“ಪ್ರಾಣ ಬೇಕಾದರೂ ಬಿಡುತ್ತೇವೆ, ಆದರೆ ನಮ್ಮ ಮಣ್ಣನ್ನು ಮಾತ್ರ ಮಾರಿಕೊಳ್ಳುವುದಿಲ್ಲ” ಎಂಬ ಪ್ರತಿಜ್ಞೆಯನ್ನು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ಕೈಗೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಗೆ ಸೇರಿದ 13 ಗ್ರಾಮಗಳಲ್ಲಿ 1777 ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಇಂದು ನಡೆಸುತ್ತಿರುವ ದೇವನಹಳ್ಳಿ ಚಲೋದಲ್ಲಿ ಈ ಪ್ರತಿಜ್ಞೆ ಸ್ವೀಕರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ದೇವನಹಳ್ಳಿಯಲ್ಲಿ ಜಮಾಯಿಸಿದ್ದಾರೆ.
ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕೆರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟಿಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ತೆಲ್ಲೋಹಳ್ಳಿ, ಹ್ಯಾಡಾಳ ಗ್ರಾಮಗಳ ಮಹಿಳೆಯರು ಸಾಂಕೇತಿಕವಾಗಿ ತಂದ ತಮ್ಮ ಊರಿನ ಮಣ್ಣನ್ನು ಗಿಡಕ್ಕೆ ಸುರಿಯುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು.

ಚೀಮಾಚನಹಳ್ಳಿ ರೈತ ಮುಖಂಡ ರಮೇಶ್ ಮತ್ತು ಇತರರು ಪ್ರತಿಜ್ಞೆಯನ್ನು ಬೋಧಿಸಿದರು. ಸಾವಿರಾರು ಸಂಖ್ಯೆಯಲ್ಲಿ ಬಂದಿರುವ ಪ್ರತಿಯೊಬ್ಬರೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಪ್ರತಿಜ್ಞೆ ಹೀಗಿದೆ: “ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನದ ಅಪಾಯದಲ್ಲಿರುವ 13 ಹಳ್ಳಿಗಳ ಜನರಾದ ನಾವು 1188 ದಿನಗಳಿಂದಲೂ ಒಂದೇ ಕುಟುಂಬದವರಂತೆ ಹೋರಾಡುತ್ತಾ ಬಂದಿದ್ದೇವೆ. ಕೃಷಿ ಬದುಕನ್ನು ನಾವು ಪ್ರೀತಿಸುತ್ತೇವೆ. ಅದನ್ನು ಉಳಿಸಿಕೊಳ್ಳಲು ಹೋರಾಡಿದ್ದೇವೆ. ಹಿರಿಯರ ಬಳುವಳಿಯನ್ನು ಕಳೆದುಕೊಳ್ಳಬಾರದು, ಭೂಮಿ ಜೊತೆಗಿರುವ ನಂಟು ಅಳಿಯಬಾರದು ಎಂದು ಚಳವಳಿ ನಡೆಸುತ್ತಿದ್ದೇವೆ.”
“ನಮ್ಮನ್ನು ಒಡೆಯಲು ಪ್ರಯತ್ನ ಮಾಡಲಾಗುತ್ತಿದೆ. ದುರಾಸೆ ತೋರಿಸುವ ಪ್ರಯತ್ನ ಮಾಡಲಾಗುತ್ತದೆ. ಬೆದರಿಸಲು ಪ್ರಯತ್ನಿಸಲಾಗುತ್ತಿದೆ. ಸಮಸ್ತ ಜನರ ಮುಂದೆ ಪ್ರತಿಜ್ಞೆ ಮಾಡುತ್ತಿದ್ದೇವೆ. ನಮ್ಮ ಪ್ರಾಣವನ್ನು ಬೇಕಾದರೂ ಬಿಡುತ್ತೇವೆ. ಈ ಮಣ್ಣನ್ನು ನಾವು ಮಾರಿಕೊಳ್ಳುವುದಿಲ್ಲ. ನೀವು ಎಷ್ಟೇ ಪ್ರಯತ್ನ ಮಾಡಿದರೂ ಭೂಮಿಯನ್ನು ಮಾತ್ರ ಬಿಟ್ಟುಕೊಡುವುದಿಲ್ಲ”.
ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿ ಹೊಮ್ಮಿರುವ ‘ಸಂಯುಕ್ತ ಹೋರಾಟ ಕರ್ನಾಟಕ’ವು ‘ದೇವನಹಳ್ಳಿ ಚಲೋ’ದ ನೇತೃತ್ವ ವಹಿಸಿದೆ. ಸುಮಾರು 15 ಸಂಘಟನೆಗಳು ಚನ್ನರಾಯಪಟ್ಟಣ ರೈತರಿಗೆ ಬೆಂಬಲ ಘೋಷಿಸಿವೆ.
ಹೋರಾಟಗಾರರಾದ ಎಚ್.ಎಸ್.ಬಸವರಾಜಪ್ಪ, ಪ್ರಕಾಶ್ ಕಮ್ಮರಡಿ, ಪ್ರಕಾಶ್ ರಾಜ್, ವರಲಕ್ಷ್ಮಿ, ಬಡಗಲಪುರ, ಚುಕ್ಕಿ ನಂಜುಂಡಸ್ವಾಮಿ, ವರಲಕ್ಷ್ಮಿ, ನೂರ್ ಶ್ರೀಧರ್, ಗುರುಪ್ರಸಾದ್ ಕೆರಗೋಡು, ಮುಖ್ಯಮಂತ್ರಿ ಚಂದ್ರು, ಮಾವಳ್ಳಿ ಶಂಕರ್, ಅನುಸೂಯಮ್ಮ, ಮೀನಾಕ್ಷಿ ಸುಂದರಂ, ಇಂದಿರಾ ಕೃಷ್ಣಪ್ಪ, ಶಿವಪ್ರಸಾದ್, ನಾಗರಾಜ್, ಶಿವಪ್ಪ, ಅಪ್ಪಣ್ಣ, ತಾರಾ ರಾವ್, ಚಂದ್ರಪ್ಪ ಹೊಸಕೆರೆ, ವಸಂತಕುಮಾರ್, ಕೆ.ಎನ್.ಉಮೇಶ್, ಶಿವಾನಂದ, ಮಹೇಶ್ ಪ್ರಭು, ಮಲ್ಲಯ್ಯ, ಲಕ್ಷ್ಮಿನಾರಾಯಣ ರೆಡ್ಡಿ, ನಾಗರತ್ನ, ಪ್ರಭಾ ಬೆಳವಂಗಲ, ಅಪ್ಪಣ್ಣ, ನಿರ್ವಾಣಪ್ಪ, ಶ್ರೀನಿವಾಸ್, ಸಿದ್ದರಾಜು, ನಂಜಪ್ಪ, ರಾಮೇಗೌಡ, ಅಶ್ವತ್ಥ, ರಾಮಚಂದ್ರಪ್ಪ, ಗೋವಿಂದರಾಜು, ಶಿವಮೊಗ್ಗ ನಾರಾಯಣಸ್ವಾಮಿ, ಮಹಿಮಾ ಪಾಟೀಲ್, ಎಸ್.ಜಿ.ಸಿದ್ದರಾಮಯ್ಯ ಹಲವಾರು ಜನರು ವೇದಿಕೆಯಲ್ಲಿದ್ದಾರೆ.
(ದೇವನಹಳ್ಳಿ ಚಲೋಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ನಿರೀಕ್ಷಿಸಿ.. ಚಾರಿತ್ರಿಕ ಚಳವಳಿಗೆ ಸಂಬಂಧಿಸಿದ ವಿವರಗಳಿಗಾಗಿ ಈದಿನ ಡಾಟ್ ಕಾಮ್ ಓದುತ್ತಿರಿ..)

ಎಸ್ ಮಹೇಶ್ ಉದಯವಾಣಿ ವರದಿಗಾರರು ದೇವನಹಳ್ಳಿ ಟೌನ್