ಚನ್ನಪಟ್ಟಣ ಉಪ ಚುನಾವಣೆ ದಿನದಿಂದ ದಿನಕ್ಕೆ ಮತ್ತಷ್ಟು ರಂಗೇರುತ್ತಿದೆ. ಎರಡು ದಿನಗಳ ಹಿಂದೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ ಪಿ ಯೋಗೇಶ್ವರ್ ಇಂದು ಬೆಳಿಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಸಿಎಂ ನಿವಾಸದಿಂದ ಇಬ್ಬರು ಒಂದೇ ಕಾರಿನಲ್ಲಿ ತೆರಳಿದ್ದು, ಯೋಗೇಶ್ವರ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಣೆ ಮಾಡಿರುವ ಸಿಪಿ ಯೋಗೇಶ್ವರ್ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತಾರಾ, ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತಾರಾ, ಬಿಎಸ್ಪಿ ಅಥವಾ ಎಸ್ಪಿಯತ್ತ ಮುಖ ಮಾಡುತ್ತಾರಾ ಎಂಬುವುದು ತೀವ್ರ ಕುತೂಹಲ ಕೆರಳಿಸಿತ್ತು.
ಸಿಪಿ ಯೋಗೇಶ್ವರ್ ಬಿಜೆಪಿ ಚಿಹ್ನೆ ಅಡಿಯಲ್ಲೇ ಸ್ಪರ್ಧೆ ಮಾಡಲು ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, ಕ್ಷೇತ್ರವನ್ನು ಬಿಟ್ಟುಕೊಡಲು ಕುಮಾರಸ್ವಾಮಿ ಸಿದ್ದರಿಲ್ಲ. ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟುಕೊಡಬಾರದು ಎಂಬುವುದು ಜೆಡಿಎಸ್ ಕಾರ್ಯಕರ್ತರ ಪಟ್ಟಾಗಿದೆ.
