ಧರ್ಮಸ್ಥಳ ಗ್ರಾಮದಲ್ಲಿ ಅಕ್ರಮವಾಗಿ ನೂರಾರು ಶವಗಳನ್ನು ಹೂಳಲಾಗಿದೆ ಎನ್ನುವ ಆರೋಪ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಧರ್ಮಸ್ಥಳದಲ್ಲಿ ನಾಪತ್ತೆಯಾದ ಅನನ್ಯಾ ಭಟ್ ಪ್ರಕರಣವನ್ನು ಇದೀಗ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.
“ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ 2003ರಲ್ಲಿ ನಾಪತ್ತೆಯಾಗಿದ್ದಾಳೆ” ಎಂದು ಸುಜಾತ ಭಟ್ ಎಂಬುವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಧರ್ಮಸ್ಥಳಕ್ಕೆ ಬಂದಿದ್ದ ಅನನ್ಯಾ ಭಟ್ ನಾಪತ್ತೆಯಾಗಿದ್ದಳು. ಆಕೆಯನ್ನು ಹುಡುಕಿಕೊಡಿ ಎಂದು ಸುಜಾತ ಭಟ್ ಆರೋಪ ಮಾಡಿದ್ದರು. ಈ ಸಂಬಂಧ ಅನನ್ಯಾ ಭಟ್ ಕುರಿತಂತೆ ಸಾಕಷ್ಟು ಅನುಮಾನಗಳು ಎದ್ದಿದ್ದವು.
ಸುಜಾತ ಭಟ್ ಈಕೆ ನನ್ನ ಮಗಳು ಎಂದು ಫೋಟೋವೊಂದನ್ನು ತೋರಿಸಿದ್ದರು. ಆದರೆ ಅವರು ತೋರಿಸಿದ ಫೋಟೋ ಬಗ್ಗೆ ಗುಮಾನಿಗಳು ಎದ್ದಿವೆ. ಸುಜಾತ ಭಟ್ ಗೆ ಮಕ್ಕಳೆ ಇಲ್ಲ ಎಂದು ಅವರ ಸಂಬಂಧಿಗಳು ತಿಳಿಸಿದ್ದರು. ಹೀಗಾಗಿ ಲಾಯರ್ ಜೊತೆ ಕಾಣಿಸಿಕೊಂಡಿದ್ದ ಸುಜಾತ ಭಟ್ ಇವಳೇ ನನ್ನ ಮಗಳು ಅನನ್ಯಾ ಭಟ್ ಎಂದು ಫೋಟೋ ರಿಲೀಸ್ ಮಾಡಿದ್ದರು.
ಆದರೆ ಈ ಫೋಟೋದಲ್ಲಿ ಇರೋದು ಅನನ್ಯಾ ಭಟ್ ಅಲ್ಲ. ನನ್ನ ತಂಗಿ ವಾಸಂತಿ ಎಂದು ಕೊಡಗಿನ ವಿಜಯ್ ಎಂಬುವರು ಹೇಳಿದ್ದಾರೆ. ಅಲ್ಲದೆ ಆಕೆ ನನ್ನ ತಂಗಿ ವಾಸಂತಿ. ಆಕೆ 2007ರಲ್ಲಿ ಮೃತಪಟ್ಟಿದ್ದಳು ಎಂದು ವಿಜಯ್ ಹೇಳಿದ್ದಾರೆ. ಸತ್ಯಾಸತ್ಯತೆ ಏನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.
