“ದಸರಾ ಕಳೆದ ನಂತರ ಮುಂದಿನ ವಾರದಲ್ಲೇ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರು, ಕೇಂದ್ರದ ಅಧಿಕಾರಿಗಳ ಸಭೆ ಕರೆಯುತ್ತೇನೆ. ಪ್ರತಿಭಟನೆ ಕೈ ಬಿಡಬೇಕು ಎಂದು ರೈತರಿಗೆ ಕೈಮುಗಿದು ಕೇಳುತ್ತೇನೆ” ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಭಟನಾ ರೈತರ ಬಳಿ ಮನವಿ ಮಾಡಿದರು.
ಬೆಳಗಾವಿಯ ಕಿತ್ತೂರಿನಲ್ಲಿ ಕಬ್ಬು ಬೆಳೆಗಾರರನ್ನು ಭೇಡಿ ಮಾಡಿದ ಡಿ.ಕೆ ಶಿವಕುಮಾರ್, “ಕೇಂದ್ರ ಸಚಿವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ರಾಜ್ಯ ಸರ್ಕಾರವೊಂದರಿಂದಲೇ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಇದರಲ್ಲಿ ಕೇಂದ್ರ ಸರ್ಕಾರ, ಬ್ಯಾಂಕುಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪಾತ್ರವೂ ಇದೆ. ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ” ಎಂದು ಹೇಳಿದರು.
“ರೈತರು ಕರೆದಲ್ಲಿಗೆ ಬರಲು ನಾನು ಸಿದ್ಧನಿದ್ದೇನೆ. ನಿಮ್ಮ ಪರವಾಗಿ ನಾನು ಆಲೋಚನೆ ಮಾಡುತ್ತಿದ್ದೇನೆ. ನಿಮ್ಮ ಜೊತೆಯಲ್ಲೇ ನಾನು ಬೀದಿಯಲ್ಲೇ ಮಲಗಲು ಸಿದ್ಧ. ನೀವು ನೀಡಿದ ಚಾಪೆಯ ಮೇಲೆ ಮಲಗುತ್ತೇನೆ. ನೀವು ನೀಡಿದ ರೊಟ್ಟಿ ಸ್ವೀಕರಿಸುತ್ತೇನೆ” ಎಂದರು.
“ರೈತರೇ ನಮ್ಮ ದೇವರುಗಳು. ನಮ್ಮನ್ನು ಸಾಕಿ, ಬೆಳೆಸುವವರು ನೀವು. ರೈತರಿಗೆ ಸಂಬಳವಿಲ್ಲ, ಪಿಂಚಣಿಯಿಲ್ಲ, ಪ್ರಮೋಷನ್ ಇಲ್ಲ. ನಿಮ್ಮ ಬದುಕಿನ ಭದ್ರತೆಗೆ ಸರ್ಕಾರ ಕೈಜೋಡಿಸಬೇಕು. ನಿಮ್ಮ ಸಮಸ್ಯೆಗಳನ್ನು ಅರಿತುಕೊಳ್ಳಲು ಬೆಂಗಳೂರಿನಿಂದ ಕಿತ್ತೂರಿಗೆ ಬಂದಿದ್ದೇನೆ. ನಿಮ್ಮ ಹೋರಾಟದ ನೋವು ಮತ್ತು ಸಂಕಷ್ಟಗಳು ನನಗೆ ಅರ್ಥವಾಗಿವೆ” ಎಂದು ತಿಳಿಸಿದರು.
“ರೈತ ಮುಖಂಡ ಚೂನಪ್ಪ ಪೂಜಾರಿ ಅವರೊಂದಿಗೆ ಈಗಾಗಲೇ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ. ಸಹಕಾರ, ಕೃಷಿ ಮತ್ತು ಸಕ್ಕರೆ ಸಚಿವರನ್ನು ದೆಹಲಿಗೆ ಕಳುಹಿಸಿ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ. ತಾವೂ ಸಕ್ಕರೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ರೈತರ ಸಂಕಷ್ಟಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವುದಾಗಿ” ಹೇಳಿದರು.
“ಸಕ್ಕರೆ ಕಾರ್ಖಾನೆಗಳ ನಿರ್ವಹಣೆ ಮತ್ತು ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ. ಕಾರ್ಖಾನೆಗಳ ಮಾಲೀಕರು ನಷ್ಟ, ವಿದ್ಯುತ್ ಖರೀದಿ, ಉತ್ಪಾದನಾ ವೆಚ್ಚ ಹಾಗೂ ಇತರ ರಾಜ್ಯಗಳ ನಿಯಂತ್ರಣ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ತಮ್ಮ ಸಂಕಷ್ಟಗಳನ್ನು ಹೇಳುತ್ತಿದ್ದಾರೆ. ಕೆಲವು ಕಾರ್ಖಾನೆಗಳನ್ನು ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಈ ಕುರಿತು ನಾನೂ ಸಕ್ಕರೆ ಕಾರ್ಖಾನೆ ಮಾಲಿಕರನ್ನು ಪ್ರಶ್ನಿಸಿದ್ದೆ” ಎಂದರು.
“ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿಯೂ ಕಾರ್ಖಾನೆಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗಿತ್ತು. ಈಗಲೂ ಕಾರ್ಖಾನೆಗಳು ಮುಚ್ಚುವ ಪರಿಸ್ಥಿತಿ ಬರಬಾರದು. ಕಾರ್ಖಾನೆಗಳು ಉಳಿದರೆ ಮಾತ್ರ ರೈತರಿಗೂ ಅನುಕೂಲವಾಗುತ್ತದೆ. ಹೀಗಾಗಿ ರೈತರು ಮತ್ತು ಕಾರ್ಖಾನೆ ಮಾಲೀಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಂಡುಕೊಳ್ಳಬೇಕಿದೆ” ಎಂದರು.
“ಕಬ್ಬಿನ ಬೆಲೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ಯಾವ ಮಾರ್ಗದಲ್ಲಿ ನೆರವು ಒದಗಿಸಬಹುದು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಕೇಂದ್ರ ಸರ್ಕಾರದ ಸಚಿವರನ್ನೂ ಭೇಟಿ ಮಾಡಿ ರೈತರ ಪರವಾಗಿ ಮನವಿ ಸಲ್ಲಿಸಲಾಗುವುದು” ಎಂದು ಭರವಸೆ ನೀಡಿದರು.
ರೈತರ ಸಂಘಟನೆ ಮತ್ತು ಹೋರಾಟದ ಶಕ್ತಿಯನ್ನು ಸರ್ಕಾರ ಗುರುತಿಸಿದೆ. ರೈತರ ಧ್ವನಿ ವಿಧಾನಸೌಧದಿಂದ ದೆಹಲಿಯವರೆಗೂ ತಲುಪಿದೆ. ನಿಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ರೈತರು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ರೈತರ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.
“ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದಕ್ಕಿಂತ ಜನರ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ರೈತರ ನೋವು ಕಾರ್ಖಾನೆ ಮಾಲೀಕರಿಗೂ ಅರ್ಥವಾಗಬೇಕು. ಕಾರ್ಖಾನೆಗಳ ಸಮಸ್ಯೆಗಳನ್ನೂ ನಾವು ತಿಳಿದುಕೊಳ್ಳಬೇಕು” ಎಂದರು.
“ರೈತರು ಇಲ್ಲಿಯವರೆಗೆ ಯಶಸ್ವಿಯಾಗಿ ಹೋರಾಟ ನಡೆಸಿದ್ದು, ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ರೈತರು ಕಾನೂನು ಸಂಘರ್ಷಕ್ಕೆ ಅವಕಾಶವಾಗುವ ಘಟನೆಗಳಿಂದ ದೂರವಿರಬೇಕು” ಎಂದು ಮನವಿ ಮಾಡಿದರು.
“ನಿಮ್ಮ ಸಮಸ್ಯೆ ಬಗೆಹರಿಯುವವರೆಗೆ ನಿಮ್ಮೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ. ರೈತರ ಸಮಸ್ಯೆ ಪರಿಹಾರವಾಗಬೇಕು ಎಂಬ ಉದ್ದೇಶದಿಂದಲೇ ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ” ಎಂದು ಹೇಳಿದರು.
“ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದಾದ್ಯಂತ ಬರಗಾಲ ಘೋಷಣೆ ಮಾಡಲಾಗಿದೆ. ಬರ ಪರಿಹಾರಕ್ಕಾಗಿ ಪ್ರಧಾನಮಂತ್ರಿಗಳ ಭೇಟಿಗೆ ಸಮಯ ಕೋರಲಾಗಿದ್ದು, ಕೇಂದ್ರ ಗೃಹ ಸಚಿವರನ್ನೂ ಭೇಟಿ ಮಾಡಿ ರಾಜ್ಯಕ್ಕೆ ಅಗತ್ಯ ನೆರವು ನೀಡುವಂತೆ ಮನವಿ ಸಲ್ಲಿಸಲಾಗುವುದು” ಎಂದರು.
“ಬರಗಾಲದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ರೈತರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ನಿಲ್ಲಬೇಕು” ಎಂದು ಹೇಳಿದರು.
“ರೈತರಿಗೆ ವಿದ್ಯುತ್ ಪೂರೈಕೆಗಾಗಿ ರಾಜ್ಯ ಸರ್ಕಾರ ವಾರ್ಷಿಕ ಸುಮಾರು ₹22,000 ಕೋಟಿ ವೆಚ್ಚ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವು ನೀಡಲಾಗುತ್ತಿದೆ. ಆದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಹರಿಸಲು ಎಲ್ಲರ ಸಹಕಾರ ಅಗತ್ಯವಿದೆ” ಎಂದು ತಿಳಿಸಿದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಕಬ್ಬು ಬೆಳೆಗಾರರ ಬೇಡಿಕೆ ವಿಚಾರವಾಗಿ ಚರ್ಚೆ ನಡೆಸಲು ಸಾಧ್ಯವಾದರೆ ಬೆಳಗಾವಿಯಲ್ಲೇ ಸಭೆ ನಡೆಸಲಾಗುವುದು” ಎಂದರು.
“ರಾಜ್ಯ ಮತ್ತು ಕೇಂದ್ರ ಸರ್ಕಾರ, ಕಾರ್ಖಾನೆ, ಬ್ಯಾಂಕು, ಸಕ್ಕರೆ ಬೆಲೆ, ಬೆಂಬಲ ಬೆಲೆ ಎಲ್ಲಾ ವಿಷಯಗಳ ಬಗ್ಗೆ ನನಗೆ ಅರಿವಿದೆ. ಕಾರ್ಖಾನೆಯವರು ಕೂಡ ಇದಕ್ಕೆ ಸಹಕಾರ ನೀಡಬೇಕು. ಕೇಂದ್ರ ಸರ್ಕಾರ ಕೂಡ ತೀರ್ಮಾನ ಮಾಡಬೇಕು. ಹಿಂದೆ ನಮ್ಮ ಸರ್ಕಾರ 300ರೂ ನೀಡಲು ನಿರ್ಧರಿಸಿತ್ತು. ಕಾರ್ಖಾನೆಗಳು ಇದನ್ನು ಒಪ್ಪಿರಲಿಲ್ಲ. ಹಲವು ಕಾರ್ಖಾನೆಗಳು ಸರ್ಕಾರವೇ ಕಾರ್ಖಾನೆ ನಡೆಸಲಿ ಎಂದು ಒತ್ತಡ ಹೇರಿದ್ದವು. ನಾವು ಅದನ್ನು ಒಪ್ಪಲಿಲ್ಲ” ಎಂದರು ವಿವರಿಸಿದರು.




