ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರಾಜ್ಯದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಅಧಿಕಾರಿಗಳು ಏರ್ ಆ್ಯಂಬುಲೆನ್ಸ್ ಮೂಲಕ ಶಾಂತಕುಮಾರ್‌ರನ್ನು ಚಂಡೀಗಡದಿಂದ ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಅಪಘಾತದಲ್ಲಿ ಶಾಂತಕುಮಾರ್ ಅವರ ಬೆನ್ನು ಮೂಳೆಗೆ ಗಂಭೀರ ಗಾಯವಾಗಿದೆ. ಸದ್ಯ ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
ದೆಹಲಿಯ ಕನೋಲಿ ಬಾರ್ಡರ್‌ನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಸಂಬಂಧಿಸಿದ ಸಭೆಗೆ ಕುರುಬೂರು ಶಾಂತಕುಮಾರ್ ಕಾರಲ್ಲಿ ತೆರಳುತ್ತಿದ್ದಾಗ ಪಟಿಯಾಲ ಸಮೀಪ ಅಪಘಾತ ಸಂಭವಿಸಿದೆ. ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಲ್ಲಿದ್ದ ತಮಿಳುನಾಡಿನ ರೈತ ಮುಖಂಡರೊಬ್ಬರಿಗೂ ಗಾಯವಾಗಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಕಳೆದ ಒಂದು ವರ್ಷದಿಂದ ದೆಹಲಿಯ ಕನೋಲಿ ಬಾರ್ಡರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಂತಕುಮಾರ್ ಅವರು ಶುಕ್ರವಾರ ದೆಹಲಿಯಲ್ಲಿ ಕರೆಯಲಾಗಿದ್ದ ಸಭೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿತ್ತು.
