2025-26ನೇ ಸಾಲಿನಲ್ಲಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ಡಿ.ದೇವರಾಜ ಅರಸು ಪ್ರಶಸ್ತಿಗೆ ಅರ್ಹರನ್ನು ಶಿಫಾರಸ್ಸು ಮಾಡಲು ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ.
ದೇವರಾಜ ಅರಸು ಅವರ ಜನ್ಮದಿನದಂದು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ವ್ಯಕ್ತಿ/ಸಂಘ/ಸಂಸ್ಥೆಗೆ ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ. ಅದರಂತೆ 2025-26ನೇ ಸಾಲಿಗೆ ಡಿ. ದೇವರಾಜ ಅರಸು ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಆಯ್ಕೆ ಸಮಿತಿ ರಚಿಸಲಾಗಿದೆ.
ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ನೇಮಕವಾಗಿದ್ದಾರೆ. ಆಯ್ಕೆ ಸಮತಿಯ ಸದಸ್ಯರಾಗಿ ‘ಈ ದಿನ.ಕಾಂ’ನ ಸಂಪಾದಕರು ಮತ್ತು 2015ರಲ್ಲಿ ದೇವರಾಜ ಅರಸು ಹಿಂದುಳಿದ ಜಾತಿಗಳ ಅಭಿವೃದ್ಧಿ ನಿಗಮದ ವತಿಯಿಂದ ದೇವರಾಜ ಅರಸು ಪುಸ್ತಕ ಪ್ರಕಟಣೆಯ ಸಂಪಾದಕೀಯ ಮಂಡಳಿಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಬಸವರಾಜು ಮೇಗಲಕೇರಿ ನೇಮಕವಾಗಿದ್ದಾರೆ.
ನಿವೃತ್ತ ಪ್ರಾಂಶುಪಾಲ ಬಿ ಶಿವರಾಮ ಶೆಟ್ಟಿ, ಡಾ.ಯು.ಪಿ.ಚಂದ್ರಶೇಖರ್, ಡಾ. ಲಕ್ಷ್ಮಣ ದಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರು, ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಪದನಿಮಿತ್ತ ಸದಸ್ಯರಾಗಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ.
