ಕಬ್ಬಿಗೆ ಪ್ರತಿ ಟನ್ಗೆ ₹5,500 ದರ ನೀಡಬೇಕು ಹಾಗೂ ಎಂಎಸ್ಪಿ ₹60 ಹೆಚ್ಚಿಸಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬೃಹತ್ ರೈತ ಸಮಾವೇಶ ನಡೆಯಿತು.
ಎಂ.ಕೆ. ಹುಬ್ಬಳ್ಳಿಯಿಂದ ಕಿತ್ತೂರಿಗೆ ಆಗಮಿಸಿದ ರೈತರ ಪಾದಯಾತ್ರೆಯಲ್ಲಿ ಸುಮಾರು 40 ಸಾವಿರ ರೈತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರೈತ ಸಂಘಟನೆಯ ಮುಖಂಡರಾದ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಅವರು ಕಬ್ಬಿಗೆ ಸೂಕ್ತ ಬೆಲೆ ನಿಗದಿ, ಎಂಎಸ್ಪಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಂದಿಟ್ಟರು.
ರೈತರು ಪ್ರತಿ ಟನ್ ಕಬ್ಬಿಗೆ ₹5,500 ದರ ನೀಡಬೇಕು ಎಂದು ಘೋಷಣೆ ಕೂಗಿ ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮುಂದಿನ 10 ದಿನಗಳಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರೈತರ ಸಭೆ ಕರೆದು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ರೈತರು ಹೋರಾಟವನ್ನು ಕೈಬಿಡಬೇಕು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಕಬ್ಬಿಗೆ ಸೂಕ್ತ ಬೆಲೆ ನಿಗದಿ ಹಾಗೂ ಎಂಎಸ್ಪಿ ಹೆಚ್ಚಳದ ಬೇಡಿಕೆಗಳ ಕುರಿತು ಸರ್ಕಾರದ ಮುಂದಿನ ನಿರ್ಧಾರದತ್ತ ರೈತರು ಎದುರು ನೋಡುತ್ತಿದ್ದಾರೆ.




