ಮುಸ್ಲಿಮರು ಇರದಿದ್ದರೆ ಜೆಡಿಎಸ್‌ಗೆ ಒಂದು ಸ್ಥಾನವೂ ಬರುವುದಿಲ್ಲ ಎಂಬುದು ದೃಢವಾಗಿದೆ.ಅವತ್ತು 19 ಜನ ಗೆದ್ದದ್ದು ಮುಸ್ಲಿಮರಿಂದ ಎಂಬುದು ಕೂಡ ಸಾಬೀತಾಗಿದೆ ಎಂದು ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ ತಿಳಿಸಿದರು.
ಮೈಸೂರಿನಲ್ಲಿ ಜಿ ಟಿ ದೇವೇಗೌಡರ ಅವರನ್ನು ಭೇಟಿಯಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಿ ಟಿ ದೇವೇಗೌಡ ಸೇರಿದಂತೆ ಜೆಡಿಎಸ್‌ನ 12 ರಿಂದ 13 ಶಾಸಕರು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ನೋವು ನುಂಗಿಕೊಂಡಿದ್ದಾರೆ. ಈಗ ಅವರನ್ನು ಒಗ್ಗೂಡಿಸುವ ಕೆಲಸವನ್ನು ನಾನು ಶುರು ಮಾಡಿದ್ದೇನೆ. ಮುಂದೆ ಏನೇನು ಆಗುತ್ತದೆಯೋ ನೋಡೋಣ’ ಎಂದು ಹೇಳಿದರು
ಈಗಲೂ ನಾನೇ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನದು’ ಎಂದರು.
ಇದನ್ನು ಓದಿದ್ದೀರಾ?: ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸುವ ಆಟಗಾರರ ಹೆಸರು ಘೋಷಣೆ
‘ಜಿಟಿಡಿ ಕಳೆದ ವಿಧಾನಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್‌ಗೆ ಹೋಗಿದ್ದರೆ ಸಚಿವರಾಗುತ್ತಿದ್ದರು. ಜೆಡಿಎಸ್ ಬಲಪಡಿಸಲೆಂದು ನಾನೇ ಅವರನ್ನು ಜೆಡಿಎಸ್‌ನಲ್ಲಿ ಉಳಿಸಿಕೊಂಡೆ. ಈಗ ಜಿಟಿಡಿಯವರ ಕತ್ತು ಕೊಯ್ಯುವ ಕೆಲಸ ಮಾಡಲಾಗುತ್ತಿದೆ. ಎಲ್ಲ ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದರು.
ಇನ್ನೆರಡು ದಿನ ಬಿಟ್ಟು ನಾನು ರಾಜ್ಯ ಪ್ರವಾಸ ಹೋಗುತ್ತಿದ್ದೇನೆ. ಆಗ ಕೆಲವು ನಾಯಕರನ್ನು ಭೇಟಿಯಾಗುತ್ತೇನೆ. ಬಳಿಕ ಮತ್ತೆ ಜಿಟಿಡಿ ಭೇಟಿಯಾಗುತ್ತೇನೆ. ಮೂಲ ಜೆಡಿಎಸ್ ನಮ್ಮದೆ. ಅದರ ಖಾತೆ, ಪಹಣಿ ಎಲ್ಲವೂ ನಮ್ಮ ಹೆಸರಿನಲ್ಲಿವೆ. ಈಗಲೂ ಎಚ್ ಡಿ ದೇವೇಗೌಡರು ಬಿಜೆಪಿ ಸಹವಾಸ ಬಿಟ್ಟು ಬರಲಿ. ಪಕ್ಷವನ್ನು ಕಟ್ಟುತ್ತೇವೆ’ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉಪಸಮರದ ಗೆಲುವು– ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಕಾಂಗ್ರೆಸ್ ಸರ್ಕಾರ?
‘ಹೊಸ ಪಕ್ಷವೋ, ತೃತೀಯ ರಂಗವೋ ಅಥವಾ ಜೆಡಿಎಸ್ ಬಲವರ್ಧನೆಯೋ? ಎಲ್ಲವನ್ನೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಆಧರಿಸಿ ತೀರ್ಮಾನ ಮಾಡುತ್ತೇವೆ’ಎಂದು ಪ್ರತಿಕ್ರಿಯಿಸಿದರು.
‘ಈಗ ಇರುವ ಜೆಡಿಎಸ್ ಮನೆಗೆ ಬೆಂಕಿ ಬಿದ್ದಾಗಿದೆ. ಎಲ್ಲ ಜೆಡಿಎಸ್ ಶಾಸಕರೂ ಅವರವರ ಕ್ಷೇತ್ರ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಒಬ್ಬೊಬ್ಬರೇ ಮಾತು ಶುರುಮಾಡಿದ್ದಾರೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಈಗಲಾದರೂ ಬುದ್ಧಿ ಕಲಿಯಬೇಕು. ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು. ಆಗ ಮಾತ್ರ ಮೂಲ ಜೆಡಿಎಸ್ ಉಳಿಸಿಕೊಳ್ಳಬಹುದು’ ಎಂದರು.
‘ಜೆಡಿಎಸ್ ಪರಿಸ್ಥಿತಿ ಬಸ್ ನಿಲ್ದಾಣದಲ್ಲಿ ನಿಂತ ಬಸವಿಯ ರೀತಿಯಾಗಿದೆ. ಬಿಜೆಪಿಯನ್ನು ಲವ್ ಮಾಡಿದ್ದಾಯಿತು. ಈಗ ಅವರನ್ನು ಅಲ್ಲೇ ಬಿಟ್ಟು ಬಿಡಬೇಕು’ ಎಂದು ಹೇಳಿದರು.
‘ನಾನು ಕುಮಾರಸ್ವಾಮಿ ಜೊತೆಯಲ್ಲಿದ್ದಾಗ ಚನ್ನಪಟ್ಟಣದಲ್ಲಿ 4 ಕೋಟಿ ರೂ. ಖರ್ಚು ಮಾಡಿ 20 ಸಾವಿರ ಮತಗಳ ಅಂತರದಿಂದ ಗೆದ್ದರು. ಈಗ ನಾನು ಅವರ ಜೊತೆಯಲ್ಲಿಲ್ಲ. 150 ಕೋಟಿ ರೂ. ಖರ್ಚು ಮಾಡಿದರೂ ಅವರ ಮಗ ನಿಖಿಲ್ 25 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ” ಎಂದರು.
