ಈ ದಿನ ಸಂಪಾದಕೀಯ | ‘ಆಯಾ ಕುಮಾರ್, ಗಯಾ ಕುಮಾರ್’- ಅವರೇ ನಿತೀಶ್ ಕುಮಾರ್

Date:

ಬಿಹಾರ ರಾಜಕಾರಣದಲ್ಲಿ ತಮ್ಮ ಆಟ ಇನ್ನೂ ಮುಗಿದಿಲ್ಲ ಎಂದು ಬಿಜೆಪಿಗೆ ತೋರಿಸಿಕೊಡುವ ಉದ್ದೇಶದಿಂದಲೇ ನಿತೀಶ್ ಎನ್.ಡಿ.ಎ. ತೊರೆದಿದ್ದರೆಂದು ತೋರುತ್ತಿದೆ. ಈ ಪ್ರಯತ್ನದಲ್ಲಿ ಈಗಿನ ಮಟ್ಟಿಗೆ ಸಫಲರಾಗಿದ್ದಾರೆ

 

ಗಳಿಗೆಗೊಮ್ಮೆ ರಂಗು ಬದಲಿಸುವ ನಿತೀಶ್ ಕುಮಾರ್ ರಾಜಕಾರಣಕ್ಕೆ ಆದಿ ಅಂತ್ಯವೇ ಇದ್ದಂತಿಲ್ಲ. ಇನ್ನೇನು ಮುಗಿಯಿತು ಎಂದುಕೊಳ್ಳುವಷ್ಟರಲ್ಲೇ ಮರುಜನುಮ ಪಡೆಯುತ್ತಿದೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಪಕ್ಕಾ ಪಕ್ಷಾಂತರಿಗಳಿಗೆ ಈ ಹಿಂದೆ  ‘ಆಯಾ ರಾಮ್ ಗಯಾ ರಾಮ್’ ಎನ್ನಲಾಗುತ್ತಿತ್ತು. ಹಿಂದೀನಾಡು ಈ ವ್ಯಂಗ್ಯಕ್ಕೆ ಹೊಸರೂಪ ನೀಡಿದಂತಿದೆ. ಅದುವೇ ಆಯಾ ಕುಮಾರ್, ಗಯಾ ಕುಮಾರ್- ಅವರೇ ನಿತೀಶ್ ಕುಮಾರ್.

ಎನ್.ಡಿ.ಎ. ವಿರುದ್ಧ ‘ಇಂಡಿಯಾ’ (INDIA)  ಒಕ್ಕೂಟ ರಚನೆಯ ಮುಂಚೂಣಿಯಲ್ಲಿದ್ದು, ಆರಂಭಿಕ ಉತ್ಸಾಹ ತೋರಿದ್ದ ಸಂಯುಕ್ತ ಜನತಾದಳದ ನಾಯಕ  ವಾಪಸು ಬಿಜೆಪಿ ಮಡಿಲಿಗೇ  ಮರಳಿದ್ದಾರೆ. ಕಳೆದ ಹನ್ನೊಂದು ವರ್ಷಗಳಲ್ಲಿ ನಾಲ್ಕು ಸಲ ಮೈತ್ರಿಕೂಟ ಬದಲಿಸಿದ್ದಾರೆ. ಮೋದಿಯವರನ್ನು ತೆಗಳುವುದು ಮತ್ತು ಹೊಗಳುವುದು ಎರಡೂ ನೀರು ಕುಡಿದಷ್ಟೇ ಸಲೀಸು ಇವರಿಗೆ.

ಪ್ರಧಾನಮಂತ್ರಿ ಆಗಬೇಕೆಂಬುದು ಅವರ ಕನಸು. ಸದ್ಯದ ಮಟ್ಟಿಗೆ ಅದಕ್ಕೆ ಕಡಿವಾಣ ಹಾಕಿಕೊಂಡು ಸಮಯ ಕಾಯುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟದ ಸಂಚಾಲಕ ಹುದ್ದೆಯನ್ನು ನೀಡಲಿಲ್ಲವೆಂಬ ಅವರ ‘ಮುನಿಸು’ ದಿನದಿಂದ ದಿನಕ್ಕೆ ಬಲಿತಿತ್ತು. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆಮ್ ಆದ್ಮಿ ಪಾರ್ಟಿಯ ನಾಯಕ ಅರವಿಂದ ಕೇಜ್ರೀವಾಲ್ ಅವರು ಮಲ್ಲಿಕಾರ್ಜುನ ಖರ್ಗೆಯವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ನಿತೀಶ್ ‘ಇಂಡಿಯಾ’ದಿಂದ ಮತ್ತಷ್ಟು ದೂರ ಸರಿದು ಮೌನಕ್ಕೆ ಮೊರೆ ಹೋಗಿದ್ದರು. ರಾಷ್ಟ್ರೀಯ ಜನತಾದಳದ ಲಾಲೂಪ್ರಸಾದ್ ಯಾದವ್ ಕೂಡ ತಮ್ಮ ಹಳೆಯ ಗೆಳೆಯನ ಮುನಿಸನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬಿಜೆಪಿ ಮಾತ್ರವಲ್ಲ, ಲಾಲೂ ಕೂಡ ತಮ್ಮ  ಪಕ್ಷವನ್ನು ಒಡೆಯಬಹುದೆಂಬ ಶಂಕೆಯೂ ನಿತೀಶ್ ಮನದಲ್ಲಿ ಮೂಡಿದ್ದುಂಟು. ಬಿಹಾರದ ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ಮಗನಿಗೆ ಖಾಲಿ ಮಾಡಿಸಿಕೊಡಬೇಕೆಂಬ ಅಭೀಪ್ಸೆ ಲಾಲೂ ಅವರನ್ನು ಕುರುಡರನ್ನಾಗಿಸಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಹಾರ ರಾಜಕಾರಣದಲ್ಲಿ ತಮ್ಮ ಆಟ ಇನ್ನೂ ಮುಗಿದಿಲ್ಲ ಎಂದು ಬಿಜೆಪಿಗೆ ತೋರಿಸಿಕೊಡುವ ಉದ್ದೇಶದಿಂದಲೇ ನಿತೀಶ್ ಎನ್.ಡಿ.ಎ. ತೊರೆದಿದ್ದರೆಂದು ತೋರುತ್ತಿದೆ. ಈ ಪ್ರಯತ್ನದಲ್ಲಿ ಈಗಿನ ಮಟ್ಟಿಗೆ ಸಫಲರಾಗಿದ್ದಾರೆ. ಇದೇ ಮಾತನ್ನು ತಮ್ಮ ಹಳೆಯ ಗೆಳೆಯ ಲಾಲೂ ಅವರತ್ತಲೂ ತಿರುಗಿಸಿದ್ದಾರೆ. 2025ರ ವಿಧಾನಸಭಾ ಚುನಾವಣೆ ತನಕ ಮುಖ್ಯಮಂತ್ರಿ ಕುರ್ಚಿ ಗಟ್ಟಿ. ಬಿಜೆಪಿ ಅವರನ್ನು ಇಳಿಸುವುದೇ ಆದರೆ, ಬೇರೊಂದು ಸಾಂವಿಧಾನಿಕ ಹುದ್ದೆಯನ್ನು ತೋರಿಸಬೇಕಾಗುತ್ತದೆ. ಬಿಹಾರದ ಈ ರಾಜಕೀಯ ಆಟದಲ್ಲಿ ಅಂತಿಮ ನಗೆ ಬಿಜೆಪಿಯದೇ ಆಗಿದೆ. 2019ರಲ್ಲಿ ಬಿಹಾರದ 40 ಲೋಕಸಭಾ ಸೀಟುಗಳ ಪೈಕಿ ಎನ್.ಡಿ.ಎ ಗೆದ್ದದ್ದು 39. ಹೆಚ್ಚು ಕಡಿಮೆ ಇಂತಹುದೇ ಫಲಿತಾಂಶದ ಕಣ್ಣಿಟ್ಟು ದಾಳ ಉರುಳಿಸುತ್ತಿದೆ ಮೋಶಾ ಜೋಡಿ.

ನಿತೀಶ್ ರೆಕ್ಕೆಪುಕ್ಕಗಳ ಕತ್ತರಿಸುವ ಕೆಲಸವನ್ನು ಬಿಜೆಪಿ 2020ರ ವಿಧಾನಸಭಾ ಚುನಾವಣೆಯಲ್ಲೇ ಕಾರ್ಯಗತಗೊಳಿಸಿತ್ತು. ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿಯನ್ನು ಬಳಸಿಕೊಂಡು ಸಂಯುಕ್ತ ಜನತಾದಳಕ್ಕೆ ಒಳಹೊಡೆತ ನೀಡಿತ್ತು. 30-35 ಸೀಟುಗಳಲ್ಲಿ ನಿತೀಶ್ ಸೋಲನ್ನು ಬರೆದಿತ್ತು. ಬಿಜೆಪಿಗಿಂತ ಕಡಿಮೆ ಸಂಖ್ಯೆಯ ಸೀಟುಗಳನ್ನು ಗೆದ್ದು ಮುಖಭಂಗಿತರಾದ ನಂತರ ನಿತೀಶ್ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಹೆಚ್ಚು ಸೀಟುಗಳನ್ನು ಗೆದ್ದಿರುವ ತನಗೇ ಮುಖ್ಯಮಂತ್ರಿ ಸ್ಥಾನ ದಕ್ಕಬೇಕೆಂಬ ಒತ್ತಡವನ್ನು ನಿತೀಶ್ ಮೇಲೆ ಹಲವು ಬಗೆಗಳಲ್ಲಿ ಹೇರತೊಡಗಿತ್ತು ಬಿಜೆಪಿ.

ಮಹಾರಾಷ್ಟ್ರದಲ್ಲಿ ಶಿವಸೇನೆ ಕೂಡ ಒಂದು ಕಾಲದಲ್ಲಿ ಬಿಜೆಪಿ ಮೈತ್ರಿಕೂಟದ ದೊಡ್ಡಣ್ಣನಾಗಿತ್ತು. ಆದರೆ ನಿತೀಶ್ ಅವರನ್ನು ಕತ್ತರಿಸಿದಂತೆ ಸೇನೆಯನ್ನೂ ಕತ್ತರಿಸಿ ತಾನು ದೊಡ್ಡಣ್ಣನ ಸ್ಥಾನದಲ್ಲಿ ಕುಳಿತಿದೆ ಬಿಜೆಪಿ. ಈ ಹಂಚಿಕೆಯ ವಿರುದ್ಧ ಬಂಡೆದ್ದ ಸೇನೆ ಕಾಂಗ್ರೆಸ್-ಎನ್.ಸಿ.ಪಿ. ಜೊತೆ ಕೈಜೋಡಿಸಿ ಸರ್ಕಾರ ರಚಿಸಿತು. ಹಲ್ಲು ಮಸೆದು ಸಮಯ ಕಾಯುತ್ತಿದ್ದ ಬಿಜೆಪಿ, ಶಿವಸೇನೆಯನ್ನು ಒಡೆದು ಉದ್ಧವ ಠಾಕ್ರೆ ಅವರಿಗೆ ‘ಪಾಠ’ ಕಲಿಸಿತು. ಇಂತಹುದೇ ಪಾಠದ ಆಟ ಇಂದಲ್ಲ ನಾಳೆ ಬಿಹಾರದಲ್ಲೂ ಅನಾವರಣ ಆಗುವುದೆಂಬ ಖಚಿತ ಗೋಡೆ ಬರೆಹವನ್ನು ಓದಿಕೊಳ್ಳುವುದು ಪಳಗಿದ ರಾಜಕಾರಣಿ ನಿತೀಶ್ ಗೆ ಕಷ್ಟವಿರಲಿಲ್ಲ. ಬಿಜೆಪಿ ಮೈತ್ರಿಕೂಟದಿಂದ ಹೊರಬಿದ್ದು ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಬೆಂಬಲ ಪಡೆದು ಸರ್ಕಾರ ರಚಿಸಿದರು.

ಬಿಹಾರದಲ್ಲಿ ಜಾತಿಜನಗಣತಿ ನಡೆಸಿ ಯಾವ ಜಾತಿ-ವರ್ಗಗಳ ಜನಸಂಖ್ಯೆ ಎಷ್ಟೆಂಬ ಅಂಕಿ ಅಂಶಗಳನ್ನು ಇತ್ತೀಚೆಗೆ ಹೊರಹಾಕಿತ್ತು ನಿತೀಶ್ ಸರ್ಕಾರ. ಅಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.65ಕ್ಕೆ ಹೆಚ್ಚಿಸಿತ್ತು. ಈ ಅಸ್ತ್ರವು ಬಿಜೆಪಿಯನ್ನು ಕಕ್ಕಾಬಿಕ್ಕಿ ಮಾಡಿತ್ತು. ಈ ಕ್ರಮ ಮುಂಬರುವ ಲೋಕಸಭೆ- ವಿಧಾನಸಭೆ ಚುನಾವಣೆಗಳಲ್ಲಿ ತನಗೆ ಭಾರೀ ಜನಬೆಂಬಲವನ್ನು ಗಳಿಸಿಕೊಡಲಿದೆ ಎಂದು ನಿತೀಶ್ ಪಕ್ಷ ನಂಬಿತ್ತು.

ಆದರೆ ಮೋದಿ ಮತ್ತು ಅಮಿತ್ ಶಾ ಅವರ ಚತುರ ಚುನಾವಣಾ ತಂತ್ರಗಾರಿಕೆ ನಿತೀಶ್ ನಂಬಿಕೆಯನ್ನು ಕದಲಿಸಿದೆ. ಬಿಹಾರದ ಹಿಂದುಳಿದ ವರ್ಗಗಳ ಎತ್ತರದ ನಾಯಕ ಎಂದೇ ಹೆಸರಾಗಿದ್ದ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ‘ಭಾರತರತ್ನ’ ನೀಡಿ ಪ್ರತಿದಾಳ ಉರುಳಿಸಿದೆ ಈ ಜೋಡಿ. ಈ ರಾಜ್ಯದ ಹಿಂದುಳಿದ ವರ್ಗಗಳ ಮತದಾರರನ್ನು ಬಿಜೆಪಿಯತ್ತ ಒಲಿಸಿಕೊಳ್ಳುವ ದಾರಿಯಲ್ಲಿ ಇಟ್ಟಿರುವ ಮೊದಲ ಹೆಜ್ಜೆಯಿದು. ಬಿಹಾರದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ‘ವಿಶೇಷ ಪ್ಯಾಕೇಜ್’ ನೀಡಬೇಕೆಂಬುದು ನಿತೀಶ್ ಅವರ ಬಹುಕಾಲದ ಬೇಡಿಕೆ. ಈ ಬೇಡಿಕೆಯನ್ನು ಆಂಶಿಕವಾಗಿ ಅಥವಾ ಪೂರ್ಣವಾಗಿ ಈಡೇರಿಸುವ ಮತ್ತು ಇತರೆ ಹಲವು  ಭರವಸೆಗಳೂ ಮೋದಿ ರಾಜಕೀಯ ಬತ್ತಳಿಕೆಯಲ್ಲಿದ್ದರೆ ಆಶ್ಚರ್ಯಪಡಬೇಕಿಲ್ಲ.

‘ಇಂಡಿಯಾ’ದಲ್ಲಿ ಮುಂದುವರೆಯುವ ಕುರಿತು ನಿತೀಶ್ ಮನಸ್ಸು ಡೋಲಾಯಮಾನ ಆದದ್ದನ್ನು ಚುರುಕಾಗಿ ಅರಿಯಿತು ಬಿಜೆಪಿ. ರಾಜಕೀಯದಲ್ಲಿ ಮೈತ್ರಿಯ ಬಾಗಿಲುಗಳು ಮುಚ್ಚಿದರೆ, ಎಲ್ಲ ಕಾಲಕ್ಕೂ ಮುಚ್ಚಿದವು ಎಂದು ಅರ್ಥವಲ್ಲ ಎಂಬ ಸಂದೇಶವನ್ನು ನಿತೀಶ್ ಗೆ ರವಾನಿಸಿತು. ಆನಂತರದ್ದೆಲ್ಲ ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆದಿದೆ. ಬಿಹಾರ ರಾಜಕಾರಣದ ಮೇಲೆ ಬಿಗಿಹಿಡಿತವನ್ನು ಬಿಜೆಪಿ ಮರಳಿ ಗಳಿಸಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಉತ್ತರಾಖಂಡ ಈಗಾಗಲೆ ಮೋಶಾ ಸಂದೂಕದಲ್ಲಿ ಭದ್ರವಾಗಿವೆ. ಇದೀಗ ಬಿಹಾರವನ್ನೂ ವಶಕ್ಕೆ ತೆಗೆದುಕೊಂಡಂತಾಯಿತು. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಹೇಳಹೆಸರಿಲ್ಲದಂತೆ ಆಗಬೇಕು ಎಂಬುದು ಕೇಸರಿ ಪಕ್ಷದ ಧ್ಯೇಯ ಆಗಿರುವಂತೆ ತೋರುತ್ತಿದೆ.

‘ಇಂಡಿಯಾ’ ಎಂಬ ಪ್ರತಿಪಕ್ಷಗಳ ಮೈತ್ರಿಕೂಟ ಏಳಿಗೆಯಾಗಲಿಲ್ಲ. ಏಳು ತಿಂಗಳಾದರೂ ಅದರ ಎದೆಬಡಿತ ಮತದಾರರಿಗೆ ಕೇಳಿಬರಲಿಲ್ಲ. ಜಂಟಿ ಪ್ರಚಾರ ಅಥವಾ ಚುನಾವಣಾ ತಂತ್ರಗಾರಿಕೆಯ ಸುಳಿವೇ ಇಲ್ಲ. ಪಶ್ಚಿಮ ಬಂಗಾಳ ಮತ್ತು ಪಂಜಾಬಿನಲ್ಲಿ ಕಾಂಗ್ರೆಸ್ ಜೊತೆ ತೃಣಮೂಲ ಮತ್ತು ಆಮ್ ಆದ್ಮೀ ಪಾರ್ಟಿ ಜೊತೆಯ ಒಪ್ಪಂದ ಏರುದಾರಿಯಾಗಿ ಪರಿಣಮಿಸಿದೆ. ಉದ್ಧವ ಠಾಕ್ರೆಯವರ ಶಿವಸೇನೆ ಮತ್ತು ಅಖಿಲೇಶ್ ಅವರ ಸಮಾಜವಾದಿ ಪಾರ್ಟಿ ಕೂಡ ‘ಇಂಡಿಯಾ’ ಸಭೆಯಿಂದ ದೂರ ಉಳಿಯತೊಡಗಿವೆ.

ಲೋಕಸಭಾ ಚುನಾವಣೆಗೆ ಇಳಿಎಣಿಕೆ ಶುರುವಾಗಿ ಹೋಗಿದೆ. ಇನ್ನು ಬಹಳ ಸಮಯ ಉಳಿದಿಲ್ಲ. ಸಂಯುಕ್ತ ಜನತಾದಳ, ತೃಣಮೂಲ, ಆಪ್ ನಂತಹ ಪ್ರಾದೇಶಿಕ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಸಫಲವಾಗಿಲ್ಲ. ಬಿಟ್ಟುಕೊಡುವುದನ್ನು ಬಿಟ್ಟುಕೊಟ್ಟು, ಪಡೆಯಬಹುದಾದ್ದನ್ನು ಪಡೆದು ಅವುಗಳಿಗೆ ಇರಬಹುದಾದ ಅಭದ್ರತೆಯ ಭಾವನೆಯನ್ನು ನಿವಾರಿಸಬೇಕಿತ್ತು. ರಾಹುಲ್ ಗಾಂಧಿ ಅವರು ಭಾರತ್ ಜೋಡೋ-2 ಪಾದಯಾತ್ರೆಯ ಅಂಗವಾಗಿ ಕೈಗೊಂಡಿರುವ ನ್ಯಾಯಯಾತ್ರೆಯು ಇಂಡಿಯಾ ಮೈತ್ರಿಕೂಟದ ತೃಣಮೂಲ ಮತ್ತು ಸಂಯುಕ್ತ ಜನತಾದಳದ ತವರು ರಾಜ್ಯಗಳನ್ನು ಹಾದು ಹೋಗುತ್ತಲಿದೆ. ಲೋಕಸಭಾ ಚುನಾವಣೆಗಳು ಬಾಗಿಲು ಬಡಿಯುತ್ತಿರುವ ಹಂತದಲ್ಲಿ ಈ ಯಾತ್ರೆ ಬೇಕಿತ್ತೇ ಎಂಬ ಅಸಮಾಧಾನವೂ ಮಮತಾ ಮತ್ತು ನಿತೀಶ್ ಅವರದಾಗಿತ್ತು.

ಹಿಂದುಳಿದ ವರ್ಗಗಳಿಗೆ ತಾವು ನೀಡಿರುವ ಶೇ.65ರ ಮೀಸಲಾತಿಯನ್ನು ಇದೀಗ ಬಿಜೆಪಿಯ ನೆರಳಿನಲ್ಲಿ ಜಾರಿಗೊಳಿಸುವ ಸವಾಲನ್ನು ನಿತೀಶ್ ಹೇಗೆ ನಿಭಾಯಿಸಲಿದ್ದಾರೆ, ಲಾಲೂಪ್ರಸಾದ್ ಪಕ್ಷ ಬಲಿಷ್ಠ ಬಿಜೆಪಿಯನ್ನು ಎದುರಿಸುವ ಬಗೆಯೆಂತು ಎಂಬುದನ್ನು ಕಾದು ನೋಡಬೇಕಿದೆ.

‘ಇಂಡಿಯಾ’ ಮೈತ್ರಿಕೂಟಕ್ಕೆ ಮೋದಿಯವರು ನೀಡಿದ ಮಾರಣಾಂತಿಕ ಹೊಡೆತವಿದು. ದೇಶದ ಪ್ರತಿಪಕ್ಷಗಳ ನಡುವೆ ಇನ್ನು ಉಳಿದಿರುವ ಮೈತ್ರಿಯ ಅವಕಾಶ ಚುನಾವಣಾ ನಂತರದ ಒಪ್ಪಂದ ಮಾತ್ರ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...