ಒಂದಂತೂ ಸತ್ಯ, ಯಾವ ಯುವಪೀಳಿಗೆಯ ಮೇಲೆ ಕನಸು ನೆಟ್ಟು, ತನ್ನ ಕೈಲಾದ ಮಟ್ಟಿಗೆ ಆ ದನಿಗಳನ್ನು ಬೆಂಬಲಿಸಲು ಗೌರಿ ಯತ್ನಿಸಿದ್ದರೋ, ಆ ಭರವಸೆ ಇಂದು ಜೆನ್ ಝೀ ಹೋರಾಟದ ರೂಪಾಂತರದಲ್ಲಿ ದಿಟಗೊಂಡಿದೆ. ಅಕಸ್ಮಾತ್ ಜೆನ್ ಝಿ ಚಳವಳಿಯ ಕಾಲದಲ್ಲಿ ಗೌರಿಯವರು ಇದ್ದಿದ್ದರೆ, ದಿಲ್ಲಿಯ ಜಂತರ್ಮಂತರ್ನಲ್ಲಿ ಆ ಮಕ್ಕಳೊಟ್ಟಿಗೆ ಪಟ್ಟುಹಿಡಿದು ಕೂರುತ್ತಿದ್ದರು.
ಅವತ್ತು ಆಫೀಸಿನಲ್ಲಿ ಅಷ್ಟೇನು ಕೆಲಸವಿರಲಿಲ್ಲ. ಮ್ಯಾನೇಜರ್ ರಾಜು ಅವರ ಟೇಬಲ್ ಮುಂದೆ ನಾನು, ರಾಜು ಮತ್ತು ಶಿವಸುಂದರ್ ಅವರು ಮಾತಿಗೆ ತೊಡಗಿದ್ದೆವು. ಎರಡು ದಿನಗಳ ಹಿಂದಷ್ಟೇ ದಿಲ್ಲಿಯಿಂದ ಬಂದಿದ್ದ ಕನ್ಹಯ್ಯ ಕುಮಾರ್ (ಅಥವಾ ಜಿಗ್ನೇಶ್ ಮೇವಾನಿ, ನನಗೆ ಸರಿಯಾಗಿ ನೆನಪಿಲ್ಲ) ಅವರನ್ನು ತಮ್ಮ ಮನೆಯಲ್ಲೆ ಇರಿಸಿಕೊಂಡಿದ್ದ ಗೌರಿ ಮೇಡಂ, ಬೆಂಗಳೂರಿನಲ್ಲಿ ಶಾಪಿಂಗ್ ಮಾಡಿಸಿ, ಒಂದೆರಡು ಜೊತೆ ಬಟ್ಟೆ ಕೊಡಿಸಿ ಕಳಿಸಿದ್ದರು. ಅದನ್ನು ತಮ್ಮ ಸಂಪಾದಕೀಯದಲ್ಲಿ ‘ದತ್ತುಮಗನಿಗೆ ಬಟ್ಟೆ ಕೊಡಿಸಿ ಕಳಿಸಿದೆ’ ಎಂದು ಬರೆದುಕೊಂಡಿದ್ದರು. ಆ ವಿಚಾರವನ್ನು ಪ್ರಸ್ತಾಪಿಸಿದ ಶಿವಸುಂದರ್ ಅವರು ಯಥಾ ಪ್ರಕಾರ ತಮ್ಮ ಪ್ರಬುದ್ಧ ಕೀಟಲೆ ಶೈಲಿಯಲ್ಲಿ, “ನೋಡ್ರಿ ನಮ್ಮ ಮೇಡಂ, ಕೇವಲ ಉತ್ತರ ಭಾರತದ ಕನ್ಹಯ್ಯ, ಜಿಗ್ನೇಶ್, ಚಂದ್ರಶೇಖರ್ ರಾವಣ್, ಶೆಹ್ಲಾ ಇಂತವರನ್ನೇ ದತ್ತು ತಗೊಳ್ತಾರೆ. ದಕ್ಷಿಣ ಭಾರತದವರಾದ ನಮ್ಮನ್ನೂ ದತ್ತು ತಗೊಬಹುದಿತ್ತಲ್ಲವಾ? ಅವ್ರಿಗೆಲ್ಲ ಬಟ್ಟೆ ಕೊಡಿಸಿ ಕಳಿಸ್ತಾರೆ. ನಮಗೆ ಕಡೇಪಕ್ಷ ಒಂದು ಕರ್ಚೀಫಾದ್ರೂ ಕೊಡ್ಸಿದಾರಾ? ಉತ್ತರಭಾರತದವರ ಬಲು ವ್ಯಾಮೋಹಿಯಪ್ಪ ಗೌರಿ” ಎಂದು ಚಟಾಕಿ ಹಾರಿಸಿದರು. ರಾಜು ನಕ್ಕು ಸುಮ್ಮನಾದರೆ, ನಾನು ತುಂಬಾ ಉತ್ಸಾಹಭರಿತನಾಗಿ, “ಹೌದಲ್ವಾ ಸಾರ್, ನಮಗೆ ಒಂದು ಕರ್ಚೀಫೂ ಕೊಡ್ಸಿಲ್ವಲ್ಲಾ ನಮ್ ಮೇಡಂ!” ಎಂದು ದನಿಗೂಡಿಸಿದೆ. ದುರಾದೃಷ್ಟಕ್ಕೆ ನನ್ನ ಮಾತು ಮುಗಿಯುವ ಮೊದಲೇ ಬಾಗಿಲಲ್ಲಿ ಗೌರಿ ಮೇಡಂ ಪ್ರತ್ಯಕ್ಷವಾಗಿ ನಮ್ಮ ನಗುವಿನ ಹರಟೆ ಕಂಡು, “ಏನು? ಏನದು? ನನ್ ಬಗ್ಗೆನೆ ಏನೋ ಮಾತಾಡ್ಕೊತಾ ಇದೀರಿ” ಎಂದು ಕೂಡಿಕೊಂಡರು. ನಮ್ಮ ಬುದ್ದಿಜೀವಿ ಶಿವಸುಂದರರು ತಕ್ಷಣವೇ ತನ್ನ ಅಷ್ಟೂ ಆರೋಪವನ್ನು ನನ್ನ ಮೇಲೆ ಎತ್ತಿಬಿಸಾಕಿ, “ನೋಡಿ, ಗಿರೀಶ್ ನಿಮ್ಮ ಮೇಲೆ ದೂರು ಹೇಳ್ತಾ ಇದಾರೆ, ನೀವು ಬರೀ ಉತ್ತರ ಭಾರತದವರನ್ನೇ ದತ್ತು ತಗೊಳ್ತೀರಿ, ದಕ್ಷಿಣದವರನ್ನಲ್ಲ’ ಅಂತೇಳಿ ಜಾರಿಕೊಂಡರು. ಗೌರಿ ಮೇಡಂ ನಕ್ಕು ತಮ್ಮ ಚೇಂಬರಿನತ್ತ ಹೋದರು.
ಇದು ತಮಾಷೆ ಪ್ರಸಂಗ. ಇಲ್ಲೊಂದಷ್ಟು ಸಂಗತಿಗಳಿವೆ. ಗೌರಿಯವರು ಕನ್ಹಯ್ಯ, ಜಿಗ್ನೇಶ್ ತರಹದ ಯುವ ಭರವಸೆಗಳನ್ನು ಯಾಕೆ ಅಷ್ಟು ಬಿಗಿದಪ್ಪಿಕೊಳ್ಳುತ್ತಿದ್ದರು? ವ್ಯವಸ್ಥೆಗೆ ಬಲಿಪಶುವಾದ ರೋಹಿತ್ ವೇಮುಲ ಎಂಬ ದುರಂತ ನಕ್ಷತ್ರಕ್ಕಾಗಿ ಯಾಕಷ್ಟು ಕೊರಗಿದರು? (ಕೊನೇ ಘಳಿಗೆಯವರೆಗೆ ಅವರ ಫೇಸ್ಬುಕ್ ಡಿಪಿಯ ಪಟವಾಗಿ ವೇಮುಲು ಫೋಟೊ ಹಾಕಿಕೊಂಡಿದ್ದರು, ಈಗಲೂ ಇದೆ), ನಮ್ಮದೇ ನಾಡಿನ ನವೀನ್ ಸೂರಿಂಜೆ, ಬಿಎಂ ಬಷೀರ್, ಮಲ್ಲಿಗೆ, ಡಾ. ವಾಸು, ಹರ್ಷಕುಗ್ವೆ, ಹುಲಿಕುಂಟೆ ಮೂರ್ತಿ, ವಿಕಾಸ್ ಮೌರ್ಯ ತರಹದ ಹೊಸಪೀಳಿಗೆಯವರಿಗೆ ಯಾಕೆ ಅಕ್ಕನಾಗಿಯೋ, ಹಿತೈಷಿಯಾಗಿಯೋ ಜೊತೆ ನಿಂತರು?
ಉತ್ತರ ಸ್ಪಷ್ಟವಿದೆ. ಅದು ಹೊಸದೂ ಅಲ್ಲ. ಒಂದು ಸಮಾಜದ ಪರಿವರ್ತನೆಯ ಮೂಲ ಇಂಧನ ಇರುವುದೇ ಆ ಸಮಾಜದ ಯುವಸಮೂಹದಲ್ಲಿ. ಆದರೆ ಗೌರಿಯವರ ಕಾಲಘಟ್ಟಕ್ಕಾಗಲೇ ಅಂತಹ ಯುವಸಮೂಹವನ್ನೆ ಕೋಮುವಾದಿ ರಾಜಕಾರಣವು ಧರ್ಮದ ಅಫೀಮು ತಿನ್ನಿಸಿ ತನ್ನ ಕೈವಶ ಮಾಡಿಕೊಂಡಿತ್ತು. ಆ ಯುವ ಸಮೂಹವನ್ನು ಮತೀಯವಾದಿಗಳ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸದ ಹೊರತು ದೇಶದ ಪ್ರಜಾತಾಂತ್ರಿಕ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಉಳಿಗಾಲವಿಲ್ಲ ಎಂಬುದನ್ನು ಗೌರಿಯವರೂ ಸೇರಿದಂತೆ ಬಹಳಷ್ಟು ಚಿಂತಕರು ಅರ್ಥ ಮಾಡಿಕೊಂಡಿದ್ದರು. ಆದರೆ ಹೇಗೆ?
ಹಿರಿಯರ, ಅನುಭವಿಗಳ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಆ ಹೊಸ ಸಮುದಾಯಕ್ಕಿರಲಿಲ್ಲ. ಇನ್ಫ್ಯಾಕ್ಟ್, ಅವರನ್ನೆಲ್ಲ ದೇಶದ್ರೋಹಿಗಳು, ಗಂಜಿಗಿರಾಕಿಗಳು, ಧರ್ಮವಿರೋಧಿಗಳು, ಲದ್ದಿಜೀವಿಗಳು, ಅರ್ಬನ್ ನಕ್ಸಲರು (ಇತ್ತೀಚೆಗೆ ದಿಮಾಗಿ ನಕ್ಸಲರು ಪದ ಸೇರ್ಪಡೆ) ಎಂಬ ಪೂರ್ವಗ್ರಹಿ ಪದಗುಚ್ಚಗಳ ಮೂಲಕ ಬ್ಯ್ರಾಂಡ್ ಮಾಡಿ, ಅವರ ಪ್ರಭಾವದಿಂದ ಯುವಜನರನ್ನು ದೂರ ಮಾಡಲಾಗಿತ್ತು. ದೂರ ಮಾಡಲಾಗಿತ್ತು, ಎನ್ನುವುದಕ್ಕಿಂತ ಚಿಂತಕರ ವಲಯವನ್ನು ಅಕ್ಷರಶಃ ದ್ವೇಷಿಸುವಷ್ಟು ಯುವಕರ ಮನಸ್ಸನ್ನು ಕಹಿಗೊಳಿಸಲಾಗಿತ್ತು. ಹಾಗೆ ಕಹಿಗೊಳಿಸಲ್ಪಟ್ಟ ಯುವಕರೇ ಕೊನೆಗೆ ಗೌರಿಯವರನ್ನು ಕೊಂದುಹಾಕಿದ್ದು ಇದಕ್ಕೆ ಸಾಕ್ಷಿ.
ಇಂಥಾ ಸಂದರ್ಭದಲ್ಲಿ ಹಾದಿ ತಪ್ಪುತ್ತಿರುವ ಯುವ ಸಮುದಾಯದ ಜೊತೆ ಸಂವಾದ ನಡೆಸಿ, ಅವರ ಚಿಂತನಾ ಕ್ರಮ ಬದಲಿಸುವುದು ಯಾರು? ಯುವಸಮುದಾಯದ ನಡುವೆಯೇ ಅವತರಿಸುವ ವಿಚಾರವಂತ ಮನಸುಗಳಿಗೆ ಮಾತ್ರ ಸಾಧ್ಯ. ಯುವಸಮೂಹ ಸ್ಪಂದಿಸುವ ಸಂಗತಿಗಳನ್ನಿಟ್ಟುಕೊಂಡು, ಅವರ ಪೀಳಿಗೆಯದೇ ಭಾಷೆಯಲ್ಲಿ ಸಂವಾದಿಸದ ಹೊರತು ಯುವಜನರನ್ನು ಮತೀಯ ಚಿಂತನೆಗಳಿಂದ ಆಚೆತರಲು ಸಾಧ್ಯವಿಲ್ಲ. ಇದನ್ನು ಗೌರಿ ಅರಿತಿದ್ದರು. ಇವತ್ತು ತಮ್ಮನ್ನು ತಾವು ಬಲಾಢ್ಯರು, ಅಜೇಯರು ಎಂದುಕೊಂಡಿದ್ದವರನ್ನು ಕೂಡಾ ಮಂಡಿಯೂರುವಂತೆ ಮಾಡಿದ ‘ಜೆನ್ ಝಿ’ ಪೀಳಿಗೆಯ ಸಾಹಸವೇನಿದೆಯಲ್ಲ, ಇದನ್ನು ಯುವಸಮೂಹ ಮಾತ್ರ ಮಾಡಬಲ್ಲದು ಎಂದು ಗೌರಿ ಬಹಳ ಹಿಂದೆಯೇ ಅರ್ಥ ಮಾಡಿಕೊಂಡಿದ್ದರಿಂದ ದೇಶದ ಮೂಲೆಮೂಲೆಯಲ್ಲಿ ದನಿ ಎತ್ತುತ್ತಿದ್ದ ಯುವ ಧ್ವನಿಗಳನ್ನು ಮುಲಾಜಿಲ್ಲದೆ ಬಿಗಿದಪ್ಪಿಕೊಳ್ಳುತ್ತಾ ಬಂದರು.
ಹಾಗೆ ಬರೆಸೆಳೆದುಕೊಳ್ಳುವಾಗ, ಆ ಯುವಧನಿಗಳು ತಾವು ಬಯಸುವ ಪರಿವರ್ತನೆಗೆ ಹಾದಿಯಾಗುತ್ತಾರೆ ಎಂಬ ನಿರೀಕ್ಷೆ ಮಾತ್ರ ಗೌರಿಯವರದ್ದಾಗಿರಲಿಲ್ಲ. ಮತೀಯವಾಗಿ ಕಲುಷಿತಗೊಂಡಿರುವ ಈ ವಾತಾವರಣದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ದನಿ ಎತ್ತುವವರ ಮೇಲೆ ಹೇಗೆಲ್ಲಾ ದಾಳಿ ನಡೆಸಲಾಗುತ್ತೆ, ಹತ್ತಿಕ್ಕಲು ಯತ್ನಿಸಲಾಗುತ್ತೆ ಎಂಬುದನ್ನು ಗೌರಿಯವರು ಸ್ವತಃ ಅನುಭವಿಸಿ ಉಂಡವರು. ಆ ಯುವದನಿಗಳೂ ಅಂತಹ ದಾಳಿಗಳಿಗೆ ಈಡಾಗುವುದರಲ್ಲಿ ಸಂಶಯವಿರಲಿಲ್ಲ. ಹೀಗೆ ದಾಳಿಗಳ ಆಘಾತಕ್ಕೀಡಾದ ಅವರಿಗೆ ವೈಯಕ್ತಿಕ ನೆಲೆಯಲ್ಲಿ ಆತ್ಮಸ್ಥೈರ್ಯ ತುಂಬಿ, ಬಲವನ್ನು ಒಗ್ಗೂಡಿಸಿಕೊಡಬೇಕಾದದು ಹಿರಿಯರಾಗಿ ನಾವು ಮಾಡಬೇಕಾದ ಅತ್ಯಂತ ತುರ್ತು ಕೆಲಸ ಎಂದು ಗೌರಿಯವರು ನಿಶ್ಚಯಿಸಿಕೊಂಡಿದ್ದರು. ದೃಢ ನಿಲುವು. ತಮ್ಮ ಪ್ರೋತ್ಸಾಹವನ್ನು ಕೇವಲ ಬೆಂಬಲದ ದನಿಗೆ ಮಾತ್ರ ಸೀಮಿತವಾಗಿಸಿಕೊಳ್ಳದೆ, ಅದಕ್ಕೊಂದು ನಂಟಿನ ರೂಪ ನೀಡಲು ‘ದತ್ತು ಮಕ್ಕಳೆಂದು’ ಘೋಷಿಸುವ ಹೊಸ ದಾರಿಯನ್ನು ಗೌರಿಯವರು ಕಂಡುಕೊಂಡರು. ಬಾಯ್ಮಾತಿನಲ್ಲಿ ಧೈರ್ಯ ತುಂಬುವುದಕ್ಕೂ, ಹೀಗೆ ಅವರೊಟ್ಟಿಗೆ ಆತ್ಮೀಯ ನಂಟು ಹೆಣೆದುಕೊಂಡು ಕಸುವು ಹಿಗ್ಗಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಬಹುಶಃ ಗೌರಿ ಒಬ್ಬ ಹೆಣ್ಣಾದ ಕಾರಣಕ್ಕೆ, ಅವರೊಳಗಿದ್ದ ತಾಯ್ತನ ‘ದತ್ತು’ ಎಂಬ ಈ ದಾರಿಯನ್ನು ಶೋಧಿಸಿಕೊಂಡಿರಬಹುದು.
ಗೌರಿಯವರ ಈ ಹೊಸ ದಾರಿಯಿಂದಾಗಿ, ಉತ್ತರದ ಹಿಂದಿ ರಾಜ್ಯಗಳಿಗೆ ಮಾತ್ರ ಸೀಮಿತಗೊಳ್ಳಬಹುದಾಗಿದ್ದ ಜಿಗ್ನೇಶ್, ಕನ್ಹಯ್ಯ ಮೊದಲಾದವರು ಕನ್ನಡದ ಪರಿಸರಕ್ಕೂ ವ್ಯಾಪಿಸಿದರು. ಗೌರಿ ನಿರಂತರವಾಗಿ ತನ್ನನ್ನು ಇಂತಹ ಮೌಲ್ಯಗಳ ಬೆಸೆಯುವಿಕೆಗೆ ತೆತ್ತುಕೊಳ್ಳುತ್ತಾ ಬಂದರು. ಬಹುಶಃ ಅವರನ್ನು ಹತ್ಯೆಗೈದ ಕೊಲೆಗಡುಕರಿಗೆ ಗೌರಿಯವರ ಈ ಗೋಂದು ಗುಣವೇ ದೊಡ್ಡ ಥ್ರೆಟ್ ಆಗಿ ಭಾಸವಾಗಿದ್ದಿರಬಹುದು. ಹಸಿರು (ರೈತ), ನೀಲಿ (ದಲಿತ) ಮತ್ತು ಕೆಂಪು (ಕಾರ್ಮಿಕ) ಬಣ್ಣಗಳು ಒಗ್ಗೂಡುವುದು ಮಾತ್ರವೇ ಈ ದೇಶದ ಭವಿಷ್ಯವನ್ನು ಬೆಳಗುವ ಸೂತ್ರ ಎಂದು ಗಟ್ಟಿಧನಿಯಲ್ಲಿ ಮಾತಾಡುತ್ತಿದ್ದ ಗೌರಿ, ಅದರ ಜೊತೆಗೆ ಯುವಸಮೂಹವನ್ನೂ ಹೀಗೆ ಬೆಸೆಯಲು ಮುಂದಾದದ್ದು ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದಿರಬಹುದು. ಹತ್ಯೆಯ ಸಂಚು ರೂಪುತಳೆದಿದ್ದರಲ್ಲಿ ಆ ನಡುಕದ ಪಾತ್ರವನ್ನು ಅಲ್ಲಗಳೆಯಲಾಗದು.
ಒಂದಂತೂ ಸತ್ಯ, ಯಾವ ಯುವಪೀಳಿಗೆಯ ಮೇಲೆ ಕನಸು ನೆಟ್ಟು, ತನ್ನ ಕೈಲಾದ ಮಟ್ಟಿಗೆ ಆ ದನಿಗಳನ್ನು ಬೆಂಬಲಿಸಲು ಗೌರಿ ಯತ್ನಿಸಿದ್ದರೋ, ಆ ಭರವಸೆ ಇಂದು ಜೆನ್ ಝೀ ಹೋರಾಟದ ರೂಪಾಂತರದಲ್ಲಿ ದಿಟಗೊಂಡಿದೆ. ಅಕಸ್ಮಾತ್ ಜೆನ್ ಝಿ ಚಳವಳಿಯ ಕಾಲದಲ್ಲಿ ಗೌರಿಯವರು ಇದ್ದಿದ್ದರೆ, ದಿಲ್ಲಿಯ ಜಂತರ್ಮಂತರ್ನಲ್ಲಿ ಆ ಮಕ್ಕಳೊಟ್ಟಿಗೆ ಪಟ್ಟುಹಿಡಿದು ಕೂರುತ್ತಿದ್ದರು.
ಉತ್ತರಾಖಂಡದಲ್ಲಿ ದೀಪಕ್ ಮೊಹಮದ್ ಪ್ರಕರಣ ನಡೆದಾಗ, ಗೌರಿಯವರ ಅನುಪಸ್ಥಿತಿ ನನ್ನನ್ನು ಕಾಡಿತ್ತು. ಅಕಸ್ಮಾತ್ ಅವರು ಇದ್ದಿದ್ದರೆ, ಮತಾಂಧರಿಗೆ ಎದೆಗೊಟ್ಟು ನಿಂತಿದ್ದ ಮತ್ತು ಆ ಕಾರಣಕ್ಕೆ ತದನಂತರ ಅವರಿಂದ ಕಿರುಕುಳಕ್ಕೆ ತುತ್ತಾಗಿದ್ದ ದೀಪಕ್ ಮೊಹಮದ್ನನ್ನೂ ದತ್ತು ಸ್ವೀಕರಿಸಿ ಕರ್ನಾಟಕಕ್ಕೆ ಕರೆಯಿಸುತ್ತಿದ್ದರಲ್ಲಿ ಅನುಮಾನವಿಲ್ಲ. ಆ ಮೂಲಕ ಆತನಿಗೂ ಬಲವನ್ನು ಕ್ರೋಢೀಕರಿಸುವುದರ ಜೊತೆಗೆ, ಆತನ ಸೌಹಾರ್ದದ ದಿಟ್ಟ ದನಿಯನ್ನು ದಕ್ಷಿಣದ ರಾಜ್ಯಗಳಿಗೂ ಪಸರಿಸುವಂತೆ ಮಾಡುತ್ತಿದ್ದರು.
ಯಾವ ಬೆದರಿಕೆಗಳ ಮುಲಾಜಿಗೂ ಜಗ್ಗದೆ, ತನ್ನ ಜೀವಕ್ಕೂ ಸಂಚಕಾರ ತೆಗೆದುಕೊಳ್ಳುತ್ತಾ ಭರವಸೆಯ ಆ ಕುಡಿಗಳ ಬೆನ್ನಿಗೆ ನಿಲ್ಲುವ ದಿಟ್ಟತನ ಗೌರಿಯವರಿಗೆ ಎಲ್ಲಿಂದ ಬಂತು? ಹೆಣ್ಣನ್ನು ನಾವು ಸಾಮಾನ್ಯವಾಗಿ ಪ್ರಕೃತಿಗೆ ಹೋಲಿಸುತ್ತೇವೆ. ಸೃಷ್ಟಿಸುವ ಕ್ರಿಯೆ ಮಾತ್ರವಲ್ಲದೆ, ಪೊರೆಯುವ ಕಾಯಕವೂ ಸ್ತ್ರೀ-ಪ್ರಕೃತಿಯದ್ದು. ಇದನ್ನೆ ನಾವು ತಾಯಿ ಎಂದು ಸುಲಭವಾಗಿ ಕರೆದುಬಿಡುತ್ತೇವೆ. ಗೌರಿ ಮೇಡಂ ಈ ತಾಯ್ತನಕ್ಕೆ ಒಂದು ಉನ್ನತ ಉದಾಹರಣೆಯಾಗಿ ಗೋಚರಿಸುತ್ತಾರೆ. ಜಾತಿವ್ಯವಸ್ಥೆ, ಕೋಮುವಾದ, ಲಿಂಗ ಅಸಮಾನತೆಗಳಂತಹ ಕೆಡುಕುಗಳ ವಿರುದ್ಧ ಅವರು ನಿಗಿಕೆಂಡದಂತೆ ಉರಿದುಬೀಳುತ್ತಿದ್ದುದು ಕೂಡಾ ಇದೇ ತಾಯ್ತನದ ಕಾರಣದಿಂದ. ಯಾವುದೇ ಪ್ರಾಣಿ ಅಥವಾ ಪಕ್ಷಿಯು ತನ್ನ ಮರಿಗಳ ಮೇಲೆ ಅನ್ಯರು ದಾಳಿ ಮಾಡುವುದನ್ನು ಸಹಿಸುವುದಿಲ್ಲ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಕಾದಾಟಕ್ಕಿಳಿಯುತ್ತವೆ. ಆ ಕಾದಾಟದಲ್ಲಿ ಬದುಕುಳಿಯುವ ಅವಕಾಶ ತನಗಿದೆಯೇ ಎಂಬ ವ್ಯಾವಹಾರಿಕ ತರ್ಕಕ್ಕೆ ಅವು ಮುಂದಾಗಲಾರವು. ಅವುಗಳ ಆ ಉಗ್ರರೂಪ ಕಂಡ ದಾಳಿಕೋರರಿಗೆ ಆ ತಾಯಿಯ ಮೇಲೆ ಕೋಪ ಉಕ್ಕಬಹುದು; ಹಠಮಾರಿಯೆನಿಸಬಹುದು; ಕೊನೆಗೆ, ಕೊಲ್ಲಲೂಬಹುದು . ಆದರೆ ಆ ತಾಯಿ ಅದಕ್ಕೆಲ್ಲ ಸಿದ್ದವಾಗಿಯೇ ಉಗ್ರರೂಪ ಧರಿಸಿರುತ್ತದೆ. ಯಾಕೆಂದರೆ ಆ ತಾಯಿಗೆ ಮರಿಗಳ ರಕ್ಷಣೆ ಮಾತ್ರ ಮುಖ್ಯ. ಹೊರಗಿನಿಂದ ಅಥವಾ ದೂರದಿಂದ ನೋಡುವವರಿಗೆ ‘ನಿಷ್ಠುರ’ವಾಗಿ, ‘ಭಂಡಧೈರ್ಯಸ್ಥೆಯಾಗಿ ಗೋಚರಿಸುತ್ತಿದ್ದ ಗೌರಿಯವರ ತಾಯ್ತನದ ಮೃದುತ್ವ, ಕಕ್ಕುಲಾತಿ ಹತ್ತಿರದಿಂದ ಅರ್ಥ ಮಾಡಿಕೊಂಡವರಿಗಷ್ಟೇ ಅರ್ಥ. ಇಲ್ಲವಾಗಿದ್ದರೆ ಹಂತಕರ ಬಂದೂಕಿನಿಂದ ಚಿಮ್ಮಿದ ಒಂದು ಗುಂಡಿಗೆ ಪ್ರತಿಯಾಗಿ ಒಮ್ಮೆಲೆ ಲಕ್ಷಾಂತರ ಗೌರಿಗಳಾಗಿ ಚಿಗುರಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ಹುತಾತ್ಮಳಾದ ನಂತರವೂ ಗೌರಿಯವರ ವ್ಯಕ್ತಿತ್ವದಲ್ಲಿ ಇರಬಹುದಾದ ವ್ಯಕ್ತಿಸಹಜ ಲೋಪಗಳನ್ನೋ, ಮಿತಿಗಳನ್ನೋ ಹುಡುಕುವುದರಲ್ಲಿ ನಮ್ಮ ಕೆಲ ಹಿರಿಯರು ಕಳೆದುಹೋಗಿದ್ದಾಗ (ಕೆಲವರೆಂದರೆ ಕೆಲವರಷ್ಟೆ! ನನಗೆ ತಿಳಿದಂತೆ ಗೌರಿಯನ್ನು ತಮ್ಮ ಎದೆಗೆ ಇಳಿಸಿಕೊಂಡ ಹಿರಿಯರೂ ಸಾಕಷ್ಟು ಮಂದಿ ಇದ್ದಾರೆ. ಕೆಲವರಂತೂ ವಯಸ್ಸಿನಲ್ಲಿ ಗೌರಿಯವರಿಗಿಂತ ಹಿರಿಯರಾಗಿದ್ದರೂ, ಆಕೆಯ ಬಲಿದಾನ ಕಂಡು, ತನ್ನ ತಾಯಿ-ಅವ್ವ ಎಂದು ಅಪ್ಪಿಕೊಂಡವರೂ ಇದ್ದಾರೆ) ಗೌರಿಯನ್ನು ತಮ್ಮೊಳಗೆ ಹೆಚ್ಚು ಆವಾಹಿಸಿಕೊಂಡಿದ್ದೇ ಯುವಸಮೂಹ. ಇದು ಗೌರಿ ಯುವಜನಾಂಗಕ್ಕೆ ತೋರಿದ ಅಕ್ಕರೆಯ ಪ್ರತೀಕ.
ನಾನೇ ಕಂಡ ಒಂದು ಸಣ್ಣ ಉದಾಹರಣೆ ಇಲ್ಲಿಗೆ ಸೂಕ್ತವಾಗಬಹುದು. ಅದು ೨೦೧೭ರಲ್ಲಿ, ಅಂದರೆ ಗೌರಿಯವರು ನಮ್ಮನ್ನೆಲ್ಲ ಅಗಲಿದ ವರ್ಷ, ದಾವಣಗೆರೆಯಲ್ಲಿ ನಡೆದ ಲಂಕೇಶ್ ಕಾರ್ಯಕ್ರಮದ ಸಂದರ್ಭ. ಪತ್ರಿಕಾಗೋಷ್ಠಿ ನಡೆಸುವುದಕ್ಕೆಂದು ಒಂದುದಿನ ಮೊದಲೇ ನಾವೆಲ್ಲಾ ಅಲ್ಲಿದ್ದೆವು. ಅವತ್ತು ರಾತ್ರಿ ತಂಗಲು ಗೌರಿ ಮೇಡಂಗೆ ಐಬಿಯ ವಿಶಾಲ ರೂಮು ನಿಗದಿಯಾಗಿತ್ತು. ನಾವು ಪಕ್ಕದ ಹೊಟೇಲೊಂದರಲ್ಲಿ ಉಳಿದಿದ್ದೆವು. ರಾತ್ರಿ ಊಟವಾದ ತರುವಾಯ ಮಲಗುವುದಕ್ಕು ಮುನ್ನ, ಒಮ್ಮೆ ಮೇಡಂ ಮಾತಾಡಿಸಿಕೊಂಡು ಬರೋಣವೆಂದು ಐಬಿಯತ್ತ ಬಂದೆವು. ಅವರ ರೂಮಿನ ತುಂಬಾ, ನಾಳೆಯ ಕಾರ್ಯಕ್ರಮಕ್ಕೆಂದು ಬೇರೆಬೇರೆ ಊರುಗಳಿಂದ ಬಂದಿದ್ದ ಯುವಕಯುವತಿಯರು ತುಂಬಿದ್ದರು. ಅವರ ನಡುವೆ ಹಾಸಿಗೆ ಮೇಲೆ ಕೂತು ಮೇಡಂ ಖುಷಿಯಿಂದ ಹರಟುತ್ತಿದ್ದರು. ಮಲಗುವ ಸಮಯವಾದಾಗ, ಒಂದಿಬ್ಬರು ಹುಡುಗಿಯರಿಗೆ ತಮ್ಮ ಪಕ್ಕದಲ್ಲೇ ಮಲಗಲು ಹೇಳಿ, ಬೇರೆಯವರಿಗೆ ವಿಶಾಲ ರೂಮಿನ ಅಲ್ಲಲ್ಲಿ ಮಲಗಲು ತಾಯಿಯಂತೆ ವ್ಯವಸ್ಥೆ ಮಾಡಲು ಮುಂದಾದರು. ಕೇವಲ ಇದಿಷ್ಟೇ ಹೇಳಿದರೆ, ಇದರಲ್ಲಿ ವಿಶೇಷವೇನೂ ಗೋಚರಿಸದು. ವಿಶೇಷವನ್ನು ಕಾಣಬೇಕೆಂದರೆ, ಸುಮಾರು ಹತ್ತನ್ನೆರಡು ವರ್ಷ ಹಿಂದಕ್ಕೆ ಚಲಿಸಿ, ಆಗಿನ ಗೌರಿಯವರ ವರ್ತನೆಯೊಟ್ಟಿಗೆ ಇದನ್ನು ಹೋಲಿಕೆ ಮಾಡಬೇಕಾಗುತ್ತದೆ. ಈ ಘಟನೆಗೆ ನಾನು ಪ್ರತ್ಯಕ್ಷದರ್ಶಿಯಲ್ಲ. ಅವರ ಆತ್ಮೀಯ ಒಡನಾಡಿಯಾದ ಶಿವಸುಂದರ್ ಅವರ ಅನುಭವ. ಬಾಬಾಬುಡನ್ಗಿರಿ ಹೋರಾಟ ಸಂದರ್ಭದ ಘಟನೆ. ಆಗಷ್ಟೆ ಇಂಗ್ಲಿಷ್ ಎಲೈಟ್ ಜರ್ನಲಿಸಂನಿಂದ ಕನ್ನಡ ಪತ್ರಿಕೋದ್ಯಮಕ್ಕೆ ಬಂದಿದ್ದ ಗೌರಿಯವರ ಮೊಟ್ಟಮೊದಲ ಸಾಮಾಜಿಕ ಹೋರಾಟ ಅದು.

ಒಮ್ಮೆ ಎಲ್ಲಾ ಸೌಹಾರ್ದ ಹೋರಾಟಗಾರರು ಚಿಕ್ಕಮಗಳೂರಿಗೆ ಹೋಗಿದ್ದಾರೆ. ಚಳವಳಿಗಾರರೆಂದರೆ, ತಂಗಲು ಸೌಖ್ಯ ವ್ಯವಸ್ಥೆಗಳು ಇರುವುದುಂಟೆ? ಹಾಗೋಹೀಗೋ ಕಷ್ಟಪಟ್ಟು ಒಂದೆರಡು ರೂಮು ವ್ಯವಸ್ಥೆ ಮಾಡಿದ್ದಾರೆ. ಅವುಗಳಲ್ಲೇ ಕಿಕ್ಕಿರಿದು ತಂಗುವುದು ಅವರ ಅನಿವಾರ್ಯ ಉದ್ದೇಶ. ಆದರೆ ಎಲೈಟ್ ಬದುಕಿನಿಂದ ಬಂದಿದ್ದ ಗೌರಿಯವರಿಗೆ ಅದರ ಅಂದಾಜಿಲ್ಲ. ಊಟವಾದ ನಂತರ ಕೆಲವರು ಒಂದು ರೂಮಿನಲ್ಲಿ ಕೂತು ನಾಳೆಯ ಕಾರ್ಯಕ್ರಮದ ಚರ್ಚೆ ನಡೆಸಿದ್ದಾರೆ. ಗೌರಿಯವರಿಗೆ ನಿದ್ರೆ ಬಂದಿದೆ. ಎದ್ದು ಹೋಗುತ್ತಾರೆಂದು ಸ್ವಲ್ಪ ಹೊತ್ತು ಕಾದಿದ್ದಾರೆ. ಪಾಪಾ, ಅದೇ ರೂಮಿನಲ್ಲಿ ಅಡ್ಜಸ್ಟ್ ಮಾಡಿಕೊಂಡು ಮಲಗುವುದೆಂದು ನಿರ್ಧರಿಸಿಕೊಂಡು ಬಂದಿದ್ದವರು ಅವರೆಲ್ಲ. ಇದು ಗೌರಿಯವರಿಗೆ ಗೊತ್ತಿಲ್ಲ. ಅವರ್ಯಾರು ಎದ್ದುಹೋಗುವುದು ಕಾಣದಿದ್ದಾಗ ಗೌರಿಯವರು “ಸರಿ, ಸರಿ, ಬೆಳಿಗ್ಗೆ ಸಿಗೋಣ. ಈಗ ನಾನು ಮಲಗಬೇಕು. ಎಲ್ಲರೂ ನಿಮ್ಮನಿಮ್ಮ ರೂಮಿಗೆ ಹೋಗಿ” ಎಂದರಂತೆ. ಅವರೆಲ್ಲಾ ಕಕ್ಕಾಬಿಕ್ಕಿ. ಅವರಿಗೆ ಅಂತ ಪ್ರತ್ಯೇಕ ರೂಮುಗಳಿರಲಿಲ್ಲ. ಪರಿಸ್ಥಿತಿಯನ್ನು ಗೌರಿಯವರಿಗೆ ಅರ್ಥ ಮಾಡಿಸಲು ಮುಂದಾದರಂತೆ. ಆಗ ಗೌರಿ, “ಸಾಧ್ಯವೇ ಇಲ್ಲ! ನನಗೆ ಹೀಗೆಲ್ಲ ಗುಂಪಲ್ಲಿ ಮಲಗಿ ಅಭ್ಯಾಸವಿಲ್ಲ. ನನಗೆ ಪ್ರೈವೇಸಿ ಬೇಕು. ಹೊರಡಿ, ನೀವು ಹೊರಡಿ…” ಎಂದು ಮುಲಾಜಿಲ್ಲದೆ ಎಲ್ಲರನ್ನು ಕಳಿಸಿ, ಒಬ್ಬರೇ ರೂಮಲ್ಲಿ ಮಲಗಿದರಂತೆ. ಹಾಗೆ ಇದ್ದ ಗೌರಿ, ಒಂದು ದಶಕದಲ್ಲಿ ಸಂಪೂರ್ಣ ರೂಪಾಂತರವಾದರು. ದಾವಣಗೆರೆ ಐಬಿಯ ತನ್ನ ರೂಮಿನ ತುಂಬಾ ಹೊಸ ತಲೆಮಾರಿನ ಯುವಜನರನ್ನು ತುಂಬಿಕೊಂಡು, ಅವರಿಗೆ ಮಲಗಲು ಅದೇ ರೂಮಿನಲ್ಲಿ ವ್ಯವಸ್ಥೆ ಮಾಡಿಕೊಟ್ಟರು. ಇದು ಹೊಸಪೀಳಿಗೆಯವರ ಮೇಲೆ ಅವರು ಇಟ್ಟಿದ್ದ ಅಕ್ಕರೆಯನ್ನು ಮಾತ್ರ ತೋರುವುದಿಲ್ಲ; ಆ ಯುವಜನರಲ್ಲಿ ಇರಿಸಿದ್ದ ಭರವಸೆಯನ್ನೂ ನಮಗೆ ಕಾಣಿಸುತ್ತದೆ.
ಅಂದಹಾಗೆ, ಬರಹದ ಶುರುವಾತಿನಲ್ಲಿ ನಮಗಾಗಿ ಒಂದು ಕರ್ಚೀಫನ್ನೂ ಕೊಡಿಸಲಿಲ್ಲ ಎಂಬ ತಮಾಷೆ ಪ್ರಸಂಗ ಉಲ್ಲೇಖಿಸಿದ್ದೇನೆ. ಆಫೀಸಿನ ಸಿಬ್ಬಂದಿಗಳ ಬಗ್ಗೆ ಅವರು ಅಷ್ಟೊಂದೇನು ಅಸಡ್ಡೆಯಿಂದ ವರ್ತಿಸಿದವರಲ್ಲ. ಕಾಳಜಿಯನ್ನು ತೋರಬೇಕಾದ ಸಂದರ್ಭದಲ್ಲಿ, ತನ್ನ ಮಿತಿಗೊಳಪಟ್ಟು ತೋರುತ್ತಾ ಬಂದಿದ್ದರು.
ಒಮ್ಮೆ ನನ್ನ ಇಂಟರ್ಕಾಂ ಫೋನು ರಿಂಗಾಯ್ತು. ರಿಸೀವ್ ಮಾಡಿದರೆ, ಅತ್ತ ಕಡೆಯಿಂದ ಗೌರಿ ಮೇಡಂ ಧ್ವನಿ, “ಗಿರೀಶ್ ಸ್ವಲ್ಪ ನನ್ನ ಚೇಂಬರಿಗೆ ಬರ್ತೀರಾ?” ಅಂದರು. ನಾನು ಹೋಗಿ ನಿಂತೆ. ನನ್ನನ್ನ ಕಂಡ ಕೂಡಲೇ, ಕೆಳಗಿಟ್ಟಿದ್ದ ತಮ್ಮ ಬ್ಯಾಗಿನಿಂದ ಪರ್ಸ್ ಹೊರತೆಗೆದರು, ಸಾವಿರ ರೂಪಾಯಿಯ ಎರಡು ನೋಟುಗಳನ್ನು ತೆಗೆದು ನನ್ನತ್ತ ಚಾಚಿದರು. ಅಷ್ಟೆ! ಏನನ್ನೂ ಹೇಳಲಿಲ್ಲ. ನನಗೆ ಗಲಿಬಿಲಿಯಾಯ್ತು. ಏನಾದರು ತರುವುದಕ್ಕೆಂದು ದುಡ್ಡು ಕೊಡುತ್ತಿದ್ದಾರಾ? ಅವರು ಯಾವತ್ತೂ ನಮ್ಮಿಂದ ಹೊರಗಿನ ಕೆಲಸ ಮಾಡಿಸಿದವರಲ್ಲ. ಅಪರೂಪಕ್ಕೆ ಲಕ್ಷ್ಮಣ, ಪ್ರಸಾದ್ ಇಬ್ಬರೂ ಇರದಿದ್ದಾಗ, ಸ್ವತಃ ತಾವೇ ಫ್ಲಾಸ್ಕ್ ಹಿಡಿದು, ಹೊಟೇಲಿಗೆ ಹೋಗಿ, ಕಾಫಿ ತಂದು ನಮಗೆಲ್ಲ ಕೊಡುತ್ತಿದ್ದರು. ಅಂತದ್ದರಲ್ಲಿ ಏನನ್ನಾದರು ತರಲು ಹೇಳುವರೇ? ನಾನೇ ಕೇಳಿದೆ, “ಯಾಕೆ ಮೇಡಂ ಈ ದುಡ್ಡು?”. ನನ್ನ ಪ್ರಶ್ನೆ ಮುಗಿಯುವ ಮೊದಲೇ “ನನಗೂ ಗೊತ್ತಿಲ್ಲ ಎಂಬ ಥಟ್ಟನೆ ಉತ್ತರ ಬಂತು ಅವರಿಂದ. ವಿಚಿತ್ರ ಉತ್ತರ. “ಕೊಡ್ಬೇಕು ಅನ್ನಿಸ್ತಿದೆ. ಕೊಡ್ತಾ ಇದೀನಿ. ತಗೋಳಿ” ಎನ್ನುತ್ತ ತಮ್ಮ ಕೈಯನ್ನು ಮತ್ತಷ್ಟು ನನ್ನ ಕಡೆ ಚಾಚಿದರು. ತುಂಬಾ ತೀಕ್ಷ್ಣವಾಗಿ, ನೇರವಾಗಿ, ನಾಟಕೀಯತೆ ಇಲ್ಲದೆ ಮಾತಾಡುವುದು ಅವರ ಶೈಲಿ. ನನಗೂ ಆ ಸನ್ನಿವೇಶವನ್ನು ನಿಭಾಯಿಸುವ ದಾರಿ ತೋಚಲಿಲ್ಲ. ಇನ್ನಷ್ಟು ಹೊತ್ತು ಅಲ್ಲಿದ್ದು ಸಂಕೋಚದ ಮುದ್ದೆಯಾಗುವುದು ತಪ್ಪಿಸಿಕೊಳ್ಳಲು ದುಡ್ಡು ಪಡೆದು ಬಂದೆ.
ಸ್ವಲ್ಪ ದಿನಗಳ ನಂತರ ರಾಜು ಅವರ ಬಳಿ ಮಾತಾಡಿದಾಗ ಗೊತ್ತಾದದ್ದೇನೆಂದರೆ, ನಾನು ಪತ್ರಿಕೆಯಲ್ಲದೆ ಗೈಡ್, ಉದ್ಯೋಗ ಪತ್ರಿಕೆ, ಗೈಡ್ ಪ್ರಕಾಶನದ ಪುಸ್ತಕಗಳ ಸಂಪಾದನೆ ಹೀಗೆ ಹಲವು ಜವಾಬ್ಧಾರಿ ನಿಭಾಯಿಸುತ್ತಿದ್ದನ್ನು ಕಂಡು, ನನ್ನ ಶ್ರಮಕ್ಕೆ ಸರಿಯಾದ ಸಂಬಳ ಕೊಡಲಾಗುತ್ತಿಲ್ಲವಲ್ಲಾ ಎಂದು ಒಮ್ಮೆ ಬೇಸರಿಸಿಕೊಂಡು ಮಾತಾಡಿದ್ದರಂತೆ. ಬಹುಶಃ ಆ ಬೇಸರ ಕಡಿಮೆ ಮಾಡಿಕೊಳ್ಳಲು ನನಗೆ ಆ ಹಣ ನೀಡಿದ್ದರು ಅನ್ನಿಸುತ್ತೆ. ಕಾಳಜಿಯ ದೊಡ್ಡದೊಡ್ಡ ಮಾತುಗಳನ್ನಾಡುವುದಕ್ಕಿಂತ, ಹೀಗೆ ಸಣ್ಣಪುಟ್ಟ ಕಾರ್ಯಗಳ ಮೂಲಕ ತೋರಿಸಿಬಿಡುತ್ತಿದ್ದರು. ಅಂದಹಾಗೆ, ನನಗೆ ಕೊಟ್ಟಿದ್ದು ಆಫೀಸ್ ಅಕೌಂಟಿನ ಹಣವಲ್ಲ. ಅವತ್ತು ಅವರಿಗೆ ಸಂಬಳವಾಗಿತ್ತು. ತನ್ನ ಸ್ವಂತ ಸಂಬಳದ ಹಣದಿಂದ ಆ ಎರಡು ಸಾವಿರ ರೂಪಾಯಿ ಕೊಟ್ಟಿದ್ದರು. ನನ್ನ ಬದುಕಿನಲ್ಲಿ ಗೌರಿ ಮೇಡಂ ಇಷ್ಟು ಗಾಢವಾಗಿ ಉಳಿದುಬಿಡುತ್ತಾರೆ ಎಂಬುದು ಗೊತ್ತಿದ್ದಿದ್ದರೆ, ಆ ಎರಡು ಸಾವಿರ ರೂಪಾಯಿಯನ್ನು ಜತನ ಮಾಡಿಟ್ಟುಕೊಳ್ಳುತ್ತಿದ್ದೆ. ಆದರೆ ಈಗ ಕಳೆದುಕೊಂಡಿದ್ದೇನೆ, ಹಣವನ್ನೂ; ಗೌರಿಯವರನ್ನೂ.

ಗಿರೀಶ್ ತಾಳಿಕಟ್ಟೆ
ಪತ್ರಕರ್ತ, ಲೇಖಕ




