ್ನು ಶಿಫಾರಸು ಮಾಡುವ ಏಕೈಕ ಸಂಸ್ಥೆಯಾಗಿದೆ.ಅಕ್ಟೋಬರ್ 2025 ರೊಳಗೆ ತನ್ನ ವರದಿಯನ್ನು ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆಯು ಪ್ರಾಮುಖ್ಯತೆಯನ್ನು ಪಡೆಯಲಿದೆ.
ಕೇಂದ್ರ ಸರ್ಕಾರ 14ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡಿದ ಪರಿಣಾಮ ರಾಜ್ಯಕ್ಕೆ ಶೇ.4.72 ರಿಂದ ಶೇ.3.64 ರಷ್ಟು ಇಳಿಕೆಯಾಗಿದೆ. ಇದರಿಂದ ಕರ್ನಾಟಕಕ್ಕೆ 62,098 ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕೇರಳ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳು ಇದೇ ರೀತಿಯ ಆಕ್ಷೇಪಗಳನ್ನು ಮಾಡಿದ ಕಾರಣ ಕರ್ನಾಟಕ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯಗಳು ಸಾಲ ಪಡೆಯಬಹುದಾದ ಮೊತ್ತದ ಮೇಲೆ ಹೇರಿರುವ ಮಿತಿಯ ವಿರುದ್ಧ ಕೇರಳ ಈಗಾಗಲೇ ಸುಪ್ರೀಂ ಕೋರ್ಟ ಕದ ತಟ್ಟಿದೆ.