ನದಿಗಳ ಒಡಲು ಬಗೆವ ‘ಆಧುನಿಕ ಡಕಾಯಿತರು’: ಮರಳು ಮಾಫಿಯಾದ ಕಪಿಮುಷ್ಟಿಯಲ್ಲಿ ಭಾರತದ ಜೀವರಾಶಿ

Date:

ಭಾರತದ ನೈಸರ್ಗಿಕ ಸಂಪತ್ತು ಮತ್ತು ಜೈವಿಕ ವೈವಿಧ್ಯತೆ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಹೊಸದಾಗಿ ಹೇಳಬೇಕಿಲ್ಲ. ಇದಕ್ಕೆ ಪ್ರಮುಖ ಕಾರಣ ದೇಶಾದ್ಯಂತ ಬೇರೂರಿರುವ ಸಂಘಟಿತ ಅಪರಾಧ ‘ಮರಳು ಮಾಫಿಯಾ’. ಅಭಿವೃದ್ಧಿ ಮತ್ತು ರಾಜಕೀಯ ಹಿತಾಸಕ್ತಿಗಳ ನೆರಳಿನಲ್ಲಿ ನದಿಗಳ ಒಡಲು ಬಗೆದು ಲೂಟಿ ಮಾಡುತ್ತಿರುವ ಈ ದಂಧೆ, ಇಂದು ದೇಶದ ಒಟ್ಟಾರೆ ಪರಿಸರ ವ್ಯವಸ್ಥೆಯನ್ನೇ ಧೂಳೀಪಟ ಮಾಡುತ್ತಿದೆ. ಇತ್ತೀಚೆಗೆ ಭಾರತದ ಸುಪ್ರೀಂ ಕೋರ್ಟ್ ಮರಳು ಮಾಫಿಯಾದ ಕ್ರೌರ್ಯ ಮತ್ತು ವ್ಯಾಪ್ತಿಯನ್ನು ಕಂಡು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಮಾಫಿಯಾವನ್ನು ನಿಯಂತ್ರಿಸದಿದ್ದರೆ ದೇಶದ ನದಿಗಳು ಮತ್ತು ಅಪರೂಪದ ವನ್ಯಜೀವಿಗಳು ಶಾಶ್ವತವಾಗಿ ವಿನಾಶದ ಅಂಚಿಗೆ ತಲುಪಲಿವೆ ಎಂದಿದೆ.

- Advertisement -

ಕಳೆದ ಏಪ್ರಿಲ್‌.2ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಚಂಬಲ್ ನದಿಯ ಪರಿಸರ ನಾಶದ ಕುರಿತು ತೀವ್ರ ಆಕ್ರೋಶ ಹೊರಹಾಕಿತ್ತು. ಮಧ್ಯಪ್ರದೇಶ ಸರ್ಕಾರವು ಕೋರ್ಟ್ ಎದುರು, “ಮರಳು ಮಾಫಿಯಾಗಳ ಬಳಿ ಅತ್ಯಾಧುನಿಕ ಆಯುಧಗಳಿವೆ, ಅವರ ಬಲದ ಮುಂದೆ ನಮ್ಮ ಪೊಲೀಸರು ಸಾಲುತ್ತಿಲ್ಲ” ಸೋಗಲಾಡಿಯಂತೆ ಮಾತನಾಡಿದಾಗ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

“ಹಾಗಿದ್ದರೆ ರಾಜ್ಯ ಸರ್ಕಾರವೇ ಮಾಫಿಯಾದ ಮುಂದೆ ಸಂಪೂರ್ಣವಾಗಿ ಶರಣಾಗಿದೆಯೇ? ತನ್ನ ದೇಶದ ನೈಸರ್ಗಿಕ ಸಂಪತ್ತನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳುತ್ತಿರುವುದು ಅತ್ಯಂತ ವಿಷಾದನೀಯ. ನಾವು ಇತಿಹಾಸದಲ್ಲಿ ಕೇಳಿದ್ದ ಚಂಬಲ್‌ನ ಸಾಂಪ್ರದಾಯಿಕ ಡಕಾಯಿತರ ಕಾಲ ಮುಗಿದಿದೆ. ಈಗ ಈ ಮರಳು ಮಾಫಿಯಾಗಳೇ ಚಂಬಲ್‌ನ ‘ಆಧುನಿಕ ಡಕಾಯಿತರು’ ಎಂದು ನ್ಯಾಯಮೂರ್ತಿ ಮೆಹ್ತಾ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಮರಳು ಮಾಫಿಯಾಗಳು ಪೊಲೀಸರಿಗಿಂತಲೂ ಉತ್ತಮವಾದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಅತ್ಯಂತ ಕ್ರೂರವಾಗಿ ವರ್ತಿಸುತ್ತಿದ್ದಾರೆ. ತಮ್ಮ ಅಕ್ರಮ ದಂಧೆಗೆ ಅಡ್ಡ ಬರುವ ಸಬ್-ಡಿವಿಜನಲ್ ಮ್ಯಾಜಿಸ್ಟ್ರೇಟ್‌ಗಳು, ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳನ್ನು ಕೊಂದು ಹಾಕುತ್ತಿದ್ದಾರೆ. ಆದರೂ ಸರ್ಕಾರಗಳು ಇವರ ವಿರುದ್ಧ ಕಠಿಣವಾದ ‘ಮುಂಜಾಗ್ರತಾ ಬಂಧನ’ ಕಾನೂನನ್ನು ಬಳಸಲು ಮರೆತಿವೆ ಎಂದು ಕೋರ್ಟ್ ಆಕ್ಷೇಪಿಸಿತ್ತು.

image 142
ನರೇಂದ್ರ ಕುಮಾರ್ ಸಿಂಗ್

2012ರಲ್ಲಿ ಯುವ IPS ಅಧಿಕಾರಿ ನರೇಂದ್ರ ಕುಮಾರ್ ಸಿಂಗ್ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಪೋಸ್ಟಿಂಗ್ ಪಡೆದಿದ್ದರು.  ತಮ್ಮ ಅಧಿಕೃತ ಜೀಪ್‌ನಲ್ಲಿ ಗಸ್ತು ತಿರುಗುತ್ತಿದ್ದ ಅಧಿಕಾರಿಗೆ ಅಕ್ರಮವಾಗಿ ಲೂಟಿ ಮಾಡಿದ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿ ಕಣ್ಣಿಗೆ ಬಿತ್ತು. ಆ ವಾಹನವನ್ನು ಓವರ್‌ಟೇಕ್ ಮಾಡಿ, ನಿಲ್ಲಿಸುವಂತೆ ಚಾಲಕನಿಗೆ ನರೇಂದ್ರ ಕುಮಾರ್ ಸೂಚಿಸಿದರು. ಆದರೆ ಚಾಲಕ ಗಾಡಿಯನ್ನು ನಿಲ್ಲಿಸದೇ ಹೋದಾಗ, ನರೇಂದ್ರ ಕುಮಾರ್ ಅವರು ಧೈರ್ಯದಿಂದ ಮತ್ತೊಮ್ಮೆ ಜೀಪ್ ಅಡ್ಡಗಟ್ಟಿ, ಸ್ವತಃ ಟ್ರ್ಯಾಕ್ಟರ್‌ನ ಮುಂಭಾಗದಲ್ಲಿ ಬಂದು ನಿಂತರು. ಕಾನೂನಿನ ಕನಿಷ್ಠ ಭಯವೂ ಇಲ್ಲದ ಟ್ರ್ಯಾಕ್ಟರ್ ಚಾಲಕ ಮನೋಜ್ ಗುರ್ಜರ್, ವಾಹನವನ್ನು ನಿಲ್ಲಿಸುವ ಬದಲು ಅಧಿಕಾರಿಯ ಮೇಲೆಯೇ ನೇರವಾಗಿ ಚಲಾಯಿಸಿದ. ಚಕ್ರಗಳಡಿ ಸಿಲುಕಿ ತೀವ್ರವಾಗಿ ಗಾಯಗೊಂಡ ನರೇಂದ್ರ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಇಂತಹ ರಕ್ತಸಿಕ್ತ ಇತಿಹಾಸವೂ ಈ ದರಿದ್ರ ಮಾಫಿಯಾಕ್ಕಿದೆ.

ಮೃತ ಅಧಿಕಾರಿಯ ತಂದೆ ಕೇಶವ್ ಸಿಂಗ್, “ಇದು ಮರಳು ಮತ್ತು ಗಣಿಗಾರಿಕೆ ಮಾಫಿಯಾ ಸೇರಿ ಮಾಡಿದ ವ್ಯವಸ್ಥಿತ ಪಿತೂರಿ. ನನ್ನ ಮಗ ತನ್ನ ಪ್ರಾಮಾಣಿಕತೆಯಿಂದಾಗಿಯೇ ಜೀವ ಕಳೆದುಕೊಂಡಿದ್ದಾನೆ” ಎಂದು ಕಣ್ಣೀರಿಟ್ಟಿದ್ದರು. ಸುಪ್ರೀಂ ಕೋರ್ಟ್ ಚಂಬಲ್‌ನ ಮರಳು ಮಾಫಿಯಾಗಳನ್ನು ‘ಆಧುನಿಕ ಡಕಾಯಿತರು’ ಎಂದು ಕರೆದಿರುವುದಕ್ಕೆ ಈ ಭೀಕರ ಹತ್ಯೆಯೇ ಸಾಕ್ಷಿ.

ಪರಿಸರವಾದಿ ಬಾಬುಲಾಲ್ ಜಾಜೂ ಅವರ ಪ್ರಕಾರ, ಪೊಲೀಸ್ ಮತ್ತು ಆಡಳಿತ ಯಂತ್ರದ ಕಣ್ಣೆದುರೇ ದಿನವೊಂದಕ್ಕೆ ಕನಿಷ್ಠ 1000ಕ್ಕೂ ಹೆಚ್ಚು ಟ್ರಕ್‌ಗಳಲ್ಲಿ ಅಕ್ರಮವಾಗಿ ಮರಳನ್ನು ಲೂಟಿ ಮಾಡಲಾಗುತ್ತಿದೆ ಎಂದಿದ್ದರು. ನ್ಯಾಯಮೂರ್ತಿ ಮೆಹ್ತಾ ಅವರು, “ಜೆಸಿಬಿ ಯಂತ್ರಗಳು ಮರಳನ್ನು ಅಗೆಯುತ್ತಿರುವಾಗ, ಅಲ್ಲಿನ ಅಸಹಾಯಕ ಪ್ರಾಣಿಗಳು ಭಯದಿಂದ ಓಡಾಡುತ್ತಿರುವ ವಿಡಿಯೋಗಳು ನಿಜಕ್ಕೂ ತಲ್ಲಣಗೊಳಿಸುವಂತಿವೆ” ಎಂದು ತಳಮಳಗೊಂಡಿದ್ದರು.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಗಳ ತ್ರಿವಳಿ ಗಡಿಯಲ್ಲಿ ಸುಮಾರು 600 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ‘ನ್ಯಾಷನಲ್ ಚಂಬಲ್ ಘಡಿಯಾಲ್ ಅಭಯಾರಣ್ಯ’ (NCGS)ವು ಜಾಗತಿಕವಾಗಿ ವಿನಾಶದ ಅಂಚಿನಲ್ಲಿರುವ ‘ಘಡಿಯಾಲ್’ (ಮೀನು ತಿನ್ನುವ ಮೊಸಳೆ) ಪ್ರಬೇಧದ ಶೇಕಡಾ 75ರಷ್ಟು ಜನಸಂಖ್ಯೆಗೆ ಆಶ್ರಯ ನೀಡಿದೆ. ಇದರೊಂದಿಗೆ ಗಂಗಾ ನದಿಯ ಡಾಲ್ಫಿನ್‌ಗಳು, ಕೆಂಪು ಕಿರೀಟದ ಅಪರೂಪದ ಆಮೆಗಳು ಮತ್ತು ವಿಶಿಷ್ಟ ನೀರುನಾಯಿಗಳ ಜೀವನಾಡಿಯಾಗಿದೆ. ಘಡಿಯಾಲ್‌ಗಳು ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡಲು ನದಿಯ ದಂಡೆಯಲ್ಲಿರುವ ಗಟ್ಟಿಯಾದ ಮರಳುತಿಟ್ಟುಗಳು ಅತ್ಯಂತ ಅವಶ್ಯಕ. ಆದರೆ ಮರಳು ಮಾಫಿಯಾ ಇವುಗಳನ್ನೇ ನಾಶ ಮಾಡಲು ಹೊರಟಿದೆ.

ರಾಜಸ್ಥಾನ ಸರ್ಕಾರ 2025ರ ಡಿಸೆಂಬರ್ ರಲ್ಲಿ ಈ ಅಭಯಾರಣ್ಯದ ಗಡಿಯನ್ನು ಬದಲಾಯಿಸಿ, ನದಿಯ ಎರಡೂ ಬದಿಯ 732 ಹೆಕ್ಟೇರ್ ಭೂಮಿಯನ್ನು ನಿರ್ಬಂಧಗಳಿಂದ ಮುಕ್ತಗೊಳಿಸಿ ಮಾಫಿಯಾಕ್ಕೆ ಕಾನೂನಾತ್ಮಕವಾಗಿಯೇ ದಾರಿ ಮಾಡಿಕೊಟ್ಟಿತ್ತು! ಇದಕ್ಕೆ ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿಗಳ ನೇತೃತ್ವದ ‘ರಾಷ್ಟ್ರೀಯ ವನ್ಯಜೀವಿ ಮಂಡಳಿ’ (NBWL) ಕೂಡ ಅನುಮೋದನೆ ನೀಡಿತ್ತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕೋಟಾದ ಚಂಬಲ್ ರಿವರ್‌ಫ್ರಂಟ್ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿಯನ್ನು ಬದಿಗಿಟ್ಟು, “ಚಂಬಲ್ ರಿವರ್ ಕ್ರೂಸ್” ಯೋಜನೆಗೆ ಚಾಲನೆ ನೀಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಏಪ್ರಿಲ್ 2 ರಂದು ಈ ಅಧಿಸೂಚನೆಗೆ ತಡೆಯಾಜ್ಞೆ ನೀಡುವ ಮೂಲಕ ಈ ಜೈವಿಕ ವಿನಾಶವನ್ನು ಸದ್ಯಕ್ಕೆ ತಡೆದಿದೆ.

ಸ್ಥಳೀಯರ ಜೀವನೋಪಾಯದ ನೆಪವೊಡ್ಡಿ ಅಕ್ರಮ ಗಣಿಗಾರಿಕೆಯನ್ನು ಸಮರ್ಥಿಸಿದ ವಕೀಲರಿಗೆ ಮಂಗಳಾರತಿ ಮಾಡಿದ ಕೋರ್ಟ್, “ಜನರನ್ನು ಬೇರೆಡೆಗೆ ಸ್ಥಳಾಂತರಿಸಿ ಪರ್ಯಾಯ ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯವೇ ಹೊರತು, ಸಂರಕ್ಷಿತ ಜೀವಿಗಳ ಆವಾಸಸ್ಥಾನವನ್ನು ಮಾಫಿಯಾಕ್ಕೆ ಬಲಿಗೊಡುವುದಲ್ಲ” ಎಂದಿತು.

ಚಂಬಲ್‌ನಲ್ಲಿ ನಡೆಯುತ್ತಿರುವ ಈ ದುರಂತ ಇಡೀ ದೇಶದಾದ್ಯಂತ ವ್ಯಾಪಿಸಿರುವ ಮರಳು ಮಾಫಿಯಾದ ಮತ್ತು ಪರಿಸರ ವಿನಾಶದ ವ್ಯವಸ್ಥಿತ ಜಾಲಕ್ಕೆ ಕೇವಲ ಒಂದು ಉದಾಹರಣೆಯಷ್ಟೇ. ಪರಿಸರವನ್ನು ರಕ್ಷಿಸಬೇಕಾದ ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಇಂದು ಕೇವಲ ಸರ್ಕಾರದ ವಾಣಿಜ್ಯ ಯೋಜನೆಗಳಿಗೆ ಸಹಿ ಹಾಕುವ ರಬ್ಬರ್ ಸ್ಟ್ಯಾಂಪ್ ನಂತೆ ಕೆಲಸ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ಈ ಮಂಡಳಿಯು 1500ಕ್ಕೂ ಹೆಚ್ಚು ಯೋಜನೆಗಳಿಗೆ ಮುಕ್ತ ಅನುಮೋದನೆ ನೀಡಿದ್ದು, ಕೇವಲ 2023-24ರಲ್ಲೇ ಅನುಮೋದನೆಗಳ ಪ್ರಮಾಣದಲ್ಲಿ ಶೇಕಡಾ 280 ರಷ್ಟು ಭಾರಿ ಏರಿಕೆಯಾಗಿದೆ! ಪರಿಣಾಮವಾಗಿ 2 ಲಕ್ಷ ಹೆಕ್ಟೇರ್‌ಗಿಂತಲೂ ಅಧಿಕ ಅರಣ್ಯ ಭೂಮಿಯನ್ನು ವಾಣಿಜ್ಯ ಮತ್ತು ಮೂಲಸೌಕರ್ಯ ಯೋಜನೆಗಳಿಗಾಗಿ ಧಾರೆ ಎರೆಯಲಾಗಿದೆ.

ದೇಶದ ಪ್ರಮುಖ ಸಂರಕ್ಷಿತ ವಲಯಗಳೆಲ್ಲವೂ ಇಂದು ರಾಜಕೀಯ ಹಿತಾಸಕ್ತಿ ಮತ್ತು ಮಾಫಿಯಾಗಳ ಲೂಟಿಗೆ ಬಲಿಯಾಗುತ್ತಿವೆ:

ಅಭಯಾರಣ್ಯ / ರಾಷ್ಟ್ರೀಯ ಉದ್ಯಾನವನಮರಳು ಮಾಫಿಯಾ ಮತ್ತು ಯೋಜನೆಗಳ ಆಪತ್ತು
ಟರಟಲ್ ವನ್ಯಜೀವಿ ಅಭಯಾರಣ್ಯ (ವಾರಾಣಸಿ)ದೇಶದ ಮೊದಲ ಸಿಹಿನೀರಿನ ಆಮೆ ಅಭಯಾರಣ್ಯವನ್ನು ಜಲಮಾರ್ಗ ಯೋಜನೆಗಾಗಿ ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಭದೋಹಿ-ಮಿರ್ಜಾಪುರ ಪ್ರದೇಶದಲ್ಲಿ ಮರಳು ಮಾಫಿಯಾ ರಾಜಾರೋಷವಾಗಿ ನದಿಯನ್ನು ಲೂಟಿ ಮಾಡುತ್ತಿದೆ.
ರಾಜಾಜಿ ರಾಷ್ಟ್ರೀಯ ಉದ್ಯಾನವನಹರಿದ್ವಾರ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಶಿವಾಲಿಕ್ ಆನೆ ಕಾರಿಡಾರ್ ಅನ್ನು ಸೀಳಿ, 700ಕ್ಕೂ ಹೆಚ್ಚು ಬೃಹತ್ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ.
ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ60ಕ್ಕೂ ಹೆಚ್ಚು ಹುಲಿಗಳ ಆವಾಸಸ್ಥಾನವಾಗಿರುವ ಈ ಕಾರಿಡಾರ್‌ನಲ್ಲಿ ಪರಿಸರ ಹಾನಿಯ ಎಚ್ಚರಿಕೆಯ ನಡುವೆಯೂ ಕಬ್ಬಿಣದ ಅದಿರು ಗಣಿಗಾರಿಕೆಗೆ ಮಹಾರಾಷ್ಟ್ರ ಸರ್ಕಾರ ಹಸಿರು ನಿಶಾನೆ ತೋರಿದೆ.
ಗಲಾಥಿಯಾ ಬೇ ಅಭಯಾರಣ್ಯ (ಗ್ರೇಟರ್ ನಿಕೋಬಾರ್)ಜಗತ್ತಿನ ಅತಿ ದೊಡ್ಡ ದೈತ್ಯ ಲೆದರ್‌ಬ್ಯಾಕ್ ಆಮೆಗಳ ಸಂತಾನೋತ್ಪತ್ತಿ ನೆಲೆಗೆ ಕುತ್ತು ತರುವ 72000 ಕೋಟಿ ರೂ. ಗಳ ಬಂದರು ಯೋಜನೆಗಾಗಿ 11.44 ಚದರ ಕಿಲೋಮೀಟರ್ ಕಾಡನ್ನು ಒಪ್ಪಿಸಲಾಗಿದೆ.

ಇಷ್ಟೇ ಅಲ್ಲದೆ ಮಿಜೋರಾಂನ ಡಂಪಾ ಹುಲಿ ಸಂರಕ್ಷಿತ ಪ್ರದೇಶ, ಅರುಣಾಚಲ ಪ್ರದೇಶದ ಪಕ್ಕೆ ಹುಲಿ ಸಂರಕ್ಷಿತ ಪ್ರದೇಶ, ಗೋವಾದ ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನ ಹಾಗೂ ಗುಜರಾತ್‌ನ ಗಿರ್ನಾರ್ ಅಭಯಾರಣ್ಯಗಳೂ ಕೂಡ ಇಂದು ಉದ್ಯಮಿಗಳ ಮತ್ತು ಗಣಿಗಾರಿಕೆ ದಂಧೆಯ ಪಾಲಾಗುತ್ತಿವೆ.

“ಇಂದು ದೇಶದ ಪ್ರತಿಯೊಂದು ನೈಸರ್ಗಿಕ ಸಂಪನ್ಮೂಲವೂ ಮಾರಾಟಕ್ಕಿದೆ. ಎಷ್ಟು ಹೆಚ್ಚು ಕಾಡುಗಳನ್ನು ನೀವು ಯೋಜನೆಗಳಿಗೆ ಮತ್ತು ಗಣಿಗಾರಿಕೆಗೆ ಧಾರೆ ಎರೆಯುತ್ತೀರೋ, ಅಷ್ಟು ದೊಡ್ಡದಾಗಿ ರಾಜಕಾರಣಿಗಳ ವೋಟ್ ಬ್ಯಾಂಕ್ ಬೆಳೆಯುತ್ತದೆ. ಈ ಯೋಜನೆಗಳಿಗೆ ಸಹಿ ಹಾಕುವ ಅಧಿಕಾರಿಗಳು ಸಮಾಜಕ್ಕೆ ಮತ್ತು ಪ್ರಕೃತಿಗೆ ಆಗುತ್ತಿರುವ ಶಾಶ್ವತ ಹಾನಿಯ ಬಗ್ಗೆ ಕುರುಡಾಗಿದ್ದಾರೆ” ಎನ್ನುತ್ತಾರೆ ನಿವೃತ್ತ ಅರಣ್ಯ ಅಧಿಕಾರಿ ಪ್ರಕೃತಿ ಶ್ರೀವಾಸ್ತವ.

ಮರಳು ಮಾಫಿಯಾ ಎನ್ನುವುದು ಪರಿಸರ ಕಳ್ಳತನದ ಜತೆಗೆ ದೇಶದ ಆಡಳಿತ ಮತ್ತು ಕಾನೂನು ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಜ್ವಲಂತ ಪಿಡುಗು. ಸುಪ್ರೀಂ ಕೋರ್ಟ್ ಚಂಬಲ್‌ನ ಮರಳು ಮಾಫಿಯಾಗಳನ್ನು ‘ಆಧುನಿಕ ಡಕಾಯಿತರು’ ಎಂದು ಕರೆದಿರುವುದು ಇಡೀ ದೇಶದ ಆಡಳಿತ ವ್ಯವಸ್ಥೆಗೆ ಕಪ್ಪುಚುಕ್ಕೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ಈ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ದೇಶದ ನದಿಗಳು ಒಣ ಮರುಭೂಮಿಗಳಾಗಲಿವೆ. ನದಿಗಳು, ಬೆಟ್ಟಗಳು ಮತ್ತು ಪ್ರಾಣಿ-ಪಕ್ಷಿಗಳನ್ನು ಈ ಕರಾಳ ಮಾಫಿಯಾದಿಂದ ಮುಕ್ತಗೊಳಿಸುವುದು ಜೀವಸಂಕುಲಕ್ಕೆ ಅನಿವಾರ್ಯವಾಗಿದೆ.

ನದಿ ಕಣಿವೆ ಕಾಡು ಗುಡ್ಡ ಬೆಟ್ಟ ಜನ ಪಶು ಪಕ್ಷಿ ಪ್ರಾಣಿ ಜೀವಜಂತುಗಳಲ್ಲಿದೆ ಭಾರತ ಮಾತೆಯ ಪಂಚ ಪ್ರಾಣ. ಆದರೆ, ಇಂದು ಆ ಪಂಚಪ್ರಾಣಗಳನ್ನೇ ವ್ಯವಸ್ಥಿತವಾಗಿ ನಡುಬೀದಿಯಲ್ಲಿ ಹರಾಜು ಹಾಕಲಾಗುತ್ತಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ಜಾಗತಿಕವಾಗಿ ಅಪರೂಪದ ಜೀವಿಗಳಿರುವ ಸಾವಿರಾರು ಹೆಕ್ಟೇರ್ ಸಂರಕ್ಷಿತ ಭೂಮಿಯನ್ನು ಮರಳು ಮಾಫಿಯಾದ ಪದತಲಕ್ಕೆ ಒಪ್ಪಿಸಿದ್ದು ಇತಿಹಾಸದ ಹಳೇ ಕಥೆಯೇನಲ್ಲ, ಕಳೆದ ವರ್ಷವಷ್ಟೇ ನಡೆದ ಬೆಳವಣಿಗೆ!

ಇದನ್ನೂ ಓದಿ: AI ಜೊತೆ ಸಂಸದನ ಸಂವಾದ; ಗೆದ್ದದ್ದು ಯಾರು?

ಯಾವಾಗಲೂ “ವಂದೇ ಮಾತರಂ” ಗೀತೆಯನ್ನು ಪೂರ್ತಿಯಾಗಿ ಹಾಡಿ ಎಂದು ದೇಶಪ್ರೇಮದ ದೊಡ್ಡ ಭಾಷಣ ಬಿಗಿಯುವವರು, ಭಾರತ ಮಾತೆಯನ್ನು ಸಮೃದ್ಧ ಭೂಮಿಯಾಗಿ ನೋಡುತ್ತಾರೆಯೇ ಹೊರತು, ಜೀವಂತ ಪ್ರಕೃತಿಯಾಗಿ ಒಂದಿಡಿಯಾಗಿ ಯಾಕೆ ನೋಡುವುದಿಲ್ಲ? ಆಕೆಯ ಒಡಲನ್ನು ಮರಳು ಮಾಫಿಯಾಗಳು ಜೆಸಿಬಿ ಯಂತ್ರಗಳಿಂದ ಕ್ರೂರವಾಗಿ ಬಗೆಯುತ್ತಿರುವಾಗ, ಮೂಕ ಪ್ರಾಣಿಗಳು ಭಯದಿಂದ ದಿಕ್ಕಾಪಾಲಾಗಿ ಓಡುತ್ತಿರುವಾಗ ಈ ಸೋಗಲಾಡಿ ದೇಶಪ್ರೇಮಿಗಳೆಲ್ಲ ಎಲ್ಲಿ ಅಡಗಿರುತ್ತಾರೆ?

ವಿವಾದಿತ ‘ವಂದೇ ಮಾತರಂ’ ಗೀತೆಯನ್ನೇ ಪೂರ್ತಿ ಹಾಡಿ ಎಂದು ಬಡ ಬಡಾಯಿಸುವವರು ಕನಿಷ್ಟ ಅದೇ ಗೀತೆಯಲ್ಲಿ ಅಡಗಿರುವ ‘ಸುಜಲಾಂ ಸುಫಲಾಂ ಮಲಯಜ ಶೀತಲಾಮ್…’ ಎಂಬ ಅದ್ಭುತ ಪ್ರಕೃತಿ ಆರಾಧನೆಯ ಆಶಯವನ್ನಾದರೂ ಅರ್ಥಮಾಡಿಕೊಳ್ಳಬಾರದೇ? ಆ ಗೀತೆಯಲ್ಲಿ ಹೊಗಳಲಾದ ನದಿ, ಜಲ, ವನಸಿರಿಯನ್ನೇ ಮಾಫಿಯಾಗಳಿಗೆ ಬಲಿಗೊಟ್ಟು ಘೋಷಣೆ ಕೂಗಿದರೆ ಭಾರತ ಮಾತೆ ಉಳಿಯುತ್ತಾಳೆಯೇ? ಆ ಹಾಡಿನಲ್ಲಿರುವ ಪ್ರಕೃತಿ ಆರಾಧನೆಯನ್ನಾದರೂ ಅವರು ಕಾಪಾಡಬೇಕಲ್ಲವೇ? ಪ್ರಕೃತಿಯೇ ಭಾರತ ಮಾತೆಯ ಅಸಲಿ ಪ್ರಾಣ; ಅದನ್ನು ಮರಳು ಮಾಫಿಯಾದ ಕಪಿಮುಷ್ಟಿಯಿಂದ ಮುಕ್ತಗೊಳಿಸುವುದು ಅನಿವಾರ್ಯ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಸಮಾಜ ಪರಿವರ್ತನೆಗೆ ಸಂವಿಧಾನದ ಅರಿವು ಅಗತ್ಯ: ಭೀಮಣ್ಣ ಮೇಟಿ

ಸಂವಿಧಾನದ ಆಶಯಗಳನ್ನು ಅರಿತುಕೊಂಡು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಯುವಜನರು ಸಮಾಜ ಸುಧಾರಣೆಯಲ್ಲಿ...

ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ; ಸರ್ವಾಧ್ಯಕ್ಷರಾಗಿ ಸಿ.ಜಿ.ಹಂಪಣ್ಣ ಆಯ್ಕೆ

ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ನಗರದ...

ಬೀದರ್ | ಜಿಪಂ, ತಾಪಂ ಮೀಸಲಾತಿ ಹಂಚಿಕೆಯಲ್ಲಿ ಒಬಿಸಿಗೆ ಅನ್ಯಾಯ: ಶ್ರೀಕಾಂತ ಸ್ವಾಮಿ ಆರೋಪ

ಬೀದರ್ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ ಎಂಟು ತಾಲೂಕು ಪಂಚಾಯಿತಿಗಳ ಚುನಾವಣೆಗೆ...

‘ಎಸ್ಐಆರ್’ ವಿರುದ್ಧ ಸಿಡಿದೆದ್ದ ರೈತ-ದಲಿತ ಸಂಘಟನೆಗಳು: ಅ.23ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಆಯೋಗದ ಏಕಪಕ್ಷೀಯ ನಿರ್ಧಾರಗಳನ್ನು...