ಅಶ್ವತ್ಥ ಅವರ ಕತೆ | ವ್ಯಭಿಚಾರ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಪಿಲಾನಿಯು ಜಯಪುರದ ಬನಿಯ. ಸಣಕಲ ಶರೀರ. ಮೂರು ದಿನ ಉಪವಾಸದ ಮೊಗ. ಅವನು ಸಣ್ಣ ಹಾಸಿಗೆಯನ್ನು ಕಂಕಳಿನಲ್ಲಿ ಇರಿಕಿಕೊಂಡು, ಒಂದು ಲೋಟ ಹಿಡಿದುಕೊಂಡು ತನ್ನ ಊರಿನಿಂದ ಮುಂಬಯಿಗೆ ಬಂದು ಆಗಲೇ ಬಹಳ ವರ್ಷಗಳಾದುವು. ಈಗ ಅವನ ಮಳಿಗೆ ನಮ್ಮ ಮನೆ ಎದುರಿಗೆ ಎತ್ತರವಾದ ಜಗಲಿಯ ಮೇಲಿದೆ. ಹೆಸರಿಗೆ ಮಾತ್ರ ಕಿರಾಣಿ ಅಂಗಡಿ. ಆದರೆ ಅವನಲ್ಲಿ ಸಿಕ್ಕದ ಸಾಮಾನು ಅಪೂರ್ವ ಅನ್ನಿ. ಯುದ್ಧ ಮೊದಲಾದ ಮೇಲಂತೂ ಅವನ ವ್ಯಾಪಾರ ಬಹಳ ಭರಾಟೆಯಿಂದ ಸಾಗಿತು. ಬೆಲೆಯ ಹತೋಟಿ ಜಾರಿಗೆ ಬಂದಮೇಲಂತೂ ಅವನ ಲಾಭವೂ ಹತೋಟಿಯನ್ನೇ ಮೀರಿತು. ಮಿತಿಯಾದ ಬೆಲೆಗೆ ಪದಾರ್ಥವನ್ನು ಮಾರಿದರೆ ಅವನ ಕುಲಕ್ಕೇ ಅತಿಯಾದ ಹಾನಿ ಎಂದು ಅವನ ನೀತಿ.

- Advertisement -

ಉದಾಹರಣೆಗೆ ಸಕ್ಕರೆಯನ್ನೇ ತೆಗೆದುಕೊಳ್ಳಿ. ಇದರ ಮೇಲೆ ಸರಕಾರದ ಕಟ್ಟು ಮೊದಲಾದಂದಿನಿಂದಲೂ ಇವನ ಬಳಿಯಲ್ಲಿ ಸಕ್ಕರೆಯ ಸರಕು ಬೆಳೆಯುವುದೂ ಮೊದಲಾಯಿತು. ಸರಕಾರಿ ಸಕ್ಕರೆ ಸಾಲದೆ ಇದ್ದ- ಯಾರಿಗೆ ತಾನೆ ಸಾಕು?- ಸುತ್ತುಮುತ್ತಿನವರಿಗೆಲ್ಲ ಪಿಲಾನಿ ಹತ್ತಿರ ಸಕ್ಕರೆಗೆ ಬರವಿಲ್ಲ ಅನ್ನುವುದು ಗೊತ್ತು. ನೀವು ಹೋಗಿ ಮೊದಲು ಕೇಳಿದಾಗ ಅವನು ‘ಇಲ್ಲ’ ಅಂತಲೇ ಹೇಳುವುದು. ಹುಂ. ಸಕ್ಕರೆ ಸರಕಾರದ ಅಂಗಡಿಯಲ್ಲಿಲ್ಲದೆ ಬೇರೆ ಎಲ್ಲಿ ಸಿಕ್ಕಬೇಕು? ಆದರೆ ನೀವು ಕೊಂಚ ನಿಂತು ‘ನೋಡಿ, ನನಗೆ ಬಹಳ ಅಗತ್ಯವಿದೆ; ಬೆಲೆಯ ಮುಖ ನೋಡುವುದಿಲ್ಲ. ಏನಾದರೂ ಅಷ್ಟು ಇಷ್ಟು ಉಳಿದಿದ್ದರೆ ಕೊಂಚ ನೋಡಿ’ ಎಂದು ಹೇಳಿದರೆ, ಪಿಲಾನಿ ಮಾರ್ವಾಡಿಗೆ ನೀವು ತಂಟೆಕೋರರಲ್ಲ, ಸಾಧುವಾದ ಬಲಿ ಎಂದು ಕಂಡುಬಂದರೆ ‘ಹಾಗೇ? ನೋಡುತ್ತೇನೆ. ಏನಾದರೂ ಇದ್ದರೆ ನಿಮಗೆ ಕೊಟ್ಟುಬಿಡುತ್ತೇನೆ. ಆದರೆ ಬೆಲೆ ಮಾತ್ರ ಪೌಂಡಿಗೆ ಹತ್ತಾಣೆ ಆಗುತ್ತದೆ’ ಅನ್ನುವನು. ನೀವು ಬೆಚ್ಚಿ ‘ಏನು, ಆರಾಣೆಯಿಂದ…’ ಎನ್ನುವಾಗಲೇ ಅವನು ಮಧ್ಯ ಬಾಯಿಹಾಕಿ ‘ಆ ಹತೋಟಿ ಮಾತು ಬಿಡಿ. ಈಗ ಸರಕನ್ನು ಜಮಾಯಿಸಬೇಕಾದರೆ ಹತ್ತಾಣೆ ನಾನೇ ಕೊಡಬೇಕು, ಭಾಯಿ. ಇದನ್ನು ಮಾರಿ ನನಗೆ ಒಂದು ಬಿಡಿಕಾಸೂ ಲಾಭವಿಲ್ಲ’ ಅನ್ನುವನು. ನೀವು ಕೊಂಚ ಮಿಸಿಮಿಸಿ ಮಾಡುವಾಗ ಅವನು ಶಾಂತವಾಗಿ ಕುಳಿತಿದ್ದು, ಕಡೆಗೆ ನಿಮಗೇ ಸಾಕಾಗಿ ಸೋತು ನಿಟ್ಟುಸಿರನ್ನು ಬಿಟ್ಟು, ‘ಹುಂ ಹೋಗಲಿ, ಕೊಡಿ ಒಂದು ಪೌಂಡು. ನಾಳೆ ಹಬ್ಬ. ಮಿಠಾಯಿ ಮಾಡದೇ ಇದ್ದರೆ ಆಗುತ್ತದೆಯೇ?’ ಅಂದರೆ, ಅವನು ನಿಮ್ಮ ಮಾತಿನ ಉತ್ತರಾರ್ಧಕ್ಕೆ ಗಮನ ಕೊಡದೆ ಒಳಗೆ ಹೋಗಿ, ಒಂದು ಪೊಟ್ನ ತಂದು, ‘ಇಗೋ, ನನ್ನಲ್ಲಿ ಇದ್ದದ್ದೇ ಇಷ್ಟು; ಬಳಿದು ಕೊಟ್ಟಿದ್ದೇನೆ’ ಅಂದು, ಕೊಟ್ಟ ನಿಮ್ಮ ರೂಪಾಯಿ ನೋಟನ್ನು ತೆಗೆದುಕೊಂಡು, ನೀವೇನಾದರೂ ಅಲ್ಪಸ್ವಲ್ಪ ರಿಯಾಯಿತಿಗೆ ಆಶೆಪಡುತ್ತಿದ್ದರೆ ನಿರಾಶೆ ಮಾಡಿ, ಸರಿಯಾಗಿ ಆರಾಣೆ ಚಿಲ್ಲರೆಯನ್ನು ಎಣಿಸಿ ಕಟುಕ ಹೃದಯದಿಂದ ಕೊಟ್ಟುಬಿಡುವನು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಇದನ್ನು ಓದಿದ್ದೀರಾ?: ಅಗ್ರಹಾರ ಕೃಷ್ಣಮೂರ್ತಿ ಅವರ ಕತೆ | ಮನೋರಥ

ಒಂದು ದಿನ ಇದ್ದಕ್ಕೆ ಇದ್ದಹಾಗೆಯೆ- ನಮ್ಮ ದೃಷ್ಟಿಯಿಂದ- ಕೊಬ್ಬರಿ ಎಣ್ಣೆಯ ಬೆಲೆಗೆ ಹತೋಟಿ ಬಂದಿತು. ಸರಿ, ಆ ದಿನದಿಂದ ಅಂಗಡಿಯಲ್ಲೂ ಎಣ್ಣೆಯೇ ಇಲ್ಲ- ನಮಗಾಗಿ. ವಾರದ ಮೇಲೆ ವಾರ ಕಳೆಯಿತು. ಮನೆಯಲ್ಲಿ ಇದ್ದ ಎಣ್ಣೆಯೂ ತೀರಿತು. ‘ಟಾಂಕೋ’ ಮೊದಲಾದ ಎಣ್ಣೆಗಳೂ ಮಾಯ. ಅವು ಇದ್ದರೆ ತಾನೆ ಅವನ್ನು ಕೊಂಡು ಪೂರಯಿಸಬಹುದೊ ನಾವು? ಅಂತು ತಲೆಗೆ ಒಳ್ಳೆಣ್ಣೆಯನ್ನು ಹಚ್ಚಿಕೊಳ್ಳುವ ಗತಿ ಬರುತ್ತಿತ್ತು. ಸರಿ, ಈ ಪಾಡು ಬರುವ ಹಿಂದಿನ ದಿನ ನಾನು ಹೋಗಿ ಪಿಲಾನಿಯನ್ನು ಮರೆಹೊಕ್ಕೆ. ರೂಢಿಯ ಪ್ರಕಾರ ಮೊದಲನೆಯ ಮಾತುಕತೆಯಾದ ಮೇಲೆ ಪಿಲಾನಿಯಲ್ಲಿ ಕೊಂಚವೇ- ನನಗೆ ಬೇಕಾದಷ್ಟೇ ತಾನೆ- ಕೊಬ್ಬರಿ ಎಣ್ಣೆ ಇರುವುದಾಗಿಯೂ, ಆದರೆ ಬೆಲೆಯು ಹತೋಟಿಯ ಹಿಂದಿನ ದಿನ ಇದ್ದುದಕ್ಕೆ ಎರಡರಷ್ಟು ಎಂದೂ ಗೊತ್ತಾಯಿತು. ಇದನ್ನು ಕೇಳಿದೊಡನೆ ನನಗೆ ಉಂಟಾದ ಕೋಪವನ್ನು ನುಂಗಿಕೊಂಡು ಒಂದು ಪೌಂಡು ಎಣ್ಣೆಯನ್ನು ಕೊಂಡು ಎರಡು ರೂಪಾಯಿ ಕೊಟ್ಟು ಪಿಲಾನಿಯನ್ನು ಮನಸ್ಸಿನಲ್ಲಿ- ಅಂಗಡಿಯನ್ನು ಬಿಟ್ಟಮೇಲೆ ಗಟ್ಟಿಯಾಗಿ- ಶಪಿಸುತ್ತಾ ಮನೆಗೆ ಬಂದೆ. ಮಾರನೆಯ ದಿನ ನಮ್ಮವಳು ಅದನ್ನು ತಲೆಗೆ ಹಚ್ಚಿಕೊಳ್ಳುತ್ತಾ ‘ಇದೇನು ಕೊಬ್ಬರಿ ಎಣ್ಣೆಯೋ ಒಳ್ಳೆಣ್ಣೆಯೋ ತಂದದ್ದು? ಒಳ್ಳೆಣ್ಣೆ ಮನೆಯಲ್ಲೇ ಇತ್ತು’ ಅಂದಳು. ಆಗ ನನ್ನಲ್ಲಿ ಅಡಗಿದ್ದ, ಹೆಚ್ಚುತ್ತಿದ್ದ ಸಿಟ್ಟನ್ನು ಎಲ್ಲಿ ತೋರಿಸಬೇಕು? ‘ಏನೋ ಎಂತಹದೋ ಸುಮ್ಮನೆ ತಲೆಗೆ ಚಟ್ಟಿಕೊ’ ಅಂದು ಗದರಿಸಿದೆ.

ಈ ಮಾದರಿಯ ವ್ಯಾಪಾರದಿಂದ ಪಿಲಾನಿಯು ಅಷ್ಟು ಇಷ್ಟು ದುಡ್ಡನ್ನು ಕೂಡಿಹಾಕಿರಬೇಕೆಂಬುದನ್ನು ಸುಲಭವಾಗಿ ಊಹಿಸಬಹುದು. ಹಾಗೆಯೇ ಇವನು ಸುಳ್ಳು ಲೆಕ್ಕದ ಮೂಲಕ ವರಮಾನ ತೆರಿಗೆಯಿಂದ ತಪ್ಪಿಸಿಕೊಂಡಿದ್ದನೆಂದೂ ಹೇಳಬಹುದು. ಇದಕ್ಕೆ ಸರಿಯಾಗಿ ಇವನು ಬ್ಯಾಂಕಿನಲ್ಲಿ ಕಳ್ಳ ಹಣವನ್ನು ಇಟ್ಟಿರಲಿಲ್ಲವೆಂದೂ ತಿಳಿದೇ ತಿಳಿಯುತ್ತದೆ. ಅಲ್ಲದೆ ಇವನಿಗೆ ದಿನ ದಿನವೂ ಏರಿ ತಗ್ಗುವ ಚಿನ್ನ ಬೆಳ್ಳಿಗಳನ್ನು ಗುಡ್ಡೆ ಹಾಕಿಕೊಳ್ಳುವ ಧೈರ್ಯವಿರಲಿಲ್ಲವೆಂದರೆ ಇವನ ಗಳಿಕೆ ಎಲ್ಲವೂ ಅವನು ಹಾಗೂ ಹೀಗೂ ನಂಬಿಕೊಂಡಿದ್ದ ಸರಕಾರದ ಹಣದ ರೂಪದಲ್ಲೇ ಇವನ ಬಳಿ ಇದ್ದಿತೆಂದು ಹೇಳಬೇಕಾಗಿಲ್ಲ. ಇನ್ನು ಸ್ಪಷ್ಟವಾಗಿ ಹೇಳುವುದಾದರೆ ಅವನು ಕೂಡಿಟ್ಟುಕೊಂಡಿದ್ದುದು ಸಾವಿರ ರೂಪಾಯಿ ಮೌಲ್ಯದ ಇಪ್ಪತ್ತೈದು ನೋಟುಗಳನ್ನು.

ಇದನ್ನು ಓದಿದ್ದೀರಾ?: ಬಾ.ಹ. ರಮಾಕುಮಾರಿ ಅವರ ಕತೆ | ನಿಯೋಗ

ಹೀಗಿದ್ದು ಜನವರಿ ಹನ್ನೆರಡನೆಯ ತಾರೀಕಿನ ದಿನದ ಬೆಳಗ್ಗೆ ಪಿಲಾನಿಯು ಮೆಲ್ಲಗೆ ಗುಜರಾತಿ ಪತ್ರಿಕೆಯನ್ನು ತೆಗೆದಾಗ ‘Demonetization’ ಶಾಸನದ ಬರಸಿಡಿಲು ಕಳ್ಳವ್ಯಾಪಾರಿ ಲಂಚಕೋರರೆಲ್ಲರಿಗೂ ಬಡಿದಂತೆ ಅವನಿಗೂ ಒಮ್ಮೆಲೇ ಬಡಿಯಿತು. ‘ಐನೂರು ರೂಪಾಯಿನಿಂದ ಮೇಲಿನ ಮೌಲ್ಯದ ನೋಟುಗಳೆಲ್ಲ ರದ್ದು’ ಎಂದಿದ್ದ ದೊಡ್ಡ ಅಕ್ಷರದ ತಲೆಬರಹವು ಕಣ್ಣಿಗೆ ಬಿದ್ದೊಡನೆ ಪಿಲಾನಿಗೆ ತಲೆ ತಿರುಗಿ ಕಣ್ಣು ಕತ್ತಲೆ ಇಟ್ಟಿತು. ಎದೆ ಧಸಕ್ಕೆಂದಿತು. ಉಸಿರು ಮೇಲೆ ಬಂದಿತು. ಕೈ ನಡುಗಿ ಪತ್ರಿಕೆಯು ಬಿದ್ದುಹೋಯಿತು. ಹಣೆಯ ಮೇಲೆ ಬೆವರು ಹನಿಗಟ್ಟಿತು. ‘ಅಯ್ಯೋ ಕೆಟ್ಟೆ! ಕೆಟ್ಟೆ!’ ಅಂದುಕೊಂಡ ಬಡ ಪಿಲಾನಿ. ತಲೆಯನ್ನು ನಡುಗುವ ಎರಡು ಕೈಗಳಿಂದಲೂ ಚಚ್ಚಿಕೊಂಡ. ‘ಮರುಗಿದನು ಕಲ್ಮರಂ ಕರಗುವಂತೆ.’ ಮತ್ತೆ ಪತ್ರಿಕೆಯನ್ನು ತೆಗೆದುಕೊಂಡು ಬುದ್ಧಿಯನ್ನು ಸ್ತಿಮಿತಕ್ಕೆ ತಂದುಕೊಂಡು ಓದುವುದಕ್ಕೆ ಕೊಂಚ ಕಾಲವೇ ಹಿಡಿಯಿತು. ಆದರೆ ವಿಷಯದ ವಿವರಗಳನ್ನು ಪೂರ್ತಿಯಾಗಿ ಓದಿದಾಗ ಅವನ ಉಸಿರು ಕಟ್ಟಿದ್ದುದು ಸ್ವಲ್ಪ ಬಿಟ್ಟಿತು. ಹುಂ, ಹಣೆಯಬರಹ ತೀರ ಅಷ್ಟು ಕೆಟ್ಟುಹೋಗಿರಲಿಲ್ಲ. ನೋಟುಗಳನ್ನು ಬದಲಾಯಿಸಲು ಕೊಂಚ ಕಾಲ ಕೊಟ್ಟಿದ್ದರು. ಆದರೆ… ಆದರೆ ಈ ಬದಲಾವಣೆಯಾಗಬೇಕಾದರೆ ಸಂಪಾದನೆಗೆ ಸಕಾರಣ ಕೊಡಬೇಕು! ಓ, ಇದಕ್ಕೆ ಏನು ಗತಿ? ತಾನು ಏನನ್ನು ತಾನೇ ಹೇಳಬಲ್ಲ? ಇನ್ನು ತೆರಿಗೆ ವಿಚಾರ ಬೇರೆ- ಶಿವ! ಶಿವ! ಇವಕ್ಕೆಲ್ಲಾ ಏನು ಉಪಾಯ? ಕಡೆಗೂ ದುಡ್ಡು ಹೋದಂತೆಯೋ? ಇಲ್ಲ, ಇದನ್ನು ಉಳಿಸಿಕೊಳ್ಳಲು ಹೋಗಿ ಬಂದಿಖಾನೆಗೆ ಹೋಗುವುದೋ? ಈ ಕಷ್ಟದಿಂದ ಪಾರಾಗಿ ಹಣವನ್ನು ಉಳಿಸಿಕೊಳ್ಳುವುದು ಹೇಗೆ? ಹೇಗೆ ನಿಜವಾಗಿ?

ಪಿಲಾನಿಯು ತಲೆ ಸಿಡಿಯುವಷ್ಟು ಯೋಚಿಸಿದ. ಪ್ರಯೋಜನವಾಗಲಿಲ್ಲ. ಆ ದಿನವಂತೂ ರಿಸರ್ವ್ ಬ್ಯಾಂಕಿಗೆ ರಜವಾಗಿ ಕಾರ್ಯದ ಆತುರವಿರಲಿಲ್ಲ. ಪಿಲಾನಿಯು ಅಂಗಡಿಯನ್ನು ಮುಚ್ಚಿ ಹಾಸಿಗೆಯ ಮೇಲೆ ಮಲಗಿಕೊಂಡು ಬೆಂಕಿಯಲ್ಲಿ ಬಿದ್ದ ಹುಳುವಿನಂತೆ ಒದ್ದಾಡಿದ. ಊಟವು ಒಂದು ತುತ್ತೂ ಒಳಹೋಗಲಿಲ್ಲ. ಮಧ್ಯಾಹ್ನ ರಾತ್ರಿಯೆಲ್ಲ ಜ್ವರ ಬಂದವನಂತೆ ನರಳಿದ. ಪಿಲಾನಿಯ ಹೆಂಡತಿ ಶಾಂತಿಬಾಯಿ ಇನ್ನಿಲ್ಲದ ಹಾಗೆ ಕಾರಣವನ್ನು ಬೇಡಿದಳು. ಆದರೆ ಪಿಲಾನಿಯು ಮಾತ್ರ ಏನನ್ನೂ ಹೇಳಲಿಲ್ಲ. ನರಳುವುದನ್ನು ಬಿಟ್ಟು ಸುಮ್ಮನಾಗಲೂ ಇಲ್ಲ. ಮರುದಿನವಂತೂ ಅವನ ಪಾಡು ಹೇಳುವಂತಿರಲಿಲ್ಲ. ಆ ದಿನ ದುಡ್ಡು ಸಿಕ್ಕುವ ಸಂಭವವುಂಟು. ಆದರೆ ಇವನು ಅದನ್ನು ಉಪಯೋಗಿಸಿಕೊಳ್ಳುವಂತಿರಲಿಲ್ಲ. ಸುಮ್ಮನೆ ದಿಕ್ಕುತೋಚದೆ ಮಿಲಿಮಿಲಿಗುಟ್ಟಿದ. ಆ ದಿನವೂ ಉಪವಾಸ. ನಿದ್ದೆಯಿಲ್ಲದೆ ಕಣ್ಣುಗಳು ಗುಳಿಗಿಳಿದಿದ್ದವು. ಪಿಲಾನಿಯು ಈ ಪರಿಸ್ಥಿತಿಯಲ್ಲಿದ್ದುದನ್ನು ಶಾಂತಾಬಾಯಿಯು ಇಲ್ಲಿಯವರೆಗೂ ಎಂದೂ ಕಂಡಿರಲಿಲ್ಲ. ಅವಳಿಗೆ ಗಾಬರಿಯಾಯಿತು. ಮರುದಿನ ರಾತ್ರಿಯ ಹೊತ್ತಿಗೆ ಅವಳು ನಿರ್ಧರಿಸಿ, ‘ನಿಮಗೆ ಏನೋ ದೊಡ್ಡ ಜಡ್ಡು ಹಿಡಿದಿದೆ. ವೈದ್ಯರನ್ನು ಬರಮಾಡುತ್ತೇನೆ’ ಎಂದು ಗಂಡನಿಗೆ ತಿಳಿಸಿದಳು. ಅವನು ‘ಬೇಡ’ ಎಂದ. ಅವಳು ಪಟ್ಟನ್ನು ಬಿಡಲಿಲ್ಲ. ಅವನು ವಿಷಯವನ್ನು ಬಿಡಿಸಲಿಲ್ಲ. ಕೊನೆಗೆ ಅವಳನ್ನು ತಡೆಯುವ ದಾರಿಯನ್ನು ಕಾಣದೆ ಪಿಲಾನಿಯು ‘ನನ್ನ ರೋಗಕ್ಕೆ ವೈದ್ಯರ ಹತ್ತಿರ ಮದ್ದಿಲ್ಲ’ ಎಂದು ಕ್ಷೀಣ ಸ್ವರದಿಂದ ಹೇಳಿದ. ಅವಳು ಸಿಟ್ಟುಗೊಂಡು ‘ರೋಗವನ್ನು ವೈದ್ಯರಲ್ಲದೆ ಇನ್ನೇನು ಲಾಯರು ವಾಸಿಮಾಡುತ್ತಾರೆಯೇ?’ ಎಂದು ಕೇಳಿದಳು. ಪಿಲಾನಿಯು ‘ಆ ಏನೆಂದೆ? ಲಾಯರೆ?’ ಅಂದ. ಅವನ ಮನಸ್ಸಿನ ಕಾರ್ಮುಗಿಲಿನಲ್ಲಿ ಮಿಂಚೊಂದು ಹೊಳೆಯಿತು. ಹುಂ, ತನ್ನ ವ್ಯಾಪಾರದ ಬುದ್ದಿಯು ನಿಸ್ಸಹಾಯವಾದ ಕಡೆ ಲಾಯರು ಕೊಂಚ ನೆರವಾಗಬಹುದೇನೊ. ನಿಜ, ಇದು ಪರೀಕ್ಷಿಸತಕ್ಕದ್ದೆ. ಹೀಗೆ ಹೊಳೆದ ಮೇಲೆ ಪಿಲಾನಿಯು ಕೊಂಚ ಸಮಾಧಾನ ತಂದುಕೊಂಡು, ಶಾಂತಾಬಾಯಿಗೆ ‘ನೀನು ಹೇಳಿದುದು ಒಳ್ಳೆಯದಾಯಿತು. ನಾಳೆ ಲಾಯರನ್ನು ನೋಡುತ್ತೇನೆ’ ಅಂದ. ಶಾಂತಾಬಾಯಿ ‘ನಿಮಗೇನು ಹುಚ್ಚು ಹಿಡಿದಿರಬೇಕು. ಲಾಯರು ಏನನ್ನು ಮಾಡಬಲ್ಲರು? ಅವರ ಬಳಿ ಜ್ವರದ ಗುಳಿಗೆ ಇರುತ್ತದೆಯೇ?’ ಅಂದಳು. ಪಿಲಾನಿಯು ‘ಹುಂ. ನನ್ನ ಜ್ವರಕ್ಕೆ ಮಾತ್ರೆ ಸಿಕ್ಕರೆ ಅವರಲ್ಲಿಯೆ’ ಅಂದ. ‘ಹಾಗಂದರೆ?’ ಎಂದು ಶಾಂತಾಬಾಯಿ ಬಲವಾಗಿ ಗಂಟುಬಿದ್ದಳು. ಪಿಲಾನಿಯು ಒಂದೇ ಮಾತಿನಲ್ಲಿ ‘ಲೇ, ಹುಚ್ಚಿ, ಈಗ ನಾನು ದಿವಾಳಿ ಆಗುವ ಗತಿಗೆ ಬಂದುಬಿಟ್ಟಿದ್ದೇನೆ- ಈ ಹೊಸ ಹಣದ ಶಾಸನದಿಂದ’ ಅಂದ. ಶಾಂತಾಬಾಯಿ ‘ಹಾಗೇ?’ ಅಂದು ಅವನ ಗುಟ್ಟನ್ನೆಲ್ಲ ಮೆಲ್ಲಗೆ ಹೊರಗೆಳೆದಳು. ಆಗ ಇಬ್ಬರೂ ಸೇರಿ ವಿಷಯವನ್ನು ಕಡೆದರು. ಹೇಗೆ ಹೇಗೆ ಎಷ್ಟು ಎಷ್ಟು ಕಡೆದರೂ ನಿರಾಶೆಯ ಹಾಲಾಹಲವೇ ಹುಟ್ಟುತ್ತಿತ್ತು. ಆ ದಿನ ಗಂಡನೊಂದಿಗೆ ಹೆಂಡತಿಗೂ ನಿದ್ರಾಭಂಗವಾಯಿತು. ಒಟ್ಟಿನಲ್ಲಿ ಲಾಯರ ಬಳಿಗೆ ಹೋಗುವುದೇನೋ ನಿರ್ಧಾರವಾಗಿದ್ದಂತಿದ್ದಿತು. ಈ ಬಗ್ಗೆ ಪಿಲಾನಿಯ ಪೇಚಾಟವೆಂದರೆ ಲಾಯರು ಬಹಳ ದುಡ್ಡನ್ನು ಎಳೆದುಬಿಡುವರೆಂಬುದು. ಆದರೆ ಅದಕ್ಕೆ ಉಪಾಯವಿಲ್ಲವೆಂದು ಶಾಂತಾಬಾಯಿಯ ವಾದ. ಅಂತೂ ಕಡೆಗೆ ಪಿಲಾನಿಯು ತಮ್ಮ ಊರಿನವರೇ ಆದ ಶ್ರೀ ‘ಇಚ್ಛಾಪೂರಯ’ ಅವರಲ್ಲಿ ಹೋದರೆ ಆದಷ್ಟು ಕಡಿಮೆಯ ಖರ್ಚಿನಲ್ಲಿ ಕೆಲಸವು ಸಾಗಬಹುದೆಂದು ಸಮಾಧಾನ ತಂದುಕೊಂಡು ಬೆಳಗಾಗುವುದನ್ನೇ ಕಾಯುತ್ತಿದ್ದ.

ಇದನ್ನು ಓದಿದ್ದೀರಾ?: ಬರಗೂರು ರಾಮಚಂದ್ರಪ್ಪ ಅವರ ಕತೆ | ಕ್ಷಾಮ

ಪಿಲಾನಿಯು ಇಚ್ಛಾಪೂರಯರನ್ನು ಕಂಡಾಗ ಆ ದಪ್ಪ ವಕೀಲರು ತಮ್ಮ ವಿಶಾಲವಾದ ಕೋಣೆಯಲ್ಲಿ ಮೇಜಿನ ಮೇಲೆ ದಪ್ಪ ದಪ್ಪ ಪುಸ್ತಕಗಳನ್ನು ಮುಂದೆ ಬಿಚ್ಚಿಕೊಂಡು, ದಪ್ಪ ಕನ್ನಡಕವನ್ನು ಹಾಕಿಕೊಂಡು ಓದಿನಲ್ಲಿ ಮಗ್ನರಾಗಿದ್ದರು. ಹಿಂದೆಯೇ ಇಬ್ಬರಿಗೂ ಪರಿಚಯವಿದ್ದುದರಿಂದ, ವಕೀಲರು ಪಿಲಾನಿಯನ್ನು ಗಮನಕ್ಕೆ ತಂದುಕೊಂಡು ಕೂಡಲು ಹೇಳಿದರು. ಅವನ ಕುಶಲಪ್ರಶ್ನೆಗಳಾದ ತರುವಾಯ ಪಿಲಾನಿಯು ‘ಎಲ್ಲವೂ ತಮ್ಮ ದಯ’ ಎಂದು ಹೇಳಿದ ಮೇಲೆ ವಕೀಲರು ತುಟಿಯನ್ನು ಚೊಕ್ಕಟ ಮಾಡಿ ನಗುತ್ತ ಪಿಲಾನಿಯು ಬಂದ ಕಾರಣವನ್ನು ಊಹಿಸಿದಂತೆ ‘ಹುಂ, ಏನು ತಾವು ಇಲ್ಲಿಗೆ ಬಂದಿದ್ದು?’ ಎಂದು ಕೇಳಿದರು.

‘ಕೊಂಚ ಕಷ್ಟಕ್ಕೆ ಸಿಕ್ಕಿದ್ದೇನೆ.’

‘ಓ, ಏನು ಈ ಹಣದ ಶಾಸನದ ಬಗ್ಗೆಯೋ ಹೇಗೆ?’ ವಕೀಲರು ಸ್ಪಷ್ಟವಾಗಿಯೇ ನಕ್ಕರು.

‘ತಮಗೆ ಹೇಗೆ ತಿಳಿಯಿತು?’

‘ಅಹಹ! ಹೇಗೆ? ಮೋಡ ಕಟ್ಟಿರುವಾಗ ಮಳೆ ಬರಬಹುದಲ್ಲವೆ?’

‘ತಾವು ಸರಿಯಾಗಿ ಊಹಿಸಿದಿರಿ.’

‘ಹನ್ನೆರಡನೆಯ ತಾರೀಖಿನಿಂದ ಇದು ಆರನೇ ಕೇಸು ನನಗೆ. ತಿಳಿಯಿತೆ? ಎಲ್ಲವೂ ಇದೇ ಸಂದರ್ಭದ್ದೇ. ನಾನು ಪುಸ್ತಕವನ್ನೆಲ್ಲ ತಿರುವಿಹಾಕಿ ಏನಾದರೂ ಸರಿಯಾದ ಉಪಾಯ ಕಂಡುಹಿಡಿಯಬೇಕು ಅಂತ ನೋಡುತ್ತಿದ್ದೇನೆ. ಒಬ್ಬರ ಪರವಾಗಿ ಸರಕಾರದ ಮೇಲೆ ಕೇಸನ್ನು ಹೂಡಿಸಿದ್ದೇನೆ. ಅದಕ್ಕಿಂತಲೂ ಸುಲಭವಾದ ದಾರಿ ಬೇರೆ ಒಂದು ಇದ್ದ ಹಾಗೆ ಕಾಣುತ್ತದೆ.’

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

‘ತಾವು ಅಷ್ಟು ಉಪಕಾರ ಮಾಡಿದರೆ!’

‘ಇದರಲ್ಲೆಲ್ಲ ಉಪಕಾರ ಏನು? ನಮ್ಮ ಸಲಹೆಯನ್ನೇನು ಬಿಟ್ಟಿ ತೆಗೆದುಕೊಳ್ಳುತ್ತೀರ?’

‘ಹಾಗಲ್ಲ, ನಾನೇನೋ ಬಡವನೆ.’

‘ಹುಂ. ಯಾರಲ್ಲ- ಈಗ? ಯುದ್ಧಕಾಲದಲ್ಲಿ ಪದಾರ್ಥಗಳ ಬೆಲೆ ಆಕಾಶಕ್ಕೇರಿದಾಗ?’

‘ನಿಜ.’

‘ಸರಿ, ತಮ್ಮದೆಷ್ಟು ದುಡ್ಡು ಸಿಕ್ಕಿಹಾಕಿಕೊಂಡಿದೆ?’

‘ಇಪ್ಪತ್ತೈದು ನೋಟುಗಳು.’

‘ಏನು ಐನೂರರದ್ದೋ?’

‘ಇಲ್ಲ, ಸಾವಿರದ್ದು.’

‘ಹುಂ!’

ವಕೀಲರು ಯೋಚಿಸಿದರು. ಪಿಲಾನಿಯೂ ಒದ್ದಾಡುತ್ತಿದ್ದ. ಎರಡು ನಿಮಿಷಗಳ ತರುವಾಯ ವಕೀಲರು ಪಿಲಾನಿಯನ್ನು ನೋಡಿ, ‘ನನ್ನ ಫೀ ಶೇಕಡ ಹತ್ತು’ ಅಂದರು.

ಪಿಲಾನಿಯ ಎದೆ ಜಗ್ಗೆಂದಿತು. ‘ಅಬ್ಬಬ್ಬ ಎರಡು ಸಾವಿರದ ಐನೂರು ರೂಪಾಯಿ! ಅಯ್ಯೋ ಈ ಪಕ್ಷಕ್ಕೆ ಹಾಳು ತೆರಿಗೆಯನ್ನೇ ಕೊಡಬಹುದಾಗಿದ್ದಿತೋ ಏನೋ. ಇವರು ತನ್ನ ಊರಿನವರು ಎಂದು ಬಂದರೆ ಇದೇನು ಹೀಗೆ ಸುಲಿಯುತ್ತಾರೆ? ಬೇರೆ ದಾರಿಯೇ ಇಲ್ಲವೆ?’

ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಈ ಬಾರಿ ಪಿಲಾನಿಯು ಚಿಂತಾಸಕ್ತನಾದ, ತನ್ನ ಸರದಿಯಲ್ಲಿ. ಇದನ್ನು ಕಂಡು ವಕೀಲರು ಮತ್ತೆ ಪುಸ್ತಕಗಳ ಕಡೆಗೆ ತಿರುಗಿದರು. ಪಿಲಾನಿಯು ಮನಸ್ಸಿನಲ್ಲೇ ಕಸರತ್ತು ಮಾಡಿ ದಣಿದು, ವಕೀಲರ ಕಡೆಗೆ ದೈನ್ಯದೃಷ್ಟಿಯಿಂದ ನೋಡಿ ಫಲ ಪಡೆಯದೆ, ‘ಇದು ನಾನು ಬಹು ಕಷ್ಟಪಟ್ಟು ಸಂಪಾದಿಸಿದ ಆಸ್ತಿ’ ಅಂದ.

‘ಯಾರು ಇಲ್ಲ ಅಂದರು? ಸರಿ.’

‘ಅನ್ಯಾಯದ್ದಲ್ಲ.’

‘ನನಗೆ ಗೊತ್ತಿಲ್ಲವೇ? ನೀವು ಹೇಳಬೇಕೆ?’

‘ಏನೋ ಕೂಡಿಡುವ ರೀತಿಯಲ್ಲಿ ಮೋಸಹೊಂದಿದೆ ಅಷ್ಟೆ.

‘ಹುಂ. ಪಾಪ, ಹಾಗೂ ಆಗುತ್ತದೆ.’

‘ತಾವು ಅಲ್ಪ ಸ್ವಲ್ಪ ರಿಯಾಯಿತಿ…’

‘ಕ್ಷಮಿಸಬೇಕು. ಅದು ಮಾತ್ರ ಆಗುವುದಿಲ್ಲ. ಕಟ್ಟಳೆಗೆ ವಿರೋಧವಾಗಿ ನಡೆಯುವುದಿಲ್ಲ. ಅದರಲ್ಲೂ ನೀವು ನಮ್ಮ ಊರಿನವರು ಅಂತ ನೇರವಾಗಿ ಕನಿಷ್ಠವಾದದ್ದನ್ನೇ ಹೇಳಿಬಿಟ್ಟೆ.’

‘ಯೋಗ್ಯವಾದ ಕಡೆ ಕೊಂಚ…’

‘ನಿಜವಾಗಿ ಹೇಳುತ್ತೇನೆ. ಹೆಚ್ಚು ಮಾತಾಡಿ ಫಲವಿಲ್ಲ.’

ಮತ್ತೆ ಒಂದೆರಡು ನಿಮಿಷ ನಿಶ್ಯಬ್ದ. ಪಿಲಾನಿಯು ಮತ್ತೆ ಮನಸ್ಸಿನಲ್ಲಿ ಲಾಗ ಹಾಕಿ ನೋಡಿದ. ವಕೀಲರು ‘ಜುಂ, ಜಪ್ಪಯ್ಯ’ ಅನ್ನುವ ಹಾಗಿರಲಿಲ್ಲ. ಇವರು ತನ್ನ ಗುಟ್ಟನ್ನು ತಿಳಿದಿರುವರೆಂದೂ, ಆದುದರಿಂದ ಕಪಿಮುಷ್ಟಿಯನ್ನು ಬಿಡುವುದಿಲ್ಲವೆಂದೂ, ಎಲ್ಲ ಹಾಳು ವಕೀಲರೂ ಇದೇ ಗೋತ್ರದವರೆಂದೂ ಯೋಚಿಸಿ, ಪಿಲಾನಿಯು ಕಲ್ಲೆದೆ ಮಾಡಿಕೊಂಡು ಕಣ್ಣನ್ನು ಮುಚ್ಚಿಕೊಂಡು ‘ಆಗಲಿ’ ಅಂದುಬಿಟ್ಟ. ವಕೀಲರು ಹಣವನ್ನು ಕೇಳಿದರು. ಪಿಲಾನಿಯು ಬೆದರಿ, ‘ಏನು ಮುಂಗಡವಾಗಿ?’ ಎಂದು ಕೇಳಿದ.

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

‘ಹುಂ. ಅದೇ ನಮ್ಮ ಕಟ್ಟಳೆ.’

‘ನನ್ನಲ್ಲಿ ಆ ನೋಟುಗಳಲ್ಲದೆ ಮೂರು ಕಾಸೂ ಬೇರೆ ಇಲ್ಲ.’

‘ಹುಂ?’

‘ಖಂಡಿತವಾಗಿ. ಹತ್ತು ಇಪ್ಪತ್ತು ರೂಪಾಯಿ ಚಿಲ್ಲರೆ ಇದ್ದರೆ ಏನು ಆದ ಹಾಗಾಯಿತು?’

ವಕೀಲರು ಬೆರಳುಗಳಿಂದ ಪುಸ್ತಕದ ಮೇಲೆ ತಬಲ ಬಡಿಯುತ್ತಾ ಯೋಚಿಸಿದರು. ಅವರು ಇದು ‘ಆರನೆಯ ಕೇಸು’ ಎಂದು ಹೇಳಿದ್ದರೂ ಅವರಿಗೆ ಬಂದಿದ್ದುದು ಇದೇ ಮೊದಲನೆಯದು. ಕಕ್ಷಿಯಲ್ಲಿ ಭರವಸೆಯನ್ನು ಹುಟ್ಟಿಸುವುದಕ್ಕಾಗಿ ಹಾಗೆ ಅಂದಿದ್ದರು. ವಕೀಲರಲ್ಲವೆ? ಹೀಗೆ ಸಿಕ್ಕಿದ ಕಕ್ಷಿಯನ್ನು ಬಿಟ್ಟುಕೊಡುವುದಕ್ಕೆ ಅವರಿಗೆ ಮನಸ್ಸು ಬಾರದು. ಅದರಲ್ಲೂ ಪುಷ್ಟಿಯಾದ ‘ಫೀ’ಗೇ ಒಪ್ಪಿಸಿದ್ದರು. ಇಷ್ಟನ್ನೂ ಈಗಲೇ ಈತನು ತೆರುವ ಸ್ಥಿತಿಯಲ್ಲಿರಲಿಲ್ಲವೆಂದು ಅವರಿಗೆ ತಿಳಿದಿದ್ದಿತು. ಆದುದರಿಂದ ಅವರು,

‘ಹೋಗಲಿ, ಇದರಲ್ಲಿ ಅರ್ಧವನ್ನಾದರೂ…’ ಎಂದು ಮೊದಲು ಮಾಡುವಾಗಲೇ ಪಿಲಾನಿಯು ವಿಷಯವು ತನಗೆ ಅನುಕೂಲವಾಗುತ್ತಿದ್ದ ಸುಳಿವನ್ನು ತಿಳಿದು ‘ನನ್ನಲ್ಲಿ ಏನೇನೂ ಇಲ್ಲ. ದೇವರಾಣೆಗೆ ಕೈಗೆ ಹಣ ಬಂದೊಡನೆ ತಮಗೆ ಕೊಟ್ಟುಬಿಡುತ್ತೇನೆ, ಖಂಡಿತವಾಗಿ’ ಅಂದ.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ವಕೀಲರು ಬಾಯಿತಪ್ಪಿ ಏಕೊ ‘ಹುಂ’ ಅಂದುಬಿಟ್ಟರು. ಅಂದ ಮೇಲೆ ಅವರಿಗೇ ಆಶ್ಚರ್ಯವಾಯಿತು. ಮತ್ತೆ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳಲಾರದೆ ಮುಂದಿನ ಮಾತುಕತೆ ನಡೆಸಿದರು.

‘ಹುಂ, ನಿಮಗೆ ಫರಾಸು ರೋಡಿನಲ್ಲಿ ಯಾರದ್ದಾದರೂ ಪರಿಚಯ ಉಂಟೆ?’ ವಕೀಲರು ನಗುತ್ತಾ ಕೇಳಿದರು.

ಪಿಲಾನಿಗೆ ಅತ್ಯಾಶ್ಚರ್ಯವಾಯಿತು. ಅವನಿಗೆ ‘ಫರಾಸು ರೋಡು’ ಮುಂಬಯಿಯಲ್ಲಿ ಸೂಳೆಯರಿಗೆ ಪ್ರಸಿದ್ದಿ ಎನ್ನುವುದು ಗೊತ್ತಿದ್ದು, ವಕೀಲರ ಪ್ರಶ್ನೆ ಅರ್ಥವಾಯಿತು. ಆದರೆ ಅವನು ಈ ಗಡಿಬಿಡಿಗೆ ದೂರವಾಗಿ ಬಾಳಿದ ಪ್ರಾಣಿಯಾದುದರಿಂದ ಕೊಂಚ ಗಾಬರಿಯಿಂದ,

‘ಏ, ಇದೇನು ವಿಚಾರ?’ ಎಂದು ಮಾರುತ್ತರ ಕೊಟ್ಟ.

‘ಅಲ್ಲ; ಕೇಳಿದೆ.’

‘ಅಲ್ಲಿಗೂ ನನಗೂ ಬಲು ದೂರ.’

‘ಬಲ್ಲೆ, ಆದರೆ ಈಗ ಹತ್ತಿರ ಹೋಗಬೇಕಾಗಬಹುದು.’

‘ಅದೇನು ?’

‘ಅದು ನನ್ನ ಗುಟ್ಟು- ಇನ್ನೂ ಇರಲಿ. ಇನ್ನೇನು ನಾನೇ ದಾರಿ ತೋರಿಸಬೇಕಾದ ಸಂದರ್ಭ ಅನ್ನಿ.’

‘ಹುಂ.’

‘ಸರಿ, ಹನ್ನೊಂದು ಗಂಟೆಯ ಹೊತ್ತಿಗೆ ಲೋಕಲ್ ನಿಲ್ದಾಣದಲ್ಲಿ ನನಗೆ ಭೇಟಿ ಆಗಬೇಕು. ಹನ್ನೊಂದು ಇಪ್ಪತ್ತಮೂರಕ್ಕೆ ಒಂದು “ಫಾಸ್ಟು” ಇದೆ. ನಿಮ್ಮ ನೋಟನ್ನೆಲ್ಲ ತೆಗೆದುಕೊಂಡು ಬನ್ನಿ,’

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

‘ಆಗಲಿ.’ ಪಿಲಾನಿಯು ಹೊರಡಲನುವಾದ.

‘ಹಾಗೇ ಎರಡು ಸೆಕೆಂಡ್ ಕ್ಲಾಸಿನ ಟಿಕೇಟನ್ನು ತೆಗೆದುಕೊಂಡಿರಿ. ಸ್ವಲ್ಪ ದುಡ್ಡೂ ಕೈಯಲ್ಲಿರಲಿ’ ಎಂದು ವಕೀಲರು ಕಡೆಯ ಗೋಲಿ ಬಾರಿಸಿದರು. ಪಿಲಾನಿಯು ಪೆಚ್ಚಾಗಿ ಹೊರಗೆ ಕಾಲಿಟ್ಟನು.

ರೈಲುಗಾಡಿಯಲ್ಲಿ ಈ ಬಗ್ಗೆ ಮಾತುಕತೆಗಳಾಗಲಿಲ್ಲ, ಪಾಶ್ಚಾತ್ಯ ಉಡುಪಿನ ವಕೀಲರು ಸೆಕೆಂಡು ಕ್ಲಾಸಿನ ಮೆತ್ತೆಯ ಮೇಲೆ ಆರಾಮವಾಗಿ ಕುಳಿತು ಎದುರಿನ ಬೆಂಚಿನ ಮೇಲೆ ಎರಡು ಕಾಲನ್ನೂ ಎಸೆದು, ತಮ್ಮ ‘ಪೈಪ’ನ್ನು ಹಚ್ಚಿಸಿ ‘ಬುಸು ಬುಸು’ ಸೇದುತ್ತಿದ್ದರು. ಪಿಲಾನಿಗೆ ಹೆಚ್ಚು ವೆಚ್ಚದ ಹೊಗೆಯಸೊಪ್ಪಿನ ಅಭ್ಯಾಸವಿರಲಿಲ್ಲ, ಆಗಾಗ್ಗೆ ಮಾತನಾಡಲು ಮೊದಲು ಮಾಡಿ ಪ್ರತ್ಯುತ್ತರಗಳು ಸರಿಯಾಗಿ ಬರದೆ ಇದ್ದುದರಿಂದ ಆಯಾಸಹೊಂದಿ ತಾನು ತಂದಿದ್ದ ಪತ್ರಿಕೆಯ ಕಡೆ ನೋಡುವಂತೆ ನಟಿಸುತ್ತ ಕಾಲಹಾಕುತ್ತಿದ್ದ. ರೈಲುಗಾಡಿಯನ್ನು ಬಿಟ್ಟು ಹೊರಗೆ ಬಂದೊಡನೆ ವಕೀಲರು ‘ಟ್ಯಾಕ್ಸಿ’ಯನ್ನು ಗೊತ್ತುಮಾಡಬೇಕೆಂದು ಪಿಲಾನಿಗೆ ಸೂಚನೆ ಇತ್ತರು. ಕಾಸುಕಾಸಿಗೆ ಗಂಟುಹಾಕುತ್ತ ‘ಟ್ರಾಂ’ಗೂ ದುಡ್ಡನ್ನು ಕೊಡದೆ ಕಾಲನ್ನು ಸವೆಸುತ್ತಿದ್ದ ಮಾರವಾಡಿಯು ತನ್ನಲ್ಲಿಯೇ ಗೊಣಗಿಕೊಳ್ಳುತ್ತ ವಕೀಲರ ಅಪ್ಪಣೆಯನ್ನು ಪಾಲಿಸಿದ. ಒಳಗೆ ಕುಳಿತಾಗ ಡ್ರೈವರನು ‘ಎಲ್ಲಿಗೆ?’ ಎಂದು ಕೇಳಿದ. ವಕೀಲರು ಪಿಲಾನಿಯನ್ನು ನೋಡಿ ‘ಹೇಳಿ’ ಅಂದರು. ಬಡ ಪಿಲಾನಿಯು ‘…. ರೋಡಿಗೆ!’ ಅಂದ.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

…ರೋಡಿಗೆ ಬಂದ ಮೇಲೆ ಡ್ರೈವರನು ಹಿಂತಿರುಗಿ ನೋಡಿದನು. ವಕೀಲರು ‘ಇಲ್ಲೆ, ಇನ್ನೇನು ಸಿಕ್ಕಿತು… ನಿಲ್ಲಿಸು ಅನ್ನಿ’ ಎಂದು ಪಿಲಾನಿಯನ್ನು ತಿವಿದರು. ಪಿಲಾನಿಯು ‘ಸಾಕು ನಿಲ್ಲಿಸು’ ಅಂದ. ಡ್ರೈವರನು ಮುಗುಳುನಗೆ ನಗುತ್ತ ಬ್ರೇಕನ್ನು ಒತ್ತಿದನು. ಒಡನೆಯೇ ಮೋಟಾರು ದೊಡ್ಡ ಮಹಡಿಯ ಮನೆಯೊಂದರ ಮುಂದೆ ನಿಂತಿತು. ಪ್ರಯಾಣಿಕರು ಇಳಿದರು. ಮೋಟಾರಿನ ಮೀಟರು ಮೂರೇ ರೂಪಾಯಿಯನ್ನು ತೋರಿಸುತ್ತಿದ್ದರೂ ಡ್ರೈವರನು ಅದಕ್ಕೆ ತೃಪ್ತಿಪಡದೆ ‘ಬಕ್ಷೀಸು’ ಕೇಳಿದನು. ಪಿಲಾನಿಯು ಹೆಚ್ಚೊಂದು ಕಾಸಿಗೂ ಒಪ್ಪಲಿಲ್ಲ. ಡ್ರೈವರನು ಹಲ್ಲು ಕಿರಿಯುವುದನ್ನು ಬಿಡಲಿಲ್ಲ. ವಕೀಲರು ಮಧ್ಯಸ್ತಿಕೆ ಮಾಡಿ ನಾಲ್ಕು ರೂಪಾಯಿಗೆ ತೀರ್ಮಾನ ಮಾಡಿದರು. ಪಿಲಾನಿಯು ಸಂಕಟಪಡುತ್ತ ಪೀಕಿದನು.

ಮನೆಯ ಬಾಗಿಲನ್ನು ವಕೀಲರು ತಮ್ಮ ಕೋಲಿನಿಂದ ತಟ್ಟಿದ ಮೇಲೆ ಬಾಗಿಲು ತೆರೆಯಿತು. ವಕೀಲರು ಸಿಳ್ಳು ಹೊಡೆಯುತ್ತ ಒಳಹೊಕ್ಕರು. ಅನುಯಾಯಿಯು ಹಿಂಬಾಲಿಸಿದನು. ಮಾಮೂಲಿನಂತೆ ಆಗಂತುಕರಿಗೆ ಸುಸಜ್ಜಿತವಾದ ಕೋಣೆಯು ತೋರಿಸಲ್ಪಟ್ಟು, ಅಲ್ಲಿ ಅವರು ಸುಖಾಸೀನರಾದೊಡನೆ ಮುದಿ ಹೆಂಗಸು ಒಬ್ಬಳು ಪ್ರವೇಶಿಸಿ ವಕೀಲರನ್ನು ಗುರುತಿಸಿ, ‘ವಕೀಲರು ದಯಮಾಡಿಸಿ ಬಹಳ ಕಾಲವಾಯಿತು’ ಅಂದಳು. ವಕೀಲರು ‘ಹುಂ ಹುಂ’ ಅಂದು ನಸುನಕ್ಕರು. ಅವಳು ಮತ್ತೆ ‘ಈಗಲೇ ಸಂಗೀತಕ್ಕೆ ಏರ್ಪಾಡಾಗುತ್ತದೆ; ತಮಗೆ…’ ಎನ್ನುವಲ್ಲೇ ವಕೀಲರು ನಡುವೆ ಬಾಯಿಹಾಕಿ,

‘ನಮಗೆ ಈಗಲೇ ಸಂಗೀತದ ಅಗತ್ಯವಿಲ್ಲ. ನಿಮ್ಮವರ ಪೈಕಿ ಚುರುಕಾದವಳೊಬ್ಬಳು ನಮ್ಮ ಜತೆ ಸ್ವಲ್ಪ ಹೊತ್ತು ಹೊರಕ್ಕೆ ಬರಬೇಕಾಗುತ್ತದೆ. ಸಾಧ್ಯವೆ?’ ಎಂದರು.

ಹೆಂಗಸು ಕೊಂಚ ಅನುಮಾನಿಸುತ್ತ ‘ಸಾಧ್ಯವಲ್ಲದೆ ಏನು? ಆದರೆ….’ ಎಂದಳು.

‘ನೀವು ಏನೂ ಯೋಚನೆಯನ್ನು ಮಾಡಬೇಡಿ. ಎರಡು ಮೂರು ಗಂಟೆಯೊಳಗಾಗಿ ಅವಳನ್ನು ವಾಪಸು ಕರೆತಂದು ಬಿಡುತ್ತೇವೆ’ ಅಂದು ವಕೀಲರು ಭರವಸೆಕೊಟ್ಟರು.

‘ಸರಿ, ಅದನ್ನು ತಾವು ಹೇಳಬೇಕೆ?’

ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’

ವಕೀಲರು ಹಳೆಯ ಗಿರಾಕಿಯಾದುದರಿಂದ ಹೆಂಗಸು ಒಪ್ಪದೆ ಇರುವುದಕ್ಕೆ ಕಾರಣವಿರಲಿಲ್ಲ. ಆದರೆ ಅವಳು ಈ ಸಂದರ್ಭವು ಏನೋ ವಿಶೇಷವಾದುದೆಂದು ಊಹಿಸಿ ತಕ್ಕಮಟ್ಟಿಗೆ ಸುಲಿಗೆ ಮಾಡುವ ಮನಸ್ಸಿನಿಂದ ‘ಸರಿಯಾದ ಚಾಲೂಕಾದ ಹುಡುಗಿ ಬೇಕಾದರೆ ಚಾರ್ಜು ಹೆಚ್ಚಾಗುತ್ತದೆ’ ಎಂದು ನಕ್ಕಳು.

‘ಅಂದರೆ ಎಷ್ಟು?’ ವಕೀಲರು ಪ್ರಶ್ನಿಸಿದರು.

‘ಮುನ್ನೂರು.’

ಪಿಲಾನಿಯ ಮೇಲೆ ಕಪ್ಪೆ ಬಿದ್ದಂತಾಯಿತು. ವಕೀಲರು ಮಾತ್ರ ‘ಆಗಬಹುದು ಅದಕ್ಕೇನು, ಈ ನಮ್ಮ ಸ್ನೇಹಿತರು ಕೊಡುತ್ತಾರೆ. ಬಹಳ ಶ್ರೀಮಂತರು’ ಎಂದು ಮುಗಿಸಿದರು. ಈಗಲಂತೂ ಪಿಲಾನಿಗೆ ಬರೆ ಎಳೆದಂತಾಯಿತು. ಆದರೆ ಬೇರೆ ಗತಿಯೇನು? ಯಾತನೆಯನ್ನು ಸುಮ್ಮನೆ ಸಹಿಸಿದನು.

ಹೆಂಗಸು ಪಿಲಾನಿಯನ್ನು ನೋಡಿ ನಮಿಸಿ, ಮಂದಹಾಸವನ್ನು ಬೀರಿ, ಆಳನ್ನು ಕರೆದು,

‘ಹೋಗು, ತಾಂಬೂಲ ತೆಗೆದುಕೊಂಡು ಬಾ’ ಎಂದು, ಅವನು ಹೋಗುತ್ತಲೆ, ‘ನಾನು ಈಗಲೇ ಹುಡುಗಿಯನ್ನು ಕಳುಹಿಸುತ್ತೇನೆ’ ಅನ್ನುತ್ತ ಹೊರಟುಹೋದಳು.

ತಾಂಬೂಲವು ಬಂದಿತು. ಜೊತೆಗೆ ಮದ್ಯದ ಸೀಸೆಗಳೂ ಬಟ್ಟಲುಗಳೂ ಇದ್ದುವು. ವಕೀಲರು ಸೀಸೆಯೊಂದರ ಬಿರಡೆ ತೆಗೆದು ಎರಡು ಬಟ್ಟಲುಗಳಿಗೆ ಮದ್ಯವನ್ನು ಧಾರಾಳವಾಗಿ ಬಗ್ಗಿಸಿ, ಪಿಲಾನಿಗೆ ಒಂದನ್ನು ಕೊಡಹೋದರು. ಈಗ ಮಾತ್ರ ಪಿಲಾನಿಯು ಲಾಯರ ಸಲಹೆಯಂತೆ ನಡೆದುಕೊಳ್ಳಲಿಲ್ಲ. ತನಗೆ ಅದು ಸೇರದೆಂದು ತಲೆಯಾಡಿಸಿದರು. ವಕೀಲರು ನಕ್ಕು, ‘ನೀವೇನೂ ಪ್ರಯೋಜನವಿಲ್ಲ!’ ಎಂದು ತಮ್ಮದನ್ನೂ ಪಿಲಾನಿಯ ಭಾಗವನ್ನೂ ತಾವೇ ಮುಗಿಸಿ, ಮತ್ತೆ ಮತ್ತೆ ಇನ್ನಷ್ಟನ್ನು ಬಗ್ಗಿಸಿ ಕುಡಿದರು. ಅವರ ಮುಖವು ಹೆಚ್ಚು ಹೆಚ್ಚು ಕೆಂಪಾಗುತ್ತ ಬಂತು.

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

ಸೀಸೆಯು ಬರಿದಾಗುವ ಹೊತ್ತಿಗೆ ಕೈಬಳೆಗಳ ಸದ್ದೂ, ಜರಿಸೀರೆಯ “ಸರಸರ”ವೂ ಕೇಳಿಬಂದುವು. ಪರಿಮಳದ ಸುವಾಸನೆಯು ಮುಂದು ಹಾಯಿತು. ಇನ್ನು ಅರೆ ನಿಮಿಷದಲ್ಲಿ ಕೊಠಡಿಯೊಳಕ್ಕೆ ಸುಂದರಿಯೊಬ್ಬಳು ನಸುನಗುತ್ತ ಕಾಲನ್ನಿಟ್ಟಳು. ಇವಳ ರೂಪು, ಠೀವಿ, ಬಿಂಕ, ಗೆಲುವು, ಉಡುಗೆ ತೊಡಿಗೆಗಳನ್ನು ನೋಡಿ ಹಳಗೈಯಾದ ವಕೀಲರೂ ಬೆರಗಾದರು. ಅವರ ಕಣ್ಣುಗಳು ಅರಳಿದುವು, ಹೊಳೆದವು. ಪಿಲಾನಿಗಂತೂ ಹೃದಯವು ಬಾಯಿಗೆ ಬಂದಂತಾಯಿತು. ಎದೆಯು ಡವಡವನೆ ಬಡಿದುಕೊಳ್ಳಲಾರಂಭಿಸಿತು. ಇನ್ನು ಹುಡುಗಿಯಂತೂ ಬಿನ್ನಾಣದಿಂದ ಮುಂದೆ ಸಾರಿ ಆಗಂತುಕರ ಮಧ್ಯೆ ಬಂದು ಕುಳಿತಾಗ, ಪಿಲಾನಿಗೆ ಜೀವವೇ ಹಾರಿ ಹೋದಂತಾಯಿತು. ಅವನು ತನಗೆ ತಿಳಿಯದಂತೆಯೇ ಕೊಂಚ ದೂರ ಸರಿದುಕೊಂಡನು. ಇದಕ್ಕೆ ಪ್ರತಿಯಾಗಿ ವಕೀಲರು ಹಿಗ್ಗುತ್ತ ಅವಳ ಹತ್ತಿರಕ್ಕೆ ಸರಿದುಕೊಂಡರು ಮತ್ತು ಮತ್ತೊಂದು ಸೀಸೆಯನ್ನು ಒಡೆದು ಮದ್ಯವನ್ನು ಬಗ್ಗಿಸಿದರು. ಈಗ ವಕೀಲರು ತನ್ನ ಕೆಲಸವನ್ನು ಮರೆತಂತೆಯೇ ಪಿಲಾನಿಗೆ ಭಾಸವಾಯಿತು. ಅವನು ಹೇಗೋ ಧೈರ್ಯಮಾಡಿ, ‘ವಕೀಲರೆ, ನಮ್ಮ ಕೆಲಸಕ್ಕೆ ಹೊತ್ತಾಗಲಿಲ್ಲವೆ?’ ಅಂದ. ವಕೀಲರು ‘ಹೌದು, ಆದರೆ ಟ್ಯಾಕ್ಸಿ ತರಬೇಕಲ್ಲ. ಇಲ್ಲಿ ಯಾರಿಗಾದರೂ ಹೇಳೋಣ. ಅಲ್ಲಿಯವರೆಗೆ….’ ಅನ್ನುವಾಗ ಈ ಸಂದರ್ಭದಿಂದ ಪಾರಾಗುವ ಬಗೆಯನ್ನೇ ಯೋಚಿಸುತ್ತಿದ್ದ ಪಿಲಾನಿಯು ‘ನಾನೇ ನೋಡಿಕೊಂಡು ಬರುತ್ತೇನೆ’ ಎನ್ನುತ್ತ ಮೇಲೆದ್ದನು. ಟ್ಯಾಕ್ಸಿಯ ಬಾಡಿಗೆಯನ್ನು ಕಡಿಮೆಮಾಡುವುದೂ ಇದಕ್ಕೆ ಒಂದು ಕಾರಣ. ವಕೀಲರು ‘ಆಗಬಹುದು ಹಾಗಾದರೆ’ ಎಂದು ಬಹಳ ಸಂತೋಷದಿಂದ ಹೇಳಿ, ‘ನೀವು ಬರುವ ಹೊತ್ತಿಗೆ ನಾವೂ ಸಿದ್ಧವಾಗಿರುತ್ತೇವೆ’ ಎಂದು ಹುಡುಗಿಯನ್ನು ನೋಡುತ್ತ ಮುಗಿಸಿದರು. ಸುಂದರಿಯನ್ನು ಸೆಳೆದು ಮುತ್ತಿಟ್ಟರು. ಅವಳು ಅವರ ಜೋಲು ಕೆನ್ನೆಗಳನ್ನು ಮೃದುವಾಗಿ ಚಿಗುಟಿದಳು.

ಪಿಲಾನಿಯು ವಾಪಸು ಬರುವ ಹೊತ್ತಿಗೆ ವಕೀಲರು ಹುಡುಗಿಯೊಂದಿಗೆ ಆಟಪಾಟಗಳನ್ನು ಮುಗಿಸಿದ್ದರು. ಮೂವರೂ ಟ್ಯಾಕ್ಸಿಯ ಹಿಂದಿನ ಆಸನದಲ್ಲಿ ಕುಳಿತಾಗ ವಕೀಲರು ಪಿಲಾನಿಯನ್ನು ಕುರಿತು ‘ರಿಸರ್ವ್ ಬ್ಯಾಂಕಿಗೆ ಅಂತ ಹೇಳಿ’ ಅಂದರು. ಪಿಲಾನಿಯು ಕೊಟ್ಟ ಅಪ್ಪಣೆಯಂತೆ ಮೋಟಾರು ಹೊರಟಿತು.

ಆ ದಿನ ರಿಸರ್ವ್ ಬ್ಯಾಂಕಿನ ಭವ್ಯ ಮಂದಿರದಲ್ಲಿ ಮತ್ತು ಸುತ್ತು ಮುತ್ತೂ ಗಲಾಟೆಯು ಹೇಳತೀರದು. ರಸ್ತೆಯ ಅಕ್ಕಪಕ್ಕಗಳಲ್ಲಿ ನೂರಾರು ಮೋಟಾರು ವಾಹನಗಳು ಸಾಲಾಗಿ ನಿಂತಿದ್ದುವು. ಜನರು ಸಾಲಾಗಿ ಒಳಗೆ ಎಲ್ಲಿಂದಲೋ ಮೊದಲಾಗಿ ಹೊರಗೆ ಬೀದಿಗೂ ಹರಿದು ಅಲ್ಲೂ ಸಾಲು ನಿಂತಿದ್ದರು. ಅಲ್ಲದೆ ಈ ಸಾಲಿಗೂ ಇನ್ನೂ ಜನರು ಬಂದು ಬಂದು ಭರ್ತಿಯಾಗುತ್ತಲೇ ಇದ್ದರು. ಎಷ್ಟೋ ಜನರು ಬೆಳಗಿನಜಾವ, ಮಧ್ಯರಾತ್ರಿಯಿಂದಲೂ ಮುಂದಿನ ಜಾಗಕ್ಕಾಗಿ ಕಾದಿದ್ದರು. ಇವರ ಪೈಕಿ ಎಷ್ಟೋ ಜನ ಭಯ್ಯಾಗಳು ದುಡ್ಡಿಲ್ಲದಿದ್ದರೂ ಹಿಂದಿನ ಸಂಜೆಯಿಂದ ಅಲ್ಲೆ ಮಲಗಿದ್ದು ಮುಂದಿನ ಜಾಗವನ್ನು ಗಳಿಸಿದ್ದರು. ಇವರ ಏಜೆಂಟು ಒಬ್ಬನು ಅಲ್ಲಲ್ಲಿ ಸುಳಿದಾಡಿ ಮುಂದಿನ ಸ್ಥಳ ಸಂಪಾದಿಸಲು ಆತುರರಾಗಿರುವವರಿಂದ ಹತ್ತು ಹತ್ತು ರೂಪಾಯಿ ವಸೂಲುಮಾಡಿ, ಆ ಭಯ್ಯಾಗಳ ಸ್ಥಳಗಳನ್ನು ಕೊಡಿಸುತ್ತಿದ್ದನು. ಈ ಹಣ ಶಾಸನದ ಪರಿಣಾಮವಾಗಿ ಹುಟ್ಟಿದ ಅನೇಕ ಕಳ್ಳ ವ್ಯಾಪಾರಗಳಲ್ಲಿ ಇದೂ ಒಂದು.

ಇದನ್ನು ಓದಿದ್ದೀರಾ?: ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಸಾಲು ಜನರು ಒಬ್ಬರನ್ನೊಬ್ಬರು ಒತ್ತಿ ನಿಂತಿದ್ದರು. ಅವರ ಮೊಗಗಳಲ್ಲಿ ಭಯ ಆತಂಕ ಆತುರಗಳು ಎದ್ದು ಕಾಣುತ್ತಿದ್ದವು. ಕೆಲವರ ಆತುರದಿಂದ ಒತ್ತಡವು ಜಾಸ್ತಿಯಾಗಿ ಜನರು ಬೀಳುವಂತಾಗುತ್ತಿದ್ದರು. ಆಗ ಮಧ್ಯೆ ಮಧ್ಯೆ ವಾಗ್ವಾದಗಳೂ ಕೇಳಿ ಬರುತ್ತಿದ್ದುವು. ಕೈ ಕೈಗೆ ಹತ್ತಿಕೊಳ್ಳದಂತೆ, ಸಾಲಿನ ನೀತಿಯು ಹಾಳಾಗದಂತೆ, ಜನರ ನಡವಳಿಕೆಯು ಕೆಡದಂತೆ ನೋಡಿಕೊಳ್ಳಲು ದೊಡ್ಡ ನೀಲಿ ಅಂಗಿ, ಹಳದಿ ರುಮಾಲಿನ ಪೊಲೀಸು ದಳವು ಹಾಜರಿದ್ದಿತು. ಈ ‘ಅಧಿಕಾರಿ’ಗಳು ಆಗಾಗ ಚೀರಾಡುತ್ತ ಅಲ್ಲಿ ಇಲ್ಲಿ ಜನರನ್ನು ತಳ್ಳುತ್ತ ಎಳೆಯುತ್ತ ತಮ್ಮ ಕೆಲಸವನ್ನು ಸಾಗಿಸುತ್ತಿದ್ದರು. ಹಾಗೂ ತಮ್ಮ ಮಾತಿಗೆ ಜಗ್ಗದ ಜನರನ್ನು ಎಳೆದೊಯ್ದು ಅಲ್ಲಿಯೇ ಓಡಾಡುತ್ತಿದ್ದ ಬಿಳಿಯ ಸೂಟು ಹ್ಯಾಟಿನ ಆಂಗ್ಲೋ ಇಂಡಿಯನ್ ಅಧಿಕಾರಿಯ ತೀರ್ಮಾನಕ್ಕೆ ಒಳಗು ಮಾಡುತ್ತಿದ್ದರು. ಈವರೆಗಾಗಲೇ ಎಷ್ಟೋ ಮೊಕದ್ದಮೆಗಳು ದಾಖಲಾಗಿದ್ದುವು, ಆಗುತ್ತಲೂ ಇದ್ದುವು. ಹಾಗೆಯೇ ಅಷ್ಟು ಇಷ್ಟನ್ನು ಪೋಲೀಸರಿಗೆ ತೆತ್ತಮೇಲೆ ಅಲ್ಲಿಯೇ ಆಗಲೇ ಮೊಕದ್ದಮೆಗಳು ಖುಲಾಸೆಯಾಗುತ್ತಲೂ ಇದ್ದುವು.

ಈ ರಂಗಸ್ಥಳಕ್ಕೆ ನಮ್ಮವರ ಟ್ಯಾಕ್ಸಿಯು ಬಂದು ನಿಂತಿತು. ವಕೀಲರು ಹುಡುಗಿಗೆ ಒಂದು ಕಾಗದವನ್ನು ಕೊಟ್ಟು, ಪಿಲಾನಿಗೆ ‘ನಿಮ್ಮ ನೋಟಿನ ಪಿಂಡಿಯನ್ನು ಇವಳಿಗೆ ಕೊಟ್ಟುಬಿಡಿ’ ಅಂದರು. ಈವರೆಗೆ ವಕೀಲರ ಉಪಾಯವನ್ನು ಪಿಲಾನಿಯು ಊಹಿಸಿದ್ದನಾದರೂ ಇಪ್ಪತ್ತೈದು ಸಾವಿರ ರೂಪಾಯಿನ ಪಿಂಡಿಯನ್ನು ಸೂಳೆಯೊಬ್ಬಳಿಗೆ ಕೊಟ್ಟುಬಿಡಲು ಅವನ ಮನಸ್ಸು ಹಿಂದೆಗೆಯಿತು. ಅವನು ಕೊಂಚ ಅನುಮಾನಿಸಿದನು. ವಕೀಲರು ಇದನ್ನು ಕಂಡು, ‘ಏನು ಅನುಮಾನಿಸುತ್ತೀರಿ? ಹಾಗೆ ಮಾಡದೆ ವಿಧಿಯಿಲ್ಲ, ನಿಮ್ಮ ಹಣವು ಉಳಿಯಬೇಕಾದರೆ ಇವಳ ಮೂಲಕವೇ. ನಾನೂ ನೀವೂ ಇದರ ಸಂಪಾದನೆಯ ಬಗ್ಗೆ ಏನು ಹೇಳಲು ಸಾಧ್ಯ?’ ಎಂದು ಪಿಸುಮಾತಿನಲ್ಲಿ ಹೇಳಿದರು. ಪಿಲಾನಿಯು ನೋಟಿನ ಪಿಂಡಿಯನ್ನು ಹುಡುಗಿಗೆ ಒಪ್ಪಿಸಿದಾಗ ಪ್ರಪಂಚವನ್ನೇ ಕಳೆದುಕೊಂಡವನಂತೆ ಕಂಡನು.

ಇದನ್ನು ಓದಿದ್ದೀರಾ?: ವಿವೇಕ ಶಾನಭಾಗ ಅವರ ಕತೆ | ಲಂಗರು

ಅವಳಾದರೋ ಪ್ರಪಂಚದ ಪಟ್ಟವೇ ತನಗಾಯಿತೋ ಎನ್ನುವಂತೆ ಹಿಗ್ಗುತ್ತ ಅದನ್ನು ತೆಗೆದುಕೊಂಡು ತನ್ನ ಚರ್ಮದ ಕೈಚೀಲಕ್ಕೆ ಸೇರಿಸಿದಳು. ಅವಳು ಮೋಟಾರಿನಿಂದ ಇಳಿಯುವಾಗ ವಕೀಲರು ‘ನಾನು ಹೇಳಿದ್ದೆಲ್ಲ ನೆನಪಿದೆಯೋ- ಹೇಗೆ?’ ಎಂದು ಕೇಳಿದರು. ಅದಕ್ಕೆ ಅವಳು ‘ಓಹೋ, ಎಲ್ಲಾ ಗೊತ್ತಿದೆ. ಜಯಿಸಿಕೊಂಡು ಬರುತ್ತೇನೆ. ನೋಡುತ್ತಿರಿ’ ಅಂದಳು. ವಕೀಲರು ನಗುತ್ತಾ ‘ನೋಡಿದಿರಾ ಹೇಗಿದೆ?’ ಎಂದು ಪಿಲಾನಿಯನ್ನು ತಿವಿದರು. ಪಿಲಾನಿಗೆ ಮಾತನಾಡಲು ತ್ರಾಣವಿರದೆ ಕ್ಷೀಣವಾಗಿ ನಸುನಗೆಯನ್ನು ತೋರ್ಪಡಿಸಿದನು.

ಹೆಂಗಸರ ಸಾಲು ಸಣ್ಣದಾಗಿದ್ದು ಹುಡುಗಿಯು ಬ್ಯಾಂಕಿನ ಒಳಗೆ ಹೋದಳು. ವಕೀಲರೂ ಕಕ್ಷಿಗಳೂ ಹಿಂಬಾಲಿಸಿದರು. ಹುಡುಗಿಯ ಸರದಿಯು ಬರುವುದಕ್ಕೆ ಕೊಂಚ ಕಾಲ ಹಿಡಿಯಿತು. ಇಷ್ಟು ಹೊತ್ತೂ ಪಿಲಾನಿಯು ತಳಮಳಿಸುತ್ತಿದ್ದನು. ಕಡೆಗೆ ಅವಳು ಭರ್ತಿಯಾಗಿದ್ದ ಕಾಗದವನ್ನು ನೌಕರನಿಗೆ ಕೊಟ್ಟಾಗಲಂತು ಪಿಲಾನಿಯು ಅಂಗುಷ್ಠದ ಮೇಲೆ ನಿಂತು ನೋಡುತ್ತಿದ್ದನು. ಹುಡುಗಿಯು ಕೊಟ್ಟ ಕಾಗದವನ್ನು ನೌಕರನು ಸ್ವಲ್ಪ ಓದಿದವನೆ, ಆಶ್ಚರ್ಯದಿಂದ ಕತ್ತೆತ್ತಿ ಹುಡುಗಿಯ ಕಡೆಗೆ ನೋಡಿ ನಸುನಕ್ಕನು. ಮತ್ತೆ ನಿಧಾನವಾಗಿ ಓದಿ, ಏನೋ ತೊಡಕಿಗೆ ಸಿಕ್ಕಿದವನಂತಾಗಿ ಬ್ಯಾಂಕಿನ ಆಳನ್ನು ಕರೆದು ಕಾಗದವನ್ನು ಕೊಟ್ಟು, ಅವನಿಗೆ ಹುಡುಗಿಯನ್ನು ತೋರಿಸಿ, ‘ಇವರನ್ನು ಸಾಹೇಬರ ಬಳಿಗೆ ಕರೆದುಕೊಂಡು ಹೋಗು’ ಎಂದು ಹೇಳಿದನು. ಹುಡುಗಿಯು ಆಳನ್ನು ಹಿಂಬಾಲಿಸಿ ಒಳಗೆ ಸಾಹೇಬರ ಬಳಿಗೆ ಹೋದಳು. ಇದನ್ನು ಕಂಡು ಪಿಲಾನಿಗೆ ಬಾಯಿ ಒಣಗಹತ್ತಿತು.

ಸಾಹೇಬರು ಹುಡುಗಿಯನ್ನು ಕುಳಿತುಕೊಳ್ಳುವಂತೆ ಹೇಳಿ ಕಾಗದವನ್ನು ಪರೀಕ್ಷಿಸಲು ಮೊದಲು ಮಾಡಿದರು. ಹುಡುಗಿಯು ದಿಟ್ಟವಾಗಿ ಕುರ್ಚಿಯಲ್ಲಿ ಕುಳಿತು ಪಾಟೀ ಸವಾಲಿಗೆ ಸಿದ್ಧವಾಗಿದ್ದಳು. ಅಧಿಕಾರಿಯೂ ಕೊಂಚ ಓದಿದವನೆ, ಹುಡುಗಿಯ ಕಡೆಗೆ ಕಣ್ಣನ್ನು ಹೊರಳಿಸಿ ನಸುನಕ್ಕು, ಮುಂದೆ ಓದಿಕೊಂಡನು. ಮುಗಿದ ಮೇಲೆ ಏನನ್ನೋ ಯೋಚಿಸುತ್ತ ನಸುನಗುತ್ತ ತಲೆಯಾಡಿಸುತ್ತ ಮೇಜಿನ ಮೇಲೆ ಬೆರಳಿನಿಂದ ತಬಲಾ ಬಡಿಯುತ್ತ ಒಂದೆರಡು ನಿಮಿಷವನ್ನು ಕಳೆದನು. ಅನಂತರ ತಲೆಯನ್ನು ಕೆರೆದುಕೊಂಡನು. ಹುಬ್ಬು ಗಂಟಿಕ್ಕಿ ನೋಡಿದನು. ಕಡೆಗೆ ಹುಡುಗಿಯನ್ನು ಪ್ರಶ್ನಿಸಿದನು.

ಇದನ್ನು ಓದಿದ್ದೀರಾ?: ಉಮಾ ರಾವ್ ಅವರ ಕತೆ | ಅಗಸ್ತ್ಯ

‘ನಿಮಗೆ ಇಂಗ್ಲೀಷನ್ನು ಬರೆಯಲು ಬರುವುದಿಲ್ಲ, ಅಲ್ಲವೆ?”

‘ಹೌದು.’

‘ಇದನ್ನು ಯಾರು ಬರೆದವರು?’

‘ನಿನ್ನೆ ಬಂದವರೊಬ್ಬರಿಂದ ಬರೆಯಿಸಿದ್ದೇನೆ.’

‘ಎಷ್ಟು ವರ್ಷದಿಂದ ಹೀಗೆ… ಆ…’

‘ನಾಲ್ಕು ವರ್ಷದಿಂದ.’ ಹುಡುಗಿಯು ತಿಳಿದು ಉತ್ತರವನ್ನು ಹೇಳಿದಳು.

‘ಸರಾಸರಿ ದಿನಕ್ಕೆ ಎಷ್ಟು ಸಂಪಾದನೆ ಆಗುತ್ತದೆ?’

‘ಅದನ್ನು ಹೇಗೆ ಹೇಳುವುದು? ಅವೆಲ್ಲ ದಾತೃಗಳು ಇದ್ದ ಹಾಗೆ, ಬಂದ ಹಾಗೆ… ಹತ್ತರಿಂದ ಸಾವಿರಕ್ಕೂ ಮೀರಿ ಹಣ ಕೊಡುವವರಿರುತ್ತಾರೆ….’

‘ಓ, ಸರಿ.. ಸರಿ.’ ಅಧಿಕಾರಿಯು ಕೊಂಚಹೊತ್ತು ಸುಮ್ಮನಾದನು. ಅನಂತರ ಮತ್ತೆ ಯೋಚಿಸಿ ಕೇಳಿದನು- ‘ಹಾಗಾದರೆ ನಿಮ್ಮ ಹತ್ತಿರ ಈಗ ನೀವು ತಂದಿರುವುದಕ್ಕೂ ಮೀರಿ ಹಣ ಕೂಡಿರಬೇಕಲ್ಲವೆ?’

‘ನಮ್ಮ ಬಳಿಗೆ ಹಣ ಬರುವಹಾಗೇ ಕರ್ಚೂ ಆಗುತ್ತದೆ.’

ಇದನ್ನು ಓದಿದ್ದೀರಾ?: ಬಿ.ಟಿ. ಜಾಹ್ನವಿ ಅವರ ಕತೆ | ದೂಪ್ದಳ್ಳಿ ಸೆಕ್ಸಿ ದುರುಗ

‘ಆದರೆ ಇದು?’

‘ಇಷ್ಟು ಎಷ್ಟೋ ಬಾರಿ ಕೂಡಿ ಕರ್ಚಾಗಿದೆ. ಈಗ ಮಾತ್ರ ಇದನ್ನು ಬದಲಾಯಿಸಬೇಕಾಗಿದೆ.’

‘ಹೋ, ಹಾಗೋ.’

ಮತ್ತಷ್ಟು ಕಾಲ ಮೌನ, ಆಮೇಲೆ ಮತ್ತೊಂದು ಪ್ರಶ್ನೆ.

‘ನೀವು ಈ ಆದಾಯಕ್ಕೆಲ್ಲ ಲೆಕ್ಕ…’

‘ನಾವೇನು ಹಣಕ್ಕೆ ರಸೀದಿ ಕೊಡುತ್ತೇವೊ? ಕೊಡಬೇಕೊ? ನಮಗೆಲ್ಲಿ ಲೆಕ್ಕಪಕ್ಕದ…’

‘ಹೂಂ. ಹೂಂ. ಸರಿ.’

ಅಧಿಕಾರಿಯು ಮತ್ತೆ ಯೋಚಿಸಿದನು. ಏನೂ ಫಲವಾದಂತೆ ಕಾಣಲಿಲ್ಲ. ಈ ಅಸಹಾಯಕತೆಯೋ, ದಾಕ್ಷಿಣ್ಯವೋ, ‘Chivalry’ಯೋ, ದೌರ್ಬಲ್ಯವೋ, ಹೇಗೋ ಅಂತೂ ಕಡೆಗೆ ಒಂದು ಚೀಟಿಯನ್ನು ಗೀಚಿ ಆಳನ್ನು ಕರೆದು ಅದನ್ನು ಕೊಟ್ಟು, ಹುಡುಗಿಯನ್ನು ನೋಡಿ, ‘ನೀವಿನ್ನು ಹೋಗಿ ಹಣ ಬದಲಾಯಿಸಿಕೊಳ್ಳಬಹುದು’ ಎಂದನು.

ಹುಡುಗಿಯು ಸಂಭ್ರಮದಿಂದ ಸಾವಿರದ ನೋಟುಗಳನ್ನು ನೂರರದಕ್ಕೆ ಬದಲಾಯಿಸಿಕೊಳ್ಳುತ್ತಿರುವಾಗ ಪಿಲಾನಿಗೆ ಉಕ್ಕಿದ ಸಂತೋಷವನ್ನು ಹೇಳತೀರದು. ವಕೀಲರೂ ಹಿಗ್ಗುತ್ತ, ‘ನೋಡಿದಿರೊ ಹೇಗಿದೆ ನನ್ನ ಬುದ್ದಿ!’ ಎಂದು ಪಿಸುಮಾತಿನಲ್ಲಿ ಹೇಳಿದರು. ಹುಡುಗಿಯು ನೋಟುಗಳನ್ನು ಜೋಡಿಸಿಕೊಂಡು ಚೀಲಕ್ಕೆ ಸೇರಿಸಿಕೊಂಡು ಹತ್ತಿರಕ್ಕೆ ಬಂದೊಡನೆ ಪಿಲಾನಿಯು ಆತುರವನ್ನು ತಡೆಯಲಾರದೆ ಅವಳಲ್ಲಿಗೆ ಹಾರಿ ಕೈ ನೀಡಿದನು. ಆ ಸಮಯಕ್ಕೆ ವಿಧಿಯು ಕಾದಿಟ್ಟ ದೊಡ್ಡ ಪೆಟ್ಟು ಈಗ ಅವನಿಗೆ ತಗುಲಿತು. ಹುಡುಗಿಯು ಹಣವನ್ನು ಕೊಡುವುದರ ಬದಲು ಸುಮ್ಮನೆ ಗಂಭೀರವಾಗಿ ಕತ್ತನ್ನೆತ್ತಿ, ‘ನೀವು ಯಾರು? ನನ್ನಿಂದ ಏನಾಗಬೇಕು?’ ಎಂದು ಕೇಳಿಬಿಟ್ಟಳು!

ಇದನ್ನು ಓದಿದ್ದಿರಾ?: ಜಯಶ್ರೀ ದಿವಾಕರ್ ಅವರ ಕತೆ | ನೆಲೆ ಕಾಣದ ನೆರಳು

ಈ ಮಾತುಗಳು ಕಿವಿಯನ್ನು ಮುಟ್ಟಿದೊಡನೆ ಪಿಲಾನಿಯ ಎದೆ ಹಾರಿತು. ಅವನು ತತ್ತರಿಸಿದನು. ವಕೀಲರೂ ಬೆರಗಾಗಿ ‘ಓಹೋ, ಕೈಕೊಟ್ಟಳು!’ ಅಂದುಕೊಂಡರು. ಇದಕ್ಕೆ ಉಪಾಯವನ್ನು ಕಂಡು ಹಿಡಿಯಲು ಅವರ ಮಿದುಳಿನಲ್ಲಿ ತಳಮಳವು ಮೊದಲಾಗಿ ಮುಗಿಯುವುದರಲ್ಲೇ ಪಿಲಾನಿಯು ತಲ್ಲಣದಿಂದ ಚೇತರಿಸಿಕೊಂಡು ‘ನನ್ನ ಹಣ! ನನ್ನ ಹಣ!’ ಎಂದು ಹುಚ್ಚನಂತೆ ಚೀರುತ್ತ ಹುಡುಗಿಯ ಕೈಹಿಡಿದುಕೊಂಡನು. ಹುಡುಗಿಯು ‘ಅಯ್ಯೋ! ಅಯ್ಯೋ!’ ಎಂದು ಕೂಗಿಕೊಂಡಳು. ಕೆಲವು ಜನರು ಸುತ್ತುಗಟ್ಟಿದರು. ಪೊಲೀಸಿನವರೂ ಬಂದು ‘ಬದ್ಮಾಷ್‌!’ ಎನ್ನುತ್ತ ಪಿಲಾನಿಯ ಹೆಗಲ ಮೇಲೆ ಕೈಹಾಕಿ ಹಿಂದಕ್ಕೆಳೆದರು. ಪಿಲಾನಿಯ ಕೈ ಹುಡುಗಿಯ ಕೈಬಿಟ್ಟಿತು. ಅವಳು ಪೊಲೀಸಿನವನನ್ನು ಕುರಿತು, ‘ನೋಡಿ ಇವನು ನನ್ನ ದರೋಡೆ ಮಾಡೋಕೆ ಹವಣಿಸಿದ್ದ’ ಅಂದಳು.

ಪಿಲಾನಿಯು ‘ಅಲ್ಲ. ಅಲ್ಲ. ನನ್ನ ಹಣ!’ ಅಂದನು. ಅವಳು ‘ಅಲ್ಲ. ಇದು ನನ್ನದು’ ಅಂದಳು. ಪಿಲಾನಿಯು ‘ಇವಳ ಮಾತನ್ನು ನಂಬಬೇಡಿ. ಇವಳು ಸೂಳೆ’ ಎಂದನು. ಈ ಗಲಭೆಯಲ್ಲಿ ಹುಡುಗಿಯು ಚಮತ್ಕಾರದಿಂದ ಪೊಲೀಸಿನವರ ಕೈಗೆ ಹಿಂಭಾಗದಿಂದ ಏನನ್ನೋ ಕೊಟ್ಟಳು. ಪೊಲೀಸಿನವರು ಹುಡುಗಿಯನ್ನು ನೋಡಿ ನಗುತ್ತ ಪಿಲಾನಿಯ ಕಡೆ ತಿರುಗಿ, ‘ಹಣ ನಿನ್ನದಾಗಿದ್ದಿರಬಹುದು. ಆದರೆ ಅವಳಿಗೇನು ಬಿಟ್ಟಿ ಕೊಟ್ಟೆಯೊ?’ ಅಂದನು. ಜನಗಳ ಪೈಕಿ ಒಬ್ಬನು ‘ಸುಖಪಡಲಿಲ್ಲವೇ?’ ಅಂದ. ಎಲ್ಲರೂ ಗೊಳ್ಳೆಂದು ನಕ್ಕರು. ಇನ್ನೊಬ್ಬ ‘ಸೂಳೆಗೆ ಕೊಟ್ಟ ಕಾಸು ಹಾಳಾದ ಹಾಗೇ. ಅದಕ್ಕೆಲ್ಲಿಯ ಲೆಕ್ಕ?’ ಅಂದ. ಜನರು ಮತ್ತೂ ನಕ್ಕರು. ಮತ್ತೊಬ್ಬನು ‘ಈಗ ಹಣವಂತೂ ದೊಡ್ಡ ನೋಟಾಗಿದ್ದರೆ ಸಿಕ್ಕಿದವರಿಗೆ ಶೀರುಂಡೆ- ಅದೇ ಕಾನೂನು’ ಅಂದ.

ಇದನ್ನು ಓದಿದ್ದೀರಾ?: ನೇಮಿಚಂದ್ರ ಅವರ ಕತೆ | ಹೊಸ ಹುಟ್ಟು

ಪಿಲಾನಿಯು ಎಚ್ಚೆತ್ತು ಪೆಚ್ಚಾದನು. ಅವನಿಗೂ ಇದೆಲ್ಲವೂ ಗೊತ್ತಿದ್ದಿತು. ಮಾಡುವುದು ಏನೂ ಅವನಿಗೆ ತೋಚಲಿಲ್ಲ. ಪೊಲೀಸಿನವನು ಮೂರನೆಯ ಬಾರಿ ‘ಹುಂ. ನಡಿ ಸಾಹೇಬರ ಬಳಿಗೆ’ ಎಂದನು. ಪಿಲಾನಿಯು ಏನನ್ನೋ ಹೇಳಲು ಹೊರಟನು. ಆದರೆ ಪೊಲೀಸಿನವನು ಕೇಳದೆ, ‘ಹೇಳುವುದು ಏನಿದ್ದರೂ ಅವರಿಗೆ ಹೇಳು’ ಎಂದು ಮೆಲ್ಲಗೆ ಮುಂದಕ್ಕೆ ತಳ್ಳಿದನು. ಪಿಲಾನಿಯು ಹಿಂದಕ್ಕೆ ನೋಡುತ್ತ ‘ಅವಳು.. ಅವಳು’ ಎಂದನು. ಪೊಲೀಸಿನವರು ‘ಅವಳೇನು ಮಾಡಿದ್ದಾಳೆ? ಗಲಭೆಗೆ ಕಾರಣ ನೀನು. ಇನ್ನೇಕೆ? ನಾನೇ ನೋಡಿದೆನಲ್ಲ. ನೀನು ಕೈಮಾಡಿದ್ದು’ ಅಂದನು. ಗುಂಪಿನಲ್ಲಿ ಯಾರೋ ‘ಸೇಟರೆ, ಆಮೇಲೆ ಹೋಗುವಿರಂತೆ ಅವಳ ಬಳಿಗೆ. ಹಳೆಯ ಪರಿಚಯ ತಾನೆ. ಈಗ ಹೋಗಿ ಮೊದಲು ಪೊಲೀಸಿಗೆ ದಾಖಲಾಗಿ’ ಅಂದರು. ಎಲ್ಲರೂ ನಕ್ಕರು. ಪೊಲೀಸಿನವರು ಹಿಂದೆ ಹಿಂದೆ ಉಳಿಯುತ್ತಿದ್ದ ಪಿಲಾನಿಯನ್ನು ಬಲವಂತದಿಂದ ಕರೆದೊಯ್ದರು.

ಇಲ್ಲಿಯವರೆಗೆ ಮರ್ಯಾದೆಗೆ ಕಟ್ಟುಬಿದ್ದು, ಈ ನಾಟಕದಲ್ಲಿ ಭಾಗವಹಿಸಿ ಜನರ ಗಮನಕ್ಕೆ ಬರಲು ಇಷ್ಟವಿಲ್ಲದೆ ಹಿಂದೆಯೇ ನಿಂತಿದ್ದ ವಕೀಲರು ಈಗ ತಮ್ಮ ಅಪಾಯವನ್ನು ತಿಳಿದರು. ಪಿಲಾನಿಯು ಪೊಲೀಸು ಅಧಿಕಾರಿಗೆ ನಿಜವೆಲ್ಲವನ್ನೂ ಹೇಳಿದರೆ ತಮಗೂ ಪೀಕಲಾಟ ಬರುವುದೆಂದು ನೆನೆಸಿ ಪಿಲಾನಿಯ ಕಡೆಗೆ ಸಾಗುತ್ತ ಮೆಲ್ಲನೆ ಹುಡುಗಿಯ ಕಡೆಗೆ ಹೋಗಿ, ಸಮಯೋಚಿತವಾದ ಕಡೆಯ ಉಪಾಯವನ್ನು ಹೂಡಿ ಪಿಸುಮಾತಿನಲ್ಲಿ ‘ನನಗೆ ಗೊತ್ತಾಯಿತು, ನೀನು ಯೋಚಿಸಬೇಡ. ನಾನು ಎಲ್ಲವನ್ನೂ ಸರಿಪಡಿಸುತ್ತೇನೆ. ನೀನು ಹೊರಗೇ ಕಾದಿರು. ಇವನನ್ನು ಬಿಡಿಸಿಕೊಂಡು ಈಗಲೇ ಬರುತ್ತೇನೆ’ ಎಂದು ಸಮಾಧಾನ ಹೇಳಿ ಹೆಚ್ಚು ಮುಖ್ಯವಾದ ಕೆಲಸವನ್ನು ಗಮನಿಸಲು ಧಾವಿಸಿ ಹೋದರು.

ವಕೀಲರು ಹಾಗೆ ತಿರುಗುತ್ತಲೇ ಹುಡುಗಿಯು ಹೊರಕ್ಕೆ ಬಂದು ಟ್ಯಾಕ್ಸಿಯೊಂದನ್ನು ಕರೆದು ‘ಬೋರಿಬಂದರ್‌’ ಅಂದಳು. ಗಾಡಿಯು ವಿಕ್ಟೋರಿಯಾ ಟರ್‍ಮಿನಸ್ಸಿಗೆ ನಡೆಯಿತು. ಅಲ್ಲಿ ಮಧ್ಯಾಹ್ನ ಒಂದೂ ಮುಕ್ಕಾಲಿಗೆ ಹೊರಡುವ ಮದ್ರಾಸು ಮೇಯಿಲು ಗಾಡಿಯು ತಯಾರಾಗಿ ನಿಂತಿದ್ದಿತು. ಇನ್ನು ಹದಿನೈದು ನಿಮಿಷಗಳು ಮಾತ್ರ ಕಾಲವು ಉಳಿದಿದ್ದಿತು. ಹುಡುಗಿಯು ಮೊದಲು ಎರಡನೆಯ ತರಗತಿಯ ಬುಕಿಂಗ್ ಕಚೇರಿಗೆ ಹೋಗಿ, ಬುಕಿಂಗ್ ಗುಮಾಸ್ತನನ್ನು ಕಂಡು ‘ನನಗೆ ಮದರಾಸಿಗೆ ಒಂದು ಟಿಕೀಟು ಬೇಕಾಗಿದೆ. ಬಹಳ ತುರ್ತು’ ಅಂದಳು. ಅವನು ಅವಳನ್ನು ಕೆಳಗಿನಿಂದ ಮೇಲಿನವರೆಗೆ ನೋಡಿ ‘ಯಾವ ದಿನಕ್ಕೆ?’ ಅಂದ.

ಇದನ್ನು ಓದಿದ್ದೀರಾ?: ಜಯಂತ ಕಾಯ್ಕಿಣಿ ಅವರ ಕತೆ | ಅಮೃತಬಳ್ಳಿ ಕಷಾಯ

‘ಈಗಿನ ರೈಲಿಗೆ.’

‘ಈ ದಿನಕ್ಕೆ ಎಲ್ಲಾ ಬುಕ್ಕಾಗಿದೆ. ಖಾಲಿಯಿಲ್ಲ, ಹೊತ್ತೂ ಇಲ್ಲ, ಎಂಟು ದಿನ ಮುಂಗಡವಾಗಿ ಬುಕ್ ಮಾಡಬೇಕು.’ ಬಹಳ ದರ್ಪದಿಂದ ಹೇಳಿದನು.

‘ಇರಬಹುದು. ಆದರೆ ನನ್ನ ಸಂದರ್ಭ ಬಹಳ ಮುಖ್ಯ, ಹೋಗಲೇಬೇಕು. ಹೇಗಾದರೂ ಮಾಡಿ ನನಗೆ ಸ್ಥಳವನ್ನು ದೊರಕಿಸಿಕೊಟ್ಟರೆ ನಾನೂ ನೀವು ಕೇಳುವ ಸಹಾಯವನ್ನು ಮಾಡಬಲ್ಲೆ’ ಎಂದು ಪಿಸುಮಾತಿನಲ್ಲಿ ಹೇಳಿ ಹುಡುಗಿಯು ಕಣ್ಣು ಮಿಟುಕಿಸಿ ನೂರರ ನೋಟು ಒಂದನ್ನು ತೋರಿಸಿದಳು. ಅದನ್ನು ನೋಡಿದೊಡನೆ ಗುಮಾಸ್ತನ ನಡೆವಳಿಕೆಯು ಬದಲಾಯಿತು. ಒಡನೆಯೇ ಅವನು ಹೊಸ ಜೀವ ಪಡೆದವನಂತೆ ಚಟುವಟಿಕೆಯನ್ನು ತೋರಿಸುತ್ತ, ‘ನೀವು ಇಲ್ಲಿರಿ. ನಾನು ನನ್ನ ಕೈಲಾದುದನ್ನು ಮಾಡುತ್ತೇನೆ’ ಅಂದು ಹೊರಗೆ ಹೋಗಿ, ಅವರಿವರೊಡನೆ ಮಾತಾಡಿ ಏರ್ಪಡಿಸಿ, ಮತ್ತೆ ಬಂದು, ‘ನೋಡಿ ಫಸ್ಟು ಕ್ಲಾಸಿನಲ್ಲಿ ಮಾತ್ರ ಒಂದು ಜಾಗವನ್ನು ಒದಗಿಸಬಹುದು. ಅದೂ ಬಹು ಕಷ್ಟದಿಂದ ಸಾಧ್ಯವಾಯಿತು’ ಅಂದನು. ಹುಡುಗಿಯು ‘ಹಾಗೆಯೇ ಆಗಲಿ. ಬಹಳ ಉಪಕಾರವಾಯಿತು’ ಎಂದು ದರವನ್ನು ಕೇಳಿ ಜತೆಗೆ ಒಂದು ನೂರರ ನೋಟನ್ನು ಸೇರಿಸಿ ಕೊಟ್ಟಳು. ಟಿಕೀಟು ಸಿಕ್ಕಿತು. ನೌಕರನೊಬ್ಬನು ಅವಳನ್ನು ಕರೆದುಕೊಂಡು ಹೋಗಿ ಸ್ಥಳನ್ನು ತೋರಿಸಿದನು. ಆಗಲೇ ‘ರಿಸರ್ವ್’ ಚೀಟಿಯಲ್ಲಿ ಅವಳ ಹೆಸರು ಬರೆಯಲ್ಪಟ್ಟಿತು. ಹುಡುಗಿಯು ಹತ್ತಿದ ಎರಡು ನಿಮಿಷದೊಳಗಾಗಿ ಗಾಡಿಯು ಹೊರಟಿತು. ಅವಳು ಮತ್ತೆಯ ಮೇಲೆ ಆರಾಮವಾಗಿ ಮಲಗಿಕೊಂಡು, ತನ್ನಲ್ಲೇ ತಾನು ‘ಇದು ಶಿವನ ಪ್ರಸಾದವೇ ಸರಿ. ಅವನನ್ನು ಮಾತ್ರ ವಂಚಿಸುವುದಿಲ್ಲ. ಇನ್ನಾದರೂ ಮಾನವಾಗಿ ಬಾಳಲು ಅವನೇ ಸಹಾಯ ಮಾಡಿದ್ದಾನೆ. ಹಾಳು ಸೂಳೆಗಾರಿಕೆ ಸಾಕಾಯಿತು. ಈ ಕೆಟ್ಟ ಜಾಗದಿಂದ ಆದಷ್ಟು ದೂರ ದೂರ ಹೋಗಿಬಿಡಬೇಕು’ ಅಂದುಕೊಂಡಳು. ಅವಳ ಇಷ್ಟಪೂರ್ತಿಗೋ ಎನ್ನುವಂತೆ ರೈಲುಗಾಡಿಯು ದಡಗುಟ್ಟುತ್ತ ವೇಗದಿಂದ ಸಾಗಿತು.

ಇತ್ತ ವಕೀಲರು ಪಿಲಾನಿಯ ಬಾಯಿಕಟ್ಟಿ, ಮುಖ್ಯ ವಿಷಯವನ್ನು ಮುಚ್ಚಿ ಹಾಕಿ, ಪೊಲೀಸು ಅಧಿಕಾರಿಗೆ ದಪ್ಪ ಲಂಚವನ್ನು ಕೊಡಿಸಿ, ಪಿಲಾನಿಯನ್ನು ಬಿಡಿಸಿಕೊಂಡು, ತಮಗೂ ಒದಗಿದ್ದ ಗಂಡವನ್ನು ತಪ್ಪಿಸಿಕೊಂಡು ಸಾಕು ಸಾಕಾಗಿ ವಾಪಸು ಬಂದು ನೋಡುವಲ್ಲಿ ಹುಡುಗಿಯು ಅಲ್ಲಿ ಎಲ್ಲೂ ಇರಲಿಲ್ಲ. ಪಿಲಾನಿಯು ತಾನು ದಿವಾಳಿಯಾದೆನೆಂದು ಗೋಳಿಟ್ಟನು. ವಕೀಲರು ಸಮಾಧಾನಪಡಿಸುತ್ತ, ‘ಅವಳೆಲ್ಲಿ ಹೋಗುತ್ತಾಳೆ, ಅವಳ ಮನೆ ಬಿಟ್ಟು? ಬನ್ನಿ ಹೋಗೋಣ’ ಅಂದರು. ಅವರು ಟ್ಯಾಕ್ಸಿ ಮಾಡಿಕೊಂಡು ಮತ್ತೆ ಫರಾಸು ರೋಡಿಗೆ ಬಂದರು.

ಇದನ್ನು ಓದಿದ್ದೀರಾ?: ಕುಂ. ವೀರಭದ್ರಪ್ಪ ಅವರ ಕತೆ | ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ

ಅಲ್ಲಿಗೆ ಹುಡುಗಿಯು ಬಂದಿಲ್ಲದ ವಿಷಯವು ತಿಳಿದೊಡನೆ ವಕೀಲರು ಭ್ರಾಂತರಾದರು. ಪಿಲಾನಿಗೆ ಜೀವವು ಹೋದಂತಾಯಿತು. ಯಜಮಾನಿಗೆ ಈಗ ಹುಡುಗಿಯು ತಪ್ಪಿಸಿಕೊಂಡುದು ಗೊತ್ತಾಗಿ, ‘ಅಯ್ಯೋ, ಅವಳ ಮೇಲೆ ಎರಡು ಸಾವಿರವನ್ನು ಸುರಿದಿದ್ದೆ’ ಎಂದು ಗೋಳಿಟ್ಟು ವಕೀಲರನ್ನು ಕುರಿತು, ‘ನಿಮ್ಮ ತಿಳಿಗೇಡಿತನದಿಂದ ಅಷ್ಟೂ ನಷ್ಟವಾಯಿತು. ನಿಮ್ಮಿಂದ ನಾನು ಮೋಸಹೋದೆ. ಚಾಲೂಕು ಹುಡುಗಿ ನೋಡಿಕೊಳ್ಳುವುದಕ್ಕೆ ಚುರುಕಾಗಿರಬೇಕು’ ಎಂದು ಸಿಟ್ಟಾದಳು. ಪಿಲಾನಿಯು ವಕೀಲರ ಕಡೆಗೆ ತಿರುಗಿ, ‘ಅವಳಿಗಾಗಿ ನಾನು ತೆತ್ತದ್ದು ಇಪ್ಪತ್ತೈದು ಸಾವಿರ. ನಿಮ್ಮನ್ನು ನಂಬಿ ದಿವಾಳಿಯಾಗಿ ನಾನೂ ಕೆಟ್ಟೆ’ ಅಂದನು. ತಮ್ಮ ಸರದಿಯಲ್ಲಿ ವಕೀಲರೂ ಸಿಟ್ಟಾಗಿ ‘ನನ್ನದೇನೋ ಒಳ್ಳೆಯ ಉಪಾಯವೆ. ನಿಮ್ಮ ಹುಚ್ಚತನ, ಕೆಟ್ಟ ಅದೃಷ್ಟಕ್ಕೆ ಯಾರೇನು ಮಾಡಬಲ್ಲರು? ವ್ಯಾಪಾರದ ವ್ಯಭಿಚಾರದಲ್ಲಿ ಸಂಪಾದಿಸಿದುದು ವ್ಯಭಿಚಾರಿಣಿಗೆ ಸೇರಿತು ಅಷ್ಟೆ’ ಎಂದು ತಿರಸ್ಕಾರದಿಂದ ಹೇಳಿದರು.

ಪಿಲಾನಿಯು ತಿರುಗಿಬಿದ್ದು, ‘ನಿಮ್ಮದೇನು ಹೆಚ್ಚು? ಅದೂ ಬುದ್ಧಿಯ ವ್ಯಭಿಚಾರವೆ. ಅದಕ್ಕೇ ನಿಮಗೂ ಸೊನ್ನೆ ಬಿತ್ತು’ ಎಂದು ಆದಷ್ಟು ಸೇಡನ್ನು ತೀರಿಸಿಕೊಂಡನು. ತನ್ನ ಗತಿಗಾಗಿ ಗೋಳಿಟ್ಟನು. ಯಜಮಾನಿಯು ‘ಸಾಕು ನಿಮ್ಮ ಸಹವಾಸ, ಸದ್ಯ ಈಗಲೇ ಹೊರಟುಹೋಗಿ’ ಎಂದು ಗದರಿಸಿದಳು.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಕೂದವಳ್ಳಿ ಅಶ್ವತ್ಥ ನಾರಾಯಣರಾವ್

ಕೂದವಳ್ಳಿ ಅಶ್ವತ್ಥ ನಾರಾಯಣರಾವ್ (1912 – 1994): ಚಿಕ್ಕಮಗಳೂರು ಜಿಲ್ಲೆಯ ಕೂದುವಳ್ಳಿಯವರು. ಜೂನ್ 18, 1912ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು. ತಂದೆ ಸೋಮಯ್ಯ, ತಾಯಿ ಲಕ್ಷ್ಮಮ್ಮ. 1934ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಇ. (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದರು. ಲೋಕೋಪಯೋಗಿ ಇಲಾಖೆಯಲ್ಲಿ, ಮಿಲಿಟರಿ ಎಂಜಿನಿಯರಿಂಗ್ ಸೇವೆಯಲ್ಲಿ ಹಾಗೂ ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಸರ್ಕಾರಿ ನೌಕರಿಗೆ ರಾಜೀನಾಮೆ ಸಲ್ಲಿಸಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಮಾಸ್ತಿಯವರ ಪ್ರೋತ್ಸಾಹದಿಂದ ಕಥೆ ಬರೆಯಲು ಆಸಕ್ತರಾದರು. 1963ರಲ್ಲಿ ಪ್ರಾಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ, ನಂಜನಗೂಡಿಗೆ ಬಂದು ನೆಲೆಸಿದರು. 1965ರಲ್ಲಿ ಮೈಸೂರಿಗೆ ಬಂದರು. ಕನ್ನಡ ಸಾಹಿತ್ಯ ಲೋಕದ ಪ್ರಮುಖ ನವೋದಯ ಕಥೆಗಾರರು ಮತ್ತು ಕಾದಂಬರಿಕಾರರಾಗಿ ಗುರುತಿಸಿಕೊಂಡ ಇವರು ‘ಅಶ್ವತ್ಥ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಪ್ರಕಟಿಕ ಕೃತಿಗಳು: ಜೀವನ, ಜಯಂತಿ, ನೋವು ನಲಿವು, ಅಗ್ನಿಸಾಕ್ಷಿ, ಹುಚ್ಚನ ಹೆಂಡತಿ, ದೂರದ ಕಾಶಿಯಲ್ಲಿ, ಅಭಿನಯ ಜಗತ್ತು(ಕಥಾ ಸಂಕಲನಗಳು); ಮುನಿಯನ ಮಾದರಿ, ರಂಗನಾಯಕಿ, ಮರ್ಯಾದೆ ಮಹಲು(ಕಾದಂಬರಿಗಳು); ಮೂಗಿನ ಮೇಲೆ, ಇಂದಿನ ಪತ್ರಿಕೆ ನೋಡಿದ್ದೀರಾ?, ಬನ್ನಿ ನನ್ನ ಉಪವನಕೆ, ನವ್ಯವಾಗಿ, ಬಡ ಮುತ್ತೈದೆ, ಹಾರ್ಮೋನಿಯಂ, ಕ್ರಿಕೆಟ್ ಓದೋಣ, ಸಮಿತಿಮಯ ಜಗತ್, ರೋಗಿಷ್ಟರು(ಲಲಿತ ಪ್ರಬಂಧಗಳು); ಮಹಾಯುದ್ಧ(ಖಂಡ ಕಾವ್ಯ). ಇವರು ಹದಿನೆಂಟು ನಾಟಕಗಳನ್ನೂ ರಚಿಸಿದ್ದರು. ಇವರ ಅನೇಕ ಕೃತಿಗಳು ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಜೀವನ’ ಮಾಸಪತ್ರಿಕೆಯಲ್ಲಿ ಇವರ ಕತೆಗಳು ಪ್ರಕಟವಾಗಿದ್ದವು. ಕೆಲವು ಕತೆಗಳು ಚಲನಚಿತ್ರಗಳಾಗಿ ಜನಪ್ರಿಯತೆ ಗಳಿಸಿವೆ. ಇವರು ಗಾಂಧಿವಾದಿಯಾಗಿದ್ದರು. ಪ್ರಚಾರದಿಂದ ದೂರವಿದ್ದು ಸರಳ ಬದುಕು ನಡೆಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ನಯವಾಗಿ ತಿರಸ್ಕರಿಸಿದ್ದರು. ಜನವರಿ 16, 1994ರಂದು ನಿಧನರಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...