ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್) ಹಾಗೂ ಕೇಂದ್ರ ವಿಪತ್ತು ಪರಿಹಾರ ನಿಧಿಯ(ಎನ್‌ಡಿಆರ್‌ಎಫ್) ಸಂವಿಧಾನ ಹಾಗೂ ಮಾರ್ಗಸೂಚಿಯ ಅನುಗುಣವಾಗಿ ಕರ್ನಾಟಕಕ್ಕೆ ಬರ ಪರಿಹಾರದ ಹಣಕಾಸು ನೆರವನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
“ರಾಷ್ಟ್ರೀಯ ಕಾರ್ಯಾಕಾರಿ ಉಪ ಸಮಿತಿಯ ಶಿಫಾರಸ್ಸಿನ ಅನ್ವಯ ಎನ್‌ಡಿಆರ್‌ಎಫ್ ಹಾಗೂ ಐಎಂಸಿಟಿಯ ವರದಿಯಡಿ ನೆರವಿನ ಅಂಶಗಳು ಹಾಗೂ ಮಾನದಂಡದ ಆಧಾರದ ಮೇಲೆ ಸಾಕಷ್ಟು ಹೊಂದಾಣಿಕೆಯೊಂದಿಗೆ ಭಾರತ ಸರ್ಕಾರವು ಹಣಕಾಸು ನೆರವನ್ನು ಬಿಡುಗಡೆ ಮಾಡಿದೆ” ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದರು.
ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್,ಕೇಂದ್ರದಿಂದ 3454 ಕೋಟಿ ರೂ. ಬಿಡುಗಡೆಯಾಗಿದೆ. ಬಾಕಿ ಪರಿಹಾರಕ್ಕೆ ರಾಜ್ಯವು ಅಫಿಡವಿಟ್ ಸಲ್ಲಿಸಲಿದೆ ಎಂದರು.
ಪ್ರಕರಣವು ಹಿರಿಯ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರ ಪೀಠದ ಮುಂದೆ ಇಂದು ವಿಚಾರಣೆಗೆ ಬಂದಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜ್ವಲ್ ಪ್ರಕರಣ, ಒಕ್ಕಲಿಗರ ನಾಯಕತ್ವ ಮತ್ತು ಮನುಷ್ಯತ್ವ
ಕರ್ನಾಟಕಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬೇಸಿಗೆ ರಜೆಯ ನಂತರ ಜುಲೈನಲ್ಲಿ ನಡೆಸುವುದಾಗಿ ತಿಳಿಸಿತು.
ಕರ್ನಾಟಕ ಸರ್ಕಾರವು ಸೆ.13, 2023ಲ್ಲಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬರದಿಂದಾಗಿ 48 ಲಕ್ಷ ಎಕ್ಟೇರ್‌ನಲ್ಲಿನ ಬೆಳೆ ಹಾಳಾಗಿದ್ದು, 35,162 ಕೋಟಿ ರೂ. ನಷ್ಟವುಂಟಾಗಿದೆ ಎಂದು ತಿಳಿಸಿದೆ.
ರಾಜ್ಯವು 18 ಸಾವಿರ ಕೋಟಿ ನೆರವು ನೀಡಬೇಕೆಂದು ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ 3454 ಕೋಟಿ ಮಾತ್ರ ನೆರವು ನೀಡಿದೆ ಎಂದು ಕಳೆದ ಬಾರಿಯ ವಿಚಾರಣೆಯಲ್ಲಿ ಕಪಿಲ್ ಸಿಬಲ್ ಕೋರ್ಟ್‌ಗೆ ಮನವರಿಕೆ ಮಾಡಿದ್ದರು.
