ರೈತರಿಗೆ ನೈಸ್ ನಿವೇಶನ ಹಂಚಿಕೆ – ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧ; ಸಿಎಂ ಡಿಕೆಶಿಗೆ ಮಾಜಿ ಪ್ರಧಾನಿ ದೇವೇಗೌಡ ಬಹಿರಂಗ ಪತ್ರ

Date:

ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಶೀತಲ ಸಮರಕ್ಕೆ ಕಾರಣವಾಗಿರುವ ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್‌ (BMIC/ನೈಸ್‌-NICE) ಯೋಜನೆ, ಇದೀಗ ಮತ್ತೊಮ್ಮೆ ರಾಜಕೀಯ ಸಂಘರ್ಷಕ್ಕೆ ಗುರಿಯಾಗಿದೆ. ನೈಸ್ ಯೋಜನೆಗಾಗಿ ಜಮೀನು ಕಳೆದುಕೊಂಡ 1,453 ರೈತರಿಗೆ ನಿವೇಶನ ಹಂಚಿಕೆ ಮಾಡಲು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರವನ್ನು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ತೀವ್ರವಾಗಿ ಪ್ರಶ್ನಿಸಿದ್ದು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

- Advertisement -

ಸೆಪ್ಟೆಂಬರ್‌ 3ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, BMIC ಯೋಜನೆಗಾಗಿ ಜಮೀನು ಕಳೆದುಕೊಂಡ 1,453 ರೈತರಿಗೆ ಪರಿಹಾರ ರೂಪದಲ್ಲಿ ನಿವೇಶನ ನೀಡಲು ನಿರ್ಧರಿಸಲಾಗಿತ್ತು. ಸಂಪುಟ ನಿರ್ಧಾರದ ಕುರಿತು ಮಾಹಿತಿ ನೀಡಿದ್ದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌ ಅವರು, “1 ಎಕರೆವರೆಗೆ ಜಮೀನು ಬಿಟ್ಟುಕೊಟ್ಟವರಿಗೆ 30X40 ಅಡಿ ಹಾಗೂ 1 ಎಕರೆಗಿಂತ ಹೆಚ್ಚು ಜಮೀನು ನೀಡಿದವರಿಗೆ 40X60 ಅಡಿ ನಿವೇಶನ ನೀಡಲಾಗುವುದು. ಈಗಾಗಲೇ 574 ನಿವೇಶನಗಳು ಸಿದ್ಧವಾಗಿದ್ದು, ವರಾಹಸಂದ್ರ, ಶ್ರೀಕಂಠಪುರ ಹಾಗೂ ಮಾದಾವರ ಪ್ರದೇಶಗಳಲ್ಲಿ ಉಳಿದ 879 ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಎರಡು ತಿಂಗಳೊಳಗೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು” ಎಂದು ತಿಳಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಸರ್ಕಾರದ ಈ ನಿರ್ಧಾರವನ್ನು ದೇವೇಗೌಡ ವಿರೋಧಿಸಿದ್ದಾರೆ. “ಸರ್ಕಾರದ ಈ ನಿರ್ಧಾರವು 1997ರ ಫ್ರೇಮ್‌ವರ್ಕ್‌ ಒಪ್ಪಂದ (FWA) ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ಮಹತ್ವದ ತೀರ್ಪುಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಇದು ಕೇವಲ ‘ರೈತರಿಗೆ ಪರಿಹಾರ ನೀಡಬೇಕೇ, ಬೇಡವೇ?’ ಎಂಬ ವಿಚಾರವಲ್ಲ. ನೈಸ್‌ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿನ ನೈಜ ಬಳಕೆ, ರಸ್ತೆ ಮತ್ತು ಇಂಟರ್‌ಚೇಂಜ್‌ಗಳಿಗೆ ಕಾಯ್ದಿರಿಸಿದ ಜಾಗದಲ್ಲಿ ವಸತಿ ಬಡಾವಣೆ ನಿರ್ಮಿಸುವ ಅಧಿಕಾರ ಯಾರಿಗೆ ಇದೆ, ಸುಪ್ರೀಂ ಕೋರ್ಟ್ ವಿಧಿಸಿರುವ ಮಿತಿಗಳೇನು ಹಾಗೂ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಹಿಂದೆ ತಾನೇ ತಳೆದಿದ್ದ ನಿಲುವಿಗೆ ವಿರುದ್ಧವಾಗಿ ಈಗ ಹೇಗೆ ನಿರ್ಧಾರ ತೆಗೆದುಕೊಂಡಿದೆ ಎಂಬ ಮೂಲಭೂತ ಕಾನೂನು ಪ್ರಶ್ನೆಯಾಗಿದೆ” ಎಂದು ದೇವೇಗೌಡರು ಹೇಳಿದ್ದಾರೆ.

Advertisements

ದೇವೇಗೌಡರ ಪತ್ರದ ಪೂರ್ಣ ಪಠ್ಯ ಇಲ್ಲಿದೆ;

“ಗೌರವಾನ್ವಿತ ಮುಖ್ಯಮಂತ್ರಿಗಳೇ, ಸೆಪ್ಟೆಂಬರ್ 4, 2026 ರಂದು ನಿಮ್ಮ ಸಂಪುಟವು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗಾಗಿ (BMICP) ಜಮೀನು ಕಳೆದುಕೊಂಡವರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ ಲಿಮಿಟೆಡ್ (NICEL) ಸಂಸ್ಥೆಗೆ ನಿರ್ದೇಶನ ನೀಡಿದೆ. ಹಾಗೆಯೇ, ಹೀಗೆ ಮಾಡಲು ಮಾನ್ಯ ಸುಪ್ರೀಂ ಕೋರ್ಟ್‌ನ ತೀರ್ಪಿನ ಸಮ್ಮತಿ ಇದೆ ಎಂದು ನಿಮ್ಮ ಸರ್ಕಾರ ನಂಬಿದೆ ಎಂದು ವ್ಯಾಪಕವಾಗಿ ವರದಿಯಾಗಿದೆ.

ಸಾರ್ವಜನಿಕರ ಕಣ್ಣಿಗೆ ಮಣ್ಣರಚಿ ಕಾನೂನಿನ ಆಡಳಿತವನ್ನು ಉಲ್ಲಂಘಿಸಬಹುದು ಎಂದು ನಿಮ್ಮ ಸಚಿವ ಸಂಪುಟ ಭಾವಿಸಿರುವ ರೀತಿ ಆಘಾತಕಾರಿಯಾಗಿದೆ. ನಿವೇಶನಗಳನ್ನು ನಿರ್ಮಿಸಲು ಸರ್ಕಾರವೇ ನಿರಂತರವಾಗಿ ಅನುಮತಿ ನಿರಾಕರಿಸುತ್ತಿರುವಾಗ, ಸಚಿವ ಸಂಪುಟವು ನಿವೇಶನ ಹಂಚಿಕೆಗೆ ಅನುಮೋದನೆ ನೀಡಿದೆ ಎಂದು ಹೇಳುವುದರ ಅರ್ಥವೇನು? 2016 ರಲ್ಲಿ ನಿಮ್ಮ ಪಕ್ಷವೇ ಅಧಿಕಾರದಲ್ಲಿದ್ದಾಗ, ನ್ಯಾಯಾಂಗ ನಿಂದನೆ ನಡಾವಳಿಗಳ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸಲ್ಲಿಸಿದ ಎರಡು ಪ್ರಮಾಣಪತ್ರಗಳಲ್ಲಿ (affidavits), ಇಂಟರ್‌ ಚೇಂಜ್‌ಗಳಲ್ಲಿ (ರಸ್ತೆ ಸಂಪರ್ಕ ಜಂಕ್ಷನ್‌ಗಳು) ನಿವೇಶನಗಳ ನಿರ್ಮಾಣಕ್ಕೆ ಅನುಮತಿ ನೀಡುವುದು 03.04.1997 ರ ಚೌಕಟ್ಟಿನ ಒಪ್ಪಂದದ (Framework Agreement – FWA) ನಿಯಮಗಳಿಗೆ ವಿರುದ್ಧವಾಗಿದೆ ಎಂದು ನಿಸ್ಸಂಶಯವಾಗಿ ತಿಳಿಸಿತ್ತು.

ಬಿಎಂಐಸಿಪಿ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತು ಎಫ್‌ಡಬ್ಲ್ಯೂಎ (FWA) ಒಪ್ಪಂದವನ್ನು ಯಥಾವತ್ತಾಗಿ ಜಾರಿಗೆ ತರಲು ಸುಪ್ರೀಂ ಕೋರ್ಟ್ ನೀಡಿರುವ ಮ್ಯಾಂಡಮಸ್ (mandamus) ಆದೇಶಕ್ಕೆ ತಾವು ಬದ್ಧರಾಗಿದ್ದೇವೆ ಮತ್ತು ರಸ್ತೆಯ ಇಂಟರ್‌ ಚೇಂಜ್‌ಗಳಲ್ಲಿ ನಿವೇಶನಗಳನ್ನು ರಚಿಸಲು ಅನುಮತಿಸಿದರೆ ಅದು ನ್ಯಾಯಾಲಯದ ಆದೇಶಗಳ ನಿಂದನೆಯಾಗುತ್ತದೆ ಎಂದು ನಿಮ್ಮ ಸರ್ಕಾರ ವಾದಿಸಿತ್ತು, ಮತ್ತು ಆ ವಾದ ಸರಿಯಾಗಿತ್ತು.

ಇಂಟರ್‌ ಚೇಂಜ್ ಜಮೀನುಗಳಲ್ಲಿ ಸಮೂಹ ವಸತಿ ಯೋಜನೆಗಳು ಮತ್ತು ವಸತಿ ಬಡಾವಣೆಗಳನ್ನು ನಿರ್ಮಿಸಲು ನೈಸ್ (NICEL) ಸಂಸ್ಥೆಗೆ ಯೋಜನಾ ಅನುಮೋದನೆಯ ಹಕ್ಕಿದೆ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ತೀರ್ಪು ನೀಡಿದಾಗ, ಸರ್ಕಾರ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ಸುಪ್ರೀಂ ಕೋರ್ಟ್ ಸರ್ಕಾರದ ನಿಲುವನ್ನು ಎತ್ತಿಹಿಡಿಯಿತು ಮತ್ತು ನೈಸ್ ಸಂಸ್ಥೆಯು ಎಫ್‌ಡಬ್ಲ್ಯೂಎ (FWA) ಒಪ್ಪಂದಕ್ಕೆ ಸಂಪೂರ್ಣವಾಗಿ ಬದ್ಧವಾಗಿರಬೇಕು ಎಂದು ಸ್ಪಷ್ಟವಾಗಿ ಹೇಳಿತು.

ಅಲ್ಲದೆ, ಇಂಟರ್‌ಚೇಂಜ್‌ಗಳಲ್ಲಿ ಹಾಗೂ ರಸ್ತೆ ಮತ್ತು ರಸ್ತೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಹಸ್ತಾಂತರಿಸಲಾದ ಜಮೀನುಗಳಲ್ಲಿ ನಿವೇಶನಗಳನ್ನು ರಚಿಸುವುದು ಎಫ್‌ಡಬ್ಲ್ಯೂಎ ಒಪ್ಪಂದದಲ್ಲಿ ಯಾವುದೇ ಆಧಾರವನ್ನು ಹೊಂದಿಲ್ಲದಿರುವುದಷ್ಟೇ ಅಲ್ಲದೆ, ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಬಿಎಂಐಸಿಪಿ ಯೋಜನೆಯ ಮೂಲ ಉದ್ದೇಶಕ್ಕೆ ಭಂಗ ತರುತ್ತದೆ ಎಂದು ಅಭಿಪ್ರಾಯಪಟ್ಟಿತು. ಸ್ವಯಂಪ್ರೇರಿತವಾಗಿ ಜಮೀನು ಬಿಟ್ಟುಕೊಟ್ಟ ಸಂತ್ರಸ್ತರಿಗೆ ನೀಡಿದ ಭರವಸೆಯಂತೆ ಪರಿಹಾರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲು ನಿಮ್ಮ ಸಂಪುಟ ಅನುಮೋದನೆ ನೀಡಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಈ ಲೇಖನ ಓದಿದ್ದೀರಾ?: ಗೌರಿ ಲಂಕೇಶ್ | ಜೆನ್ ಝಿ ಪೀಳಿಗೆಯ ಕನಸು ಕಂಡಿದ್ದ ’ದತ್ತು’ ತಾಯಿ!

ಮಾರ್ಚ್ 2023ರಲ್ಲಿ, ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗಳ ವಿಚಾರಣೆ ವೇಳೆ, ಎಫ್‌ಡಬ್ಲ್ಯೂಎ ಒಪ್ಪಂದದಡಿ ರಸ್ತೆ ಮತ್ತು ರಸ್ತೆ ಮೂಲ ಸೌಕರ್ಯಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಲ್ಲಿ ನಿವೇಶನಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ನೈಸ್ ಸಂಸ್ಥೆ ಸಲ್ಲಿಸಿದ್ದ ಮನವಿಯನ್ನು ತಾನು ತಿರಸ್ಕರಿಸಿರುವುದಾಗಿ ಸರ್ಕಾರ ದಾಖಲೆ ಸಮೇತ ತಿಳಿಸಿತ್ತು. ಈ ವರ್ಷದ ಜನವರಿಯಲ್ಲಿ, ಹೈಕೋರ್ಟ್ ಎಫ್‌ಡಬ್ಲ್ಯೂಎ ಒಪ್ಪಂದಕ್ಕೆ ವಿರುದ್ಧವಾಗಿ ಇಂಟರ್‌ ಚೇಂಜ್‌ಗಳಲ್ಲಿ ಅಥವಾ ರಸ್ತೆಗಾಗಿ ನೀಡಲಾದ ಜಮೀನುಗಳಲ್ಲಿ ನಿವೇಶನಗಳನ್ನು ನಿರ್ಮಿಸಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.

ಹಾಗಿದ್ದರೂ, ಜಮೀನು ಕಳೆದುಕೊಂಡವರಿಗೆ ಪరిಹಾರವಾಗಿ ನಿವೇಶನ ಹಂಚಿಕೆಗೆ ಅನುಮೋದನೆ ನೀಡಲಾಗಿದೆ ಎಂದು ನಿಮ್ಮ ಸಚಿವ ಸಂಪುಟ ಹೇಳುತ್ತಿದೆ. ಮಾದಾವರ, ಕೋಡಿಗೆಹಳ್ಳಿ, ಕೆಂಗೇರಿ, ಕೊಮ್ಮಘಟ್ಟ, ವರಾಹಸಂದ್ರ, ಸೋಂಪುರ, ಪಿಳ್ಳಗಾನಹಳ್ಳಿ, ಕೆಮತಾನಹಳ್ಳಿ, ಯು.ಎಂ. ಕಾವಲ್, ಚಿಕ್ಕತೋಗೂರು, ಪಂತರಪಾಳ್ಯ, ಕೆ.ಜಿ. ಶ್ರೀಕಂಠಪುರ ಮತ್ತು ಗಂಗೊಂಡನಹಳ್ಳಿ ಗ್ರಾಮಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ವರದಿಯಾಗಿದೆ. ಈ ಗ್ರಾಮಗಳಲ್ಲಿನ ಜಮೀನುಗಳು ಬಿಎಂಐಸಿಪಿ ಯೋಜನೆಯ ರಸ್ತೆ/ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ಒಳಪಡುತ್ತವೆ ಎಂಬುದು ಸಾರ್ವಜನಿಕ ದಾಖಲೆಗಳಲ್ಲಿದೆ.

ಹಂಚಿಕೆ ಮಾಡಲಾಗುವ ಈ ನಿವೇಶನಗಳನ್ನು ಎಂದು ನಿರ್ಮಿಸಲಾಯಿತು? ಈ ನಿವೇಶನಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದವರು ಯಾರು? ಜುಲೈ 2026 ರಲ್ಲಿ, ಹೈಕೋರ್ಟ್‌ನ ವಿಭಾಗೀಯ ಪೀಠವು ಈ ಕಂಪನಿಯ ಬ್ಯಾಲೆನ್ಸ್ ಶೀಟ್‌ಗಳನ್ನು ಗಮನಿಸಿ, ಭೂ ಮಾರಾಟ ಮತ್ತು ಜಂಟಿ ಅಭಿವೃದ್ಧಿ ಒಪ್ಪಂದಗಳಿಗಾಗಿ (JDA) ರೂ. 36 ಕೋಟಿಯಿಂದ ರೂ. 48 ಕೋಟಿವರೆಗಿನ ಮುಂಗಡ ಹಣವನ್ನು ನಿರಂತರವಾಗಿ ತೋರಿಸಿರುವುದನ್ನು ಉಲ್ಲೇಖಿಸಿದೆ.

ಅಭಿವೃದ್ಧಿಪಡಿಸಿದ ಜಮೀನಿನ ಮಾರಾಟ, ಜಂಟಿ ಅಭಿವೃದ್ಧಿ ಒಪ್ಪಂದಗಳು ಮತ್ತು ಯೋಜನಾ ಜಮೀನುಗಳ ನಗದೀಕರಣ ಹಾಗೂ ಅನಧಿಕೃತ ಮತ್ತು ಅತಿಯಾದ ಟೋಲ್ ಸಂಗ್ರಹಣೆಯು ಕಂಪನಿಯ ಪ್ರಮುಖ ಆದಾಯದ ಮೂಲಗಳಾಗಿದ್ದರೆ, ಪೂರ್ಣಗೊಂಡ ಲಿಂಕ್ ರಸ್ತೆ ಮತ್ತು ಪೆರಿಫೆರಲ್ ರಸ್ತೆಯ ಭಾಗಗಳನ್ನು ಕಂಪನಿಯ ಹಣಕಾಸು ವಿವರಣೆಗಳಲ್ಲಿ ಆಸ್ತಿಗಳಾಗಿ (assets) ತೋರಿಸಲಾಗಿದೆ. ಇದು ಶಾಸನ ಮತ್ತು ಸಂವಿಧಾನಕ್ಕೆ ಎಸಗಿದ ದ್ರೋಹವಾಗಿದ್ದು, ಈ ಯೋಜನೆಯಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಥವಾ ಉದ್ದೇಶ ಈಡೇರಿಲ್ಲ, ಕೇವಲ ಯೋಜನೆಯ ಪ್ರವರ್ತಕರ ಖಾಸಗಿ ಹಿತಾಸಕ್ತಿಗಳಿಗೆ ಮಾತ್ರ ಬಳಕೆಯಾಗಿದೆ ಎಂದು ನ್ಯಾಯಾಲಯ ನಿಸ್ಸಂದಿಗ್ಧವಾಗಿ ಹೇಳಿದೆ.

ಕಂಪನಿಯ ಆಸ್ತಿಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಯೋಜನೆಯ ಪ್ರವರ್ತಕರು ಕಾನೂನುಬಾಹಿರವಾಗಿ ಭಾರಿ ಲಾಭಗಳಿಸಲು ಸ್ವತಃ ರಾಜ್ಯ ಸರ್ಕಾರವೇ ಸಹಭಾಗಿಯಾಗಿರುವುದರಿಂದ, ಕಂಪನಿಯ ಖಾತೆಗಳ ವಿಧಿವಿಜ್ಞಾನ ಲೆಕ್ಕಪರಿಶೋಧನೆಗೆ (forensic audit) ಕರೆ ನೀಡಿದರೂ ಅಂತಹ ತನಿಖೆ ನಡೆಯುತ್ತದೆಯೇ ಎಂಬ ಬಗ್ಗೆ ನ್ಯಾಯಾಲಯ ಸಂಶಯ ವ್ಯಕ್ತಪಡಿಸಿತ್ತು.

ನ್ಯಾಯಾಲಯ ವ್ಯಕ್ತಪಡಿಸಿದ ಆ ಸಂಶಯವು ನಿಜವೆಂದು ನಿಮ್ಮ ಸಂಪುಟವು ಈಗ ಸಾಬೀತುಪಡಿಸಿದೆಯೇ? ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಮತ್ತು ದಶಕಕ್ಕೂ ಹೆಚ್ಚು ಕಾಲ ನೀವು ನೇತೃತ್ವ ವಹಿಸಿರುವ ಸರ್ಕಾರದ ನಿಲುವಿಗೆ ವಿರುದ್ಧವಾಗಿ ನಿಮ್ಮ ಸಂಪುಟವು ನಿವೇಶನಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆಯೇ? ಈ ನಿವೇಶನಗಳ ನಿಜವಾದ ಫಲಾನುಭವಿಗಳು ಜಮೀನು ಕಳೆದುಕೊಂಡ ಸಂತ್ರಸ್ತರೋ ಅಥವಾ ನೈಸ್ ಸಂಸ್ಥೆ ಮತ್ತು ಅದರ ಹೂಡಿಕೆದಾರರೋ? ಶ್ರೀಮಾನ್ ಮುಖ್ಯಮಂತ್ರಿಗಳೇ, ಆ ಹೂಡಿಕೆದಾರರು ನಿಮ್ಮ ಸಂಪುಟದಲ್ಲಿದ್ದಾರೆಯೇ? ಈ ಪ್ರಶ್ನೆಗಳಿಗೆ ರಾಜ್ಯದ ಜನತೆಗೆ ಉತ್ತರ ಬೇಕಾಗಿದೆ…”

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...