ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಮಹತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಿದ್ದು, ಪ್ರಮುಖ ಹುದ್ದೆಗಳಿಗೆ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಿದೆ. ಹಾಗೆಯೇ, ವಿಧಾನ ಪರಿಷತ್‌ನ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತನ್ನ ನಾಲ್ವರು ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಆಗಿ ಶಶಿಕಿರಣ್ ಶೆಟ್ಟಿ ಅವರನ್ನು ಸರ್ಕಾರವು ಮರು ನೇಮಕ ಮಾಡಿದೆ. ಆರ್ಥಿಕ ವಿಷಯಗಳಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡಲು, ಆರ್ಥಿಕ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಎಲ್. ಕೆ. ಅತೀಕ್ ಅವರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲೂ ಪ್ರಮುಖ ಬದಲಾವಣೆಗಳನ್ನು ತರಲಾಗಿದ್ದು, ಮುಖ್ಯಮಂತ್ರಿಯವರ ಕಾರ್ಯದರ್ಶಿಯಾಗಿ ರಾಜೇಂದ್ರ ಚೋಳನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಅತೀಕ್ ಅವರು ಪ್ರಸ್ತುತ ವಹಿಸಿಕೊಂಡಿರುವ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಅಧ್ಯಕ್ಷರ ಹುದ್ದೆಯಲ್ಲಿಯೂ ಮುಂದಿನ ಆದೇಶದವರೆಗೆ ಮುಂದುವರಿಯಲಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ದಬ್ಬಾಳಿಕೆಗೆ ಬೆದರದ ಹೆಜ್ಜೆ: ವಿದೇಶದಲ್ಲಿ ಒಂದಾದ ಅಫ್ಘಾನ್ ಮಹಿಳಾ ಫುಟ್ಬಾಲ್ ತಂಡ
ಇದೇ ವೇಳೆ, ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆ ಮೇರೆಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಇಂದು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್ ಹಾಗೂ ಶಿವಣ್ಣ ಮಳವಳ್ಳಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಈ ಚುನಾವಣೆಯಲ್ಲಿ, ಶಾಸಕರ ಬಲದ ಆಧಾರದ ಮೇಲೆ ಅಭ್ಯರ್ಥಿಗಳ ಗೆಲುವು ನಿರ್ಧಾರವಾಗಲಿದ್ದು, ಈ ನಾಲ್ವರ ಆಯ್ಕೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ.





