ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನ್ಯಾಯಾಲಯ ಮಾನವ ಹಕ್ಕುಗಳ ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಅವರಿಗೆ ಬಸವಶ್ರೀ ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಬೆಂಗಳೂರಿಗೆ ಆಗಮಿಸಲು ಎರಡು ದಿನಗಳ ಕಾಲ ಅನುಮತಿ ನೀಡಿದೆ.
ಎಲ್ಗರ್ ಪರಿಷತ್ ಪ್ರಕರಣದಲ್ಲಿ ಆರೋಪಿಯಾಗಿರುವ ಆನಂದ್ ತೇಲ್ತುಂಬ್ಡೆ ಅವರು ಬೆಂಗಳೂರಿನ ತಮ್ಮ ನಿವಾಸದ ಸ್ಥಳ ಹಾಗೂ ದೂರವಾಣಿಯೊಂದಿಗೆ ಪ್ರಯಾಣದ ವಿವರವನ್ನು ನೀಡಬೇಕು ಎಂದು ವಿಶೇಷ ನ್ಯಾಯಾಧೀಶರಾದ ಆರ್‌ಜೆ ಕಾಟೇರಿಯಾ ನಿರ್ದೇಶಿಸಿದರು.
“ಅರ್ಜಿದಾರರು ನೀಡಿರುವ ಸ್ವತಂತ್ರವನ್ನು ದುರುಪಯೋಗಪಡಿಸಿಕೊಳ್ಳಬಾರದು.ನಿಗದಿಪಡಿಸಿರುವ ದಿನದಂದು ಫೆ.02ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಆನಂದ್ ತೇಲ್ತುಂಬ್ಡೆ ಹಾಗೂ ಧಾರಾವಾಡದ ಡಾ.ಎನ್ ಜಿ ಮಹದೇವಪ್ಪ ಅವರಿಗೆ 2023 ಹಾಗೂ 2024ನೇ ಸಾಲಿನ ರಾಷ್ಟ್ರಮಟ್ಟದ ಬಸವಶ್ರೀ ಪ್ರಶಸ್ತಿಗೆ ಜನವರಿ 25 ರಂದು ಆಯ್ಕೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಆಯಾ ಕುಮಾರ್, ಗಯಾ ಕುಮಾರ್’- ಅವರೇ ನಿತೀಶ್ ಕುಮಾರ್
ಬಸವಶ್ರೀ ಪ್ರಶಸ್ತಿಯು ಸಾಹಿತ್ಯ, ಸಾಮಾಜಿಕ ನ್ಯಾಯ ಹಾಗೂ ಸಾಮರಸ್ಯ ಕ್ಷೇತ್ರಗಳಲ್ಲಿ ಮಾಡಿರುವಂತ ಸಾಧನೆಗೆ ವ್ಯಕ್ತಿಗತವಾಗಿ ಹಾಗೂ ಸಂಘಸಂಸ್ಥೆಗಳಿಗೆ ನೀಡಲಾಗುತ್ತದೆ. ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಹಲವು ಪ್ರಶಸ್ತಿಗಳೊಂದಿಗೆ ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಜನವರಿ 31ರಂದು ಪ್ರದಾನ ಮಾಡಲಾಗುತ್ತದೆ.
ಆನಂದ್ ತೇಲ್ತುಂಬ್ಡೆ ಅವರು ಐಐಎಂ ಅಹಮದಾಬಾದ್‌ನ ಪದವೀದರರಾಗಿದ್ದು,ದಲಿತ ಸಮುದಾಯ ಎದುರಿಸುತ್ತಿರುವ ಹಲವು ಸಮಸ್ಯೆಗಳ ಮುಂಚೂಣಿ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಐಐಟಿ ಖಾರಗ್‌ಪುರ್ ಪ್ರಾಧ್ಯಾಪಕರು ಕೂಡ ಆಗಿದ್ದು,ವಿಶ್ವದ ಹಲವು ದೇಶಗಳ ವಿವಿಗಳ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಇವರನ್ನು ಆಹ್ವಾನಿಸಲಾಗುತ್ತದೆ.
ಭೀಮಾ ಕೋರೆಗಾಂವ್ ಪ್ರಕರಣವು 2017ರ ಡಿಸೆಂಬರ್ 31ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದೆ. ಭಾಷಣದ ಮರುದಿನ ನಗರದ ಹೊರವಲಯದಲ್ಲಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂಬುದು ಆನಂದ್ ತೇಲ್ತುಂಬ್ಡೆ ಮೇಲಿನ ಆರೋಪವಾಗಿದೆ.