ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ಮತ್ತು ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ್ ಅವರ ಮನೆಗಳ ಮೇಲೆ ಇಂದು (ಜುಲೈ 10) ಮುಂಜಾನೆ ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈಗಾಗಲೇ ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ ನಾಗೇಂದ್ರ ಎಸ್‌ಐಟಿ ತನಿಖೆಯನ್ನು ಎದುರಿಸುತ್ತಿದ್ದಾರೆ.
ಬಿ ನಾಗೇಂದ್ರ ಅವರಿಗೆ ಸೇರಿದ ಡಾಲರ್ಸ್ ಕಾಲೋನಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ಹಾಗೆಯೇ ಬಳ್ಳಾರಿಯಲ್ಲಿರುವ ಅವರ ಮನೆಯ ಮೇಲೆಯೂ ಕೂಡಾ ದಾಳಿ ನಡೆದಿದೆ.
ಇನ್ನು ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂನಲ್ಲಿರುವ ಬಿ ನಾಗೇಂದ್ರ ಅವರ ಆಸ್ತಿಗಳ ಮೇಲೆಯೂ ದಾಳಿ ನಡೆಸಿ ಶೋಧ ನಡೆಸಲಾಗಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 183 ಕೋಟಿ ರೂಪಾಯಿಯ ಅವ್ಯವಹಾರ ನಡೆದಿದೆ ಎನ್ನಲಾಗೊದೆ. ಬಹುಕೋಟಿ ಅಕ್ರಮ ಪ್ರಕರಣದಲ್ಲಿ ನಿಗಮದ ಹಣವನ್ನು ಸುಮಾರು 600ಕ್ಕೂ ಹೆಚ್ಚು ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ: ಸರ್ಕಾರದ ಮುಂದೆ 3 ಬೇಡಿಕೆ ಇಟ್ಟ ಶ್ರೀರಾಮುಲು
ಬೆಂಗಳೂರಿನಲ್ಲಿ ಸುಮಾರು 193 ಬ್ಯಾಂಕ್‌ಗಳಿಂದ 10 ಕೋಟಿ ರೂ. ಹಣವನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಈ ಹಣ ಬಾರ್ ಮತ್ತು ಚಿನ್ನದ ಅಂಗಡಿಗಳ ಖಾತೆಗಳಿಗೆ ವರ್ಗಾವಣೆ ಆಗಿತ್ತು ಎಂದು ಆರೋಪಿಸಲಾಗಿದೆ. ಜೂನ್‌ನಲ್ಲಿ ವಶಕ್ಕೆ ಪಡೆದ 10 ಕೋಟಿ ರೂ. ಸೇರಿ ಒಟ್ಟು 28 ಕೋಟಿ ರೂ. ಹಣವನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ.
ಈ ಅಕ್ರಮ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಬಿ. ನಾಗೇಂದ್ರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಶಾಸಕ ದದ್ದಲ್ ಈಗಲೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ.
ಇನ್ನು ನಾಗೇಂದ್ರ ಹಾಗೂ ದದ್ದಲ್ ಇಬ್ಬರೂ ಇಂದು ಎಸ್‌ಐಟಿ ವಿಚಾರಣೆಯನ್ನೂ ಮತ್ತೆ ಎದುರಿಸಬೇಕಿದೆ. ಮಂಗಳವಾರ ಇಬ್ಬರೂ ಕ್ರಮವಾಗಿ ಎಂಟು ಹಾಗೂ ನಾಲ್ಕು ಗಂಟೆಗಳ ಕಾಲ ಎಸ್‌ಐಟಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದರು.
ದಾಳಿ ಬಳಿಕ ವಿಜಯಕುಮಾರ್ ಮತ್ತು ಚೇತನ್ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರೂ ಕೂಡಾ ನಾಗೇಂದ್ರ ಅವರ ಆಪ್ತ ಸಹಾಯಕರಾಗಿದ್ದರು ಎಂದು ವರದಿಯಾಗಿದೆ.
ಅವರನ್ನು ನಿಗಮದಿಂದ ಒದ್ದು ಒಡಿಶಾ ಬೇಕಿತ್ತು. ಅವರು ಪರಿಶುದ್ಧ ವಾದ ನಂತರ ಮತ್ತೆ ಸೇರಿಸಿಕೊಳ್ಳಿ. ಯಾರ ಅಭ್ಯಂತರವೂ ಇಲ್ಲ. ಇನ್ನೂ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುವದು ತನಿಖೆ ಯಾಗಬೇಕು ಮತ್ತು ಇನ್ನೂ ಯಾರು ಇದರಲ್ಲಿ ಸಾಮಿಲಾಗಿದ್ಧಾರೆ ? ಜನತೆಗೆ ತಿಳಿಯಬೇಕು.